ಪಾಕ್​​ ರಾಷ್ಟ್ರಗೀತೆ ಹಾಡಲು 6 ತಿಂಗಳಲ್ಲಿ ಉರ್ದು ಕಲಿತ ಬ್ರಿಟಿಷ್​ ಗಾಯಕಿ ಭಾರತದ ಜನ ಗಣ ಮನ ಬಗ್ಗೆ ಹೇಳಿದ್ದು ಅಚ್ಚರಿಯ ಮಾತು!

ಪಾಕ್​​ ರಾಷ್ಟ್ರಗೀತೆ ಹಾಡಲು 6 ತಿಂಗಳಲ್ಲಿ ಉರ್ದು ಕಲಿತ ಬ್ರಿಟಿಷ್​ ಗಾಯಕಿ ಭಾರತದ ಜನ ಗಣ ಮನ ಬಗ್ಗೆ ಹೇಳಿದ್ದು ಅಚ್ಚರಿಯ ಮಾತು!
ಪಾಕ್​​ ರಾಷ್ಟ್ರಗೀತೆ ಹಾಡಲು 6 ತಿಂಗಳಲ್ಲಿ ಉರ್ದು ಕಲಿತ ಬ್ರಿಟಿಷ್​ ಗಾಯಕಿ ಭಾರತದ ಜನ ಗಣ ಮನ ಬಗ್ಗೆ ಹೇಳಿದ್ದು ಅಚ್ಚರಿಯ ಮಾತು!
Published on

ಪ್ರಮುಖ ಮುಖ್ಯಾಂಶಗಳು

  • ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮುನ್ನ ಪಾಕಿಸ್ತಾನದ ರಾಷ್ಟ್ರಗೀತೆ ಹಾಡಿದ ಇಂಗ್ಲಿಷ್ ಗಾಯಕಿ ಲಾರಾ ರೈಟ್
  • ಉರ್ದು ಭಾಷೆಯಲ್ಲಿ ಸರಿಯಾದ ಉಚ್ಚಾರಣೆ ಕಲಿಯಲು ಕಳೆದ ಆರು ತಿಂಗಳಿಂದ ಸಾಕಷ್ಟು ಶ್ರಮ ಪಟ್ಟಿರುವುದಾಗಿ ಹೇಳಿಕೆ
  • 2025ರಲ್ಲಿ ಭಾರತ ಇಂಗ್ಲೆಂಡ್ ಟೆಸ್ಟ್ ಸರಣಿ ವೇಳೆ ಬಂಗಾಳಿ ಭಾಷೆಯಲ್ಲಿ ಭಾರತದ ರಾಷ್ಟ್ರಗೀತೆ ಹಾಡಿದ್ದ ಗಾಯಕಿ
  • ಭಾರತದ ರಾಷ್ಟ್ರಗೀತೆ ಮೊದಲು ಹಾಡಿದ್ದು ತನ್ನ ಜೀವನದ ಅತ್ಯಂತ ಭಯಾನಕ ಕ್ಷಣವಾಗಿತ್ತು ಎಂದು ಮುಕ್ತ ಒಪ್ಪಿಗೆ
ನವದೆಹಲಿ: ಇಂಗ್ಲೆಂಡ್ ವಿರುದ್ಧದ ಪಾಕಿಸ್ತಾನದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂಗ್ಲಿಷ್ ಗಾಯಕಿ ( British Singer ) ಲಾರಾ ರೈಟ್ ಅವರು ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಭಿನ್ನ ರೀತಿಯಲ್ಲಿ ಹಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದರೂ, ಉರ್ದು ಭಾಷೆಯಲ್ಲಿ ಪಾಕಿಸ್ತಾನದ ರಾಷ್ಟ್ರಗೀತೆಯ ಸರಿಯಾದ ಉಚ್ಚಾರಣೆಯನ್ನು ಕಲಿಯಲು ತಾನು ಪಟ್ಟ ಕಷ್ಟದ ಬಗ್ಗೆ ಲಾರಾ ರೈಟ್ ಇದೀಗ ಮುಕ್ತವಾಗಿ ಮಾತನಾಡಿದ್ದಾರೆ. 
ಪಾಕಿಸ್ತಾನದ ಅಧಿಕೃತ ಭಾಷೆಯಾದ ಉರ್ದುವನ್ನು ಕಳೆದ ಆರು ತಿಂಗಳಿಂದ ಕಲಿಯುತ್ತಿರುವುದಾಗಿ ರೈಟ್ ಇತ್ತೀಚಿನ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಇದೇ ರೈಟ್, 2025ರಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಭಾರತದ ರಾಷ್ಟ್ರಗೀತೆ 'ಜನ ಗಣ ಮನ'ವನ್ನು ಬಂಗಾಳಿ ಭಾಷೆಯಲ್ಲೂ ಹಾಡಿದ್ದರು.
ವಿವಿಧ ಜಾಗತಿಕ ಕ್ರೀಡಾಕೂಟಗಳಲ್ಲಿ ರಾಷ್ಟ್ರಗೀತೆಗಳನ್ನು ಹಾಡಿ ಹೆಸರು ಗಳಿಸಿರುವ ಲಾರಾ ರೈಟ್, ಉರ್ದು ಮತ್ತು ಬಂಗಾಳಿ ಭಾಷೆಗಳನ್ನು ಕಲಿಯಲು ತಾನು ಪಟ್ಟ ಶ್ರಮದ ಬಗ್ಗೆ ಮಾತನಾಡಿದ್ದಾರೆ. ಯಾವುದೇ ದೇಶದ ರಾಷ್ಟ್ರಗೀತೆಯನ್ನು ಹಾಡುವಂತೆ ಕೇಳಿಕೊಳ್ಳುವುದು ಅತ್ಯಂತ ದೊಡ್ಡ ಗೌರವವಾಗಿದ್ದು, ತಾನು ಅದನ್ನು ಎಂದಿಗೂ ಲಘುವಾಗಿ ಪರಿಗಣಿಸುವುದಿಲ್ಲ ಎಂದು ರೈಟ್​ ಅವರು ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ರಾಷ್ಟ್ರಗೀತೆಗಳನ್ನು ಹಾಡುವುದು ದೊಡ್ಡ ಸವಾಲು. ಹೀಗಾಗಿ ನನ್ನನ್ನು ಕೇಳಿದಾಗ, ಅದನ್ನು ಸರಿಯಾಗಿ ಮಾಡಲು ಅಥವಾ ಹಾಡಲು ಸಾಧ್ಯವೇ ಎಂಬ ಖಚಿತತೆಯ ಬಳಿಕವೇ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ ಎಂದು 'ದಿ ಅತ್ಲೆಟಿಕ್' (The Athletic) ನೀಡಿದ ಸಂದರ್ಶನದಲ್ಲಿ ರೈಟ್ ಹೇಳಿದ್ದಾರೆ.
ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಹಾಡಲು ನನಗೆ ಸಾಕಷ್ಟು ಸಮಯ ಬೇಕಾಯಿತು ಎಂದು ತಿಳಿಸಿರುವ ಲಾರಾ ರೈಟ್, ಉರ್ದು ಭಾಷೆಯನ್ನು ಕಲಿಯಲು ಕಳೆದ ಆರು ತಿಂಗಳಿಂದ ಸಿದ್ಧತೆ ನಡೆಸಿದ್ದೆ ಎಂದಿದ್ದಾರೆ. ಕೇವಲ 'ಜೆರುಸಲೆಮ್' ಹಾಡನ್ನು ಹಾಡಿದ ಹಾಗೆ ಇದು ಸುಲಭವಲ್ಲ, ಇದು ಅದಕ್ಕಿಂತಲೂ ದೊಡ್ಡದು. ಆದರೆ ಇದನ್ನು ತಾನು ದೊಡ್ಡ ಸೌಭಾಗ್ಯವೆಂದು ಪರಿಗಣಿಸುವುದಾಗಿ ಹಾಗೂ ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸಲು ಪ್ರಯತ್ನಿಸಿರುವುದಾಗಿ ರೈಟ್​ ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ರಾಷ್ಟ್ರಗೀತೆಯನ್ನು ಹಾಡುವ ಮುನ್ನ ತಾನು ಅನುಭವಿಸಿದ ಆತಂಕದ ಬಗ್ಗೆಯೂ ರೈಟ್ ಮುಕ್ತವಾಗಿ ಮಾತನಾಡಿದ್ದಾರೆ. ಭಾರತದ ರಾಷ್ಟ್ರಗೀತೆಯನ್ನು ಮೊದಲ ಬಾರಿಗೆ ಹಾಡಿದ್ದು ತನ್ನ ಜೀವನದ ಅತ್ಯಂತ ಭಯಾನಕ ಕ್ಷಣವಾಗಿತ್ತು ಎಂದಿರುವ ಅವರು, ಶಾಸ್ತ್ರೀಯ ಸಂಗೀತ ಅಧ್ಯಯನ ಮಾಡುವಾಗ ಇಟಾಲಿಯನ್ ಮತ್ತು ಜರ್ಮನ್ ಭಾಷೆಗಳ ಪ್ರಾಥಮಿಕ ತಿಳುವಳಿಕೆ ಸಿಗುತ್ತದೆ, ಆದರೆ ರಾಷ್ಟ್ರಗೀತೆಗಳನ್ನು ಹಾಡುವಾಗ ಸಂಪೂರ್ಣವಾಗಿ ಭಿನ್ನವಾದ ಭಾಷೆಗಳನ್ನು ಎದುರಿಸಬೇಕಾಗುತ್ತದೆ ಎಂದು ವಿವರಿಸಿದ್ದಾರೆ.
ಉಚ್ಚಾರಣೆ, ಪದಗಳ ಶೈಲಿ ಹಾಗೂ ಅದರ ಅರ್ಥವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಆ ಭಾಷೆಯನ್ನು ಮಾತನಾಡುವ ಜನರಿಂದ ತಾನು ಕಲಿತಿದ್ದಾಗಿ ರೈಟ್ ತಿಳಿಸಿದ್ದಾರೆ. ಭಾರತೀಯ ರಾಷ್ಟ್ರಗೀತೆಯನ್ನು ಹಲವು ಬಾರಿ ಕೇಳಿ, ಸರಿಯಾದ ರೀತಿಯಲ್ಲಿ ಹಾಡಲು ಶ್ರಮಿಸಿದ್ದಾಗಿ ತಿಳಿಸಿರುವ ಅವರು, ತಮ್ಮ ಈ ವೃತ್ತಿಜೀವನದಲ್ಲಿ ತೆರೆಮರೆಯಲ್ಲಿ ನಡೆಯುವ ಇಂತಹ ಕಷ್ಟಗಳನ್ನು ಬಹುತೇಕ ಜನರು ನೋಡುವುದೇ ಇಲ್ಲ ಎಂದು ವಿವರಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net