

ಯುಎಸ್: ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಭೀಕರ ಎನ್ನಲಾದ ಶೀತ ಮಾರುತಗಳು ಆ ದೇಶದ ಹಲವಾರು ರಾಜ್ಯಗಳನ್ನು ಸ್ತಬ್ಧಗೊಳಿಸಿವೆ. ಗಲ್ಪ್ ಆಫ್ ಮೆಕ್ಸಿಕೋದಿಂದ ಕೆನಡಾ ಗಡಿಯವರೆಗೆ ಮಂಜುಗಡ್ಡೆಯ ಹೊದಿಕೆ ನಿರ್ಮಾಣವಾಗಿದೆ. ಇದು ಅಮೆರಿಕಕ್ಕೆ ಸೀಮಿತವಾಗಿಲ್ಲ. ಚೀನಾ, ಯೂರೋಪ್, ಉತ್ತರ ಭಾರತ ಸೇರಿದಂತೆ ಹತ್ತು ಹಲವು ಪ್ರದೇಶಗಳಿಗೂ ಇದರ ದುಷ್ಪರಿಣಾಮ ತಟ್ಟಿದೆ. ಈ ಪ್ರಕೃತಿವಿಕೋಪದ ಹಿಂದಿರುವ ‘ಪೋಲಾರ್ ವೋರ್ಟೆಕ್ಸ್’ ಎಂಬ ಅಗೋಚರ ಶಕ್ತಿಯ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಅಮೆರಿಕ ಮತ್ತು ಇತರ ಕೆಲವು ದೇಶಗಳ ಹವಾಮಾನ ಇತಿಹಾಸದಲ್ಲಿ ಇದು ಕರಾಳ ಕಾಲ. ಒಹಿಯೋ ವ್ಯಾಲಿಯಿಂದ ಹಿಡಿದು ನ್ಯೂ ಇಂಗ್ಲೆಂಡ್ವರೆಗೆ ಪ್ರಕೃತಿ ರೌದ್ರಾವತಾರ ತಾಳಿದೆ. ಹಿಮಪಾತ ಮತ್ತು ತೀವ್ರ ಚಳಿಗೆ ಅಮೆರಿಕದಲ್ಲಿ ಕಳೆದ ಕೆಲವು ದಿನಗಳಿಂದೀಚೆ ಕನಿಷ್ಠ 18 ಜನ ಬಲಿಯಾಗಿದ್ದಾರೆ. ಸುಮಾರು 24 ರಾಜ್ಯಗಳು ಒಂದು ಅಡಿಗಿಂತ ಹೆಚ್ಚು ಹಿಮದಡಿ ಹೂತುಹೋಗಿವೆ. ಅಲ್ಲಿನ ರಾಷ್ಟ್ರೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಈ ಕೊರೆಯುವ ಚಳಿಯಿಂದ ಬಾಧಿತರಾದ ಅಮೆರಿಕನ್ನರ ಸಂಖ್ಯೆ ಸುಮಾರು 15.7 ಕೋಟಿ. ಉತ್ತರ ಭಾಗ ಮಾತ್ರವಲ್ಲದೆ, ದಕ್ಷಿಣದ ಮೆಕ್ಸಿಕೋ ಗಡಿಯವರೆಗೂ ತಾಪಮಾನ ಶೂನ್ಯಕ್ಕಿಂತ ಕೆಳಕ್ಕೆ ಕುಸಿದಿದೆ. ಇದಕ್ಕೆ ಕಾರಣ- ಪೋಲಾರ್ ವೋರ್ಟೆಕ್ಸ್.
ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಗಳ ಮೇಲೆ ಗಾಳಿಯ ಒಂದು ಬೃಹತ್ ಚಕ್ರ ಸದಾ ತಿರುಗುತ್ತಿರುತ್ತದೆ. ಇದನ್ನೇ ‘ಪೋಲಾರ್ ವೋರ್ಟೆಕ್ಸ್’ (ಧ್ರುವ ಸುಳಿ) ಎನ್ನುತ್ತಾರೆ. ಇದು ಎರಡು ಸ್ತರಗಳಲ್ಲಿರುತ್ತದೆ. ಒಂದು, ಟ್ರೋಪೋಸ್ಪಿಯರಿಕ್ ಸುಳಿ. ಇದು ಭೂಮಿಯಿಂದ 10-15 ಕಿ.ಮೀ ಎತ್ತರದಲ್ಲಿರುತ್ತದೆ. ನಾವು ದಿನನಿತ್ಯ ಅನುಭವಿಸುವ ಹವಾಮಾನ ಬದಲಾವಣೆಗಳು ನಡೆಯುವುದು ಇಲ್ಲೇ. ಇನ್ನೊಂದು, ಸ್ಟ್ರಾಟೋಸ್ಪಿಯರಿಕ್ ಸುಳಿ. ಇದು 15ರಿಂದ 50 ಕಿ.ಮೀ ಎತ್ತರದಲ್ಲಿರುತ್ತದೆ. ಇದು ಬೇಸಿಗೆಯಲ್ಲಿ ಮಾಯವಾಗಿ, ಶರತ್ಕಾಲ ಮತ್ತು ಚಳಿಗಾಲದಲ್ಲಿ ಪ್ರಬಲವಾಗುತ್ತದೆ. ಸಾಮಾನ್ಯವಾಗಿ ಈ ಸುಳಿ ಭೂಮಿಯ ಪಾಲಿಗೆ ಒಂದು ಭದ್ರಕೋಟೆಯಂತೆ ಕೆಲಸ ಮಾಡುತ್ತದೆ. ಆರ್ಕ್ಟಿಕ್ ಪ್ರದೇಶದ ಅತಿ ತಣ್ಣನೆಯ ಗಾಳಿ ದಕ್ಷಿಣಕ್ಕೆ ಬರದಂತೆ ತಡೆಹಿಡಿಯುತ್ತದೆ. ಆದರೆ, ಈ ಭದ್ರಕೋಟೆ ದುರ್ಬಲಗೊಂಡಾಗ ಭೂಮಿಯ ಮೇಲೆ ಶೀತಗಾಳಿ, ಹಿಮಪಾತದಂತಹ ಅನಾಹುತಗಳು ಆರಂಭವಾಗುತ್ತವೆ.
ಧ್ರುವ ಸುಳಿ ಪ್ರಬಲವಾಗಿದ್ದಾಗ, ‘ಜೆಟ್ ಸ್ಟ್ರೀಮ್ ಎಂಬ ವೇಗದ ಮಾರುತಗಳು ಉತ್ತರ ಧ್ರುವದ ಸುತ್ತಲೂ ವೃತ್ತಾಕಾರದಲ್ಲಿ ಚಲಿಸುತ್ತಾ ಚಳಿಯನ್ನು ಅಲ್ಲೇ ಹಿಡಿದಿಟ್ಟಿರುತ್ತವೆ. ಆದರೆ, ಯಾವಾಗ ಈ ಸುಳಿ ದುರ್ಬಲವಾಗುತ್ತದೆಯೋ, ಆಗ ಜೆಟ್ ಸ್ಟ್ರೀಮ್ ತನ್ನ ಲಯ ಕಳೆದುಕೊಳ್ಳುತ್ತದೆ. ನೇರವಾಗಿ ಸಾಗಬೇಕಾದ ಗಾಳಿ ಒಮ್ಮೆಲೇ ಹಾವಿನಂತೆ ಅಂಕುಡೊಂಕಾಗಿ ಚಲಿಸಲು ಪ್ರಾರಂಭಿಸುತ್ತದೆ. ಈ ಸಂದರ್ಭದಲ್ಲಿ ಉತ್ತರ ಧ್ರುವದ ಮೈಕೊರೆಯುವ ಶೀತಗಾಳಿ ಕ್ರಮೇಣ ದಕ್ಷಿಣದತ್ತ, ಅಂದರೆ ಅಮೆರಿಕ, ಯುರೋಪ್ ಮತ್ತು ಏಷ್ಯಾದ ದೇಶಗಳಿಗೆ ನುಗ್ಗುತ್ತದೆ. ಪ್ರಸ್ತುತ ಅಮೆರಿಕದಲ್ಲಿ ಆಗುತ್ತಿರುವುದು ಇದೇ. ಆರ್ಕ್ಟಿಕ್ನ ಶೀತಗಾಳಿ ಈಗ ಫ್ಲೋರಿಡಾದಂತಹ ಬೆಚ್ಚಗಿನ ಪ್ರದೇಶಗಳನ್ನೂ ತಲುಪಿದೆ!
ವಿಜ್ಞಾನಿಗಳು ಈ ವೈಪರೀತ್ಯದ ಬಗ್ಗೆ ಆಳವಾದ ಸಂಶೋಧನೆ ನಡೆಸುತ್ತಿದ್ದಾರೆ. ಒಂದು ವಾದದ ಪ್ರಕಾರ, ಜಾಗತಿಕ ತಾಪಮಾನ ಏರಿಕೆ (ಗ್ಲೋಬಲ್ ವಾರ್ವಿುಂಗ್) ಇದಕ್ಕೆ ನೇರ ಕಾರಣ. ಭೂಮಿಯ ಇತರ ಭಾಗಗಳಿಗಿಂತ ಉತ್ತರ ಧ್ರುವ ಹೆಚ್ಚು ವೇಗವಾಗಿ ಬಿಸಿಯಾಗುತ್ತಿದೆ. ಧ್ರುವ ಪ್ರದೇಶ ಬಿಸಿಯಾದಂತೆಲ್ಲ, ಧ್ರುವ ಸುಳಿ ಮತ್ತು ಜೆಟ್ ಸ್ಟ್ರೀಮ್ಳ ಶಕ್ತಿ ಕುಂದುತ್ತದೆ. ದುರ್ಬಲಗೊಂಡ ಈ ಮಾರುತಗಳು ಸುಲಭವಾಗಿ ಹಾದಿ ತಪ್ಪಿ ಶೀತಗಾಳಿಯನ್ನು ಜನವಸತಿ ಪ್ರದೇಶಗಳಿಗೆ ತಳ್ಳುತ್ತವೆ. ರುಟ್ಗರ್ಸ್ ವಿಶ್ವವಿದ್ಯಾಲಯದ ಹವಾಮಾನ ತಜ್ಞ ಸ್ಟೀಫನ್ ಡೆಕ್ಕರ್ ಹೇಳುವ ಪ್ರಕಾರ, ಭೂಮಿ ಬಿಸಿಯಾಗುವ ಪ್ರಕ್ರಿಯೆ ಎಲ್ಲೆಡೆ ಸಮಾನವಾಗಿಲ್ಲ. ಧ್ರುವ ಪ್ರದೇಶಗಳಲ್ಲಿ ಶಾಖ ಹೆಚ್ಚಾದಂತೆ, ತಣ್ಣನೆಯ ಗಾಳಿಯನ್ನು ಹಿಡಿದಿಡುವ ಅದರ ಶಕ್ತಿ ಕಡಿಮೆಯಾಗುತ್ತಿದೆ. ಪರಿಣಾಮವಾಗಿ ಅದು ಭೂಮಿಯತ್ತ ನುಗ್ಗಿ ಬರುತ್ತಿದೆ.
ಬಾಧಿತ ದೇಶಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಸಾವಿರಾರು ವಿಮಾನ ಪ್ರಯಾಣಗಳು ರದ್ದಾಗಿವೆ. ರಸ್ತೆಗಳ ಮೇಲೆ ಹಿಮ ಕಟ್ಟಿಕೊಂಡಿರುವ ಪರಿಣಾಮ ವಾಹನ ಸವಾರರು ಅಲ್ಲೇ ಸಿಲುಕಿಕೊಂಡಿದ್ದಾರೆ. ಪ್ರಮುಖ ಹೆದ್ದಾರಿಗಳನ್ನು ಮುಚ್ಚಲಾಗಿದೆ. ರೈಲು ಪ್ರಯಾಣಕ್ಕೂ ಸಮಸ್ಯೆ ಎದುರಾಗಿದೆ. ಅತಿಯಾದ ಚಳಿಯಿಂದಾಗಿ ಹೀಟರ್ಗಳ ಬಳಕೆ ಹೆಚ್ಚಾಗಿದೆ. ಇದರಿಂದ ವಿದ್ಯುತ್ ಮತ್ತು ಗ್ಯಾಸ್ ಪೂರೈಕೆಯ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದ್ದು, ಕೆಲವೆಡೆ ಇಂಧನ ಅಭಾವ ಸೃಷ್ಟಿಯಾಗಿದೆ. ಹಿಮದಿಂದಾಗಿ ಕೆಲವೆಡೆ ವಾಹನಗಳು ಜಾರಿ ಅಪಘಾತಕ್ಕೀಡಾಗುತ್ತಿವೆ. ಕೃಷಿ ಬೆಳೆಗಳೂ ನಾಶವಾಗುತ್ತಿವೆ.
ಭಾರತದ ಮೇಲೆ ಪೋಲಾರ್ ವೋರ್ಟೆಕ್ಸ್ ನೇರವಾಗಿ ಅಪ್ಪಳಿಸದಿದ್ದರೂ, ಅದರ ಪ್ರಭಾವದಿಂದ ‘ವೆಸ್ಟರ್ನ್ ಡಿರ್ಸrನ್ಸ್’ ತೀವ್ರಗೊಂಡಿದೆ. ಉತ್ತರ ಭಾರತದ ರಾಜ್ಯಗಳಾದ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತವಾಗುತ್ತಿದ್ದರೆ, ದೆಹಲಿ, ಪಂಜಾಬ್ ಮತ್ತು ಹರಿಯಾಣಗಳಲ್ಲಿ ‘ಕೋಲ್ಡ್ ವೇವ್’ನಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮೈಕೊರೆಯುವ ಚಳಿ, ರಸ್ತೆ-ಕಟ್ಟಡಗಳ ಮೇಲೆಲ್ಲ ಹಿಮದ ಹೊದಿಕೆ, ಹಲವು ದಿನಗಳಿಂದ ನಿಂತಲ್ಲೇ ನಿಂತಿರುವ ಬಸ್ಸು-ಕಾರುಗಳು, ಮನೆಯಿಂದ ಹೊರಬರಲು ಹೆದರುತ್ತಿರುವ ಜನ, ಪ್ರೇಕ್ಷಣೀಯ ತಾಣಗಳಲ್ಲೇ ‘ಬಂಧಿ’ಯಾದ ಪ್ರವಾಸಿಗರು... ಇವು ಈಗ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕಂಡುಬರುತ್ತಿರುವ ದೃಶ್ಯಗಳು.
ಪೋಲಾರ್ ವೋರ್ಟೆಕ್ಸ್ನ ಪ್ರಭಾವ ಇದ್ದಾಗ ಆಕಾಶ ಶುಭ್ರವಾಗಿದ್ದರೂ ಗಾಳಿಯಲ್ಲಿನ ತಂಪು ಮನುಷ್ಯರ ಮೈಯನ್ನು ಮರಗಟ್ಟಿಸುತ್ತದೆ. ಅಮೆರಿಕದ ಕೆಲವು ಭಾಗಗಳಲ್ಲಿ ದಾಖಲಾದ ಉಷ್ಣಾಂಶ, ಮಂಗಳ ಗ್ರಹದ ಸರಾಸರಿ ಉಷ್ಣಾಂಶಕ್ಕಿಂತಲೂ ಕಡಿಮೆ ಇರುತ್ತದೆ. ಇಂತಹ ಚಳಿಯಲ್ಲಿ ಕೇವಲ 5-10 ನಿಮಿಷಗಳ ಕಾಲ ಚರ್ಮ ಗಾಳಿಗೆ ತೆರೆದುಕೊಂಡರೂ ಫ್ರಾಸ್ಟ್ ಬೈಟ್ (ಶೀತವ್ರಣ, ಹಿಮಗಾಯ) ಆಗುತ್ತದೆ. ಚರ್ಮ ಮರಗಟ್ಟಿದಂತಾಗಿ, ಬಿಳಿ ಬಣ್ಣಕ್ಕೆ ತಿರುಗುತ್ತದೆ. ಕೆಲವೊಮ್ಮೆ ರಕ್ತ ಪರಿಚಲನೆ ನಿಂತು, ಚರ್ಮ ಕಪ್ಪುಬಣ್ಣಕ್ಕೆ ತಿರುಗುತ್ತದೆ. ಕಿವಿ, ಮೂಗು, ಬೆರಳುಗಳಲ್ಲಿ ಗಾಯವಾಗುವ ಸಾಧ್ಯತೆ ಜಾಸ್ತಿ. ಹಿರಿಯ ನಾಗರಿಕರಲ್ಲಿ ಉಸಿರಾಟದ ತೊಂದರೆ ಮತ್ತು ಹೈಪೋಥರ್ವಿುಯಾ ಅಪಾಯ ಹೆಚ್ಚಾಗುತ್ತದೆ.
ಇತಿಹಾಸದಲ್ಲೇ ಅತ್ಯಂತ ಭೀಕರವಾದ ಪೋಲಾರ್ ವೋರ್ಟೆಕ್ಸ್ ದಾಳಿ 2014 ಮತ್ತು 2019ರಲ್ಲಿ ಸಂಭವಿಸಿತ್ತು. ಆಗ ನಯಾಗರಾ ಜಲಪಾತವೂ ಭಾಗಶಃ ಹೆಪ್ಪುಗಟ್ಟಿ ಪ್ರವಾಸಿಗರನ್ನು ಆಶ್ಚರ್ಯಚಕಿತಗೊಳಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಕಂಡು ಬರುತ್ತಿರುವ ಬದಲಾವಣೆಗಳು ಅದಕ್ಕಿಂತಲೂ ತೀವ್ರವಾಗಿವೆ ಎನ್ನುತ್ತಾರೆ ಅಮೆರಿಕದ ಹವಾಮಾನ ಇಲಾಖೆ ಅಧಿಕಾರಿಗಳು.
ವಿಜ್ಞಾನಿಗಳು ಹೇಳುವ ಪ್ರಕಾರ, ಹತ್ತಾರು ಕಿಲೋಮೀಟರ್ ಎತ್ತರದಲ್ಲಿ ಬೀಸುವ ಜೆಟ್ ಸ್ಟ್ರೀಮ್ ಮಾರುತ ದುರ್ಬಲಗೊಳ್ಳಲು ಮುಖ್ಯ ಕಾರಣ ‘ಆರ್ಕ್ಟಿಕ್ ವರ್ಧನೆ’ (ಆರ್ಕ್ಟಿಕ್ ಆಂಪ್ಲಿಫಿಕೇಶನ್). ಅಂದರೆ ಉತ್ತರ ಧ್ರುವವು ಜಗತ್ತಿನ ಉಳಿದ ಭಾಗಗಳಿಗಿಂತ ವೇಗವಾಗಿ ಬಿಸಿಯಾಗುತ್ತಿದೆ ಎಂದರ್ಥ. ಇದಕ್ಕೆ ಕಾರಣ ವಾತಾವರಣದಲ್ಲಿರುವ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಹೆಚ್ಚುತ್ತಿರುವುದು. ಜೆಟ್ ಸ್ಟ್ರೀಮ್ ಅನ್ನು ಬಲಪಡಿಸಲು ಅಥವಾ ಅದು ಹಾದಿ ತಪ್ಪದಂತೆ ತಡೆಯಲು ನಾವು ನಮ್ಮ ದೈನಂದಿನ ಜೀವನದಲ್ಲಿ ಜಾಗತಿಕ ತಾಪಮಾನ ಏರಿಕೆಯನ್ನು ಕಡಿಮೆ ಮಾಡುವ ದಿಸೆಯಲ್ಲಿ ಕಾರ್ಯೋನ್ಮುಖರಾಗಬೇಕಾಗುತ್ತದೆ.
ಬಾಧಿತ ದೇಶಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಸಾವಿರಾರು ವಿಮಾನ ಪ್ರಯಾಣಗಳು ರದ್ದಾಗಿವೆ. ರಸ್ತೆಗಳ ಮೇಲೆ ಹಿಮ ಕಟ್ಟಿಕೊಂಡಿರುವ ಪರಿಣಾಮ ವಾಹನ ಸವಾರರು ಅಲ್ಲೇ ಸಿಲುಕಿಕೊಂಡಿದ್ದಾರೆ. ಪ್ರಮುಖ ಹೆದ್ದಾರಿಗಳನ್ನು ಮುಚ್ಚಲಾಗಿದೆ. ರೈಲು ಪ್ರಯಾಣಕ್ಕೂ ಸಮಸ್ಯೆ ಎದುರಾಗಿದೆ. ಅತಿಯಾದ ಚಳಿಯಿಂದಾಗಿ ಹೀಟರ್ಗಳ ಬಳಕೆ ಹೆಚ್ಚಾಗಿದೆ. ಇದರಿಂದ ವಿದ್ಯುತ್ ಮತ್ತು ಗ್ಯಾಸ್ ಪೂರೈಕೆಯ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದ್ದು, ಕೆಲವೆಡೆ ಇಂಧನ ಅಭಾವ ಸೃಷ್ಟಿಯಾಗಿದೆ. ಹಿಮದಿಂದಾಗಿ ಕೆಲವೆಡೆ ವಾಹನಗಳು ಜಾರಿ ಅಪಘಾತಕ್ಕೀಡಾಗುತ್ತಿವೆ. ಕೃಷಿ ಬೆಳೆಗಳೂ ನಾಶವಾಗುತ್ತಿವೆ.
ಜಾಗತಿಕ ತಾಪಮಾನ ಏರಿಕೆ ಕಡಿಮೆಯಾಗಬೇಕೆಂದರೆ ನಾವು ಮನೆಯಲ್ಲಿ ಲೈಟ್, ಎಸಿ ಅಥವಾ ಹೀಟರ್ಗಳ ಬಳಕೆ ಕಡಿಮೆ ಮಾಡಬೇಕು. ಸಾಧ್ಯವಾದಷ್ಟೂ ಸೌರಶಕ್ತಿ ಅಥವಾ ನವೀಕರಿಸಬಹುದಾದ ಇಂಧನ ಬಳಸಬೇಕು. ವಾಹನಗಳಿಂದ ಬರುವ ಹೊಗೆ ನೇರವಾಗಿ ಓಜೋನ್ ಪದರ ಮತ್ತು ವಾಯುಮಂಡಲದ ಉಷ್ಣಾಂಶದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಕಾರ್, ಬೈಕ್ ಬಳಕೆ ಕಡಿಮೆ ಮಾಡಿ, ಸಾಧ್ಯವಾದಷ್ಟೂ ಸಾರ್ವಜನಿಕ ಸಾರಿಗೆ ಬಳಸಬೇಕು. ಬೇರೆ ದೇಶ-ರಾಜ್ಯಗಳಿಂದ ಬರುವ ಆಹಾರ ಪದಾರ್ಥಗಳ ಸಾಗಾಣಿಕೆಗೆ ಹೆಚ್ಚು ಇಂಧನ ವ್ಯಯವಾಗುವುದರಿಂದ ಸ್ಥಳೀಯವಾಗಿ ಬೆಳೆದ ಆಹಾರಪದಾರ್ಥಗಳನ್ನೇ ಹೆಚ್ಚಾಗಿ ಸೇವಿಸಬೇಕು. ಮರಗಳು ಕಾರ್ಬನ್ ಹೀರಿಕೊಳ್ಳುತ್ತವೆ. ಹೆಚ್ಚು ಮರಗಳಿದ್ದರೆ ಭೂಮಿಯ ತಾಪಮಾನ ಸ್ಥಿರವಾಗಿರುತ್ತದೆ. ಆಗ ಆರ್ಕ್ಟಿಕ್ ಮತ್ತು ಸಮಭಾಜಕ ವೃತ್ತದ ನಡುವಿನ ತಾಪಮಾನದ ವ್ಯತ್ಯಾಸ ಸರಿಯಾಗಿರುತ್ತದೆ. ಜೆಟ್ ಸ್ಟ್ರೀಮ್ ಬಲಗೊಳ್ಳಲು ಈ ತಾಪಮಾನದ ವ್ಯತ್ಯಾಸವೇ ‘ಇಂಧನ’. ಜೆಟ್ಸ್ಟ್ರೀಮ್ ಅಸ್ಥಿರವಾಗುತ್ತಿರುವುದು ಮನುಕುಲಕ್ಕೆ ಪ್ರಕೃತಿ ನೀಡುತ್ತಿರುವ ಎಚ್ಚರಿಕೆ.
ಪೋಲಾರ್ ವೋರ್ಟೆಕ್ಸ್ ನಿಂದಾಗಿ ಬ್ರಿಟನ್, ಜರ್ಮನಿ, ಕೆನಡಾ, ಮೆಕ್ಸಿಕೋ. ಸ್ವೀಡನ್, ಫಿನ್ಲೆಂಡ್, ಫ್ರಾನ್ಸ್, ಲಿಥುವೇನಿಯಾ, ಲ್ಯಾಟ್ವಿಯಾ, ಸೈಬೀರಿಯಾ ಮತ್ತಿತರ ಪ್ರದೇಶಗಳಲ್ಲಿ ಈ ಬಾರಿ ದಾಖಲೆ ಮಟ್ಟದ ಹಿಮಪಾತ, ಶೀತಮಾರುತ ಸಮಸ್ಯೆ ತಲೆದೋರಿದೆ.
ಅಮೆರಿಕದ ಹವಾಮಾನ ಇಲಾಖೆ ಪ್ರಕಾರ, ಈ ಚಳಿ, ಹಿಮಪಾತ ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯಲಿದೆ. ಪೋಲಾರ್ ವೋರ್ಟೆಕ್ಸ್ ತನ್ನ ಮೂಲ ಸ್ಥಾನಕ್ಕೆ ಮರಳುವವರೆಗೆ ಅಮೆರಿಕ ಮತ್ತು ಇತರ ಬಾಧಿತ ದೇಶಗಳ ಜನತೆಗೆ ಈ ಹಿಮದ ಸಂಕೋಲೆಯಿಂದ ಮುಕ್ತಿ ಸಿಗುವುದು ಕಷ್ಟ. ಇದು ಕೇವಲ ಒಂದು ಚಳಿಗಾಲದ ಘಟನೆಯಲ್ಲ, ನಾವು ಪ್ರಕೃತಿಯ ಮೇಲೆ ಮಾಡುತ್ತಿರುವ ದಾಳಿಗೆ ಪ್ರಕೃತಿಯೇ ನೀಡುತ್ತಿರುವ ಪ್ರತಿಕ್ರಿಯೆ ಎನ್ನುತ್ತಾರೆ ಪರಿಸರವಾದಿಗಳು.