ಅಮ್ಮ ಇಲ್ಲ ಎಂಬ ದುಃಖದಲ್ಲಿದ್ದ ಮಗಳ ಮುಖದಲ್ಲಿ ನಗು ತರಿಸಲು ತಾಯಿಯ ವೇಷ ಧರಿಸಿ ಶಾಲೆಗೆ ಹೋದ ತಂದೆ! Dad Became Mom

ಮಗಳಿಗಾಗಿ ತಾಯಿಯ ವೇಷ ಧರಿಸಿ ಶಾಲೆಗೆ ಹೋದ ತಂದೆ
ಮಗಳಿಗಾಗಿ ತಾಯಿಯ ವೇಷ ಧರಿಸಿ ಶಾಲೆಗೆ ಹೋದ ತಂದೆ
Published on

ಪ್ರಮುಖ ಮುಖ್ಯಾಂಶಗಳು

  • ಈ ಜಗತ್ತಿನಲ್ಲಿ ತಾಯಿಯ ಪ್ರೀತಿ ಮಾತ್ರವಲ್ಲ, ತಂದೆಯ ಪ್ರೀತಿಯೂ ತುಂಬಾ ದೊಡ್ಡದು
  • ತಂದೆ ಮಕ್ಕಳ ಮೇಲೆ ತೋರಿಸುವ ಪ್ರೀತಿ, ಕಾಳಜಿ ಬಗ್ಗೆ ಎಷ್ಟೇ ಮಾತನಾಡಿದರೂ ಸಾಲದು
  • ತಂದೆಯಾದವನು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸ್ವಾರ್ಥವನ್ನು ಬದಿಗಿಟ್ಟು ಹಗಲಿರುಳು ಶ್ರಮಿಸುತ್ತಾನೆ
  • ಇತ್ತೀಚೆಗೆ ವ್ಯಕ್ತಿಯೊಬ್ಬ ಮಾಡಿದ ಕೆಲಸದ ಬಗ್ಗೆ ತಿಳಿದರೆ ತಂದೆಗೆ ಮಕ್ಕಳ ಮೇಲೆ ಎಷ್ಟು ಪ್ರೀತಿ ಇದೆ ಅಂತ ಗೊತ್ತಾಗುತ್ತೆ
Dad Became Mom : ತಾಯಿಯ ಪ್ರೀತಿ ಮಾತ್ರವಲ್ಲ, ತಂದೆಯ ಪ್ರೀತಿಯೂ ತುಂಬಾ ದೊಡ್ಡದು. ತಂದೆ ಮಕ್ಕಳ ಮೇಲೆ ತೋರಿಸುವ ಪ್ರೀತಿ ಮತ್ತು ಕಾಳಜಿಯ ಬಗ್ಗೆ ಎಷ್ಟೇ ಮಾತನಾಡಿದರೂ ಸಾಲದು. ತಾಯಿ ಮಕ್ಕಳ ಜತೆಯಲ್ಲೇ ಇದ್ದು ಪಾಲನೆ ಮಾಡಿದರೆ, ತಂದೆಯಾದವನು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ತನ್ನ ಸ್ವಾರ್ಥವನ್ನು ಬದಿಗಿಟ್ಟು ಹಗಲಿರುಳು ಶ್ರಮಿಸುತ್ತಾನೆ. ಹೀಗಾಗಿ ತಾಯಿಯಷ್ಟೇ ತಂದೆ ಪ್ರೀತಿ ಕೂಡ ಸಮಾನ.
ಇತ್ತೀಚೆಗೆ ವ್ಯಕ್ತಿಯೊಬ್ಬ ಮಾಡಿದ ಕೆಲಸದ ಬಗ್ಗೆ ನೀವು ತಿಳಿದರೆ, ತಂದೆಗೆ ಮಕ್ಕಳ ಮೇಲಿನ ಪ್ರೀತಿ ಎಷ್ಟಿದೆ ಅನ್ನೋದು ಗೊತ್ತಾಗುತ್ತದೆ. ಮಗಳ ಮುಖದಲ್ಲಿ ನಗು ಮೂಡಲಿ ಎಂಬ ಉದ್ದೇಶದಿಂದ ಆ ತಂದೆ, ತಾಯಿಯಂತೆ ಬದಲಾದರು. ಮಹಿಳೆಯಂತೆ ಮೇಕಪ್ ಮಾಡಿಕೊಂಡು ಶಾಲೆಗೆ ಹೋದರು. ಮಗಳ ಸಂತೋಷಕ್ಕಾಗಿ ಆ ಮಹಾತಂದೆ ಮಾಡಿದ ಕೆಲಸ ಎಲ್ಲರ ಹೃದಯವನ್ನು ಗೆದ್ದಿತು.
ಅಂದಹಾಗೆ, ಈ ಘಟನೆ ಥಾಯ್ಲೆಂಡ್​ನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಥಾಯ್ಲೆಂಡ್​ನಲ್ಲಿ ಲಿಟಲ್ ಕ್ರೀಮ್ಸ್ ಎಂಬ ಶಾಲೆ ಇದೆ. ಆ ಶಾಲೆಯಲ್ಲಿ ಇತ್ತೀಚೆಗೆ ತಾಯಂದಿರ ದಿನವನ್ನು ಆಚರಿಸಲಾಯಿತು. ಈ ವೇಳೆ ಎಲ್ಲ ಮಕ್ಕಳ ತಾಯಂದಿರು ಶಾಲೆಗೆ ಹಾಜರಾದರು. ಆದರೆ, ಆ ಶಾಲೆಯಲ್ಲಿ ಓದುತ್ತಿದ್ದ ಓರ್ವ ಹುಡುಗಿಗೆ ತಾಯಿ ಇರಲಿಲ್ಲ. ಆಕೆಗೆ ತಂದೆ ಮಾತ್ರ ಇದ್ದರು. ಇದು ಆ ಹುಡುಗಿಯನ್ನು ತುಂಬಾ ದುಃಖಿತಳನ್ನಾಗಿ ಮಾಡಿತು.
ಇದನ್ನು ಗಮನಿಸಿದ ಹುಡುಗಿಯ ತಂದೆ ಒಂದು ಪ್ಲಾನ್​ ಮಾಡಿದರು. ಅದೇನೆಂದರೆ, ತಾನೇ ಮಹಿಳೆಯಂತೆ ಮೇಕಪ್ ಮಾಡಿಕೊಂಡರು. ಮಹಿಳೆಯ ಉಡುಗೆ ಮತ್ತು ತಲೆಗೆ ವಿಗ್ ಧರಿಸಿ ಸಿದ್ಧನಾದನು. ಬಳಿಕ ಶಾಲೆಯಲ್ಲಿ ನಡೆಯುತ್ತಿದ್ದ ತಾಯಂದಿರ ದಿನಾಚರಣೆಯಲ್ಲಿ ಭಾಗವಹಿಸಿದನು. ಇದನ್ನು ನೋಡಿದ ಮಗಳು ತುಂಬಾ ಸಂತೋಷಪಟ್ಟಳು.
ಈ ವಿಚಾರವಾಗಿ ಹುಡುಗಿಯ ತಂದೆ ಜೋ ಲೂಪ್​, ಶಾಲೆಯ ವೇದಿಕೆಯಲ್ಲೇ ಮಾತನಾಡಿದರು. ನನ್ನ ಮಗಳ ಮುಖದಲ್ಲಿ ನಗು ತರಿಸಲು ಈ ರೀತಿ ಮಾಡಿದೆ. ಯಾರು ನನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದು ನನಗೆ ಮುಖ್ಯವಲ್ಲ ಎಂದರು. ನಾನು ನನ್ನ ಮಗಳನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಮಾಡುವುದರಿಂದ ಮಹಿಳೆಯಂತೆ ಉಡುಗೆ ತೊಟ್ಟು ಇಲ್ಲಿಗೆ ಬರಲು ನನಗೆ ನಾಚಿಕೆಯಾಗಲಿಲ್ಲ ಎಂದು ಹೇಳಿದರು. ಅಲ್ಲಿದ್ದವರೆಲ್ಲ ಜೋ ಅವರ ಮಾತುಗಳನ್ನು ಕೇಳಿ ಅವರನ್ನು ಶ್ಲಾಘಿಸಿದರು. ನೀವು ನಿಜಕ್ಕೂ ಅದ್ಭುತ ಎಂದು ಕೊಂಡಾಡಿದರು.
ಸದ್ಯ ಜೋ ಲೂಪ್ ತನ್ನ ಮಗಳೊಂದಿಗೆ ಮಹಿಳೆಯ ವೇಷ ಧರಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹೃದಯವನ್ನು ಗೆದ್ದಿವೆ. ಮಗಳ ಸಂತೋಷಕ್ಕಾಗಿ ತಂದೆ ಮಾಡಿದ ಪ್ರೀತಿಯ ಕೆಲಸವನ್ನು ಎಲ್ಲರು ಮನಸಾರೆ ಹೊಗಳುತ್ತಿದ್ದಾರೆ. ಈ ಪೋಟೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net