ಜನನ ಪ್ರಮಾಣ ಹೆಚ್ಚಿಸುವ ಪ್ರಯತ್ನ: ಕಾಂಡೋಮ್​ಗಳ ಮೇಲೆ ಶೇ. 13ರಷ್ಟು ತೆರಿಗೆ ಹಾಕಿದ ಚೀನಾ | China

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಬಿಜಿಂಗ್​: ಇಳಿಮುಖವಾಗುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು, ಜನನ ಪ್ರಮಾಣವನ್ನು ಹೆಚ್ಚಿಸಲು ಈ ವರ್ಷದ ಜ. 01ರಿಂದ ಚೀನಾ(China) ತನ್ನ ದೇಶದಲ್ಲಿ ಕಾಂಡೋಮ್ ಸೇರಿ ಇತರೆ ಗರ್ಭನಿರೋಧಕಗಳ ಮೇಲೆ ಶೇ. 13ರಷ್ಟು ತೆರಿಗೆ ವಿಧಿಸಿ ಜಾರಿಗೆ ತಂದಿದೆ.
ಕಳೆದ ಮೂರು ದಶಕಗಳಿಂದ ಜಾರಿಯಲ್ಲಿದ್ದ ಈ ವಸ್ತುಗಳ ಮೇಲಿನ ತೆರಿಗೆ ವಿನಾಯ್ತಿಯನ್ನು ತೆಗೆದು ಹಾಕಿದೆ. ಚೀನಾದಲ್ಲಿ 1980ರಿಂದ 2015ರವರೆಗೆ ಒಂದು ಮಗು ಒಂದು ನೀತಿ ಜಾರಿಯಲ್ಲಿತ್ತು. ಅದರಿಂದ ಜನಸಂಖ್ಯೆ ನಿಯಂತ್ರಣಕ್ಕೆ ಬಂದಿತು, ಆದರೆ ಜನನ ಪ್ರಮಾಣ ಕಡಿಮೆಯಾಯಿತು ಎನ್ನಲಾಗಿದೆ.
ಇನ್ನೂ 2023ರಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿದ ದೇಶವಾಗಿದೆ. ಈಗ ಮತ್ತೆ ಚೀನಾ ದೇಶದಲ್ಲಿ ಪ್ರತಿಯೊಬ್ಬ ದಂಪತಿ ಮೂರು ಮಕ್ಕಳನ್ನು ಹೊಂದಲು ನೀತಿಯನ್ನು ಅಳವಡಿಸಲಾಗಿದೆ. ಆದರೆ ಅಲ್ಲಿನ ದಂಪತಿಗಳು ಮಕ್ಕಳನ್ನು ಬೆಳೆಸುವ, ಪಾಲನೆ ಮಾಡುವ ಹಾಗೂ ಶಿಕ್ಷಣದ ಖರ್ಚು ವೆಚ್ಚವನ್ನು ನೋಡಿ ಮೂರು ಮಕ್ಕಳನ್ನು ಹೇರಲು ಹಿಂಜರಿಯುತ್ತಿದ್ದಾರೆ.
ಆದರೆ ಈಗ ಚೀನಾ ಸರ್ಕಾರ & ಅಧಿಕಾರಿಗಳು, ಮದುವೆ ಮತ್ತು ಹೆರಿಗೆಯನ್ನು ರಾಷ್ಟ್ರೀಯ ಆದ್ಯತೆಗಳೆಂದು ಪ್ರಚಾರ ಮಾಡುತ್ತಿದೆ. ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಮದುವೆ, ಫಲವತ್ತತೆ ಮತ್ತು ಕುಟುಂಬ ಜೀವನವನ್ನು ಸಕಾರಾತ್ಮಕವಾಗಿ ಚಿತ್ರಿಸುವ ಪ್ರೀತಿಯ ಶಿಕ್ಷಣವನ್ನು ನೀಡುವಂತೆ ಹೇಳಿದೆ.

ಕುಟುಂಬ ವೆಚ್ಚಗಳಿಗೆ ಸಬ್ಸಿಡಿ

ಗರ್ಭನಿರೋಧಕಗಳಿಗೆ ತೆರಿಗೆ ವಿಧಿಸುವುದರ ಜೊತೆಗೆ ಚೀನಾ, ಕುಟುಂಬದ ವೆಚ್ಚಗಳಿಗೆ ಸಬ್ಸಿಡಿಗಳು, ನಗದು ಪ್ರೋತ್ಸಾಹಕಗಳನ್ನು ಜಾರಿಗೆ ತಂದಿದೆ ಎನ್ನಲಾಗಿದೆ. ಮೂರು ವರ್ಷದೊಳಗಿನ ಪ್ರತಿ ಮಗುವಿನ ಪೋಷಕರಿಗೆ ಈಗ ವಾರ್ಷಿಕ 3,600 ಯುವಾನ್ (ಸುಮಾರು $500) ಸಬ್ಸಿಡಿಯನ್ನು ಕೊಡಲು ಮುಂದಾಗಿದೆ. ಇದು ಜನವರಿ 2025 ಜನವರಿ 1ರಿಂದ ಜನಿಸಿದ ಮಕ್ಕಳಿಗೆ ಅನ್ವಯಿಸುತ್ತದೆ. ಮೂರು ವರ್ಷಗಳಲ್ಲಿ ಪ್ರತಿ ಮಗುವಿಗೆ ಕುಟುಂಬಗಳು 10,800 ಯುವಾನ್ವರೆಗೆ ಪಡೆಯುತ್ತವೆ.
ಶಿಶು ಪಾಲನಾ ಸಬ್ಸಿಡಿಗಳನ್ನು ವೈಯಕ್ತಿಕ ಆದಾಯ ತೆರಿಗೆಯಿಂದ ವಿನಾಯ್ತಿ ನೀಡಿಲಾಗಿದೆ. ಉಚಿತ ಸಾರ್ವಜನಿಕ ಪ್ರಿಸ್ಕೂಲ್ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಸಾರ್ವಜನಿಕ ಯೋಗಕ್ಷೇಮವನ್ನು ಸುಧಾರಿಸಲು ಮತ್ತು ಮಕ್ಕಳನ್ನು ಬೆಳೆಸುವ ಹೊರೆಯನ್ನು ಕಡಿಮೆ ಮಾಡಲು ದೇಶಾದ್ಯಂತ ಈ ನೀತಿಯನ್ನು ಜಾರಿಗೆ ತರಲಾಗಿದೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net