

ಜಾಗತಿಕ ನಕಾಶೆಯಲ್ಲಿ ದೇಶ&ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧ ಕೆಲವೊಮ್ಮೆವಾಡಿಕೆಯಂತೆಯೂ, ಮತ್ತೆ ಕೆಲವೊಮ್ಮೆ ವಿಚಿತ್ರವಾಗಿಯೂ ಕಂಡುಬರುತ್ತದೆ. ಜಾಗತೀಕರಣ, ಉದಾರೀಕರಣದ ಯುಗದಲ್ಲಿ ಪರಸ್ಪರ ಅವಲಂಬನೆ ಅನಿವಾರ್ಯ ಎಂಬಂತಿದ್ದರೂ, ಯಾವುದೋ ಒಂದು ಮಾತು&ಕೃತಿಯಿಂದ ಸಂಬಂಧ ಹದಗೆಡುವುದುಂಟು; ಸಮರಕ್ಕೂ ಮುನ್ನುಡಿಯಾಗುವುದುಂಟು.
ಭಾರತ&ಚೀನಾದ ಸಂಬಂಧವನ್ನೇ ನೋಡುವುದಾದರೆ, ಆಗೀಗ ಗಡಿ ಕ್ಯಾತೆ ತೆಗೆಯುವುದು ಚೀನಾಕ್ಕೆ ಚಾಳಿಯೇ ಆಗಿದೆ. ಹಾಗೇ, ಅರುಣಾಚಲಪ್ರದೇಶ ತನ್ನದು ಎಂದು ಪ್ರತಿಪಾದಿಸುವುದು ಸಹ. ಈ ರಗಳೆಗಳ ನಡುವೆಯೂ ಎರಡೂ ದೇಶಗಳ ನಡುವೆ ವ್ಯಾಪಾರ ವಹಿವಾಟು ಮಾತ್ರ ಭರ್ಜರಿಯಾಗಿಯೇ ನಡೆಯುತ್ತಿದೆ. 2026ರ ಜನವರಿಯಿಂದ ಸೆಪ್ಟೆಂಬರ್ವರೆಗಿನ ಅವಧಿಯಲ್ಲಿ ಭಾರತದಿಂದ ಚೀನಾಕ್ಕೆ ಆದ ರಫ್ತು ಪ್ರಮಾಣ 19.26 ಬಿಲಿಯನ್ ಡಾಲರ್ಗಳು. ಕಳೆದ ವರ್ಷದೊಂದಿಗಿನ ಹೋಲಿಕೆಯಲ್ಲಿ ಇದು ಶೇ. 40ರಷ್ಟು ಅಧಿಕ.
ಆದರೆ ಚೀನಾದೊಂದಿಗೆ ಅಗಾಧ ಪ್ರಮಾಣದ ವ್ಯಾಪಾರ ಕೊರತೆ (ಅಂದರೆ, ರಫ್ತಿಗಿಂತ ಆಮದಿನ ಪ್ರಮಾಣ ಜಾಸ್ತಿಯಿರುವುದು) ಎದುರಿಸುತ್ತಿದೆ. ಚೀನಾದಿಂದ ಭಾರತಕ್ಕೆ ಬಂದ ಆಮದಿನ ಮೊತ್ತ ಸುಮಾರು 125 ಬಿಲಿಯನ್ ಡಾಲರ್ಗಳು. ಅಂದರೆ, ಶೇ. 23ರಷ್ಟು ಅಧಿಕ. ಒಟ್ಟಾರೆ ವ್ಯಾಪಾರ ಕೊರತೆ ಪ್ರಮಾಣ 105 ಬಿಲಿಯನ್ ಡಾಲರ್ಗಳಷ್ಟಿದೆ. ಭಾರ ಯಂತ್ರಗಳು, ಎಲೆಕ್ಟ್ರಾನಿಕ್ಸ್, ಪರ್ಸನಲ್ ಕಂಪ್ಯೂಟರ್ಗಳು, ಇಂಟಿಗ್ರೇಟೆಡ್ ಸರ್ಕ್ಯೂಟ್, ಲಿಥಿಯಂ&ಅಯಾನ್ ಬ್ಯಾಟರಿ, ದೂರಸಂಪರ್ಕ ಬಿಡಿಭಾಗಗಳು ಮುಂತಾದವನ್ನು ಭಾರತವು ಚೀನಾದಿಂದ ಪ್ರಮುಖವಾಗಿ ತರಿಸಿಕೊಳ್ಳುತ್ತದೆ. ಕಚ್ಚಾ ವಸ್ತುಗಳು, ಸಮುದ್ರಾಹಾರ, ಪೆಟ್ರೋಲಿಯಂ ಉತ್ಪನ್ನಗಳು, ಕಬ್ಬಿಣದ ಅದಿರು ಇತ್ಯಾದಿಗಳನ್ನು ಭಾರತವು ಚೀನಾಕ್ಕೆ ಮುಖ್ಯವಾಗಿ ರಫ್ತು ಮಾಡುತ್ತದೆ.
ಹಾಗೇ, ಭಾರತ& ಪಾಕಿಸ್ತಾನದ ನಡುವೆ ಬಹು ವರ್ಷಗಳಿಂದ ದ್ವಿಪಕ್ಷೀಯ ವ್ಯಾಪಾರ ವಹಿವಾಟು ಇದೆ. ಆದರೆ 2019ರ ಪುಲ್ವಾಮಾ ಭಯೋತ್ಪಾದನಾ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನಕ್ಕೆ ನೀಡಿದ್ದ "ಅತ್ಯಂತ ಆದ್ಯತೆಯ ರಾಷ್ಟ್ರ' ಸ್ಥಾನಮಾನವನ್ನು ರದ್ದುಮಾಡಿತ್ತು. ಹಾಗಾಗಿ ವ್ಯಾಪಾರ ಕುಸಿತ ಕಂಡಿತ್ತು. 2025ರ ಪಹಲ್ಗಾಮ್ ಉಗ್ರ ದಾಳಿ ನಂತರ ಭಾರತವು ಪಾಕ್ ಜೊತೆಗಿನ ನೇರ ವ್ಯಾಪಾರವನ್ನು ಸ್ಥಗಿತಗೊಳಿಸಿದೆ. ಆದರೂ ಪಾಕಿಸ್ತಾನ ಭಾರತದಿಂದ ವಿವಿಧ ಬಗೆಯ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದೆ. 2026-&27ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಪಾಕಿಸ್ತಾನ ಭಾರತದಿಂದ ಸುಮಾರು 5,876 ಕೋಟಿ ರೂ. ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಪ್ರಮಾಣ ಶೇ.69ರಷ್ಟು ಏರಿದೆ. ವಿಶೇಷ ಎಂದರೆ, ಈ ಅವಧಿಯಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಯಾವುದೇ ಸರಕು ರಫ್ತು ಆಗಿಲ್ಲ.
ದುಬೈ, ಸಿಂಗಾಪುರ, ಕೊಲಂಬೋ ಮೂಲಕ ಭಾರತದ ವಸ್ತುಗಳನ್ನು ಕಳ್ಳಮಾರ್ಗದ ಮೂಲಕ ಪಾಕಿಸ್ತಾನಕ್ಕೆ ರವಾನಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಅಣೆಕಟ್ಟು ಕಾರ್ಯತಂತ್ರ: ಟಿಬೆಟ್ ಭಾಗದಲ್ಲಿ ಚೀನಾ ನಿರ್ಮಿಸುತ್ತಿರುವ ಬೃಹತ್ ಅಣೆಕಟ್ಟು ಮತ್ತು ಇದಕ್ಕೆ ಕಾರ್ಯತಂತ್ರದ ಪ್ರತಿಕ್ರಿಯೆಯಾಗಿ ಭಾರತವು ಅರುಣಾಚಲ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟು ಯೋಜನೆ ಹಿನ್ನೆಲೆಯಲ್ಲಿ ಮೇಲಿನ ಸಂಗತಿಗಳು ನೆನಪಾದವು. ತನ್ನ ದಡಗಳ ಉದ್ದಕ್ಕೂ ಜೀವಗಳನ್ನು ಪೊರೆಯುವ ನದಿಯೊಂದು ಹೇಗೆ ವಿವಾದಕ್ಕೂ ಮಡಿಯಾಗಬಲ್ಲದು ಎಂಬುದಕ್ಕೆ ಇದು ಮತ್ತೊಂದು ನಿದರ್ಶನ. ಯಾರ್ಲಂಗ್ ಸಂಗ್ಪೊ ನದಿ ಚೀನಾದ ಆಡಳಿತವಿರುವ ಟಿಬೆಟ್ನ ದಕ್ಷಿಣ ಭಾಗದಲ್ಲಿ ಜನಿಸಿ, ಅರುಣಾಚಲ ಪ್ರದೇಶದ ಮೂಲಕ ಭಾರತವನ್ನು ಪ್ರವೇಶಿಸುತ್ತದೆ. ಇಲ್ಲಿ ಅದನ್ನು ಸಿಯಾಂಗ್ ನದಿ ಎಂದು ಕರೆಯಲಾಗುತ್ತದೆ. ಅಲ್ಲಿನ ಅನೇಕ ಸ್ಥಳೀಯ ಜನಸಮುದಾಯಗಳಿಗೆ ಜೀವನದಿಯಾಗಿರುವ ಇದು, ಇತರ ನದಿಗಳಿಂದ ಒಡಗೂಡಿ ಬ್ರಹ್ಮಪುತ್ರ ಎಂದು ಕರೆಸಿಕೊಂಡು ಅಸ್ಸಾಂ ಮುಖಾಂತರ ಬಾಂಗ್ಲಾದೇಶದ ಗುಂಟ ಸಾಗುತ್ತದೆ.
ಪೂರ್ವ ಅರುಣಾಚಲದ ಪೂರ್ವ ಸಿಯಾಂಗ್ ಜಿಲ್ಲೆಯ ವ್ಯಾಪ್ತಿಯಲ್ಲಿ ಭಾರತವು ಜಲ ವಿದ್ಯುತ್ ಯೋಜನೆ ನಿರ್ಮಿಸಲು ಯೋಜಿಸುತ್ತಿದೆ. ಈ ಮೂಲಕ 11,200 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಉದ್ದೇಶ ಹೊಂದಲಾಗಿದ್ದು ಈ ಯೋಜನೆ ಜಾರಿ ಸಾಧ್ಯತೆ ಕುರಿತು ಅಧ್ಯಯನ&ಸಮೀಕ್ಷೆಗಳು ನಡೆಯುತ್ತಿವೆ. ಈ ಪ್ರಸ್ತಾವಿತ ಯೋಜನೆಯನ್ನು ಅಲ್ಲಿನ ಜನರು ವಿರೋಧಿಸುತ್ತಿದ್ದಾರೆ. "ಈ ಅಣೆಕಟ್ಟು ನಿರ್ಮಾಣವಾದರೆ ಸುತ್ತಮುತ್ತಲ 27 ಹಳ್ಳಿಗಳು ಮುಳುಗಡೆಯಾಗುತ್ತವೆ, ಸ್ಥಳೀಯ ಆದಿ ಬುಡಕಟ್ಟು ಜನರು ಸೇರಿದಂತೆ ಸುಮಾರು ಒಂದೂವರೆ ಲಕ್ಷ ಜನರನ್ನು ಸ್ಥಳಾಂತರಿಸಬೇಕಾಗುತ್ತದೆ, ನಮ್ಮ ಜೀವನವೇ ಮುಳುಗುತ್ತದೆ, ದೀರ್ಘಕಾಲದ ನಮ್ಮ ಸಾಂಸ್ಕೃತಿಕ ಅಸ್ತಿತ್ವವೇ ಇಲ್ಲವಾಗುತ್ತದೆ' ಎಂಬುದು ಜನರ ವಿರೋಧಕ್ಕೆ ಕಾರಣ.
ಯೋಜನೆಯನ್ನು ವಿರೋಧಿಸಿ ಅನೇಕ ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ. ರಾಜಧಾನಿ ಇಟಾನಗರ ಸೇರಿದಂತೆ ಹಲವು ಪ್ರದೇಶಗಳಿಗೆ ಪ್ರತಿಭಟನೆ ಹಬ್ಬಿದ್ದು ಯುವಜನರು ಕೂಡ ದೊಡ್ಡದಾಗಿ ದನಿಯೆತ್ತಿದ್ದಾರೆ. ಸಿಯಾಂಗ್ ಅಪ್ಪರ್ ಮಲ್ಟಿ ಪರ್ಪಸ್ ಪ್ರಾಜೆಕ್ಟ್ (ಎಸ್ಯುಎಂಪಿ) ಎಂಬ ಹೆಸರಿನ ಈ ಯೋಜನೆಯ ಪೂರ್ವಕಾರ್ಯಸಾಧ್ಯತಾ ಸಮೀಕ್ಷೆ, ತಾಂತ್ರಿಕ ಪರಿಶೀಲನೆ ಮತ್ತು ನಿರ್ಮಾಣ ಹೊಣೆಯನ್ನು ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಜಲವಿದ್ಯುತ್ ನಿಗಮ (ಎನ್ಎಚ್ಪಿಸಿ)ಕ್ಕೆ ನೀಡಲಾಗಿದೆ.
ಜನರ ಆಗ್ರಹಕ್ಕೆ ಸ್ಪಂದಿಸಿರುವ ಪೆಮಾ ಖಂಡು ನೇತೃತ್ವದ ರಾಜ್ಯ ಸರ್ಕಾರ ನದಿಯ ಧಾರಣಾ ಶಕ್ತಿಯ ಅಧ್ಯಯನ ನಡೆಸುವುದಾಗಿ ಭರವಸೆ ನೀಡಿದೆ. "ಡ್ಯಾಂ ನಿರ್ಮಿಸುವ ಕುರಿತು ಅಂತಿಮ ತೀರ್ಮಾನ ಆಗಿಲ್ಲ. ಈ ಯೋಜನೆ ಅಪ್ರಾಯೋಗಿಕ ಎಂದು ತಜ್ಞರು ಹೇಳಿದರೆ ಕಾರ್ಯಸಾಧ್ಯತಾ ವರದಿ ಹಂತ ದಾಟಿ ಮುಂದೆ ಹೆಜ್ಜೆ ಇಡುವುದಿಲ್ಲ. ವಿವರ ಯೋಜನಾ ವರದಿ, ಕಾನೂನಾತ್ಮಕ ಸಮ್ಮತಿಗಳು ಮತ್ತು ಬಾಧಿತ ಸಮುದಾಯಗಳ ಜತೆ ಚರ್ಚೆ ಮುಂತಾದ ಹಂತಗಳು ಇವೆ' ಎಂದು ಮುಖ್ಯಮಂತ್ರಿ ಪೆಮಾ ಖಂಡು ಹೇಳಿದ್ದಾರೆ.
ಹಾಗಾದರೆ ಭಾರತ ಸರ್ಕಾರ ಈ ಯೋಜನೆ ಬಗ್ಗೆ ಇಷ್ಟೆಲ್ಲ ಆಸಕ್ತಿ ವಹಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಸಹಜ. ಆಳಕ್ಕೆ ಇಣುಕಿದರೆ, ನದಿಯೊಂದರ ಮೇಲೆ ಯಾರು ನಿಯಂತ್ರಣ ಸಾಧಿಸಬೇಕು ಎನ್ನುವ ಜಾಡು ಕಾಣುತ್ತದೆ ಮತ್ತು ಅಭಿವೃದ್ಧಿಯ ಪ್ರತಿಪಾದನೆ ಕಂಡುಬರುತ್ತದೆ. ಇದನ್ನು ಅರಿಯಲು ನದಿಯ ಮೇಲ್ಭಾಗದಲ್ಲಿ ಅಂದರೆ ಟಿಬೆಟ್ ಪ್ರದೇಶದಲ್ಲಿ ಚೀನಾ ಏನು ಮಾಡುತ್ತಿದೆ ಎಂಬುದನ್ನು ಗಮನಿಸಬೇಕಾಗುತ್ತದೆ.
ಜಲ ಬಾಂಬ್ ಬೆದರಿಕೆ: ಯಾರ್ಲಂಗ್ ಸಂಗ್ಪೊ ನದಿಯು ಅರುಣಾಚಲವನ್ನು ಪ್ರವೇಶಿಸುವ ಮುನ್ನ ಅದರ ನೀರಿನ ಹರಿವನ್ನು ತಡೆದು ವಿದ್ಯುತ್ ಉತ್ಪಾದನೆ ಮಾಡುವುದು ಚೀನಾದ ಯೋಜನೆ. ಇದು ಅಂತಿಂಥ ಯೋಜನೆಯಲ್ಲ. ಜಗತ್ತಿನಲ್ಲೇ ಅತಿ ದೊಡ್ಡ ಜಲ ವಿದ್ಯುತ್ ಯೋಜನೆಯೆಂಬ ಹೆಗ್ಗಳಿಕೆ ಹೊಂದಿದ್ದು 2025ರ ಜುಲೈನಲ್ಲಿ ಚೀನಾವು ಟಿಬೆಟ್ ಸ್ವಾಯತ್ತ ಪ್ರದೇಶ (ಟಿಎಆರ್)ನ ಮೆಡಾಂಗ್ ಕೌಂಟಿಯಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಚಾಲನೆ ನೀಡಿತು. 60 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಉದ್ದೇಶ ಹೊಂದಿದ್ದು, ಯೋಜನೆ ವೆಚ್ಚ ಸುಮಾರು 16 ಲಕ್ಷ ಕೋಟಿ ರೂ! ಇಷ್ಟೇ ಆಗಿದ್ದರೆ, ತನ್ನ ನೆಲದಲ್ಲಿ ಚೀನಾ ಏನೋ ಮಾಡುತ್ತಿದೆ ಎಂದು ಭಾವಿಸಿ ಭಾರತ ಸುಮ್ಮನಾಗಬಹುದಿತ್ತು. ಆದರೆ ಈ ವಲಯವು ಭೂಕಂಪ ಅಪಾಯದ ಜಾಗವಾಗಿದ್ದು ಈ ಅಣೆಕಟ್ಟನ್ನು "ಜಲ ಬಾಂಬ್' ಎಂದೇ ತಜ್ಞರು ಎಚ್ಚರಿಸಿದ್ದಾರೆ.
ನದಿ ಮೇಲಿನ ಭಾಗದ ದೇಶವು ನೀರಿನ ಹರಿವಿನ ಮೇಲೆ ನಿಯಂತ್ರಣ ಸಾಧಿಸಿದರೆ ತಮಗೆ ತೊಂದರೆ ನಿಶ್ಚಿತ ಎಂಬುದು ಕೆಳ ಭಾಗದ ಭಾರತ ಮತ್ತು ಬಾಂಗ್ಲಾದೇಶಗಳ ಆತಂಕ. ಪಾಕ್ಪ್ರೇರಿತ ಭಯೋತ್ಪಾದನಾ ದಾಳಿ ಹಿನ್ನೆಲೆಯಲ್ಲಿ ಭಾರತವು ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದಾಗ ಪಾಕಿಸ್ತಾನ ನೀಡಿದ ಪ್ರತಿಕ್ರಿಯೆ ಈ ಅನುಮಾನಕ್ಕೆ ಪುಷ್ಟಿ ನೀಡುವ ಹಾಗೆ ಇದೆ. "ಚೀನಾವು ಬ್ರಹ್ಮಪುತ್ರ ನದಿಯ ಹರಿವನ್ನು ನಿಯಂತ್ರಿಸಬಹುದು' ಎಂಬರ್ಥದಲ್ಲಿ ಪಾಕ್ ನಾಯಕರು ಮಾತಾಡಿದ್ದರು. ದಿಢೀರನೆ ನೀರನ್ನು ಬಿಡುವುದು, ಸಂಭಾವ್ಯ ತಿರುಗಿಸುವಿಕೆ ಇವೆಲ್ಲ ತನ್ನ ಜಲ ಸುರಕ್ಷತೆ ಹಾಗೂ ಪ್ರವಾಹ ನಿರ್ವಹಣಾ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬುದು ಭಾರತದ ಕಳವಳ.
ಇದನ್ನೆಲ್ಲ ಸುಮ್ಮನೆ ನೋಡುತ್ತ ಕೂಡ್ರಲು ಆಗದು. ದೇಶದ ಹಿತರಕ್ಷಣೆ ಉದ್ದೇಶದಿಂದ ಕೆಲವು ಕ್ರಮ ಅನಿವಾರ್ಯ ಎಂಬುದು ಸರ್ಕಾರದ ಸಮರ್ಥನೆ. ಈ ಹಿನ್ನೆಲೆಯಲ್ಲಿ ಮೂಡಿದ್ದು ಸಿಯಾಂಗ್ ಯೋಜನೆ. ಈ ಅಣೆಕಟ್ಟನ್ನು ನಿರ್ಮಾಣ ಮಾಡಿದಲ್ಲಿ ನೀರಿನ ಹರಿವನ್ನು ನಿಯಂತ್ರಿಸಲು ಅನುವಾಗುತ್ತದೆ, ಪ್ರವಾಹ ನಿರ್ವಹಣಾ ವ್ಯವಸ್ಥೆ ದೃಷ್ಟಿಯಿಂದ ಅನುಕೂಲಕರ ಮತ್ತು ಭಾರತದ ಜಲ ಸುರಕ್ಷತೆಯನ್ನು ಬಲಗೊಳಿಸುತ್ತದೆ ಎಂಬುದು ಸರ್ಕಾರದ ವಾದ. ಇಷ್ಟೇ ಅಲ್ಲ, ನವೀಕರಿಸಬಹುದಾದ ವಿದ್ಯುತ್ತಿಗೆ ಇದರಿಂದ ಅನುಕೂಲ ಆಗುತ್ತದೆ, ಈಶಾನ್ಯ ಹಾಗೂ ಪೂರ್ವ ಭಾರತದ ವಿದ್ಯುತ್ ಕೊರತೆ ನೀಗಿಸಲು ಪ್ರಯೋಜನಕಾರಿ, ಅರುಣಾಚಲದಲ್ಲಿ ಮೂಲಸೌಕರ್ಯವನ್ನು ಸುಧಾರಿಸುತ್ತದೆ ಹಾಗೂ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತದೆ. ಬ್ರಹ್ಮಪುತ್ರ ನದಿಯ ಮೇಲ್ಭಾಗದಲ್ಲಿ ಚೀನಾದ ನಿಯಂತ್ರಣಕ್ಕೆ ಈ ಯೋಜನೆ ಒಂದು ವ್ಯೂಹಾತ್ಮಕ ರಕ್ಷಣೆ ಎಂದು ಸರ್ಕಾರ ಹೇಳುತ್ತಿದೆ.
ಅರುಣಾಚಲ ಪ್ರದೇಶ ತನ್ನದು ಎಂದು ಹೇಳಿಕೊಳ್ಳುವ ಚೀನಾ ಗಡಿ ಭಾಗದಲ್ಲಿ ಆಗೀಗ ತಂಟೆ ತೆಗೆಯುತ್ತಿರುತ್ತದೆ. ಬ್ರಹ್ಮಪುತ್ರ ನದಿಯ ಮೇಲಿನ ಭಾಗದಲ್ಲಿ ಆ ದೇಶದ ಹಸ್ತಕ್ಷೇಪ ಜಾಸ್ತಿಯಾಗುತ್ತಲೇ ಇದೆ. ಚೀನಾ ನಿರ್ಮಾಣ ಮಾಡುತ್ತಿರುವ ಭಾರಿ ಗಾತ್ರದ ಅಣೆಕಟ್ಟು ಗಡಿಯಿಂದ ಕೇವಲ 50 ಕಿಮೀ ದೂರದಲ್ಲಿದೆ. ಆದ್ದರಿಂದ ಚೀನಾ ಪ್ರಾಬಲ್ಯಕ್ಕೆ ಕಡಿವಾಣ ಹಾಕಲು ಅಣೆಕಟ್ಟು ನಿರ್ಮಾಣ ಅನಿವಾರ್ಯ ಎಂಬುದು ಕೇಂದ್ರ ಸರ್ಕಾರದ ಪ್ರತಿಪಾದನೆ.
ಸಿಯಾಂಗ್ ಕಣಿವೆಯಲ್ಲಿ ಅಣೆಕಟ್ಟು ನಿರ್ಮಾಣ ಮಾಡುವ ಪ್ರಸ್ತಾಪ ಇದೇ ಮೊದಲೇನಲ್ಲ. ಬ್ರಹ್ಮಪುತ್ರ ಮಂಡಳಿಯು 1982&83 ರಲ್ಲಿಯೇ ಇಂತಹ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಆದರೆ ಜನರ ವಿರೋಧದಿಂದಾಗಿ ಯೋಜನೆ ಕಡತ ಬಿಟ್ಟು ಮೇಲೇಳಲಿಲ್ಲ. 2017ರಲ್ಲಿ 10 ಸಾವಿರ ಮೆಗಾವಾಟ್ ಸಾಮರ್ಥ್ಯದ ಯೋಜನೆ ಪ್ರಸ್ತಾಪವಾಗಿತ್ತು. ಅದನ್ನೀಗ 11,200 ಮೆಗಾವಾಟ್ಗೆ ಹೆಚ್ಚಿಸಿ ಪರಿಷ್ಕೃತ ಯೋಜನೆಯನ್ನು ಮುಂದಿಡಲಾಗಿದೆ.
ಸಿಯಾಂಗ್ ಯೋಜನೆಗೆ ಅರುಣಾಚಲದಲ್ಲಿ ವ್ಯಕ್ತವಾಗುತ್ತಿರುವ ವಿರೋಧವನ್ನು ಚೀನಾ ತನ್ನ ಪರವಾಗಿ ಬಳಸಿಕೊಳ್ಳಲು ಮುಂದಾಗಿದೆ; ರಾಜ್ಯದ ಜನರು ಭಾರತದ ವಿರುದ್ಧ ಅಸಮಾಧಾನಗೊಂಡಿರುವ ಕಾರಣಕ್ಕೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ನೆರೇಟಿವ್ ಅನ್ನು ಸೃಷ್ಟಿಸಲು ಚೀನಾ ಯತ್ನಿಸುತ್ತಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತವೆ. ಅರುಣಾಚಲದ ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆಗಳು ಕೈಗೊಂಡ ಕ್ರಮವನ್ನು ಚೀನಾದ ಸರ್ಕಾರಿ ಮಾಧ್ಯಮಗಳು ಟೀಕಿಸಿವೆ.
ಅಲ್ಲದೆ ಅಲ್ಲಿನ ಕೆಲ ತಜ್ಞರು ಅರುಣಾಚಲದ ಪ್ರತಿಭಟನೆಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ. ಚೀನಾದ ಬದಲಾಗುತ್ತಿರುವ ವ್ಯೂಹಾತ್ಮಕ ಸಂಬಂಧಕ್ಕೆ ಸಿದ್ಧವಾಗುವುದು, ನದಿಯ ಮೇಲ್ಭಾಗದ ನೀರಿನ ನಿರ್ವಹಣೆಯ ಸವಾಲನ್ನು ಎದುರಿಸುವುದು ಹಾಗೂ ನದಿಯೊಂದಿಗೆ ಬೆಸೆದುಕೊಂಡಿರುವ ಜನಜೀವನಕ್ಕೆ ಭದ್ರತೆಯ ಅಭಯ ನೀಡುವುದು& ಹೀಗೆ ಎರಡು ತೆರನಾದ ಸನ್ನಿವೇಶಗಳಲ್ಲಿ ಭಾರತ ಸಿಲುಕಿದೆ. ಅಭಿವೃದ್ಧಿ& ಜನಜೀವನ&ಪರಿಸರ ಸಮತೋಲನದ ಸವಾಲು ಎದುರಾಗಿದೆ. ಅಂತಿಮ ನಿರ್ಣಯ ಕಾದುನೋಡಬೇಕು.
ಕೊನೇ ಮಾತು: ಅತ್ತ ಈಶಾನ್ಯದಲ್ಲಿ ಸಿಯಾಂಗ್ ನದಿ ಯೋಜನೆ ಸದ್ದುಮಾಡುತ್ತಿದ್ದರೆ, ಇತ್ತ, ಉತ್ತರ ಕನ್ನಡ ಜಿಲ್ಲೆಯಲ್ಲಿ ಬೇಡ್ತಿ&ವರದಾ ನದಿ ಜೋಡಣೆ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. "ಇಲ್ಲದ ನೀರನ್ನು ಎಲ್ಲಿಗೆ ಒಯ್ಯುವಿರಿ?' ಎಂಬುದು ಜನರು ಹಾಗೂ ಪರಿಸರವಾದಿಗಳ ಪ್ರಶ್ನೆ. ಈ ಯೋಜನೆ ವಿರೋಧಿಸಿ ಮತ್ತು ಪಶ್ಚಿಮ ಘಟ್ಟ ಉಳಿವಿಗೆ ಆಗ್ರಹಿಸಿ ಶಿರಸಿ, ಯಲ್ಲಾಪುರ, ಬೆಂಗಳೂರು ಮುಂತಾದೆಡೆ ಬೃಹತ್ ಜನಸಮಾವೇಶಗಳೂ ನಡೆದಿವೆ; ಸರ್ಕಾರಗಳಿಗೆ ಮನವಿಗಳೂ ಸಲ್ಲಿಕೆಯಾಗಿವೆ. ಇನ್ನೊಂದೆಡೆ, ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಯೋಜನೆಯನ್ನು ಬಲವಾಗಿ ಸಮರ್ಥಿಸುತ್ತಿದ್ದಾರೆ. ಈಗ ಚೆಂಡು ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಂಗಳದಲ್ಲಿದೆ.