ಮಾತುಕತೆಗೆ ಬನ್ನಿ ಇಲ್ಲವೇ ಬಾಂಬ್ ದಾಳಿಗೆ ಸಿದ್ಧರಾಗಿ! ಇರಾನ್ ನಾಯಕರನ್ನು ರಕ್ತಪಿಪಾಸುಗಳು ಎಂದ ಅಮೆರಿಕ ಅಧ್ಯಕ್ಷ! Donald Trump

ಮಾತುಕತೆಗೆ ಬನ್ನಿ ಇಲ್ಲವೇ ಬಾಂಬ್ ದಾಳಿಗೆ ಸಿದ್ಧರಾಗಿ! ಇರಾನ್ ನಾಯಕರನ್ನು ರಕ್ತಪಿಪಾಸುಗಳು ಎಂದ ಅಮೆರಿಕ ಅಧ್ಯಕ್ಷ!
ಮಾತುಕತೆಗೆ ಬನ್ನಿ ಇಲ್ಲವೇ ಬಾಂಬ್ ದಾಳಿಗೆ ಸಿದ್ಧರಾಗಿ! ಇರಾನ್ ನಾಯಕರನ್ನು ರಕ್ತಪಿಪಾಸುಗಳು ಎಂದ ಅಮೆರಿಕ ಅಧ್ಯಕ್ಷ!
Published on
ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಈಗ ಉತ್ತುಂಗಕ್ಕೇರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮಂಗಳವಾರ (ಏ.21) ನೀಡಿರುವ ಹೇಳಿಕೆ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಬುಧವಾರ ಸಂಜೆಯೊಳಗೆ ಇರಾನ್ ಮಾತುಕತೆಯ ಮೇಜಿಗೆ ಬರದಿದ್ದರೆ, ಅಮೆರಿಕದ ಯುದ್ಧವಿಮಾನಗಳು ಇರಾನ್ ಮೇಲೆ ಬಾಂಬ್ ಮಳೆ ಸುರಿಸಲು ಸಜ್ಜಾಗಿವೆ ಎಂದು ನೇರ ಎಚ್ಚರಿಕೆ ನೀಡಿದ್ದಾರೆ.

ಇರಾನ್‌ಗೆ ಬೇರೆ ಆಯ್ಕೆಯಿಲ್ಲ": ಟ್ರಂಪ್ ಖಡಕ್ ಮಾತು

ಈ ಬಗ್ಗೆ CNBC ಕಾರ್ಯಕ್ರಮಕ್ಕೆ ನೀಡಿದ ಫೋನ್ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ನಾನು ಇರಾನ್ ಜೊತೆ ಒಂದು ದೊಡ್ಡ ಒಪ್ಪಂದ ಮಾಡಿಕೊಳ್ಳುತ್ತೇನೆ ಎಂಬ ಭರವಸೆಯಿದೆ. ಆದರೆ ಅವರಿಗೆ ಸಂಧಾನಕ್ಕೆ ಬರುವುದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ. ನಮ್ಮ ದಿಗ್ಬಂಧನ ತಂತ್ರವು ಭರ್ಜರಿ ಯಶಸ್ಸು ಕಂಡಿದೆ. ಜಗತ್ತಿನ ಪ್ರಮುಖ ತೈಲ ಮಾರ್ಗವಾದ ಸ್ಟೈಟ್ ಆಫ್ ಹೊರ್ಮುಜ್ ಈಗ ಸಂಪೂರ್ಣವಾಗಿ ಅಮೆರಿಕದ ನಿಯಂತ್ರಣದಲ್ಲಿದೆ ಎಂದು ಘೋಷಿಸಿದ್ದಾರೆ.

ಇರಾನ್ ನಾಯಕರ ವಿರುದ್ಧ ಆಕ್ರೋಶ: ಅವರು ರಕ್ತಪಿಪಾಸುಗಳು

ಇರಾನ್‌ನ ಸದ್ಯದ ನಾಯಕತ್ವವನ್ನು ತೀವ್ರವಾಗಿ ಟೀಕಿಸಿದ ಟ್ರಂಪ್, ನಾವು ವ್ಯವಹರಿಸುತ್ತಿರುವುದು ಒಳ್ಳೆಯ ಜನರ ಜೊತೆಗಲ್ಲ. ಅವರು ರಕ್ತಪಿಪಾಸುಗಳು. ತಮ್ಮದೇ ದೇಶದ ಪ್ರತಿಭಟನಾಕಾರರ ಮೇಲೆ ಅವರು ನಡೆಸಿದ ದೌರ್ಜನ್ಯ ನಮಗೆ ತಿಳಿದಿದೆ ಎಂದು ಕಿಡಿಕಾರಿದರು. ಅಲ್ಲದೆ, ಇರಾನ್ ಒಂದು ವೇಳೆ ಒಪ್ಪಂದಕ್ಕೆ ಸಹಿ ಹಾಕಿದರೆ, ಅದನ್ನು ಮತ್ತೆ ಒಂದು ಅದ್ಭುತ ರಾಷ್ಟ್ರವನ್ನಾಗಿ ಕಟ್ಟಲು ಅಮೆರಿಕ ಸಹಾಯ ಮಾಡಲಿದೆ ಎಂಬ ಆಮಿಷವನ್ನೂ ಒಡ್ಡಿದ್ದಾರೆ.

ಬಾಂಬ್ ದಾಳಿಗೆ ನಮ್ಮ ಸೈನ್ಯ ತುದಿಗಾಲಲ್ಲಿ ನಿಂತಿದೆ

ಕದನ ವಿರಾಮದ ಗಡುವನ್ನು ವಿಸ್ತರಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಟ್ರಂಪ್, ನಮ್ಮ ಬಳಿ ಹೆಚ್ಚಿನ ಸಮಯವಿಲ್ಲ. ಸಂಧಾನ ವಿಫಲವಾದರೆ ಬಾಂಬ್ ದಾಳಿ ಪುನಾರಂಭವಾಗುವುದು ಖಚಿತ. ನಿಜ ಹೇಳಬೇಕೆಂದರೆ, ಬಾಂಬ್ ಹಾಕುವ ಮನಸ್ಥಿತಿಯಲ್ಲೇ ಇರುವುದು ಉತ್ತಮ ಎಂದು ನಾನು ಭಾವಿಸುತ್ತೇನೆ. ನಮ್ಮ ಸೈನ್ಯ ಈಗ ದಾಳಿಗೆ ಅಕ್ಷರಶಃ ತುದಿಗಾಲಲ್ಲಿ ನಿಂತಿದೆ ಎಂದು ಯುದ್ಧದ ಮುನ್ಸೂಚನೆ ನೀಡಿದರು.
ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುವುದು ಎಂದು ಅವರು ಬೆದರಿಕೆ ಹಾಕಿದ್ದಾರೆ. ಈ ಮೂಲಸೌಕರ್ಯಗಳನ್ನು ಇರಾನ್ ಕ್ಷಿಪಣಿ ಸಾಗಾಟಕ್ಕೆ ಬಳಸುತ್ತಿದೆ ಎಂಬುದು ಅಮೆರಿಕದ ವಾದವಾಗಿದೆ.

ದೇಶದೊಳಗಿನ ವಿರೋಧಿಗಳಿಗೂ ಟ್ರಂಪ್ ತರಾಟೆ

ತಮ್ಮ ರಾಜಕೀಯ ವಿರೋಧಿಗಳಾದ ಡೆಮೋಕ್ರಾಟ್ ನಾಯಕ ಹಕೀಮ್ ಜೆಫ್ರಿಸ್ ಮತ್ತು ಇತರರನ್ನು ಟ್ರಂಪ್ ಟೀಕಿಸಿದ್ದಾರೆ. ನಾವು ಸಂಧಾನ ನಡೆಸುತ್ತಿರುವಾಗ ದೇಶದ ಒಳಗಿನವರು ವಿರೋಧ ವ್ಯಕ್ತಪಡಿಸಬಾರದು. ಇದು ಎದುರಾಳಿ ದೇಶಕ್ಕೆ ಭರವಸೆ ನೀಡಿದಂತಾಗುತ್ತದೆ. ಅವರಿಗೆ ಯಾವುದೇ ಭರವಸೆ ಸಿಗುವುದು ನನಗೆ ಇಷ್ಟವಿಲ್ಲ ಎಂದು ಟ್ರಂಪ್ ಗುಡುಗಿದ್ದಾರೆ.

ಮುಂದೇನು..?

ಟ್ರಂಪ್ ಅವರ ಈ ಬಿಸಿ ಮತ್ತು ತಂಪು ತಂತ್ರವು ಇರಾನ್ ಅನ್ನು ಸಂಕಷ್ಟಕ್ಕೆ ದೂಡಿದೆ. ಒಂದೆಡೆ ದೇಶದ ಮೂಲಸೌಕರ್ಯ ನಾಶಪಡಿಸುವ ಬೆದರಿಕೆ, ಇನ್ನೊಂದೆಡೆ ಅಭಿವೃದ್ಧಿಯ ಭರವಸೆಯಾಗಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಈ ಒತ್ತಡಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಮೇಲೆ ವಿಶ್ವದ ಭವಿಷ್ಯ ಅಡಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net