ಹತ್ಯಾಲೋಕ!

ಹತ್ಯಾಲೋಕ!
ಹತ್ಯಾಲೋಕ!
Published on
ಅತ್ಯಂತ ಬಲಿಷ್ಠ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆ ಹೊಂದಿರುವ ಅಮೆರಿಕ ಸಂಯುಕ್ತ ಸಂಸ್ಥಾನದ ಇತಿಹಾಸವು ಅಧ್ಯಕ್ಷೀಯ ಹತ್ಯೆಗಳ ಕರಾಳ ಛಾಯೆಯನ್ನೂ ಹೊಂದಿದೆ. ಇದುವರೆಗೆ ಅಮೆರಿಕದ ಇತಿಹಾಸದಲ್ಲಿ ಒಟ್ಟು ನಾಲ್ವರು ಅಧ್ಯಕ್ಷರು ಅಧಿಕಾರಾವಧಿಯಲ್ಲಿದ್ದಾಗಲೇ ಹತ್ಯೆಗೀಡಾಗಿದ್ದಾರೆ. ಪ್ರತಿಯೊಂದು ಘಟನೆಯೂ ಅಮೆರಿಕದ ರಾಜಕೀಯ ದಿಕ್ಕನ್ನು ಬದಲಿಸಿದೆ. ಅಮೆರಿಕದ ಇತಿಹಾಸದಲ್ಲಿ ಈ ಅಧ್ಯಕ್ಷರ ಹತ್ಯೆಗಳು ಆಯಾ ಕಾಲಘಟ್ಟದ ಸಿದ್ಧಾಂತಗಳ ನಡುವಿನ ಸಂಘರ್ಷದ ಫಲಶ್ರುತಿಗಳಾಗಿವೆ. ಈ ಹತ್ಯೆಗಳು ಅಮೆರಿಕದ ರಾಜಕೀಯದಲ್ಲಿ ಇಂದಿಗೂ ಸದ್ದು ಮಾಡುತ್ತಲೇ ಇರುತ್ತವೆ. ಪ್ರತಿ ಹತ್ಯೆಯ ನಂತರ ಅಧಿಕಾರಕ್ಕೆ ಬಂದವರು ಹೊಸ ರೀತಿಯ ಕಾನೂನುಗಳನ್ನು ತಂದರು. ಉದಾಹರಣೆಗೆ, ಲಿಂಕನ್ ನಂತರದ ಪುನರ್ನಿರ್ಮಾಣ ಅಥವಾ ವಿಲಿಯಂ ಮೆಕಿನ್ಲಿ ನಂತರದ ರೂಸ್‌ವೆಲ್ಟ್ ಸುಧಾರಣೆಗಳು.

ಅಬ್ರಹಾಂ ಲಿಂಕನ್

ಅಮೆರಿಕದ 16ನೇ ಅಧ್ಯಕ್ಷ ಅಬ್ರಹಾಂ ಲಿಂಕನ್ ಹತ್ಯೆಗೀಡಾದ ಮೊದಲ ಅಧ್ಯಕ್ಷರು. ಅಮೆರಿಕದ ಅಂತರ್ಯುದ್ಧವನ್ನು ಅಂತ್ಯಗೊಳಿಸಿ, ಗುಲಾಮಗಿರಿಯನ್ನು ನಿರ್ಮೂಲನೆ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.
ಹತ್ಯೆಯ ಸಂದರ್ಭ: 1865ರ ಏಪ್ರಿಲ್ 14ರಂದು ವಾಷಿಂಗ್ಟನ್ ಡಿಸಿಯ ಫೋರ್ಡ್ ಥಿಯೇಟರ್‌ನಲ್ಲಿ ‘ಅವರ್ ಅಮೆರಿಕನ್ ಕಸಿನ್’ ಎಂಬ ನಾಟಕವನ್ನು ವೀಕ್ಷಿಸುತ್ತಿದ್ದಾಗ ಲಿಂಕನ್ ತಲೆಗೆ ಗುಂಡು ಹಾರಿಸಲಾಯಿತು.
ಹಂತಕ: ಜಾನ್ ವಿಲ್ಕ್ಸ್ ಬೂತ್ ಎಂಬ ನಟ. ಈತ ದಕ್ಷಿಣ ರಾಜ್ಯಗಳ ಬೆಂಬಲಿಗನಾಗಿದ್ದ.
ಕಾರಣ: ಲಿಂಕನ್ ಗುಲಾಮಗಿರಿಯನ್ನು ವಿರೋಧಿಸಿದ್ದು ಮತ್ತು ದಕ್ಷಿಣದ ರಾಜ್ಯಗಳ ಸೋಲಿಗೆ ಕಾರಣವಾಗಿದ್ದು ಬೂತ್‌ನ ಆಕ್ರೋಶಕ್ಕೆ ಕಾರಣವಾಗಿತ್ತು. ಒಕ್ಕೂಟವನ್ನು ಮತ್ತೆ ಅಸ್ಥಿರಗೊಳಿಸುವುದು ಅವನ ಉದ್ದೇಶವಾಗಿತ್ತು.
ಪರಿಣಾಮ: ಲಿಂಕನ್ ಸಾವಿನಿಂದಾಗಿ ಅಮೆರಿಕ ಒಬ್ಬ ದಕ್ಷ ನಾಯಕನನ್ನು ಕಳೆದುಕೊಂಡಿತು. ಪುನರ್ನಿರ್ಮಾಣದ ಪ್ರಕ್ರಿಯೆ ಹಳಿ ತಪ್ಪಿತು ಮತ್ತು ದಕ್ಷಿಣ ರಾಜ್ಯಗಳ ಕಡೆಗೆ ಒಕ್ಕೂಟದ ಧೋರಣೆ ಕಠಿಣವಾಯಿತು.

ಜೇಮ್ಸ್ ಎ. ಗಾರ್ಫೀಲ್ಡ್

ಅಮೆರಿಕದ 20ನೇ ಅಧ್ಯಕ್ಷರಾದ ಜೇಮ್ಸ್ ಎ. ಗಾರ್ಫೀಲ್ಡ್ ನಾಲ್ಕು ತಿಂಗಳು ಮಾತ್ರ ಅಧಿಕಾರದಲ್ಲಿದ್ದರು.
ಹತ್ಯೆಯ ಸಂದರ್ಭ: ವಾಷಿಂಗ್ಟನ್‌ನ ರೈಲ್ವೆ ನಿಲ್ದಾಣವೊಂದರಲ್ಲಿ 1881ರ ಜುಲೈ 2ರಂದು ಜೇಮ್ಸ್ ಎ. ಗಾರ್ಫೀಲ್ಡ್ ಮೇಲೆ ಗುಂಡು ಹಾರಿಸಲಾಯಿತು. ಗುಂಡೇಟಿನಿಂದ ತಕ್ಷಣ ಸಾವು ಸಂಭವಿಸಲಿಲ್ಲವಾದರೂ, ವೈದ್ಯರ ನಿರ್ಲಕ್ಷ್ಯ ಮತ್ತು ಸೋಂಕಿನಿಂದಾಗಿ 1881ರ ಸೆಪ್ಟೆಂಬರ್ 19ರಂದು ನಿಧನರಾದರು.
ಹಂತಕ: ಚಾರ್ಲ್ಸ್ ಜೆ. ಗಿಟೋ.
ಕಾರಣ: ತನಗೆ ಸರ್ಕಾರದಲ್ಲಿ ರಾಯಭಾರಿಯ ಹುದ್ದೆ ಸಿಗಲಿಲ್ಲ ಎಂಬ ಹತಾಶೆಯಿಂದ ಗಿಟೋ ಈ ಕೃತ್ಯ ಎಸಗಿದ್ದ. ಅವನು ಮಾನಸಿಕವಾಗಿ ಅಸ್ವಸ್ಥನಾಗಿದ್ದ ಎನ್ನಲಾಗಿದೆ.
ಪರಿಣಾಮ: ಈ ಹತ್ಯೆಯ ನಂತರ ಅಮೆರಿಕದ ಸಿವಿಲ್ ಸರ್ವಿಸ್ ವ್ಯವಸ್ಥೆಯಲ್ಲಿ ಭಾರಿ ಸುಧಾರಣೆ ತರಲಾಯಿತು. ಅರ್ಹತೆಯ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡುವ ಪೆಂಡಲ್ಟನ್ ಕಾಯ್ದೆ ಜಾರಿಗೆ ಬರಲು ಇದು ಪ್ರೇರಣೆಯಾಯಿತು.

ಜಾನ್ ಎಫ್. ಕೆನಡಿ

ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಚರ್ಚಿತ ಮತ್ತು ರಹಸ್ಯಮಯ ಹತ್ಯೆ ಎಂದರೆ ಅದು 35ನೇ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರದ್ದು.
ಹತ್ಯೆಯ ಸಂದರ್ಭ: ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ 1963ರ ನವೆಂಬರ್ 22ರಂದು ತೆರೆದ ಕಾರಿನಲ್ಲಿ ಮೆರವಣಿಗೆ ಹೋಗುತ್ತಿದ್ದಾಗ ಜನಸಂದಣಿಯ ನಡುವೆಯೇ ಕೆನಡಿ ಮೇಲೆ ಗುಂಡು ಹಾರಿಸಲಾಯಿತು. ಇಡೀ ಜಗತ್ತನ್ನೇ ನಡುಗಿಸಿದ ಘಟನೆ ಇದಾಗಿತ್ತು.
ಹಂತಕ: ಲೀ ಹಾರ್ವೆ ಓಸ್ವಾಲ್ಡ್.
ಕಾರಣ: ಕೆನಡಿ ಹತ್ಯೆಯ ಅಧಿಕೃತ ಕಾರಣ ಇಂದಿಗೂ ನಿಗೂಢ. ಶೀತಲಸಮರದ ಕಾಲಘಟ್ಟದಲ್ಲಿದ್ದ ಕೆನಡಿ ಅವರ ಉದಾರವಾದಿ ನಿಲುವುಗಳು ಹಲವರಿಗೆ ಇಷ್ಟವಿರಲಿಲ್ಲ ಎನ್ನಲಾಗುತ್ತದೆ.
ಪರಿಣಾಮ: ಕೆನಡಿ ಸಾವು ಅಮೆರಿಕದ ಯುವಜನರಲ್ಲಿ ತೀವ್ರ ಆಘಾತ ಉಂಟುಮಾಡಿತು. ಅವರ ನಂತರ ಬಂದ ಲಿಂಡನ್ ಬಿ. ಜಾನ್ಸನ್ ಕೆನಡಿ ಅವರ ಕನಸಿನ ನಾಗರಿಕ ಹಕ್ಕುಗಳ ಕಾಯ್ದೆ ಜಾರಿಗೆ ತಂದರು.

ವಿಲಿಯಂ ಮೆಕಿನ್ಲಿ

ಅಮೆರಿಕದ 25ನೇ ಅಧ್ಯಕ್ಷರಾದ ವಿಲಿಯಂ ಮೆಕಿನ್ಲಿ ಅಮೆರಿಕವನ್ನು ಔದ್ಯೋಗಿಕವಾಗಿ ಬೆಳೆಸಿದ ನಾಯಕರಲ್ಲಿ ಒಬ್ಬರು.
ಹತ್ಯೆಯ ಸಂದರ್ಭ: ನ್ಯೂಯಾರ್ಕ್‌ನ ಬಫಲೋದಲ್ಲಿ 1901ರ ಸೆಪ್ಟೆಂಬರ್ 6ರಂದು ನಡೆದ ಪ್ರದರ್ಶನವೊಂದರಲ್ಲಿ ಜನರಿಗೆ ಹಸ್ತಲಾಘವ ಮಾಡುತ್ತಿದ್ದಾಗ ವಿಲಿಯಂ ಮೆಕಿನ್ಲಿ ಮೇಲೆ ಗುಂಡು ಹಾರಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ 1901ರ ಸೆಪ್ಟೆಂಬರ್ 14ರಂದು ಮೃತಪಟ್ಟರು.
ಹಂತಕ: ಲಿಯಾನ್ ಝೋಲ್ಗೊಸ್ ಎಂಬ ಅರಾಜಕತಾವಾದಿ.
ಕಾರಣ: ಆಗಿನ ಕಾಲದಲ್ಲಿ ಪ್ರಬಲವಾಗಿದ್ದ ಅರಾಜಕತಾವಾದಿ ಚಿಂತನೆಗಳಿಂದ ಪ್ರೇರಿತನಾದ ಲಿಯಾನ್ ಝೋಲ್ಗೊಸ್, ಸರ್ಕಾರಿ ವ್ಯವಸ್ಥೆಯ ಮುಖ್ಯಸ್ಥನನ್ನು ಕೊಲ್ಲುವ ಮೂಲಕ ಕ್ರಾಂತಿ ತರಬಯಸಿದ್ದನು.
ಪರಿಣಾಮ: ವಿಲಿಯಂ ಮೆಕಿನ್ಲಿ ನಿಧನದ ನಂತರ ಉಪಾಧ್ಯಕ್ಷರಾಗಿದ್ದ ಥಿಯೋಡರ್ ರೂಸ್‌ವೆಲ್ಟ್ ಅಧಿಕಾರ ವಹಿಸಿಕೊಂಡರು. ರೂಸ್‌ವೆಲ್ಟ್ ಆಗಮನ ಅಮೆರಿಕದ ಪ್ರಗತಿಪರ ಯುಗದ ಆರಂಭಕ್ಕೆ ನಾಂದಿ ಹಾಡಿತು. ಅಲ್ಲದೆ, ಅಧ್ಯಕ್ಷರ ರಕ್ಷಣೆಗೆ ‘ಸೀಕ್ರೆಟ್ ಸರ್ವಿಸ್’ ಪಡೆಯನ್ನು ಕಡ್ಡಾಯಗೊಳಿಸಲಾಯಿತು.

ಹೆಚ್ಚಿದ ಭದ್ರತೆ

ಈ ನಾಲ್ಕೂ ಹತ್ಯೆಗಳು ಅಮೆರಿಕದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಿದವು. ಆರಂಭದಲ್ಲಿ ಅಧ್ಯಕ್ಷರಿಗೆ ಹೆಚ್ಚಿನ ಭದ್ರತೆ ಇರುತ್ತಿರಲಿಲ್ಲ. ಆದರೆ ಈ ಸರಣಿ ಹತ್ಯೆಗಳ ನಂತರ ‘ಸೀಕ್ರೆಟ್ ಸರ್ವಿಸ್’ ಬಲಿಷ್ಠ ಪಡೆಯಾಗಿ ಮಾರ್ಪಟ್ಟಿತು. ಪ್ರಸ್ತುತ ಅಮೆರಿಕದ ಅಧ್ಯಕ್ಷರು ವಿಶ್ವದ ಅತ್ಯಂತ ಸುಸಜ್ಜಿತ ಭದ್ರತೆಯನ್ನು ಹೊಂದಿದ್ದಾರೆ.

ಹತ್ಯೆಯತ್ನಗಳು

ಆಂಡ್ರ್ಯೂ ಜಾಕ್ಸನ್ (1835): ಅಧ್ಯಕ್ಷರ ಮೇಲೆ ನಡೆದ ಮೊದಲ ದಾಖಲಿತ ಹತ್ಯೆ ಯತ್ನವಿದು. ರಿಚರ್ಡ್ ಲಾರೆನ್ಸ್ ಎಂಬಾತ ಎರಡು ಪಿಸ್ತೂಲ್ ಬಳಸಿ ಗುಂಡು ಹಾರಿಸಲು ಯತ್ನಿಸಿದರೂ, ಎರಡೂ ಪಿಸ್ತೂಲ್‌ಗಳು ಕೈಕೊಟ್ಟವು. ಆಂಡ್ರ್ಯೂ ಜಾಕ್ಸನ್ ತಮ್ಮ ಊರುಗೋಲಿನಿಂದಲೇ ದಾಳಿಕೋರ ರಿಚರ್ಡ್ ಲಾರೆನ್ಸ್‌ನನ್ನು ಹೊಡೆದು ಹಿಮ್ಮೆಟ್ಟಿಸಿದರು.
ಥಿಯೋಡರ್ ರೂಸ್‌ವೆಲ್ಟ್ (1912): ಅಧ್ಯಕ್ಷ ಸ್ಥಾನಕ್ಕೆ ಮರುಆಯ್ಕೆ ಬಯಸಿ ಪ್ರಚಾರ ಮಾಡುತ್ತಿದ್ದಾಗ ಥಿಯೋಡರ್ ರೂಸ್‌ವೆಲ್ಟ್ ಮೇಲೆ ಗುಂಡು ಹಾರಿಸಲಾಯಿತು. ಆಶ್ಚರ್ಯವೆಂದರೆ, ರೂಸ್‌ವೆಲ್ಟ್ ಜೇಬಿನಲ್ಲಿದ್ದ ಭಾಷಣದ ಪ್ರತಿ ಮತ್ತು ಕನ್ನಡಕದ ಬಾಕ್ಸ್ ಗುಂಡಿನ ವೇಗವನ್ನು ಕಡಿಮೆ ಮಾಡಿತು. ಗುಂಡು ಎದೆಗೆ ತಗುಲಿದರೂ, ರೂಸ್‌ವೆಲ್ಟ್ ಹಲವು ನಿಮಿಷಗಳ ಕಾಲ ಭಾಷಣ ಮಾಡಿ ನಂತರವೇ ಆಸ್ಪತ್ರೆಗೆ ದಾಖಲಾದರು!
ರೊನಾಲ್ಡ್ ರೇಗನ್ (1981): ಜಾನ್ ಹಿಂಕ್ಲೆ ಎಂಬ ಮನೋರೋಗಿ, ಹಾಲಿವುಡ್ ನಟಿ ಜೋಡಿ ಫಾಸ್ಟರ್ ಗಮನ ಸೆಳೆಯಲು ಆಗಿನ ಅಧ್ಯಕ್ಷ ರೊನಾಲ್ಡ್ ರೇಗನ್ ಮೇಲೆ ಗುಂಡು ಹಾರಿಸಿದ. ಘಟನೆಯಲ್ಲಿ ರೇಗನ್ ಗಂಭೀರವಾಗಿ ಗಾಯಗೊಂಡರೂ ಬದುಕುಳಿದರು. ಈ ಘಟನೆಯು ರೇಗನ್ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು ಮತ್ತು ಅಮೆರಿಕದ ಗನ್ ಕಂಟ್ರೋಲ್ ಕಾನೂನುಗಳ ಬಗ್ಗೆ ಚರ್ಚೆ ಹುಟ್ಟುಹಾಕಿತು.
ಟ್ರಂಪ್​ ಮೇಲಿನ ದಾಳಿಗಳು
ಆಧುನಿಕ ಅಮೆರಿಕ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಹತ್ಯೆಯತ್ನ ಹಾಗೂ ಭದ್ರತಾ ಬೆದರಿಕೆಗಳನ್ನು ಎದುರಿಸಿದ ರಾಜಕೀಯ ನಾಯಕ ಡೊನಾಲ್ಡ್ ಟ್ರಂಪ್. ಕಳೆದ ಕೆಲವು ವರ್ಷಗಳಲ್ಲಿ ಟ್ರಂಪ್ ಎದುರಿಸಿದ ಪ್ರಮುಖ ಹತ್ಯೆಯತ್ನಗಳು ಹಾಗೂ ಬೆದರಿಕೆಗಳ ವಿವರ ಇಲ್ಲಿದೆ.
2026ರ ಫೆಬ್ರವರಿ: ಶಸ್ತ್ರಸಜ್ಜಿತನಾಗಿದ್ದ 21 ವರ್ಷದ ಯುವಕನೊಬ್ಬ ಟ್ರಂಪ್ ಅವರ ಫ್ಲಾರಿಡಾ ನಿವಾಸ ಮಾರ್-ಎ-ಲಾಗೋ ಆವರಣವನ್ನು ಪ್ರವೇಶಿಸಿದ್ದ. ಈ ವೇಳೆ ಭದ್ರತಾ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಆತ ಹತನಾದನು.
2025ರ ಆಗಸ್ಟ್: ಟ್ರಂಪ್ ಅವರ ವರ್ಜೀನಿಯಾ ಗಾಲ್ಫ್ ಕ್ಲಬ್‌ಗೆ ವ್ಯಕ್ತಿಯೊಬ್ಬ ಲೋಡ್ ಆದ ಗನ್ ತಂದಿದ್ದ.
2024ರ ಸೆಪ್ಟೆಂಬರ್: ಟ್ರಂಪ್ ಗಾಲ್ಫ್ ಆಡುತ್ತಿದ್ದಾಗ ರೈಫಲ್‌ನೊಂದಿಗೆ ಪೊದೆಯಲ್ಲಿ ಅಡಗಿದ್ದ ರಯಾನ್ ವೆಸ್ಲಿ ರೌತ್ ಎಂಬಾತನನ್ನು ಭದ್ರತಾ ಸಿಬ್ಬಂದಿ ಪತ್ತೆ ಹಚ್ಚಿ ಬಂಧಿಸಿದರು. ಟ್ರಂಪ್ ಹತ್ಯೆಗೆ ಸಂಚು ರೂಪಿಸಿದ್ದ ಈತನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
2024ರ ಜುಲೈ: ಪೆನ್ಸಿಲ್ವೇನಿಯಾ ಚುನಾವಣಾ ರ್ಯಾಲಿಯಲ್ಲಿ ಥಾಮಸ್ ಕ್ರೂಕ್ಸ್ ಎಂಬಾತ ಹಾರಿಸಿದ ಗುಂಡು ಟ್ರಂಪ್ ಬಲಕಿವಿಯನ್ನು ಸವರಿಕೊಂಡು ಹೋಗಿತ್ತು. ಈ ಘಟನೆಯಲ್ಲಿ ಸಾರ್ವಜನಿಕರೊಬ್ಬರು ಮೃತಪಟ್ಟರು. ಸ್ನೈಪರ್ ದಾಳಿಗೆ ಹಂತಕ ಬಲಿಯಾದ.
2024: ಟ್ರಂಪ್ ಹತ್ಯೆ ಮಾಡಲು ಇರಾನ್‌ನ ಇಸ್ಲಾಮಿಕ್ ರಿವಲ್ಯೂಷನರಿ ಗಾರ್ಡ್ ಕೋರ್ಪ್ಸ್‌ಗೆ ಹಂತಕರನ್ನು ನೇಮಿಸಿಕೊಳ್ಳುತ್ತಿದ್ದ ಆರೋಪದ ಮೇಲೆ ಪಾಕಿಸ್ತಾನಿ ಪ್ರಜೆ ಸೇರಿ ಹಲವರ ವಿರುದ್ಧ ಅಮೆರಿಕದ ಅಧಿಕಾರಿಗಳು ಪ್ರಕರಣ ದಾಖಲಿಸಿದರು.
2020 ಹಾಗೂ 2018: ಮಾರಣಾಂತಿಕ ರಿಸಿನ್ ವಿಷವಿರುವ ಪತ್ರಗಳನ್ನು ಟ್ರಂಪ್‌ಗೆ ಕಳುಹಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net