

ನವದೆಹಲಿ: ಇಂದಿನ ಡಿಜಿಟಲ್ ಯುಗದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನವು ಅದ್ಭುತಗಳನ್ನು ಸೃಷ್ಟಿ ಮಾಡುತ್ತಿದ್ದರೂ, ಅದೇ ಸಮಯದಲ್ಲಿ ಇದು ಸಮಾಜಕ್ಕೆ ದೊಡ್ಡ ಮುಳುವಾಗುತ್ತಿದೆ. ಇದಕ್ಕೆ ತಾಜಾ ನಿದರ್ಶನವೆಂಬಂತೆ ಶಾಕಿಂಗ್ ಘಟನೆಯೊಂದು ವರದಿಯಾಗಿದೆ. ಬ್ರೆಜಿಲ್ ದೇಶದ 49 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿದ್ದ ಎಐ (AI) ಸೃಷ್ಟಿತ ಸುಂದರಿಯ ಪ್ರೀತಿಯ ಮಾತುಗಳನ್ನು ನಂಬಿ, ತನ್ನೆಲ್ಲ ಆಸ್ತಿ-ಪಾಸ್ತಿಗಳನ್ನು ಮಾರಾಟ ಮಾಡಿ ಬರೋಬ್ಬರಿ 1,900 ಕಿಲೋಮೀಟರ್ಗಳಿಗೂ ಅಧಿಕ ದೂರ ಪ್ರಯಾಣಿಸಿ ಅಂತಿಮವಾಗಿ ಮೋಸಹೋಗಿರುವ ವಿಚಿತ್ರ ಹಾಗೂ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಬ್ರೆಜಿಲ್ನ ಮಾರನ್ಹಾವೊ ರಾಜ್ಯದ ಗಾರೆ ಕೆಲಸಗಾರರಾದ ಎಡಿಮಾರ್ ಮಾರ್ಟಿನ್ಸ್ (Edimar Martins) ಎಂಬುವವರೇ ಈ ದುರ್ದೈವಿ. ತಾಯಿಯ ಮರಣದ ನಂತರ ತೀವ್ರ ಏಕಾಂಗಿತನದಿಂದ ಬಳಲುತ್ತಿದ್ದ ಮಾರ್ಟಿನ್ಸ್ ಅವರಿಗೆ, 2020 ರಲ್ಲಿ 'ಜೆಸ್ಸಿಕಾ ಒಲಿವೆರಾ' ಅಲಿಯಾಸ್ 'ಜೆಸ್ಸಿಕಾ ಫಜೆಂಡೈರಾ' ಎಂಬ ಹೆಸರಿನ ಸೋಶಿಯಲ್ ಮೀಡಿಯಾ ಅಕೌಂಟ್ ಪರಿಚಯವಾಗಿದೆ. 3 ಲಕ್ಷಕ್ಕೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿದ್ದ ಆ ಖಾತೆಯಲ್ಲಿ, ಯುವತಿಯೊಬ್ಬಳು ಫಾರ್ಮ್ಹೌಸ್ನಲ್ಲಿ ಸುಂದರವಾದ ಗ್ರಾಮೀಣ ಜೀವನವನ್ನು ನಡೆಸುತ್ತಿರುವಂತೆ ಬಿಂಬಿಸುವ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗುತ್ತಿತ್ತು.
ಆ ಖಾತೆಯಲ್ಲಿದ್ದ ವಿಡಿಯೋಗಳಲ್ಲಿ ಯುವತಿಯು ತನ್ನ ಫಾರ್ಮ್ಹೌಸ್ಗೆ ಬರುವಂತೆ ಪುರುಷರನ್ನು ಆಹ್ವಾನಿಸುವುದಲ್ಲದೆ, ಅವರಿಗೆ ವಾಸಿಸಲು ಸೂರು ಹಾಗೂ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಳು. ತನ್ನ ಕಷ್ಟದ ಸಮಯದಲ್ಲಿ ಈಕೆಯು ಜೀವನದಲ್ಲಿ ಹೊಸ ಆರಂಭ ಮಾಡಲು ಸಹಾಯ ಮಾಡಬಹುದು ಎಂದು ಗಾಢವಾಗಿ ನಂಬಿದ ಮಾರ್ಟಿನ್ಸ್, ಆಕೆಯನ್ನೇ ಮದುವೆಯಾಗಲು ನಿರ್ಧರಿಸಿದರು. ಕೊನೆಗೆ ಆಕೆಯ ಭೇಟಿಗಾಗಿ ಅಕ್ಟೋಬರ್ 9 ರಂದು ತಮ್ಮ ಕೈಯಲ್ಲಿದ್ದ ಎಲ್ಲಾ ವಸ್ತುಗಳನ್ನು ಮಾರಿ ಪ್ರಯಾಣಕ್ಕೆ ಹಣ ಹೊಂದಿಸಿಕೊಂಡು ಹೊರಟರು.
ಬ್ರೆಜಿಲ್ನ ಆಗ್ನೇಯ ಭಾಗದಲ್ಲಿರುವ ಮಿನಾಸ್ ಗೆರೈಸ್ ರಾಜ್ಯದ ರಾಜಧಾನಿ ಬೆಲೋ ಹೊರಿಜಾಂಟೆ ನಗರ ತಲುಪಲು ಮಾರ್ಟಿನ್ಸ್ ಒಂದು ದಿನಕ್ಕಿಂತ ಹೆಚ್ಚು ಕಾಲ ಬಸ್ನಲ್ಲಿ ಪ್ರಯಾಣಿಸಿ ಅಕ್ಟೋಬರ್ 11 ರಂದು ಅಲ್ಲಿಗೆ ತಲುಪಿದರು. ಆದರೆ ಆಕೆಯನ್ನು ಭೇಟಿಯಾಗುವ ಅವರ ಕನಸು ಕ್ಷಣಾರ್ಧದಲ್ಲೇ ನುಚ್ಚುನೂರಾಯಿತು. ಕೈಯಲ್ಲಿ ಆಕೆಯ ಫೋಟೋ ಹಿಡಿದು ನಗರದಾದ್ಯಂತ ಹುಡುಕಾಡಿದರೂ ಯಾರೊಬ್ಬರಿಗೂ ಆಕೆಯ ಸುಳಿವು ಸಿಗಲಿಲ್ಲ, ಕೊನೆಗೆ ಸ್ಥಳೀಯ ರೇಡಿಯೋ ಸ್ಟೇಷನ್ಗೆ ತೆರಳಿದಾಗ ಆಕೆಯ ಅಸ್ತಿತ್ವವೇ ಇಲ್ಲ ಎಂಬ ಕಹಿ ಸತ್ಯ ಅವರಿಗೆ ಗೊತ್ತಾಯಿತು.
ಆ ಮಹಿಳೆಯು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಿಂದ ಸೃಷ್ಟಿಸಲ್ಪಟ್ಟ ನಕಲಿ ವ್ಯಕ್ತಿ ಎಂಬುದು ತಿಳಿದು ಮಾರ್ಟಿನ್ಸ್ ತೀವ್ರ ಆಘಾತಕ್ಕೊಳಗಾದರು. "ಇದು ಕೇವಲ ದುಃಖ, ನಿರಾಶೆ ಮತ್ತು ಖಿನ್ನತೆಯನ್ನು ಮಾತ್ರ ತರುತ್ತದೆ. ಅನೇಕ ಜನರು ಸಂಬಂಧವನ್ನು ಹುಡುಕಲು ಬಯಸುತ್ತಾರೆ, ಹಾಗಾಗಿ ನಾನು ಬಂದೆ" ಎಂದು ಅವರು ಸ್ಥಳೀಯ ಮಾಧ್ಯಮಗಳ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾ ಅಕೌಂಟ್ ಹಿಂದೆ ಇದ್ದ ವ್ಯಕ್ತಿಯು ಇದು ಕೇವಲ ಎಐ ಸೃಷ್ಟಿ ಎಂದು ಒಪ್ಪಿಕೊಂಡಿದ್ದು, ಪ್ರಚಾರ ಹಾಗೂ ವ್ಯಾಪಾರದ ಉದ್ದೇಶಕ್ಕಾಗಿ ಈ ಖಾತೆ ನಿರ್ಮಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ತಮ್ಮ ಬಳಿ ಯಾವುದೇ ನೇರ ಸಂಪರ್ಕವಿರಲಿಲ್ಲ ಎಂದು ತಿಳಿಸಿದ್ದಾರೆ. ಕೈಯಲ್ಲಿದ್ದ ಹಣವೆಲ್ಲ ಖಾಲಿಯಾಗಿ ಆ ನಗರದಲ್ಲಿ ಅತಂತ್ರರಾದ ಮಾರ್ಟಿನ್ಸ್ಗೆ ಸ್ಥಳೀಯ ಮುನ್ಸಿಪಲ್ ಅಧಿಕಾರಿಗಳು ಮತ್ತು ಸಮಾಜ ಸೇವಕರು ಊಟ, ಸ್ನಾನದ ವ್ಯವಸ್ಥೆ ಕಲ್ಪಿಸಿ, ಊರಿಗೆ ವಾಪಸ್ ಹೋಗಲು ಬಸ್ ಟಿಕೆಟ್ ನೀಡಿ ಸಹಾಯ ಮಾಡಿದರು.
ಈ ಭಾರಿ ನಿರಾಶೆಯ ನಡುವೆಯೂ ಮಾರ್ಟಿನ್ಸ್ ತಮ್ಮ ಸಂಗಾತಿಯನ್ನು ಹುಡುಕುವ ಪ್ರಯತ್ನವನ್ನು ಕೈಬಿಟ್ಟಿಲ್ಲ. ಸದ್ಯ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿರುವ ಅವರು, ತಮಗೆ ಒಪ್ಪುವ ಸಂಗಾತಿಯನ್ನು ಹುಡುಕಲು ಮತ್ತೊಮ್ಮೆ ಅದೇ ಸ್ಥಳಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ. ವರದಿಗಳ ಪ್ರಕಾರ, ಬೆಲೋ ಹೊರಿಜಾಂಟೆ ನಗರದಲ್ಲಿ ಎಐ ಸುಂದರಿಯನ್ನು ನಂಬಿ ಮೋಸಹೋದ ಮೂರನೇ ವ್ಯಕ್ತಿ ಮಾರ್ಟಿನ್ಸ್ ಆಗಿದ್ದು, ಇಂದಿನ ತಾಂತ್ರಿಕ ಯುಗದಲ್ಲಿ ಎಐ ದುರ್ಬಳಕೆ ಎಷ್ಟರ ಮಟ್ಟಿಗೆ ಜನರನ್ನು ದಾರಿ ತಪ್ಪಿಸುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ, (ಏಜೆನ್ಸೀಸ್).