ಮಹಾನಗರದಲ್ಲೊಂದು ಮನೆಯ ಮಾಡಿ!

ಮಹಾನಗರದಲ್ಲೊಂದು ಮನೆಯ ಮಾಡಿ!
Published on: 

ಸ್ಪೇನ್‌ನಲ್ಲಿ ವಸತಿ ಬಿಕ್ಕಟ್ಟು ಮತ್ತು ಹೆಚ್ಚುತ್ತಿರುವ ಬಾಡಿಗೆಯ ವಿರುದ್ಧ ನಡೆದ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಬುಧವಾರ ರಾತ್ರಿ ಹಿಂಸಾಚಾರ ಭುಗಿಲೆದ್ದಿದೆ. ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು, ಬಾಟಲಿಗಳನ್ನು ಎಸೆದು ಪಟಾಕಿ ಸಿಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಅಶ್ರುವಾಯು ಶೆಲ್‌ಗಳು, ಪೆಪ್ಪರ್ ಸ್ಪೇ ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದ್ದಾರೆ. ದೇಶಾದ್ಯಂತ 115 ಜನರನ್ನು ಬಂಧಿಸಲಾಗಿದೆ. ಈ ಸಂದರ್ಭದಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ 20 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ದೇಶದಲ್ಲಿ ನವೆಂಬರ್ 29ರಂದು ನಡೆಯಲಿರುವ ಸಂಸತ್ ಚುನಾವಣೆಗೂ ಮುನ್ನ ವಸತಿ ಬಿಕ್ಕಟ್ಟು ಪ್ರಮುಖ ರಾಜಕೀಯ ವಿಷಯವಾಗಿದೆ. ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರ ಸರ್ಕಾರವು ಪ್ರತಿಭಟನೆಗಳ ರಾಜಕೀಯ ಲಾಭ ಪಡೆಯುತ್ತಿದೆ ಎಂದು ವಿರೋಧ ಪಕ್ಷ ಆರೋಪಿಸಿದೆ.

ಗಗನಕ್ಕೇರುತ್ತಿರುವ ಮನೆ ಬಾಡಿಗೆ, ವಸತಿ ಕೊರತೆ ಮತ್ತು ಜೀವನವೆಚ್ಚದ ಹೆಚ್ಚಳವನ್ನು ವಿರೋಧಿಸಿ ನವೆಂಬರ್ 11ರಂದು ಸ್ಪೇನ್‌ನಾದ್ಯಂತ ಐತಿಹಾಸಿಕ 24 ಗಂಟೆಗಳ ಸಾರ್ವತ್ರಿಕ ಮುಷ್ಕರ ನಡೆದಿದೆ. ಕಳೆದ 14 ವರ್ಷಗಳಲ್ಲಿ ಸ್ಪೇನ್ ಕಂಡ ಅತಿದೊಡ್ಡ ಕಾರ್ಮಿಕ ಮತ್ತು ನಾಗರಿಕ ಆಂದೋಲನ ಇದಾಗಿದ್ದು, ನವೆಂಬರ್ 29ರಂದು ನಡೆಯಲಿರುವ ಮಹತ್ವದ ಸಾರ್ವತ್ರಿಕ ಚುನಾವಣೆಗೂ ಮುನ್ನ ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸುವ ಹಂತಕ್ಕೆ ತಲುಪಿದೆ.

ಕಾರ್ಮಿಕ ಸಂಘಟನೆಗಳು ಮತ್ತು ಬಾಡಿಗೆದಾರರ ಒಕ್ಕೂಟಗಳ ಕರೆಯ ಮೇರೆಗೆ ದೇಶಾದ್ಯಂತ 40 ಲಕ್ಷಕ್ಕೂ ಅಧಿಕ ಕಾರ್ಮಿಕರು ಮತ್ತು ನಾಗರಿಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಬಾರ್ಸಿಲೋನಾದಲ್ಲಿ ಸಂಘಟಕರ ಅಂದಾಜಿನಂತೆ 4 ಲಕ್ಷ ಜನರು ಬೀದಿಗಿಳಿದರೆ, ರಾಜಧಾನಿ ಮ್ಯಾಡ್ರಿಡ್‌ನಲ್ಲಿ ಸುರಿಯುವ ಮಳೆಯ ನಡುವೆಯೂ 1.20 ಲಕ್ಷಕ್ಕೂ ಹೆಚ್ಚು ಪ್ರತಿಭಟನಾಕಾರರು ಜಮಾಯಿಸಿದ್ದರು.

ಮ್ಯಾಡ್ರಿಡ್‌ನಲ್ಲಿ 70 ವರ್ಷಗಳಿಂದ ವಾಸವಿದ್ದ 87 ವರ್ಷದ ವೃದ್ಧೆ ಮಾರಿಕಾರ್ಮೆನ್ ಅಬಾಸ್ಕಲ್ ಅವರನ್ನು ಬಾಡಿಗೆ ಹೆಚ್ಚಳದ ಕಾರಣದಿಂದ ಕಾರ್ಪೊರೇಟ್ ಮಾಲೀಕರು 2026ರ ಸೆಪ್ಟೆಂಬರ್‌ನಲ್ಲಿ ಮನೆಯಿಂದ ಹೊರಹಾಕಿದ್ದರು. ತೀವ್ರ ಆಘಾತಕ್ಕೊಳಗಾದ ಮಾರಿಕಾರ್ಮೆನ್ ಅಬಾಸ್ಕಲ್ ಅಕ್ಟೋಬರ್‌ನಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇಡೀ ದೇಶದಲ್ಲಿ ಆಕ್ರೋಶದ ಕಿಡಿ ಹೊತ್ತಿಸಿ ಪ್ರತಿಭಟನೆಗಳಿಗೆ ನಾಂದಿ ಹಾಡಿತು.

ತಿರಸ್ಕೃತಗೊಂಡ ಎರಡನೇ ಮಸೂದೆಯಲ್ಲಿ ಏನಿತ್ತು?

ಸರ್ಕಾರ ಮಂಡಿಸಿದ್ದ 2ನೇ ಮಸೂದೆಯ ಪ್ರಕಾರ, ಬಾಡಿಗೆ ಒಪ್ಪಂದದ ಅವಧಿ ಮುಗಿದ ನಂತರವೂ ಅದು ಸ್ವಯಂಚಾಲಿತವಾಗಿ ನವೀಕರಣಗೊಳ್ಳುವ ಪ್ರಸ್ತಾವನೆಯಿತ್ತು. ಒಂದು ವೇಳೆ ಮನೆಯ ಮಾಲೀಕರು ಒಪ್ಪಂದವನ್ನು ರದ್ದುಗೊಳಿಸಿ ಬಾಡಿಗೆದಾರರನ್ನು ಖಾಲಿ ಮಾಡಿಸಲು ಬಯಸಿದರೆ, ಬಾಡಿಗೆದಾರರಿಗೆ ಒಂದು ವರ್ಷದ ಬಾಡಿಗೆಗೆ ಸಮನಾದ ಪರಿಹಾರವನ್ನು ನೀಡಬೇಕೆಂಬ ಕಠಿಣ ನಿಯಮವಿತ್ತು. ಇಂತಹ ಕಠಿಣ ನಿಯಮದಿಂದಾಗಿ ಮನೆ ಮಾಲೀಕರು ತಮ್ಮ ಮನೆಗಳನ್ನು ಬಾಡಿಗೆ ಮಾರುಕಟ್ಟೆಯಿಂದ ಹಿಂಪಡೆಯುತ್ತಾರೆ ಮತ್ತು ಇದರಿಂದ ಮನೆಗಳ ಕೊರತೆ ಇನ್ನಷ್ಟು ತೀವ್ರಗೊಳ್ಳುತ್ತದೆ ಎಂದು ವಿರೋಧ ಪಕ್ಷಗಳು ಹಾಗೂ ಮಧ್ಯಮ&ಬಲಪಂಥೀಯ ಬಾಸ್ಕ್ ಪಕ್ಷ ವಿರೋಧ ವ್ಯಕ್ತಪಡಿಸಿದ್ದರಿಂದ ಈ 2ನೇ ಮಸೂದೆ ಬಿದ್ದುಹೋಯಿತು.

ಸ್ಪೇನ್ ಸಂಸತ್‌ನ ಚುನಾವಣೆ 2027ರಲ್ಲಿ ನಡೆಯಬೇಕಿತ್ತು. ಆದರೆ, ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವಧಿಗೆ ಮುನ್ನವೇ ಅಂದರೆ ಇದೇ ನವೆಂಬರ್ 29ರಂದು ನಿಗದಿಪಡಿಸಿದ್ದಾರೆ. ಬಾಡಿಗೆದಾರರನ್ನು ಮನೆಯಿಂದ ಹೊರಹಾಕುವುದನ್ನು ತಡೆಯುವ ಮತ್ತು ಬಾಡಿಗೆ ನಿಯಂತ್ರಿಸುವ ಎರಡು ಪ್ರಮುಖ ಮಸೂದೆಗಳನ್ನು ಸ್ಯಾಂಚೆಜ್ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿತ್ತು. ಆದರೆ, ಬಲಪಂಥೀಯ ವಿರೋಧ ಪಕ್ಷಗಳಾದ ಪಾಪ್ಯುಲರ್ ಪಾರ್ಟಿ (ಪಿಪಿ), ವೋಕ್ಸ್ ಮತ್ತು ಕ್ಯಾಟಲಾನ್ ಪಕ್ಷ ಜಂಟ್ಸ್ ಒಟ್ಟಾಗಿ ಈ ಮಸೂದೆಗಳನ್ನು ಸೋಲಿಸಿದವು. ಇದರಿಂದ ಬೇಸತ್ತ ಸ್ಯಾಂಚೆಜ್ ಸಂಸತ್ತನ್ನು ವಿಸರ್ಜಿಸಿ ದಿಢೀರ್ ಚುನಾವಣೆ ಘೋಷಿಸಿದರು. ಮೈತ್ರಿಕೂಟದಲ್ಲೇ ಬಿರುಕು: ಸ್ಯಾಂಚೆಜ್ ನೇತೃತ್ವದ ಆಡಳಿತಾರೂಢ ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾದ ಎಡಪಂಥೀಯ ಸುಮಾರ್, ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಬಲಪ್ರಯೋಗವನ್ನು ತೀವ್ರವಾಗಿ ಖಂಡಿಸಿದೆ. ಪೊಲೀಸರ ಕ್ರಮಕ್ಕೆ ಹೊಣೆಹೊತ್ತು ಆಂತರಿಕ (ಗೃಹ) ಸಚಿವ ಫರ್ನಾಂಡೋ ಗ್ರಾಂಡೆ&ಮಾರ್ಲಾಸ್ಕಾ ರಾಜೀನಾಮೆ ನೀಡಬೇಕೆಂದು ಸುಮಾರ್ ಒತ್ತಾಯಿಸಿರುವುದು ಚುನಾವಣಾ ಹೊಸ್ತಿಲಲ್ಲಿ ಸರ್ಕಾರಕ್ಕೆ ಮುಜುಗರ ತಂದಿದೆ. ಸದ್ಯ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಬಲಪಂಥೀಯ ಮೈತ್ರಿಕೂಟ ಮುನ್ನಡೆ ಸಾಧಿಸುವ ಸೂಚನೆಗಳಿದ್ದು, ಈ ವಸತಿ ಕ್ರಾಂತಿಯು ಸ್ಪೇನ್‌ನ ಮುಂದಿನ ಸರ್ಕಾರವನ್ನು ನಿರ್ಧರಿಸುವ ಅತಿದೊಡ್ಡ ಅಸ್ತ್ರವಾಗಿದೆ.

ಸ್ಪೇನ್‌ನಲ್ಲಿ ನಡೆದ ರಾಷ್ಟ್ರವ್ಯಾಪಿ ಮುಷ್ಕರದ ಬೆನ್ನಲ್ಲೇ, ನ.12ರಂದು (ಗುರುವಾರ) ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರ ಸರ್ಕಾರವು ಸಂಸತ್ತಿನ ಸ್ಥಾಯಿ ಸಮಿತಿಯ ಮುಂದೆ ಎರಡು ಪರಿಷ್ಕೃತ ವಸತಿ ಮಸೂದೆಗಳನ್ನು ಮರುಮಂಡಿಸಿತು. ಇದರಲ್ಲಿ ಮೊದಲ ಮಸೂದೆಗೆ ಸಂಸತ್ತಿನ ಅನುಮೋದನೆ ದೊರೆತಿದ್ದು, ಬಾಡಿಗೆದಾರರಿಗೆ ಮಹತ್ವದ ರಕ್ಷಣೆಗಳನ್ನು ನೀಡಲಾಗಿದೆ. ಆದರೆ, ಗುತ್ತಿಗೆಯನ್ನು ಸ್ವಯಂಚಾಲಿತವಾಗಿ ನವೀಕರಿಸುವ ಎರಡನೇ ಮಸೂದೆಯು ಮತ್ತೊಮ್ಮೆ ತಿರಸ್ಕೃತಗೊಂಡಿದೆ.

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮತ್ತು ದುರ್ಬಲ ವರ್ಗದ ಬಾಡಿಗೆದಾರರನ್ನು ಬಲವಂತವಾಗಿ ಮನೆಯಿಂದ ಹೊರಹಾಕುವ ಪ್ರಕ್ರಿಯೆಯ ಮೇಲಿನ ನಿಷೇಧವನ್ನು ಮೊದಲ ಮಸೂದೆಯ ಮೂಲಕ 2030ರವರೆಗೆ ವಿಸ್ತರಿಸಲಾಗಿದೆ. ಅರ್ಹ ಬಾಡಿಗೆದಾರರು ತಮ್ಮ ಅಸ್ತಿತ್ವದಲ್ಲಿರುವ ಬಾಡಿಗೆ ಗುತ್ತಿಗೆಯನ್ನು ಹೆಚ್ಚುವರಿಯಾಗಿ 2 ವರ್ಷಗಳವರೆಗೆ ವಿಸ್ತರಿಸಲು ಕೋರುವ ಹಕ್ಕನ್ನು ನೀಡಲಾಗಿದೆ. ಮನೆ ಮಾಲೀಕರು ಮನಬಂದಂತೆ ಬಾಡಿಗೆ ಹೆಚ್ಚಿಸುವುದನ್ನು ತಡೆಯಲು 2027ರವರೆಗೆ ವಾರ್ಷಿಕ ಬಾಡಿಗೆ ಏರಿಕೆಯ ಮೇಲೆ ಕಟ್ಟುನಿಟ್ಟಿನ ಮಿತಿಯನ್ನು ಹೇರಲಾಗಿದೆ. ಒಂದೇ ಮನೆಯ ಪ್ರತ್ಯೇಕ ಕೊಠಡಿಗಳನ್ನು ಬೇರೆಬೇರೆಯವರಿಗೆ ಬಾಡಿಗೆಗೆ ನೀಡಿ ಹೆಚ್ಚಿನ ಹಣ ವಸೂಲಿ ಮಾಡುವ ತಂತ್ರಕ್ಕೆ ಕಡಿವಾಣ ಹಾಕಲಾಗಿದೆ. ದೀರ್ಘಾವಧಿ ಬಾಡಿಗೆ ನಿಯಮಗಳಿಂದ ತಪ್ಪಿಸಿಕೊಳ್ಳಲು ಮಾಲೀಕರು "ತಾತ್ಕಾಲಿಕ ಬಾಡಿಗೆ ಒಪ್ಪಂದ' ಮಾಡಿಕೊಳ್ಳುವುದನ್ನು ತಡೆಯಲು ನಿಯಮಗಳನ್ನು ಬಿಗಿಗೊಳಿಸಲಾಗಿದೆ. ತಾತ್ಕಾಲಿಕ ಗುತ್ತಿಗೆಗೆ ನಿರ್ದಿಷ್ಟ ಹಾಗೂ ನ್ಯಾಯಸಮ್ಮತ ಕಾರಣವನ್ನು ದಾಖಲಿಸುವುದು ಕಡ್ಡಾಯವಾಗಿದೆ. ಏರ್‌ಬಿಎನ್‌ಬಿನಂತಹ ಆನ್‌ಲೈನ್ ವೇದಿಕೆಗಳ ಮೂಲಕ ಪ್ರವಾಸಿಗರಿಗೆ ಅಲ್ಪಾವಧಿ ಬಾಡಿಗೆಗೆ ನೀಡುವ ಅಪಾರ್ಟ್‌ಮೆಂಟ್‌ಗಳ ಮೇಲೆ ಶೇ.10ರಷ್ಟು ಮೌಲ್ಯವರ್ಧಿತ ತೆರಿಗೆ ವಿಧಿಸಲಾಗಿದೆ. ಇದರಿಂದ ಸ್ಥಳೀಯರಿಗೆ ಬಾಡಿಗೆ ಮನೆಗಳು ಹೆಚ್ಚಾಗಿ ಲಭ್ಯವಾಗುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.

ಬಾಡಿಗೆ ದರವನ್ನು ಕಡಿಮೆ ಮಾಡುವ ಮನೆ ಮಾಲೀಕರಿಗೆ ಆದಾಯ ತೆರಿಗೆಯಲ್ಲಿ ವಿಶೇಷ ವಿನಾಯಿತಿ ಘೋಷಿಸಲಾಗಿದೆ. ಜೊತೆಗೆ, ಸ್ವಂತ ವಾಸಕ್ಕಾಗಿ ಮನೆ ಖರೀದಿಸುವವರಿಗೆ ಮುಂಗಡ ಹಣ ಪಾವತಿಸಲು ಸರ್ಕಾರದ ಖಾತರಿಯೊಂದಿಗೆ ಸಾಲದ ಸೌಲಭ್ಯವನ್ನೂ ಒದಗಿಸಲಾಗಿದೆ.

ಮುಂದೇನು?

ವಿರೋಧ ಪಕ್ಷ ಪಾಪ್ಯುಲರ್ ಪಾರ್ಟಿಯ ನಾಯಕ ಆಲ್ಬರ್ಟೊ ನುನೆಜ್ ಫೀಜೂ ಅವರು, ನ.29ರ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಈಗ ಅಂಗೀಕಾರವಾಗಿರುವ ಮಸೂದೆಯನ್ನು ರದ್ದುಗೊಳಿಸುವುದಾಗಿ ಮತ್ತು ಹೊಸದಾಗಿ 10 ಲಕ್ಷ ಮನೆಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಈ ಹೊಸ ರಕ್ಷಣೆಗಳು ಎಷ್ಟು ಕಾಲ ಜಾರಿಯಲ್ಲಿರುತ್ತವೆ ಎಂಬುದು ಚುನಾವಣಾ ಫಲಿತಾಂಶದ ಮೇಲೆ ಅವಲಂಬಿತವಾಗಿದೆ.

ಜನಾಕ್ರೋಶ ಭುಗಿಲೆದ್ದಿರುವ ಪ್ರಮುಖ ದೇಶಗಳು

  • ಪೋರ್ಚುಗಲ್‌ನ ಲಿಸ್ಬನ್ ಮತ್ತು ಪೋರ್ಟೊ ನಗರಗಳಲ್ಲಿ 2015ರಿಂದ ಮನೆಗಳ ಬೆಲೆ 170&186%ರಷ್ಟು ಏರಿಕೆಯಾಗಿದೆ. ಸ್ಥಳೀಯರ ಆದಾಯಕ್ಕಿಂತ ಬಾಡಿಗೆ ಹೆಚ್ಚಾದ ಕಾರಣ ಸಾವಿರಾರು ಜನರು ಬೀದಿಗಿಳಿದು ಡೇರೆಗಳನ್ನು ಹಾಕಿ ಪ್ರತಿಭಟಿಸುತ್ತಿದ್ದಾರೆ.

  • ಐರ್ಲೆಂಡ್‌ನ ಡಬ್ಲಿನ್ ಸೇರಿ ಪ್ರಮುಖ ನಗರಗಳಲ್ಲಿ ಜನಸಂಖ್ಯೆ ಬೆಳವಣಿಗೆಗೆ ತಕ್ಕಂತೆ ಮನೆಗಳ ನಿರ್ಮಾಣವಾಗದೆ ತೀವ್ರ ಕೊರತೆ ಉಂಟಾಗಿದೆ. ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಬಾಡಿಗೆ ಮನೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿ ಪ್ರತಿಭಟನೆಗಳು ನಡೆದಿವೆ.

  • ನೆದರ್ಲ್ಯಾಂಡ್ಸ್‌ನ ಆಮ್‌ಸ್ಟರ್‌ಡ್ಯಾಮ್ ಮತ್ತು ರಾಟರ್‌ಡ್ಯಾಮ್‌ನಲ್ಲಿ ಮನೆಗಳ ಕೊರತೆ ಮತ್ತು ಬಾಡಿಗೆ ದರ ಹೆಚ್ಚಳದಿಂದಾಗಿ ಸಾವಿರಾರು ಯುವಜನರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.

  • ಜರ್ಮನಿಯ ಬರ್ಲಿನ್‌ನಂತಹ ನಗರಗಳಲ್ಲಿ ಬೃಹತ್ ರಿಯಲ್ ಎಸ್ಟೇಟ್ ಕಂಪನಿಗಳ ಹಿಡಿತ ಮತ್ತು ಬಾಡಿಗೆ ಏರಿಕೆ ವಿರುದ್ಧ ಜನಾಭಿಪ್ರಾಯ ಸಂಗ್ರಹದ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ.

  • ಕೆನಡಾ ಮತ್ತು ಆಸ್ಟ್ರೇಲಿಯಾದ ಟೊರೊಂಟೊ, ವ್ಯಾಂಕೋವರ್, ಸಿಡ್ನಿ ಮತ್ತು ಮೆಲ್ಬೋರ್ನ್‌ನಲ್ಲಿ ವಲಸೆ ಹೆಚ್ಚಳ ಮತ್ತು ಮನೆಗಳ ಕೊರತೆಯಿಂದ ಬಾಡಿಗೆ ಕೈಗೆಟುಕದಂತಾಗಿದೆ.

  • ಯುನೈಟೆಡ್ ಕಿಂಗ್‌ಡಮ್‌ನ ಲಂಡನ್ ಮತ್ತು ಅಮೆರಿಕದ ನ್ಯೂಯಾರ್ಕ್ ಹಾಗೂ ಕ್ಯಾಲಿಫೋರ್ನಿಯಾದಂತಹ ನಗರಗಳಲ್ಲಿ ಆದಾಯದ ಶೇ.40&50ಕ್ಕೂ ಹೆಚ್ಚು ಭಾಗ ಬಾಡಿಗೆಗೇ ವ್ಯಯವಾಗುತ್ತಿರುವುದರಿಂದ ಬಾಡಿಗೆದಾರರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಹಲವು ಕಾರಣಗಳು

ಅಲ್ಪಾವಧಿ ಪ್ರವಾಸಿ ಬಾಡಿಗೆಗಳು: ಏರ್‌ಬಿಎನ್‌ಬಿ ನಂತಹ ವೇದಿಕೆಗಳ ಮೂಲಕ ಮನೆ ಮಾಲೀಕರು ಸ್ಥಳೀಯರಿಗೆ ದೀರ್ಘಾವಧಿ ಬಾಡಿಗೆ ನೀಡುವ ಬದಲು, ಪ್ರವಾಸಿಗರಿಗೆ ದಿನದ ಲೆಕ್ಕದಲ್ಲಿ ಹೆಚ್ಚಿನ ದರಕ್ಕೆ ನೀಡುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ಮನೆಗಳ ಕೊರತೆ ಉಂಟಾಗಿದೆ.

ಬೃಹತ್ ಹೂಡಿಕೆದಾರರ ಪ್ರವೇಶ: ವಲ್ಚರ್ ಫಂಡ್ಸ್ ಮತ್ತು ದೊಡ್ಡ ರಿಯಲ್ ಎಸ್ಟೇಟ್ ಕಂಪನಿಗಳು ನೂರಾರು ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿ, ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ಬಾಡಿಗೆಯನ್ನು ಮನಸೋಇಚ್ಛೆ ಹೆಚ್ಚಿಸುತ್ತಿವೆ. ಅಲ್ಲದೆ, ವಿದೇಶಿ ಶ್ರೀಮಂತ ಹೂಡಿಕೆದಾರರಿಗೆ ಆಸ್ತಿ ಖರೀದಿಯ ಮೂಲಕ ಪೌರತ್ವ ನೀಡುವ ನೀತಿಗಳು ಮತ್ತು ಬೇರೆ ದೇಶಗಳಿಂದ ಬಂದು ಕೆಲಸ ಮಾಡುವ "ಡಿಜಿಟಲ್ ನೊಮಾಡ್‌'ಗಳ ಸಂಖ್ಯೆ ಹೆಚ್ಚಾಗಿರುವುದು ಸ್ಥಳೀಯ ಮಾರುಕಟ್ಟೆಯ ಬೆಲೆ ಏರಿಸಿದೆ.

ಹೊಸ ಮನೆಗಳ ನಿರ್ಮಾಣದಲ್ಲಿ ಕುಂಠಿತ: ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆ, ಹೆಚ್ಚಿನ ಬಡ್ಡಿದರಗಳು ಮತ್ತು ಕಠಿಣ ನಿಯಮಗಳಿಂದಾಗಿ ಬೇಡಿಕೆಗೆ ತಕ್ಕಂತೆ ಹೊಸ ಮನೆಗಳು ನಿರ್ಮಾಣವಾಗುತ್ತಿಲ್ಲ.

ಪರಿಣಾಮಗಳು

  • ಯುವ ಉದ್ಯೋಗಿಗಳು ತಮ್ಮ ಸಂಬಳದ ಶೇಕಡ 50ರಿಂದ 90ರಷ್ಟು ಹಣವನ್ನು ಬಾಡಿಗೆಗೇ ನೀಡಬೇಕಾಗಿರುವುದರಿಂದ ಉಳಿತಾಯ, ಮದುವೆ ಅಥವಾ ಸ್ವಂತ ಮನೆ ಖರೀದಿಯ ಕನಸು ದೂರವಾಗುತ್ತಿದೆ. ಅನೇಕರು ಪಾಲಕರ ಮನೆಯಲ್ಲೇ ಉಳಿಯುವಂತಾಗಿದೆ.

  • ನಗರದ ಮೂಲ ನಿವಾಸಿಗಳು ದುಬಾರಿ ಬಾಡಿಗೆ ಕಟ್ಟಲಾಗದೆ ನಗರದ ಹೊರವಲಯಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆ, ಇದರಿಂದ ನಗರಗಳ ಮೂಲ ಸಂಸ್ಕೃತಿ ನಶಿಸುತ್ತಿದೆ.

  • ವಸತಿ ಬಿಕ್ಕಟ್ಟು ಈಗ ಚುನಾವಣಾ ವಿಷಯವಾಗಿದೆ. ಸ್ಪೇನ್‌ನಲ್ಲಿ ಈ ಪ್ರತಿಭಟನೆಗಳ ಒತ್ತಡದಿಂದಾಗಿ ಅವಧಿಪೂರ್ವ ಚುನಾವಣೆ ಘೋಷಿಸುವಂತಹ ರಾಜಕೀಯ ಬೆಳವಣಿಗೆಗಳು ನಡೆದಿವೆ.

  • ಬಾಡಿಗೆ ಕಟ್ಟಲಾಗದೆ ಮನೆಗಳಿಂದ ಹೊರಹಾಕಲ್ಪಟ್ಟ ವೃದ್ಧರು ಮತ್ತು ಬಡ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ.