ಕೊಲಂಬಿಯಾ ಮಿಲಿಟರಿ ವಿಮಾನ ಪತನ: ಸಾವಿನ ಸಂಖ್ಯೆ 66ಕ್ಕೆ ಏರಿಕೆ, ಹಲವರು ನಾಪತ್ತೆ! | Colombia Plane Crash

Colombia Plane Crash
Colombia Plane Crash
Published on
ಕೊಲಂಬಿಯಾ: ದಕ್ಷಿಣ ಕೊಲಂಬಿಯಾದ ಪುಟುಮಾಯೊ ಪ್ರಾಂತ್ಯದ ಪುಯೆರ್ಟೊ ಲೆಗುಯಿಜಾಮೊ ಎಂಬಲ್ಲಿ ಸೋಮವಾರ ನಡೆದ ಭೀಕರ ಮಿಲಿಟರಿ ವಿಮಾನ(Colombia Plane Crash) ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ. ಕನಿಷ್ಠ 57 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಇನ್ನೂ 21 ಜನರು ಅವಶೇಷಗಳ ಅಡಿಯಲ್ಲಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಕೊಲಂಬಿಯಾ ವಾಯುಪಡೆಗೆ ಸೇರಿದ C-130 ಹರ್ಕ್ಯುಲಿಸ್ (Hercules) ಸಾರಿಗೆ ವಿಮಾನವು ಸೋಮವಾರ ಮಧ್ಯಾಹ್ನ ವಿಮಾನ ನಿಲ್ದಾಣದಿಂದ ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ವಿಮಾನದಲ್ಲಿ ಒಟ್ಟು 125 ಜನರಿದ್ದರು (114 ಸೈನಿಕರು ಮತ್ತು 11 ಸಿಬ್ಬಂದಿ). ವಿಮಾನವು ಟೇಕ್-ಆಫ್ ಆದ ಕೇವಲ 1.5 ಕಿಲೋಮೀಟರ್ ದೂರದಲ್ಲಿರುವ ಕಾಡಿನ ಪ್ರದೇಶದಲ್ಲಿ ಅಪ್ಪಳಿಸಿದೆ.
ಸ್ಫೋಟ ಮತ್ತು ಬೆಂಕಿ
ಪ್ರತ್ಯಕ್ಷದರ್ಶಿಗಳ ಪ್ರಕಾರ, ವಿಮಾನವು ಪತನಗೊಳ್ಳುತ್ತಿದ್ದಂತೆಯೇ ಅದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಬೆಂಕಿ ಹತ್ತಿಕೊಂಡಿತು. ವಿಮಾನದಲ್ಲಿದ್ದ ಮದ್ದುಗುಂಡುಗಳು ಮತ್ತು ಸ್ಫೋಟಕಗಳು ಸ್ಫೋಟಗೊಂಡಿದ್ದರಿಂದ ರಕ್ಷಣಾ ಕಾರ್ಯಾಚರಣೆ ಅತ್ಯಂತ ಸವಾಲಾಗಿತ್ತು. ದಟ್ಟವಾದ ಹೊಗೆ ಮತ್ತು ಜ್ವಾಲೆಗಳು ಆಕಾಶಕ್ಕೆ ಚಿಮ್ಮುತ್ತಿದ್ದವು. ಸ್ಥಳೀಯರು ಮೋಟಾರ್‌ಸೈಕಲ್‌ಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು.

ಸರ್ಕಾರದ ಪ್ರತಿಕ್ರಿಯೆ

ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಈ ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದು, "ಇದು ಎಂದಿಗೂ ನಡೆಯಬಾರದಿತ್ತು" ಎಂದು ವಿಷಾದಿಸಿದ್ದಾರೆ. ಸಶಸ್ತ್ರ ಪಡೆಗಳ ಆಧುನೀಕರಣದ ಕೊರತೆಯೇ ಈ ದುರಂತಕ್ಕೆ ಕಾರಣ ಎಂದು ಅವರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ಮಾತನಾಡಿ, "ವಿಮಾನವು ಹಾರಾಟಕ್ಕೆ ಯೋಗ್ಯವಾಗಿತ್ತು ಮತ್ತು ಸಿಬ್ಬಂದಿ ಅರ್ಹರಾಗಿದ್ದರು. ಯಾವುದೇ ಉಗ್ರಗಾಮಿಗಳ ದಾಳಿಯ ಲಕ್ಷಣಗಳು ಕಂಡುಬಂದಿಲ್ಲ" ಎಂದು ತಿಳಿಸಿದ್ದಾರೆ.
ಇದು ಕಳೆದ ಕೆಲವು ತಿಂಗಳುಗಳಲ್ಲಿ ಕೊಲಂಬಿಯಾದಲ್ಲಿ ನಡೆದ ಎರಡನೇ ದೊಡ್ಡ ವಿಮಾನ ಅಪಘಾತವಾಗಿದೆ. ಜನವರಿಯಲ್ಲಿ ಕುಕುಟಾ ಬಳಿ ನಡೆದ ಅಪಘಾತದಲ್ಲಿ ಕಾಂಗ್ರೆಸ್ ಸದಸ್ಯ ದಿಯೋಜೆನೆಸ್ ಕ್ವಿಂಟೆರೊ ಸೇರಿದಂತೆ ಎಲ್ಲರೂ ಮೃತಪಟ್ಟಿದ್ದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net