180 ಕೋಟಿ ರೂ. ಮೌಲ್ಯದ ಅತಿದೊಡ್ಡ ಚಿನ್ನ ದರೋಡೆ ಕೇಸ್​: ಓರ್ವ ಅರೆಸ್ಟ್​, ಭಾರತದಲ್ಲಿದ್ದಾನೆ ಮತ್ತೊಬ್ಬ ಖದೀಮ! Gold Heist

ಬಂಧನವಾಗಿರುವ ಅರ್ಸಲನ್ ಚೌಧರಿ ಮತ್ತು ಭಾರತದಲ್ಲಿ ಇದ್ದಾನೆಂದು ನಂಬಲಾದ ಮತ್ತೊಬ್ಬ ಆರೋಪಿ ಸಿಮ್ರಾನ್ ಪ್ರೀತ್ ಪನೇಸರ್
ಬಂಧನವಾಗಿರುವ ಅರ್ಸಲನ್ ಚೌಧರಿ ಮತ್ತು ಭಾರತದಲ್ಲಿ ಇದ್ದಾನೆಂದು ನಂಬಲಾದ ಮತ್ತೊಬ್ಬ ಆರೋಪಿ ಸಿಮ್ರಾನ್ ಪ್ರೀತ್ ಪನೇಸರ್
Published on: 

ಪ್ರಮುಖ ಮುಖ್ಯಾಂಶಗಳು

  • ಕೆನಡಾದ ಇತಿಹಾಸದಲ್ಲೇ ಅತಿದೊಡ್ಡ ಚಿನ್ನ ದರೋಡೆ ಪ್ರಕರಣದಲ್ಲಿ ಓರ್ವ ಆರೋಪಿ ಬಂಧನ
  • ಪ್ರಾಜೆಕ್ಟ್​ 24ಕೆ ತನಿಖೆಯ ವೇಳೆ ಓರ್ವ ಆರೋಪಿಯನ್ನು ಬಂಧಿಸಿದ ಕೆನಡಾ ಪೊಲೀಸರು
  • 2023, ಏಪ್ರಿಲ್ 17ರಂದು ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಚಿನ್ನ ದರೋಡೆ
ನವದೆಹಲಿ: ಕೆನಡಾದ ಇತಿಹಾಸದಲ್ಲೇ ಅತಿದೊಡ್ಡ ಚಿನ್ನ ದರೋಡೆ ( Gold Heist ) ಪ್ರಕರಣ ಎನಿಸಿಕೊಂಡಿರುವ ಬರೋಬ್ಬರಿ 20 ಮಿಲಿಯನ್​ ಡಾಲರ್​ ಮೌಲ್ಯದ ಚಿನ್ನ ಕಳ್ಳತನಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರಾಜೆಕ್ಟ್​ 24ಕೆ ತನಿಖೆಯ ವೇಳೆ ಕೆನಡಾ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನನ್ನು ಅರ್ಸಲನ್ ಚೌಧರಿ (43) ಎಂದು ಗುರುತಿಸಲಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈನಿಂದ ವಿಮಾನದಲ್ಲಿ ಬರುತ್ತಿದ್ದಾಗ ಟೊರೊಂಟೊ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತನನ್ನು ಬಂಧಿಸಲಾಯಿತು. ಆರೋಪಿ ಚೌಧರಿಗೆ ಯಾವುದೇ ನಿರ್ದಿಷ್ಟ ವಿಳಾಸ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಚೌಧರಿಯ ಮೇಲೆ 5,000 ಡಾಲರ್​ಗಿಂತ ಹೆಚ್ಚಿನ ಮೊತ್ತದ ಕಳ್ಳತನ, ಅಪರಾಧದಿಂದ ಪಡೆದ ಆಸ್ತಿ ಮತ್ತು ದೋಷಾರೋಪಣೆ ಮಾಡಬಹುದಾದ ಅಪರಾಧವನ್ನು ಎಸಗಲು ಮಹಾ ಸಂಚು ರೂಪಿಸಿರುವ ಆರೋಪವನ್ನು ಹೊರಿಸಲಾಗಿದೆ.

ಚಿನ್ನದ ದರೋಡೆ ಇತಿಹಾಸ ಏನು?

2023, ಏಪ್ರಿಲ್ 17ರಂದು ಸ್ವಿಟ್ಜರ್‌ಲ್ಯಾಂಡ್‌ನ ಜ್ಯೂರಿಚ್‌ನಿಂದ ಟೊರೊಂಟೊ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನವೊಂದು ಬಂದಿತು. ಆ ವಿಮಾನದಲ್ಲಿ 6,600 ಬಾರ್‌ಗಳಿಗೆ ಸಮನಾದ ಸುಮಾರು 400 ಕೆಜಿಯಷ್ಟು .9999 ಶುದ್ಧ ಚಿನ್ನ ಇತ್ತು. ಇದರ ಮೌಲ್ಯ 20 ಮಿಲಿಯನ್‌ ಡಾಲರ್​​ಗಿಂತಲೂ ಹೆಚ್ಚು. ಭಾರತೀಯ ಕರೆನ್ಸಿ ಪ್ರಕಾರ 180 ಕೋಟಿ ರೂಪಾಯಿಗೂ ಅಧಿಕ. ಚಿನ್ನದ ಜತೆಗೆ 2.5 ಮಿಲಿಯನ್ ಡಾಲರ್​ ವಿದೇಶಿ ಕರೆನ್ಸಿ ಸಹ ಇತ್ತು. ಇದಿಷ್ಟನ್ನು ವಿಮಾನದಿಂದ ಕೆಳಗೆ ಇಳಿಸಿ, ವಿಮಾನ ನಿಲ್ದಾಣದ ಒಂದು ಪ್ರತ್ಯೇಕ ಸ್ಥಳಕ್ಕೆ ಸಾಗಿಸಲಾಯಿತು. ಇದಾದ ಕೆಲವೇ ಗಂಟೆಗಳಲ್ಲಿ ಚಿನ್ನ ಕಾಣೆಯಾಯಿತು ಎಂದು ವರದಿಯಾಗಿದೆ.
ಕೂಡಲೇ ಪ್ರಕರಣ ದಾಖಲಿಸಿಕೊಂಡ ಕೆನಡಾ ಪೊಲೀಸರು, ಗಡಿಯಾಚೆಗಿನ ತನಿಖೆಯನ್ನು ಪ್ರಾರಂಭಿದರು. ಈ ದರೋಡೆಗೆ ಸಂಬಂಧಿಸಿದಂತೆ ಹತ್ತು ಜನರನ್ನು ಗುರುತಿಸಿ, ಅವರ ಮೇಲೆ ಆರೋಪ ಹೊರಿಸಿ, ವಾರಂಟ್‌ಗಳನ್ನು ಹೊರಡಿಸಿದರು. ಅವರಲ್ಲಿ ಬ್ರಾಂಪ್ಟನ್‌ನ 33 ವರ್ಷದ ಸಿಮ್ರನ್ ಪ್ರೀತ್ ಪನೇಸರ್ ಕೂಡ ಇದ್ದನು ಎಂಬ ಆರೋಪವಿದೆ. ಈತ ಸದ್ಯ ಭಾರತದಲ್ಲಿ ಇರುವುದಾಗಿ ಕೆನಡಾ ಪೊಲೀಸರು ತಿಳಿಸಿದ್ದಾರೆ. ಏರ್ ಕೆನಡಾದ ಮಾಜಿ ಉದ್ಯೋಗಿಯಾಗಿರುವ ಪನೇಸರ್, ವಿಮಾನಯಾನ ವ್ಯವಸ್ಥೆಗಳನ್ನು ಬಹಳ ಕುಶಲತೆಯಿಂದ ನಿರ್ವಹಿಸುತ್ತಿದ್ದ. ಹೀಗಾಗಿ, ಚಿನ್ನವಿದ್ದ ಸ್ಥಳವನ್ನು ಗುರುತಿಸಲು ಮತ್ತು ಅದನ್ನು ದರೋಡೆ ಮಾಡಲು ಸಹಾಯ ಮಾಡಿರುವ ಆರೋಪವಿದೆ.
ಆರೋಪಿ ಪನೇಸರ್​, ಕಳೆದ ವರ್ಷ ಚಂಡೀಗಢದ ಹೊರವಲಯದಲ್ಲಿರುವ ಬಾಡಿಗೆ ಫ್ಲ್ಯಾಟ್‌ನಲ್ಲಿ ಪತ್ತೆಯಾಗಿದ್ದ. ಆತನ ವಿರುದ್ಧ ಕೆನಡಾದಾದ್ಯಂತ ಬಂಧನ ವಾರಂಟ್ ಹೊರಡಿಸಲಾಗಿದೆ. ಮತ್ತೊಬ್ಬ ಆರೋಪಿಯಾಗಿರುವ ಬ್ರಾಂಪ್ಟನ್ ನಿವಾಸಿ ಅರ್ಚಿತ್ ಗ್ರೋವರ್​ನನ್ನು 2024, ಮೇ ತಿಂಗಳಲ್ಲಿ ಭಾರತದಿಂದ ಬಂದಿಳಿದಾಗ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.
ಇಲ್ಲಿಯವರೆಗೆ ಬಂಧಿಸಲ್ಪಟ್ಟವರಲ್ಲಿ ಏರ್ ಕೆನಡಾದ ಮಾಜಿ ಉದ್ಯೋಗಿ 54 ವರ್ಷದ ಪರ್ಂಪಾಲ್ ಸಿಧು ಮತ್ತು ಒಂಟಾರಿಯೊದ 40 ವರ್ಷದ ಅಮಿತ್ ಜಲೋಟಾ ಕೂಡ ಸೇರಿದ್ದಾರೆ. ಬ್ರಾಂಪ್ಟನ್ ನಿವಾಸಿಯಾಗಿರುವ 36 ವರ್ಷದ ಪ್ರಸಾತ್ ಪರಮಲಿಂಗಂ ಮತ್ತು ಟೊರೊಂಟೊ ಮೂಲದ 37 ವರ್ಷದ ಅಲಿ ರಜಾನನ್ನು ಸಹ ಬಂಧಿಸಲಾಗಿದೆ. ಬ್ರಾಂಪ್ಟನ್‌ನ 43 ವರ್ಷದ ಅಮ್ಮದ್ ಚೌಧರಿ ಮತ್ತು 27 ವರ್ಷದ ಡುರಾಂಟೆ ಕಿಂಗ್-ಮೆಕ್ಲೀನ್​ನನ್ನು ಸಹ ಬಂಧಿಸಲಾಗಿದೆ. ಕಿಂಗ್-ಮೆಕ್ಲೀನ್ ಪ್ರಸ್ತುತ ಅಮೆರಿಕದಲ್ಲಿ ಬಂದೂಕು ಕಳ್ಳಸಾಗಣೆ ಸಂಬಂಧಿತ ಆರೋಪಗಳ ಮೇಲೆ ಬಂಧನದಲ್ಲಿದ್ದಾರೆ, (ಏಜೆನ್ಸೀಸ್​).