ಬನ್ನಿ, ಸುಟ್ಟು ಭಸ್ಮ ಮಾಡ್ತೀವಿ! ಅಮೆರಿಕ ಸೈನ್ಯಕ್ಕೆ ಇರಾನ್ ಕಮಾಂಡ್ ನೀಡಿದ ಆ ಭಯಾನಕ ಎಚ್ಚರಿಕೆ ಏನು? Khatam Al Anbiya

ಬನ್ನಿ, ಸುಟ್ಟು ಭಸ್ಮ ಮಾಡ್ತೀವಿ! ಅಮೆರಿಕ ಸೈನ್ಯಕ್ಕೆ ಇರಾನ್ ಕಮಾಂಡ್ ನೀಡಿದ ಆ ಭಯಾನಕ ಎಚ್ಚರಿಕೆ ಏನು?
ಬನ್ನಿ, ಸುಟ್ಟು ಭಸ್ಮ ಮಾಡ್ತೀವಿ! ಅಮೆರಿಕ ಸೈನ್ಯಕ್ಕೆ ಇರಾನ್ ಕಮಾಂಡ್ ನೀಡಿದ ಆ ಭಯಾನಕ ಎಚ್ಚರಿಕೆ ಏನು?
Published on
ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡಗಳು ಮತ್ತಷ್ಟು ದಟ್ಟವಾಗುತ್ತಿವೆ. ಇರಾನ್ ಮೇಲೆ ಭೂಸೇನಾ ದಾಳಿ ನಡೆಸಲು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಸಜ್ಜಾಗುತ್ತಿವೆ ಎಂಬ ವರದಿಗಳ ಬೆನ್ನಲ್ಲೇ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅತ್ಯಂತ ಭಯಾನಕ ಎಚ್ಚರಿಕೆಯನ್ನು ನೀಡಿದೆ. ನಮ್ಮ ದೇಶವನ್ನು ಆಕ್ರಮಿಸಲು ಬರುವ ಯಾವುದೇ ಶತ್ರುವಿನ ಕಾಲುಗಳನ್ನು ಕತ್ತರಿಸಲಾಗುವುದು ಎಂದು ಇರಾನ್‌ನ ಉನ್ನತ ಯುದ್ಧ ಕಾಲದ ಕಮಾಂಡ್ ಕೇಂದ್ರವಾದ ಖತಮ್ ಅಲ್-ಅನ್ಬಿಯಾ(Khatam Al Anbiya) ಮಂಗಳವಾರ (ಮಾ.31) ಘೋಷಿಸಿದೆ.

ಕಾಲು ಕತ್ತರಿಸುವ ಎಚ್ಚರಿಕೆಯ ಹಿಂದಿನ ಅರ್ಥ

IRGC ವಕ್ತಾರ ಇಬ್ರಾಹಿಂ ಝೋಲ್ಫಾಘರಿ ಅವರು ಕಾಲು ಕತ್ತರಿಸುವುದು ಎಂಬ ಪದವನ್ನು ಬಳಸುವ ಮೂಲಕ ಇರಾನ್ ಯಾವುದೇ ರೀತಿಯ ಅತಿಕ್ರಮಣವನ್ನು ಸಹಿಸುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಇರಾನ್‌ನ ವಾಯುನೆಲೆಗಳು ಮತ್ತು ಕ್ಷಿಪಣಿ ಕೇಂದ್ರಗಳ ಮೇಲೆ ದಾಳಿ ನಡೆದರೆ ಅದು ಇಡೀ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಆಸ್ತಿಗಳನ್ನು ಭಸ್ಮ ಮಾಡಲಿದೆ ಎಂದು ಎಚ್ಚರಿಸಿದ್ದಾರೆ.
ಪ್ರಸ್ತುತ ಇರಾನ್‌ನ ಈ ಆಕ್ರಮಣಕಾರಿ ಧೋರಣೆಯು ಅಮೆರಿಕದ ಮಿಲಿಟರಿ ತಂತ್ರಗಾರಿಕೆಗೆ ಸವಾಲಾಗಿದೆ. ಟ್ರಂಪ್ ಯುದ್ಧ ನಿಲ್ಲಿಸಲು ಬಯಸಿದರೂ, ಇರಾನ್‌ನ ಈ ಬೆಂಕಿಯಂತಹ ಮಾತುಗಳು ಮತ್ತು ಗಲ್ಫ್ ರಾಷ್ಟ್ರಗಳ ಮೇಲಿನ ಒತ್ತಡವು ಶಾಂತಿ ಮಾತುಕತೆಗೆ ಅಡ್ಡಿಯಾಗುವ ಸಾಧ್ಯತೆ ಇದೆ.

ಇರಾನ್‌ನ ಡಬಲ್ ಗೇಮ್ ಆರೋಪ ಮತ್ತು ಯುದ್ಧದ ಸನ್ನದ್ಧತೆ

ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗೇರ್ ಗಾಲಿಬಾಫ್ ಅವರು ಅಮೆರಿಕದ ವಿರುದ್ಧ ಹರಿಹಾಯ್ದಿದ್ದಾರೆ. ಅಮೆರಿಕವು ಜಗತ್ತಿನ ಮುಂದೆ ಮಾತುಕತೆಯ ನಾಟಕವಾಡುತ್ತಾ, ತೆರೆಮರೆಯಲ್ಲಿ ಇರಾನ್ ಮೇಲೆ ಭೂಸೇನಾ ದಾಳಿ ನಡೆಸಲು ಸಂಚು ರೂಪಿಸುತ್ತಿದೆ ಎಂದು ಆರೋಪಿಸಿದ್ದಾರೆ. ಶತ್ರುಗಳು ಬಹಿರಂಗವಾಗಿ ಸ್ನೇಹದ ಸಂದೇಶ ಕಳುಹಿಸುತ್ತಿದ್ದಾರೆ, ಆದರೆ ರಹಸ್ಯವಾಗಿ ನಮ್ಮ ನೆಲದ ಮೇಲೆ ದಾಳಿ ಮಾಡಲು ಸಂಚು ಹೂಡಿದ್ದಾರೆ. ನಾವು ಅವರ ಆಗಮನಕ್ಕಾಗಿ ಕಾಯುತ್ತಿದ್ದೇವೆ. ಅವರನ್ನು ಸುಟ್ಟು ಭಸ್ಮ ಮಾಡುತ್ತೇವೆ ಮತ್ತು ಅವರಿಗೆ ಸಹಕರಿಸುವ ಪ್ರಾದೇಶಿಕ ಮಿತ್ರ ರಾಷ್ಟ್ರಗಳನ್ನು ಶಾಶ್ವತವಾಗಿ ಶಿಕ್ಷಿಸುತ್ತೇವೆ ಎಂದು ಗಾಲಿಬಾಫ್ ಗುಡುಗಿದ್ದಾರೆ.

ಗಲ್ಫ್ ರಾಷ್ಟ್ರಗಳಿಗೆ ನೇರ ಬೆದರಿಕೆ

ತಮ್ಮ ನೆಲದಿಂದ ಅಮೆರಿಕಕ್ಕೆ ದಾಳಿ ಮಾಡಲು ಅವಕಾಶ ನೀಡುತ್ತಿರುವ ಸೌದಿ ಅರೇಬಿಯಾ, ಯುಎಇ ಮತ್ತು ಕುವೈತ್‌ನಂತಹ ಗಲ್ಫ್ ರಾಷ್ಟ್ರಗಳಿಗೆ ಇರಾನ್ ನೇರ ಎಚ್ಚರಿಕೆ ನೀಡಿದೆ. ಅಮೆರಿಕದ ಮಿಲಿಟರಿ ನೆಲೆಗಳಿಗೆ ಜಾಗ ನೀಡುವ ದೇಶಗಳು ಇರಾನ್‌ನ ಕೆಂಪು ಕಣ್ಣಿಗೆ ಗುರಿಯಾಗಿವೆ. ಪ್ರಾದೇಶಿಕ ಪಾಲುದಾರರನ್ನು ನಾವು ಎಂದಿಗೂ ಕ್ಷಮಿಸುವುದಿಲ್ಲ ಎಂಬ ಗಾಲಿಬಾಫ್ ಅವರ ಮಾತು ಅರಬ್ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ.

ಟ್ರಂಪ್ ನಿರ್ಗಮನದ ಪ್ಲಾನ್? ವಾಲ್ ಸ್ಟ್ರೀಟ್ ಜರ್ನಲ್ ವರದಿ

ಮತ್ತೊಂದೆಡೆ, ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯನ್ನು ಕೊನೆಗೊಳಿಸುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದಾರೆ. ಹಾರ್ಮುಜ್ ಜಲಸಂಧಿ ಮುಚ್ಚಿದ್ದರೂ ಸಹ, ಮುಂದಿನ 4 ರಿಂದ 6 ವಾರಗಳಲ್ಲಿ ಸೈನ್ಯವನ್ನು ಹಿಂಪಡೆಯಲು ಟ್ರಂಪ್ ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಇರಾನ್‌ನ ನೌಕಾಪಡೆ ಮತ್ತು ಕ್ಷಿಪಣಿ ಸಾಮರ್ಥ್ಯವನ್ನು ಈಗಾಗಲೇ ದುರ್ಬಲಗೊಳಿಸಿರುವುದರಿಂದ ಅಮೆರಿಕ ತನ್ನ ಗುರಿ ಸಾಧಿಸಿದೆ ಎಂಬುದು ಟ್ರಂಪ್ ಅವರ ಭಾವನೆಯಾಗಿದ್ದು. ಆದರೆ, ಇದು ಟೆಹ್ರಾನ್‌ಗೆ ಜಲಸಂಧಿಯ ಮೇಲೆ ಹೆಚ್ಚಿನ ಹಿಡಿತ ಸಾಧಿಸಲು ಅವಕಾಶ ಮಾಡಿಕೊಡಬಹುದು ಎಂಬ ಆತಂಕವೂ ಇದೆ.

ರಷ್ಯಾದ 'ಚೆಚೆನ್' ಪಡೆಗಳ ಎಂಟ್ರಿ?

ಯುದ್ಧದ ತೀವ್ರತೆ ಹೆಚ್ಚುತ್ತಿರುವ ಬೆನ್ನಲ್ಲೇ, ಇರಾನ್‌ಗೆ ಬೆಂಬಲವಾಗಿ ರಷ್ಯಾದ ಚೆಚೆನ್ ಘಟಕಗಳು ರಂಗಪ್ರವೇಶ ಮಾಡಲಿವೆ ಎಂಬ ವರದಿಗಳು ಇರಾನ್ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿವೆ. ಒಂದು ವೇಳೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಭೂಸೇನಾ ದಾಳಿ ನಡೆಸಿದರೆ, ರಷ್ಯಾ ಬೆಂಬಲಿತ ಈ ಕ್ರೂರ ಪಡೆಗಳು ಇರಾನ್ ಪರವಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಇದು ಯುದ್ಧವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮುನ್ಸೂಚನೆಯಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net