ಮಿಲನ್: ಇಟಲಿಯ ಮಿಲನ್ನಲ್ಲಿ (Milan) ಸಾಗುತ್ತಿರುವ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟದ (Winter Olympics) ಜತೆಜತೆಯಲ್ಲೇ "ಮಿಲನ ಹಬ್ಬ'ವೂ ನಡೆಯುತ್ತಿರುವಂತಿದೆ! ಸಂಟಕರು ಕ್ರೀಡಾಗ್ರಾಮದಲ್ಲಿ (Olympics village) ಕ್ರೀಡಾಪಟುಗಳ ಬಳಕೆಗಾಗಿ ತಂದಿಟ್ಟಿದ್ದ 10 ಸಾವಿರ ಕಾಂಡೋಮ್ಗಳು (Condom) ಕೇವಲ ಮೂರೇ ದಿನಗಳಲ್ಲಿ ಖಾಲಿಯಾಗಿ ಬಿಟ್ಟಿವೆ. ಇದರಿಂದ, ಕಾಂಡೋಮ್ಗಳ ಸ್ಟಾಕ್ ಕೊರತೆಯಿಂದಾಗಿ ಸಂಘಟಕರು ಪರದಾಡುವಂತಾಗಿದೆ.
ಒಟ್ಟಾರೆ 17 ದಿನಗಳ ಕ್ರೀಡಾಕೂಟದ ವೇಳೆ ಉಚಿತವಾಗಿ ಹಂಚಲು ಒಟ್ಟಾರೆ 10 ಸಾವಿರ ಕಾಂಡೋಮ್ಗಳು ಸಾಕಾಗಬಹುದು ಎಂಬುದೇ ಸಂಟಕರ ಲೆಕ್ಕಾಚಾರವಾಗಿತ್ತು. ಹೀಗಾಗಿ ಅಷ್ಟನ್ನು ಮಾತ್ರ ಸಂಗ್ರಹಿಸಿಟ್ಟುಕೊಂಡಿದ್ದರು. ಆದರೆ ಕ್ರೀಡಾಕೂಟ ನಡೆಯುತ್ತಿರುವ ಚಳಿಯ ವಾತಾವಾರಣದಲ್ಲಿ ಕ್ರೀಡಾಪಟುಗಳು ಮೈಬಿಸಿ ಏರಿಸಿಕೊಂಡಿದ್ದು, ದಾಖಲೆಯ ವೇಗದಲ್ಲಿ ಕಾಂಡೋಮ್ಗಳನ್ನು ಖಾಲಿ ಮಾಡಿದ್ದಾರೆ. ಇದರಿಂದಾಗಿ ಕ್ರೀಡಾಕೂಟದ ಉಳಿದ ದಿನಗಳಲ್ಲಿ ಉಚಿತ ಕಾಂಡೋಮ್ಗಳು ಲಭ್ಯವಿಲ್ಲದಂತಾಗಿದೆ.
ಇನ್ನಷ್ಟು ಕಾಂಡೋಮ್ಗಳಿಗಾಗಿ ಸಂಘಟಕರು ಈಗಾಗಲೆ ಆರ್ಡರ್ ನೀಡಿದ್ದರೂ, ಅದು ಯಾವಾಗ ಬಂದು ತಲುಪಲಿದೆ ಎಂಬ ಸ್ಪಷ್ಟತೆ ಅವರಲ್ಲಿಲ್ಲ ಎಂದು ಇಟಲಿಯ ಪತ್ರಿಕೆ "ಲಾ ಸ್ಟಾಂಪಾ' ವರದಿ ಮಾಡಿದೆ. ಫೆ.22ರವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ 92 ದೇಶಗಳ 2,900 ಕ್ರೀಡಾಪಟುಗಳು ಭಾಗವಹಿಸಿದ್ದಾರೆ.