ಕೊಲಂಬಿಯಾದಲ್ಲಿ ಭೀಕರ ಭೂಕಂಪ: ಬಲಿಯಾದವರ ಸಂಖ್ಯೆ 132ಕ್ಕೆ ಏರಿಕೆ, ದೇಶಾದ್ಯಂತ ತುರ್ತುಸ್ಥಿತಿ ಘೋಷಣೆ! Colombia Earthquake

Colombia Earthquake (ಚಿತ್ರ X)
Colombia Earthquake (ಚಿತ್ರ X)
Published on

ಬೊಗೊಟಾ: ಪಶ್ಚಿಮ ಕೊಲಂಬಿಯಾದಲ್ಲಿ ಸಂಭವಿಸಿದ 7.4 ತೀವ್ರತೆಯ ಭೀಕರ ಭೂಕಂಪಕ್ಕೆ (

Colombia Earthquake)

ಕನಿಷ್ಠ 132 ಜನರು ಪ್ರಾಣ ಕಳೆದುಕೊಂಡಿದ್ದು, ನೂರಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಕಂಪನದ ರಭಸಕ್ಕೆ ವಿವಿಧ ನಗರಗಳಲ್ಲಿ ಹತ್ತಾರು ಬಹುಮಹಡಿ ಕಟ್ಟಡಗಳು ಧರಾಶಾಹಿಯಾಗಿವೆ ಎಂದು 'ಕೊಲಂಬಿಯನ್ ಅಸೋಸಿಯೇಷನ್ ಆಫ್ ಕ್ಯಾಪಿಟಲ್ ಸಿಟೀಸ್' ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಭೂಕಂಪದ ಪ್ರಭಾವ ಮತ್ತು ಕೇಂದ್ರಬಿಂದು

ಮಾಹಿತಿ ಪ್ರಕಾರ, ಚೊಕೊ ಪ್ರಾಂತ್ಯದ 'ಸಾನ್ ಜೋಸ್ ಡೆಲ್ ಪಾಲ್ಮಾರ್' ಎಂಬಲ್ಲಿ ಈ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಸುಮಾರು 4,800 ಜನಸಂಖ್ಯೆಯನ್ನು ಹೊಂದಿರುವ ಈ ಪ್ರದೇಶವು ರಾಜಧಾನಿ ಬೊಗೊಟಾದಿಂದ ಪಶ್ಚಿಮಕ್ಕೆ 400 ಕಿ.ಮೀ ದೂರದಲ್ಲಿದೆ. ಭೂಮಿಯ ಮೇಲ್ಮೈಯಿಂದ ಅಂದಾಜು 107 ಕಿಲೋಮೀಟರ್ ಆಳದಲ್ಲಿ ಕಂಪನ ಸೃಷ್ಟಿಯಾಗಿದೆ. ಭೂಕಂಪವು ಸಾಕಷ್ಟು ಆಳದಲ್ಲಿದ್ದರೂ ಸಹ ಅದರ ತೀವ್ರತೆ ಹೆಚ್ಚಿದ್ದ ಕಾರಣ ಭಾರಿ ಪ್ರಮಾಣದ ಆಸ್ತಿ-ಪಾಸ್ತಿ ಹಾನಿ ಸಂಭವಿಸಿದೆ.

ಚೊಕೊ ಮತ್ತು ಕ್ವಿಬ್ಡೋದಲ್ಲಿ ಭಾರಿ ಹಾನಿ

ಚೊಕೊ ಪ್ರಾಂತ್ಯವು ಭೂಕಂಪದಿಂದ ಅತ್ಯಂತ ಹೆಚ್ಚು ಬಾಧಿತಗೊಂಡಿದೆ. ಕ್ವಿಬ್ಡೋ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟಡಗಳು ಧರೆಗುರುಳಿದ್ದು, ಮೂಲಸೌಕರ್ಯಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ. ಕೇವಲ ಕ್ವಿಬ್ಡೋ ಒಂದರಲ್ಲೇ ಕನಿಷ್ಠ 12 ಜನರು ಸಾವನ್ನಪ್ಪಿದ್ದು, ಕಟ್ಟಡಗಳ ಅವಶೇಷಗಳಡಿಯಲ್ಲಿ ಹಲವರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ತೀವ್ರವಾಗಿ ಸಾಗಿದೆ.

ಸರ್ಕಾರದಿಂದ 'ರಾಷ್ಟ್ರೀಯ ತುರ್ತುಸ್ಥಿತಿ' ಘೋಷಣೆ

ಭೂಕಂಪದ ತೀವ್ರತೆಯನ್ನು ಅರಿತುಕೊಂಡ ಕೊಲಂಬಿಯಾದ ಅಧ್ಯಕ್ಷ ಅಬೆಲಾರ್ಡೊ ಡೆ ಲಾ ಎಸ್ಪ್ರಿಲ್ಲಾ ಅವರು ದೇಶಾದ್ಯಂತ ರಾಷ್ಟ್ರೀಯ ತುರ್ತುಸ್ಥಿತಿ ಘೋಷಿಸಿದ್ದಾರೆ. ಈ ನೈಸರ್ಗಿಕ ವಿಕೋಪದಿಂದ ತೊಂದರೆಗೊಳಗಾದ ಸಂತ್ರಸ್ತರ ಆರೈಕೆ ಮತ್ತು ಹಾನಿಗೊಳಗಾದ ಪ್ರದೇಶಗಳ ಪುನರ್ನಿರ್ಮಾಣ ಕಾರ್ಯವನ್ನು ನಮ್ಮ ಸರ್ಕಾರ ಸಂಪೂರ್ಣ ಬದ್ಧತೆಯಿಂದ ವಹಿಸಿಕೊಳ್ಳಲಿದೆ. ಈ ಕಷ್ಟದ ಸಮಯದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಸಂತ್ರಸ್ತ ಕುಟುಂಬಗಳ ಬೆನ್ನಿಗೆ ನಿಲ್ಲಬೇಕಿದೆ ಎಂದು ಅವರು ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಪರಿಹಾರ ಮತ್ತು ರಕ್ಷಣಾ ಕಾರ್ಯಗಳು

ಸಂತ್ರಸ್ತರಿಗಾಗಿ ಕೊಲಂಬಿಯಾ ಸರ್ಕಾರವು ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಚೊಕೊ ಪ್ರದೇಶದ 1,400ಕ್ಕೂ ಹೆಚ್ಚು ಸಂತ್ರಸ್ತ ಕುಟುಂಬಗಳಿಗೆ ತುರ್ತು ಆರ್ಥಿಕ ನೆರವು ಮತ್ತು ಮಾನವೀಯ ಸಹಾಯ ಒದಗಿಸಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡವರನ್ನು ತಕ್ಷಣವೇ ಮೆಡೆಲಿನ್ ನಗರದ ಉನ್ನತ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತಿದ್ದು, ಎಲ್ಲಾ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ತಾತ್ಕಾಲಿಕವಾಗಿ ಬಾಡಿಗೆ ಭತ್ಯೆ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ.
ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸರಣಿ ಭೂಕಂಪಗಳು ವರದಿಯಾಗುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಪ್ರಸ್ತುತ ಸ್ಥಳೀಯ ರಕ್ಷಣಾ ಪಡೆಗಳು ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯುವ ಕಾರ್ಯದಲ್ಲಿ ನಿರತವಾಗಿವೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net