ಮಾರ್ಚ್ 1ರಿಂದ ಜುಲೈ 13ರವರೆಗಿನ ಅಧಿಕೃತ ಅಂಕಿಅಂಶಗಳ ಪ್ರಕಾರ, ಗಲ್ಫ್ ರಾಷ್ಟ್ರಗಳಿಂದ ಪಾಕಿಸ್ತಾನಿ ಪ್ರಜೆಗಳ ಗಡೀಪಾರು ಪ್ರಕ್ರಿಯೆಯಲ್ಲಿ ಸೌದಿ ಅರೇಬಿಯಾ ಮೊದಲ ಸ್ಥಾನದಲ್ಲಿದೆ. ಕೇವಲ ಸೌದಿ ಅರೇಬಿಯಾ ಒಂದೇ ದೇಶದಿಂದ ಬರೋಬ್ಬರಿ 15,500 ಪಾಕಿಸ್ತಾನಿ ನಾಗರಿಕರನ್ನು ಗಡೀಪಾರು ಮಾಡಲಾಗಿದೆ. ಇದರ ಬೆನ್ನಲ್ಲೇ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸುಮಾರು 3,800 ಜನರನ್ನು ವಾಪಸ್ ಕಳುಹಿಸುವ ಮೂಲಕ ಎರಡನೇ ಸ್ಥಾನದಲ್ಲಿದೆ. ಉಳಿದಂತೆ ಒಮನ್ ದೇಶದಿಂದ 1,606 ಜನರನ್ನು, ಬಹ್ರೈನ್ ದೇಶದಿಂದ 521 ಜನರನ್ನು, ಕತಾರ್ ದೇಶದಿಂದ 429 ಜನರನ್ನು ಹಾಗೂ ಕುವೈತ್‌ನಿಂದ 97 ಪಾಕಿಸ್ತಾನಿಗಳನ್ನು ಗಡೀಪಾರು ಮಾಡಿ ತಮ್ಮ ದೇಶದ ಗಡಿಯಿಂದ ಹೊರಹಾಕಲಾಗಿದೆ.