ಆದರೆ, 2024ರ ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಂಡಿದ್ದರಿಂದ ಈ ಯೋಜನೆಗಳು ಸ್ಥಗಿತಗೊಂಡವು. ಇದುವರೆಗೆ ಬಂಗಾಳ ಕೊಲ್ಲಿಯಲ್ಲಿ ಭಾರತದ ಪ್ರಾಬಲ್ಯವೇ ಹೆಚ್ಚಾಗಿದ್ದರೂ, ಈಗ ಮೊಂಗ್ಲಾ ಬಂದರಿನವರೆಗೆ ಚೀನಾ ತಲುಪಿರುವುದು ಈ ಪ್ರದೇಶದಲ್ಲಿ ಭಾರತಕ್ಕೆ ವ್ಯೂಹಾತ್ಮಕವಾಗಿ ಹೊಸ ಸವಾಲನ್ನು ಸೃಷ್ಟಿಸಲಿದೆ. ಒಮ್ಮೆ ಈ ಬಂದರುಗಳು ಚೀನಾದ ಹಿಡಿತಕ್ಕೆ ಬಂದರೆ, ಅಲ್ಲಿ ಚೀನಾ ಮಿಲಿಟರಿ ನೆಲೆಯನ್ನು ಸಹ ಸ್ಥಾಪಿಸುವ ಸಾಧ್ಯತೆಯಿದೆ. ಏಕೆಂದರೆ, ಚೀನಾ ಕಂಪನಿಗಳು 2023ರಲ್ಲೇ ಬಾಂಗ್ಲಾದೇಶದ ಕಾಕ್ಸ್ ಬಜಾರ್‌ನಲ್ಲಿ ಸಬ್‌ಮೆರಿನ್ ನೆಲೆಯನ್ನು ಸಿದ್ಧಪಡಿಸಿವೆ. ಇಲ್ಲಿ 6 ಸಬ್‌ಮೆರಿನ್ಗಳು ಮತ್ತು 8 ಯುದ್ಧನೌಕೆಗಳನ್ನು ನಿಲ್ಲಿಸಬಹುದಾಗಿದೆ. ಇದರ ನಿರ್ವಹಣೆಗಾಗಿ ಬಾಂಗ್ಲಾದೇಶ ಸಂಪೂರ್ಣವಾಗಿ ಚೀನಾವನ್ನೇ ಅವಲಂಬಿಸಿದೆ. ಮಾತ್ರವಲ್ಲ, ಚಿತ್ತಗಾಂಗ್ ಮತ್ತು ಮೊಂಗ್ಲಾವರೆಗೆ ಚೀನಾದ ಹಲವು ಯುದ್ಧನೌಕೆಗಳು ನಿರಂತರವಾಗಿ ಭೇಟಿ ನೀಡುತ್ತಿವೆ.