ಜಾಗತಿಕ ತಾಪಮಾನಕ್ಕೆ ಸೆಡ್ಡು: ಮರುಭೂಮಿಯನ್ನೇ ಕಾಡಾಗಿಸಿದ ಚೀನಾ, ಕೃತಕ ಅರಣ್ಯ ಕಂಡು ವಿಜ್ಞಾನ ಜಗತ್ತು ಫಿದಾ! Green Chinese Strategy

ಜಾಗತಿಕ ತಾಪಮಾನಕ್ಕೆ ಸೆಡ್ಡು: ಮರುಭೂಮಿಯನ್ನೇ ಕಾಡಾಗಿಸಿದ ಚೀನಾ, ಕೃತಕ ಅರಣ್ಯ ಕಂಡು ವಿಜ್ಞಾನ ಜಗತ್ತು ಫಿದಾ! Green Chinese Strategy
ಜಾಗತಿಕ ತಾಪಮಾನಕ್ಕೆ ಸೆಡ್ಡು: ಮರುಭೂಮಿಯನ್ನೇ ಕಾಡಾಗಿಸಿದ ಚೀನಾ, ಕೃತಕ ಅರಣ್ಯ ಕಂಡು ವಿಜ್ಞಾನ ಜಗತ್ತು ಫಿದಾ! Green Chinese Strategy
Published on

ಪ್ರಮುಖ ಮುಖ್ಯಾಂಶಗಳು

  • ಜಾಗತಿಕ ತಾಪಮಾನಕ್ಕೆ ಚೀನಾದ 'ಮಹಾ ಹಸಿರು ಗೋಡೆ' ರಕ್ಷಾಕವಚ
  • ನೈಸರ್ಗಿಕ ಕಾಡುಗಳಿಗಿಂತ ವೇಗವಾಗಿ ಬೆಳೆಯುತ್ತಿವೆ ಚೀನಾದ ಕೃತಕ ಕಾಡುಗಳು
  • ಚೀನಾದ ಮಾನವ ನಿರ್ಮಿತ ಕಾಡುಗಳ ವಿಸ್ಮಯಕಾರಿ ಬೆಳವಣಿಗೆಗೆ ವಿಜ್ಞಾನಿ ಜಗತ್ತು ಫಿದಾ
  • ಚೀನಾದ ಹಸಿರು ಯೋಜನೆಯ ಸಾಧನೆ ಮತ್ತು ಸವಾಲುಗಳೇನು?
Green Chinese Strategy : ಜಾಗತಿಕ ತಾಪಮಾನ ಏರಿಕೆ ಮತ್ತು ಮರಭೂಮಿಕರಣದ ವಿರುದ್ಧದ ಹೋರಾಟದಲ್ಲಿ ಚೀನಾ ಜಗತ್ತೇ ಬೆರಗಾಗುವಂತಹ ಐತಿಹಾಸಿಕ ಮೈಲಿಗಲ್ಲೊಂದನ್ನು ಸಾಧಿಸಿದೆ! ತನ್ನ ಗಡಿಭಾಗದ ಎರಡು ಬೃಹತ್ ಮರಭೂಮಿಗಳ ವಿಸ್ತರಣೆಯನ್ನು ತಡೆಯಲು 1978 ರಲ್ಲಿ ಚೀನಾ ಆರಂಭಿಸಿದ ‘ಗ್ರೇಟ್ ಗ್ರೀನ್ ವಾಲ್’ (ಮಹಾ ಹಸಿರು ಗೋಡೆ) ಎಂಬ ಜಗತ್ತಿನ ಅತಿ ದೊಡ್ಡ ಕೃತಕ ಅರಣ್ಯೀಕರಣ ಯೋಜನೆಯಡಿ ಕಳೆದ 48 ವರ್ಷಗಳಲ್ಲಿ ಬರೋಬ್ಬರಿ 66 ಬಿಲಿಯನ್ (6,600 ಕೋಟಿ) ಮರಗಳನ್ನು ನೆಡಲಾಗಿದೆ. ಇತ್ತೀಚಿನ ಅಧ್ಯಯನದ ಪ್ರಕಾರ, ಈ ಮಾನವ ನಿರ್ಮಿತ ಕಾಡುಗಳ ಮರಗಳು ನೈಸರ್ಗಿಕ ಕಾಡುಗಳಿಗಿಂತಲೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವುದಲ್ಲದೆ, ವಾತಾವರಣದಲ್ಲಿನ ಅಪಾರ ಪ್ರಮಾಣದ ಕಾರ್ಬನ್ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಮೂಲಕ ಭೂಮಿಯ ತಾಪಮಾನವನ್ನು ತಗ್ಗಿಸುವಲ್ಲಿ ಜಾಗತಿಕ ರಕ್ಷಾಕವಚವಾಗಿ ಹೊರಹೊಮ್ಮಿವೆ.
ಚೀನಾದ ಗೋಬಿ ಮತ್ತು ತಕ್ಲಮಕಾನ್ ಮರಭೂಮಿಗಳ ವಿಸ್ತರಣೆಗೆ ಬ್ರೇಕ್ ಹಾಕುವ ಉದ್ದೇಶ ಹೊಂದಿರುವ ಈ ಮಹತ್ವಾಕಾಂಕ್ಷಿ ಯೋಜನೆಯಡಿ, 2050ರ ವೇಳೆಗೆ ಇನ್ನೂ 34 ಬಿಲಿಯನ್ (3,400 ಕೋಟಿ) ಮರಗಳನ್ನು ನೆಡುವ ದೃಢ ಗುರಿಯನ್ನು ಚೀನಾ ಹೊಂದಿದೆ. ಇಷ್ಟು ಬೃಹತ್ ಪ್ರಮಾಣದ ಮಾನವ ನಿರ್ಮಿತ ಕಾಡುಗಳು ನೈಸರ್ಗಿಕ ಕಾಡುಗಳಿಗಿಂತ ಹೇಗೆ ಭಿನ್ನವಾಗಿವೆ ಎಂಬುದರ ಕುರಿತು ವಿಜ್ಞಾನಿಗಳು ನಡೆಸಿದ ಜಂಟಿ ಅಧ್ಯಯನದಲ್ಲಿ ಒಂದು ರೋಚಕ ಸತ್ಯ ಹೊರಬಿದ್ದಿದೆ. ಈ ಕೃತಕ ಕಾಡುಗಳ ಮರಗಳು ವಾತಾವರಣದಿಂದ ಅಗಾಧ ಪ್ರಮಾಣದ ಕಾರ್ಬನ್ ಡೈಆಕ್ಸೈಡ್ ಅನ್ನು ಹೀರಿಕೊಳ್ಳುತ್ತಿರುವುದಷ್ಟೇ ಅಲ್ಲದೆ, ಇವುಗಳ ಎಲೆಗಳ ವಿಸ್ತೀರ್ಣವು ನೈಸರ್ಗಿಕ ಮರಗಳಿಗಿಂತ ಶೇ. 66 ರಷ್ಟು ಹೆಚ್ಚು ವೇಗವಾಗಿ ವೃದ್ಧಿಯಾಗುತ್ತಾ ದಟ್ಟ ಹಸಿರಾಗಿ ಬೆಳೆಯುತ್ತಿವೆ!
ಪ್ರಪಂಚದ ಬಹುತೇಕ ಪರಿಸರ ವ್ಯವಸ್ಥೆಯ ಮಾದರಿಗಳು ಕೃತಕ ಮತ್ತು ನೈಸರ್ಗಿಕ ಕಾಡುಗಳ ನಡುವೆ ಹೆಚ್ಚಿನ ವ್ಯತ್ಯಾಸವನ್ನೇ ಮಾಡುವುದಿಲ್ಲ ಎಂದು ಈ ಅಧ್ಯಯನದ ಪ್ರಮುಖ ಲೇಖಕರಾದ ಯುಹಾಂಗ್ ಕುವೊ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಮರಗಳ ವೈವಿಧ್ಯತೆ, ಸಾಂದ್ರತೆ ಮತ್ತು ವಯಸ್ಸು ಅವುಗಳು ಕಾರ್ಬನ್ ಡೈಆಕ್ಸೈಡ್ ಹಾಗೂ ಹವಾಮಾನ ಬದಲಾವಣೆಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದರ ಮೇಲೆ ಪ್ರಭಾವ ಬೀರುತ್ತವೆಯೇ ಎಂದು ಅರ್ಥಮಾಡಿಕೊಳ್ಳಲು ಸಂಶೋಧಕರು ಮುಂದಾದರು. ಇದಕ್ಕಾಗಿ ವಿಜ್ಞಾನಿಗಳು ಉಪಗ್ರಹ ದತ್ತಾಂಶಗಳನ್ನು ಬಳಸಿಕೊಂಡು ಈ ಮರಗಳ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದು, ಇದಕ್ಕಾಗಿ ಮರಗಳ ಎಲೆಗಳ ಸಾಂದ್ರತೆಯನ್ನು ಅಳೆಯುವ 'ಲೀಫ್ ಏರಿಯಾ ಇಂಡೆಕ್ಸ್' (ಎಲೆ ವಿಸ್ತೀರ್ಣ ಸೂಚಿ) ಅನ್ನು ಮಾನದಂಡವಾಗಿ ಬಳಸಿಕೊಂಡರು, ಏಕೆಂದರೆ ಕಾರ್ಬನ್ ಹೀರಿಕೊಳ್ಳುವಲ್ಲಿ ಈ ಸೂಚಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಉಪಗ್ರಹ ಚಿತ್ರಗಳನ್ನು ವಿಶ್ಲೇಷಿಸಿದಾಗ, ಕೃತಕವಾಗಿ ನೆಡಲಾದ ಮರಗಳು ನೈಸರ್ಗಿಕ ಮರಗಳಿಗಿಂತ ಶೇ. 66 ರಷ್ಟು ಹೆಚ್ಚು ವೇಗವಾಗಿ ತಮ್ಮ ಎಲೆಗಳ ವಿಸ್ತೀರ್ಣವನ್ನು ಹೆಚ್ಚಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಸಾಬೀತಾಗಿದೆ.
ಕೃತಕ ಕಾಡುಗಳ ಈ ವಿಸ್ಮಯಕಾರಿ ಬೆಳವಣಿಗೆಯ ಹಿಂದೆ ಅವುಗಳ ‘ಕಡಿಮೆ ವಯಸ್ಸು’ ಪ್ರಮುಖ ಕಾರಣ ಎಂದು ಈ ಅಧ್ಯಯನವು ತೋರಿಸಿಕೊಟ್ಟಿದೆ. ಸಾಮಾನ್ಯವಾಗಿ ಚಿಕ್ಕ ವಯಸ್ಸಿನ ಮರಗಳು ಹೆಚ್ಚು ವೇಗವಾಗಿ ಬೆಳೆಯುತ್ತವೆ. ಆದರೆ, ಇದೇ ವಯಸ್ಸಿನ ನೈಸರ್ಗಿಕ ಕಾಡುಗಳಿಗೆ ಹೋಲಿಸಿ ನೋಡಿದಾಗಲೂ, ಮಾನವ ನಿರ್ಮಿತ ಕಾಡಿನ ಮರಗಳು ಶೇ. 4.6 ರಷ್ಟು ಹೆಚ್ಚಿನ ಬೆಳವಣಿಗೆಯ ದರವನ್ನು ದಾಖಲಿಸಿವೆ! ಇದಕ್ಕೆ ಮಾನವನ ನಿಖರವಾದ ಮತ್ತು ವ್ಯವಸ್ಥಿತವಾದ ಮಧ್ಯಪ್ರವೇಶವೇ ಮುಖ್ಯ ಕಾರಣ ಎಂದು ವಿಜ್ಞಾನಿಗಳು ಬೆರಳು ಮಾಡಿ ತೋರಿಸುತ್ತಾರೆ.
ನೈಸರ್ಗಿಕ ಕಾಡುಗಳಲ್ಲಿ ಸೂರ್ಯನ ಬೆಳಕು, ನೀರು ಮತ್ತು ಪೋಷಕಾಂಶಗಳಿಗಾಗಿ ಮರಗಳು ತಮ್ಮಲ್ಲೇ ತೀವ್ರವಾಗಿ ಪೈಪೋಟಿ ನಡೆಸಬೇಕಾಗುತ್ತದೆ. ಆದರೆ, ಈ ಕೃತಕ ಕಾಡುಗಳಲ್ಲಿ ಮರಗಳ ನಡುವೆ ನಿಖರವಾದ ಅಂತರವನ್ನು ಕಾಯ್ದುಕೊಳ್ಳಲಾಗಿದೆ. ಚೀನಾ ಇಲ್ಲಿ ಪ್ರಮುಖವಾಗಿ ಯೂಕಲಿಪ್ಟಸ್ ಮತ್ತು ಪಾಪ್ಲರ್‌ನಂತಹ ಅತ್ಯಂತ ವೇಗವಾಗಿ ಬೆಳೆಯುವ ಮರಗಳನ್ನು ನೆಟ್ಟಿದೆ. ಅಲ್ಲದೆ, ಮರಗಳ ಬೆಳವಣಿಗೆಗೆ ಮಾರಕವಾಗುವ ಕಾಡು ಗಿಡಗಂಟಿಗಳು ಮತ್ತು ಕಳೆಗಳನ್ನು ಅತ್ಯಂತ ಎಚ್ಚರಿಕೆಯಿಂದ ತೆಗೆದುಹಾಕಲಾಗುತ್ತಿದ್ದು, ಅಗತ್ಯವಿರುವ ಗೊಬ್ಬರವನ್ನು ಒದಗಿಸಲಾಗುತ್ತಿದೆ. ಕೃತಕ ಕಾಡುಗಳಲ್ಲಿನ ಮರಗಳು ನೀರು ಮತ್ತು ಪೋಷಕಾಂಶಗಳಿಗಾಗಿ ಇತರ ಸಸ್ಯಗಳೊಂದಿಗೆ ಸ್ಪರ್ಧಿಸುವ ಅಗತ್ಯವಿರುವುದಿಲ್ಲ; ಮಾನವನೇ ಅವುಗಳಿಗೆ ಬೇಕಾದ ಎಲ್ಲಾ ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸಿಕೊಡುತ್ತಾನೆ ಎಂದು ಸಂಶೋಧಕರು ವಿವರಿಸಿದ್ದಾರೆ.
ಬೆಳವಣಿಗೆಯ ದರದಲ್ಲಿ ಕೃತಕ ಕಾಡುಗಳು ಮುಂಚೂಣಿಯಲ್ಲಿದ್ದರೂ ಸಹ, ಇದರ ಹಿಂದೆ ಒಂದು ನಕಾರಾತ್ಮಕ ಮೌಲ್ಯವಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಈ ಮರಗಳು ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದಾಗ, ಇವುಗಳ ಬೆಳವಣಿಗೆಯ ವೇಗವು ತೀವ್ರವಾಗಿ ಕ್ಷೀಣಿಸಲು ಪ್ರಾರಂಭಿಸುತ್ತದೆ. ಸಾಮಾನ್ಯವಾಗಿ 30 ರಿಂದ 40 ವರ್ಷಗಳ ಅವಧಿಯಲ್ಲಿ ಇವುಗಳ ಬೆಳವಣಿಗೆಯು ಗರಿಷ್ಠ ಮಟ್ಟವನ್ನು ತಲುಪುತ್ತದೆ, ಆದರೆ ಆ ನಂತರ, ಇವುಗಳ ಬೆಳವಣಿಗೆಯ ದರ ಮತ್ತು ವಾತಾವರಣದಿಂದ ಕಾರ್ಬನ್ ಹೀರಿಕೊಳ್ಳುವ ಸಾಮರ್ಥ್ಯ ಎರಡೂ ಗಣನೀಯವಾಗಿ ಕುಸಿಯುತ್ತವೆ. ಮತ್ತೊಂದೆಡೆ, ನೈಸರ್ಗಿಕ ಕಾಡುಗಳಲ್ಲಿನ ಮರಗಳು ನಿಧಾನವಾಗಿ ಬೆಳೆದರೂ, ದೀರ್ಘಾವಧಿಯಲ್ಲಿ ಸ್ಥಿರವಾಗಿರುತ್ತವೆ ಮತ್ತು ಶತಮಾನಗಳ ಕಾಲ ಕಾರ್ಬನ್ ಅನ್ನು ತನ್ನೊಳಗೆ ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ. ವಾತಾವರಣದಿಂದ ಕಾರ್ಬನ್ ಅನ್ನು ಅತ್ಯಂತ ವೇಗವಾಗಿ ಹೀರಿಕೊಳ್ಳಲು ಕೃತಕ ಕಾಡುಗಳು ಅಲ್ಪಾವಧಿಯಲ್ಲಿ ಅತ್ಯುತ್ತಮ ಸಾಧನ ನಿಜ, ಆದರೆ ಈ ಪ್ರಯೋಜನವು ತಾತ್ಕಾಲಿಕ ಮಾತ್ರ. ಮಾನವ ನಿರ್ಮಿತ ಕಾಡುಗಳು ಎಂದಿಗೂ ನೈಸರ್ಗಿಕ ಕಾಡುಗಳಿಗೆ ಪರ್ಯಾಯವಾಗಲು ಸಾಧ್ಯವಿಲ್ಲ ಎಂದು ಯುಹಾಂಗ್ ಲುಯೊ ಸೇರಿಸಿದ್ದಾರೆ.
ಚೀನಾದ ‘ಗ್ರೇಟ್ ಗ್ರೀನ್ ವಾಲ್’ ಯೋಜನೆಯು ಮರಭೂಮಿಕರಣವನ್ನು ತಡೆಯುವಲ್ಲಿ ಸದ್ಯಕ್ಕೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆಯಾದರೂ, ಮುಂಬರುವ ದಶಕಗಳಲ್ಲಿ ಈ ಮರಗಳು ವಯಸ್ಸಾದಂತೆ ಎದುರಿಸಬಹುದಾದ ಸವಾಲುಗಳನ್ನು ನಿಭಾಯಿಸಲು ಇನ್ನೂ ಹೆಚ್ಚಿನ ವೈಜ್ಞಾನಿಕ ಮತ್ತು ಸುಸ್ಥಿರ ಯೋಜನೆಗಳ ಅಗತ್ಯವಿದೆ ಎಂಬುದನ್ನು ಈ ಅಧ್ಯಯನವು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net