ಸ್ಪೇನ್​ನತ್ತ ಸುನಾಮಿಯಂತೆ ನುಗ್ಗುತ್ತಿರುವ ವಲಸಿಗರು! ಸಮುದ್ರ ಮಾರ್ಗವೇ ಏಕೆ? ಗಡಿ ಬಿಕ್ಕಟ್ಟಿನ ಅಸಲಿ ಕಾರಣ ಇಲ್ಲಿದೆ...Border Crisis

ಸ್ಪೇನ್​ನತ್ತ ಸುನಾಮಿಯಂತೆ ನುಗ್ಗುತ್ತಿರುವ ವಲಸಿಗರು! ಸಮುದ್ರ ಮಾರ್ಗವೇ ಏಕೆ? ಗಡಿ ಬಿಕ್ಕಟ್ಟಿನ ಅಸಲಿ ಕಾರಣ ಇಲ್ಲಿದೆ...Border Crisis
ಸ್ಪೇನ್​ನತ್ತ ಸುನಾಮಿಯಂತೆ ನುಗ್ಗುತ್ತಿರುವ ವಲಸಿಗರು! ಸಮುದ್ರ ಮಾರ್ಗವೇ ಏಕೆ? ಗಡಿ ಬಿಕ್ಕಟ್ಟಿನ ಅಸಲಿ ಕಾರಣ ಇಲ್ಲಿದೆ...Border Crisis
Published on

ಪ್ರಮುಖ ಮುಖ್ಯಾಂಶಗಳು

  • ಸ್ಪೇನ್ಮೊ-ರೊಕ್ಕೊ ಗಡಿಯಲ್ಲಿ ವಲಸಿಗರ ಮಹಾಪೂರ, ಗಡಿ ಭದ್ರತೆಗೆ ಸೈನ್ಯ ನಿಯೋಜನೆ
  • ಸ್ಪೇನ್‌ನ ಸಿಯುಟಾ ಗಡಿಯಲ್ಲಿ ವಲಸಿಗರ ಭಾರೀ ದಂಡು
  • ಗಡಿ ಭಾಗದಲ್ಲಿ ಉಂಟಾದ ತೀವ್ರ ಬಿಕ್ಕಟ್ಟು ಹಾಗೂ ನೂಕುನುಗ್ಗಲು
  • ಸ್ಪೇನ್ ಗಡಿ ಭದ್ರತಾ ಕಾರ್ಯಾಚರಣೆ ವೇಳೆ ಒಂಬತ್ತು ಸಾವು
  • ಆಫ್ರಿಕಾದಿಂದ ಯುರೋಪ್ ಪ್ರವೇಶಿಸಲು ವಲಸಿಗರ ಹರಸಾಹಸ
Border Crisis : ಆಫ್ರಿಕಾದಿಂದ ಯುರೋಪ್ ಪ್ರವೇಶಿಸುವ ಕನಸುಕಂಡು ಸಾವಿರಾರು ವಲಸಿಗರು ಒಮ್ಮೆಲೆ ಗಡಿ ದಾಟಲು ಯತ್ನಿಸಿದ ಪರಿಣಾಮ ಸ್ಪೇನ್ ಹಾಗೂ ಮೊರೊಕ್ಕೊ ಗಡಿಯಲ್ಲಿ ತೀವ್ರ ಬಿಕ್ಕಟ್ಟು ಉಂಟಾಗಿದೆ. ಸ್ಪೇನ್‌ನ ಗಡಿ ಪ್ರದೇಶವಾದ ಸೆಯುಟಾ ಪ್ರದೇಶದಲ್ಲಿ ನೂರಾರು ಜನರು ಸಮುದ್ರದ ಮೂಲಕ ಈಜಿ ಅಪಾಯಕಾರಿ ರೀತಿಯಲ್ಲಿ ಸ್ಪೇನ್​ ಒಳನುಗ್ಗಲು ಯತ್ನಿಸಿದ್ದು, ಈ ವೇಳೆ ಸಂಭವಿಸಿದ ನೂಕುನುಗ್ಗಲು ಹಾಗೂ ದುರಂತದಲ್ಲಿ ಕನಿಷ್ಠ ಒಂಬತ್ತು ಮಂದಿ ಜೀವ ಕಳೆದುಕೊಂಡಿದ್ದಾರೆ. ಪರಿಸ್ಥಿತಿ ಸಂಪೂರ್ಣವಾಗಿ ಕೈಮೀರುತ್ತಿರುವುದನ್ನು ಮನಗಂಡ ಸ್ಪೇನ್ ಆಡಳಿತವು, ಗಡಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮರುಸ್ಥಾಪಿಸಲು ನೇರವಾಗಿ ಸೈನ್ಯವನ್ನೇ ಕಣಕ್ಕಿಳಿಸಿದೆ.
ಸೆಯುಟಾ ನಗರದಲ್ಲಿ ಭದ್ರತೆಯನ್ನು ಕಾಪಾಡಲು ಸಶಸ್ತ್ರ ಪಡೆಗಳನ್ನು ಕಳುಹಿಸುವುದಾಗಿ ಸ್ಪೇನ್ ಸರ್ಕಾರ ತಿಳಿಸಿದ್ದು, ಶುಕ್ರವಾರ ಸೆಯುಟಾಗೆ ಭೇಟಿ ನೀಡಲಿರುವ ಆಂತರಿಕ ಸಚಿವ ಫೆರ್ನಾಂಡೋ ಗ್ರೇಂಡೆ-ಮಾರ್ಲಾಸ್ಕಾ ಅವರೊಂದಿಗೆ ಪ್ರಧಾನಿ ಪೆಡ್ರೊ ಸಾಂಚೆಜ್ ಕೂಡ ಭಾಗಿಯಾಗಲಿದ್ದಾರೆ ಎಂದು ಘೋಷಿಸಿದೆ.
ಸೆಯುಟಾದಲ್ಲಿ ಗಡಿಯನ್ನು ಕಾಯುವ ಸ್ಪೇನ್‌ನ ಸಿವಿಲ್ ಗಾರ್ಡ್ ಅಧಿಕಾರಿಗಳ ಸಂಘದ ಮುಖ್ಯಸ್ಥರಾದ ರಚಿದ್ ಸ್ಬಿಹಿ ಅಸೋಸಿಯೇಟೆಡ್ ಪ್ರೆಸ್‌ ಜೊತೆ ಮಾತನಾಡಿದ್ದು, ಪರಿಸ್ಥಿತಿಯು ಸಂಪೂರ್ಣ ಅರಾಜಕತೆಯಿಂದ ಕೂಡಿದೆ ಎಂದಿದ್ದಾರೆ. ನಿಖರವಾದ ವಲಸಿಗರ ಸಂಖ್ಯೆಯನ್ನು ನೀಡುವುದು ಸಾಧ್ಯವಿಲ್ಲ, ಆದರೆ ಸಾವಿರಾರು ವಲಸಿಗರು ಗಡಿ ದಾಟುತ್ತಿದ್ದಾರೆ. ಪರಿಸ್ಥಿತಿ ಕೈಮೀರಿದ್ದು, ಗಡಿಯು ಸಂಪೂರ್ಣವಾಗಿ ಕುಸಿದಿದೆ ಎಂದು ಹೇಳಿದ್ದಾರೆ. ಉತ್ತರ ಮೊರೊಕ್ಕೊದ ಮಾನವ ಹಕ್ಕುಗಳ ಮೊರೊಕ್ಕೊ ಸಂಘಟನೆಯ ಸದಸ್ಯರಾದ ಅಶ್ರಫ್ ಮೈಮೌನಿ ಕೂಡ ಈ ಪರಿಸ್ಥಿತಿಯನ್ನು "ಅಪರೂಪದ ಮತ್ತು ಅಸಾಧಾರಣ" ಎಂದು ಕರೆದಿದ್ದಾರೆ.

ಸ್ಪೇನ್​ನತ್ತ ಮೊರೊಕ್ಕೊ ಮಂದಿ ನುಗ್ಗುತ್ತಿರುವುದೇಕೆ?

ಉತ್ತಮ ಆದಾಯದ ಹುಡುಕಾಟ, ಮೊರೊಕ್ಕೊದಲ್ಲಿ ತಲೆದೂರಿರುವ ಪ್ರಾದೇಶಿಕ ಅಸ್ಥಿರತೆ, ಬಡತನದಿಂದ ಪಾರಾಗುವುದು ಮತ್ತು ಸೆಯುಟಾದಂತಹ ಸ್ಪೇನ್​ ಪ್ರದೇಶ ಭೌಗೋಳಿಕವಾಗಿ ತುಂಬಾ ಹತ್ತಿರ ಇರುವುದರಿಂದ ಮೊರೊಕ್ಕೊ ಜನರು ಹೆಚ್ಚಾಗಿ ಸ್ಪೇನ್‌ಗೆ ವಲಸೆ ಹೋಗುತ್ತಾರೆ. ಇತ್ತೀಚಿನ ಈ ಭಾರಿ ಪ್ರಮಾಣದ ಗಡಿ ಅತಿಕ್ರಮಣಕ್ಕೆ, ವಲಸಿಗರನ್ನು ವಾಪಸ್ ಕಳುಹಿಸುವ ಕಾನೂನು ಚರ್ಚೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಮಾನವ ಸಾಗಾಣಿಕೆ ಜಾಲಗಳೂ ಕಾರಣ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದಾಗ್ಯೂ, ಈ ಸರಣಿ ವಲಸೆಗೆ ಸ್ಪೇನ್ ಉನ್ನತ ನ್ಯಾಯಾಲಯದ ಇತ್ತೀಚಿನ ತೀರ್ಪೂ ಒಂದು ಕಾರಣವಾಗಿರಬಹುದು ಎನ್ನಲಾಗಿದೆ.
ಅಂದಹಾಗೆ, ಗಡಿ ಪ್ರದೇಶಗಳಲ್ಲಿ ಸ್ಪೇನ್ ಆಡಳಿತಕ್ಕೆ ವಿಶೇಷ 'ಗಡಿ ತಿರಸ್ಕಾರ' ನಿಯಮದ ಅಡಿಯಲ್ಲಿ ಹಕ್ಕಿದೆ. ಅದರ ಪ್ರಕಾರ, ಅಕ್ರಮವಾಗಿ ಬಂದ ವಲಸಿಗರನ್ನು ತಕ್ಷಣವೇ ಅವರ ಮೂಲ ದೇಶಗಳಿಗೆ ವಾಪಸ್ ಕಳುಹಿಸಬಹುದಾಗಿತ್ತು. ಆದರೆ, ಸಮುದ್ರ ಮಾರ್ಗದ ಮೂಲಕ ಬರುವ ವಲಸಿಗರನ್ನು ಯಾವುದೇ ಕಾನೂನು ಪ್ರಕ್ರಿಯೆಗಳಿಲ್ಲದೆ ತಕ್ಷಣವೇ ವಾಪಸ್ ಕಳುಹಿಸುವುದನ್ನು ತಡೆದು ಈ ತಿಂಗಳ ಆರಂಭದಲ್ಲಿ ಸ್ಪೇನ್ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಈ ಒಂದು ತೀರ್ಪೇ ಈ ದಿಢೀರ್ ವಲಸಿಗರ ಹೆಚ್ಚಳಕ್ಕೆ ಕಾರಣ ಎಂದು ಸೆಯುಟಾ ಅಧಿಕಾರಿಗಳು ತಿಳಿಸಿರುವುದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇನ್ನು ಸ್ಪೇನ್​ನ ಸುಪ್ರೀಂ ಕೋರ್ಟ್ ನೀಡಿದ​ ಈ ತೀರ್ಪು ಗಡಿ ಬೇಲಿ ಹತ್ತಿ ಭೂಮಾರ್ಗದ ಮೂಲಕ ಸ್ಪೇನ್ ಪ್ರವೇಶಿಸುವ ವಲಸಿಗರಿಗೆ ಅನ್ವಯಿಸುವುದಿಲ್ಲ. ಅವರನ್ನು ತಕ್ಷಣ ವಾಪಸ್​ ಕಳುಹಿಸಬಹುದು. ಆದರೆ, ಸಮುದ್ರ ಮಾರ್ಗದ ಮೂಲಕ ಬರುವ ವಲಸಿಗರನ್ನು ಸೂಕ್ತ ಕಾನೂನು ಪ್ರಕ್ರಿಯೆಯ ಮೂಲಕವೇ ವಾಪಸ್​ ಕಳುಹಿಸಬೇಕು. ಆದರೆ, ಮೊರೊಕ್ಕೊದ ಕೆಲ ಮಾನವ ಹಕ್ಕುಗಳ ಕಾರ್ಯಕರ್ತರು ಈ ವಾದವನ್ನು ಅನುಮಾನಿಸಿದ್ದಾರೆ. ಏಕೆಂದರೆ, ಹೆಚ್ಚಿನ ವಲಸಿಗರಿಗೆ ಇಂತಹ ಕಾನೂನು ತೀರ್ಪುಗಳ ಬಗ್ಗೆ ಅರಿವಿರಲು ಸಾಧ್ಯವೇ ಇಲ್ಲ ಅನ್ನೋದು ಅವರ ಅಭಿಪ್ರಾಯವಾಗಿದೆ. ಕೇವಲ ಉತ್ತಮ ಜೀವನ ಕಂಡುಕೊಳ್ಳಲು ಮಾತ್ರ ಸ್ಪೇನ್​ನತ್ತ ಬರುತ್ತಾರೆ ಅನ್ನೋದು ಹಲವರು ಅನಿಸಿಕೆಯಾಗಿದೆ.
ಅಂದಹಾಗೆ, ಉತ್ತಮ ಜೀವನೋಪಾಯವನ್ನು ಅರಸುತ್ತಾ ಅಥವಾ ತಮ್ಮ ದೇಶಗಳ ಹಿಂಸಾಚಾರದಿಂದ ತಪ್ಪಿಸಿಕೊಂಡು ಯುರೋಪ್ ಪ್ರವೇಶಿಸಲು ಬಯಸುವ ವಲಸಿಗರಿಗೆ ಸ್ಪೇನ್ ಪ್ರಮುಖ ಪ್ರವೇಶ ದ್ವಾರವಾಗಿದೆ. ಉತ್ತರ ಆಫ್ರಿಕಾ ಕರಾವಳಿಯಲ್ಲಿರುವ ಸೆಯುನಾ ಪ್ರದೇಶವನ್ನು ತಲುಪಲು, ವಲಸಿಗರು ಹೆಚ್ಚಾಗಿ ಮೊರೊಕ್ಕೊದ ಫ್ನಿಡೆಕ್ ಎಂಬ ಪಟ್ಟಣದಿಂದ ಸುಮಾರು 5 ಕಿಲೋಮೀಟರ್ (3.1 ಮೈಲಿ) ಸಮುದ್ರದಲ್ಲಿ ಈಜಿಕೊಂಡು ಸ್ಪ್ಯಾನಿಷ್ ಪ್ರದೇಶವನ್ನು ತಲುಪುತ್ತಾರೆ. ಇನ್ನು ಕೆಲವರು ಹತ್ತಿರದ ಬೆಲ್ಯೂನೆಚ್ ಪಟ್ಟಣದಿಂದ ಕಡಿಮೆ ದೂರದ ಸಮುದ್ರ ಮಾರ್ಗದ ಮೂಲಕ ಗಡಿ ದಾಟಲು ಯತ್ನಿಸುತ್ತಾರೆ.

ಇಲ್ಲಿಯವರೆಗೆ ಮೊರೊಕ್ಕೊದ ಎಷ್ಟು ಮಂದಿ ಸ್ಪೇನ್​ಗೆ ನುಸುಳಿದ್ದಾರೆ?

ಸದ್ಯಕ್ಕೆ ಮೊರೊಕ್ಕೊದಿಂದ ಸೆಯುಟಾಗೆ ಎಷ್ಟು ಮಂದಿ ಬಂದಿದ್ದಾರೆ ಎಂಬುದನ್ನು ಸ್ಪೇನ್ ಅಧಿಕಾರಿಗಳು ಅಧಿಕೃತವಾಗಿ ಖಚಿತಪಡಿಸಿಲ್ಲ. ಆದಾಗ್ಯೂ, ಸ್ಪ್ಯಾನಿಷ್ ದೂರದರ್ಶನ ವಾಹಿನಿಯಾದ ಟಿವಿಇ (TVE) ವರದಿ ಮಾಡಿರುವ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಸುಮಾರು 2000 ರಿಂದ 3000 ಜನರು ಸ್ಪೇನ್​ ತಲುಪಿದ್ದಾರೆ. ಅಲ್ಲದೆ, ಸ್ಪೇನ್ ಮತ್ತು ಮೊರೊಕ್ಕೊ ನಡುವಿನ ಗಡಿಯಲ್ಲಿ ಉಂಟಾಗಿರುವ ಈ ಬಿಕ್ಕಟ್ಟು, ಬುಧವಾರದಂದು ಸ್ಪೇನ್​ನ ಸಣ್ಣ ಪ್ರದೇಶವನ್ನು ತಲುಪಲು ಪ್ರಯತ್ನಿಸಿದ, ಮುಖ್ಯವಾಗಿ ಈಜಿಕೊಂಡು ಬಂದ ವಲಸಿಗರ ಸಂಖ್ಯೆಯಲ್ಲಿ ಹಠಾತ್ ಏರಿಕೆಯಾದ ಬಳಿಕ ಮತ್ತಷ್ಟು ತೀವ್ರಗೊಂಡಿದೆ. ಈ ಗಡಿ ದಾಟುವಿಕೆಯ ಬಗ್ಗೆ ಮೊರೊಕ್ಕೊ ಅಧಿಕಾರಿಗಳು ಇದುವರೆಗೆ ಯಾವುದೇ ಬಹಿರಂಗ ಪ್ರತಿಕ್ರಿಯೆ ನೀಡಿಲ್ಲ ಮತ್ತು ಮೊರೊಕ್ಕೊ ಒಳನಾಡಿನ ಸಚಿವಾಲಯವು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿಲ್ಲ.
ಈ ಪರಿಸ್ಥಿತಿಯನ್ನು ನಿಭಾಯಿಸಲು ಮೊರೊಕ್ಕೊ ಸರ್ಕಾರವು ಸ್ಪೇನ್‌ನೊಂದಿಗೆ "ಹತ್ತಿರದಿಂದ ಸಹಕರಿಸುತ್ತಿದೆ" ಮತ್ತು ಗಡಿ ದಾಟಲು ಪ್ರಯತ್ನಿಸುತ್ತಿರುವ "ಅನೇಕ ಜನರನ್ನು" ಮೊರೊಕ್ಕೊ ಪೊಲೀಸರು ತಡೆಯುತ್ತಿದ್ದಾರೆ ಎಂದು ಸ್ಪೇನ್ ಒಳನಾಡಿನ ಸಚಿವಾಲಯ ತಿಳಿಸಿದೆ. ಸೆಯುಟಾಗೆ ಅಕ್ರಮವಾಗಿ ಪ್ರವೇಶಿಸಿದ ಎಲ್ಲ ಜನರನ್ನು ಆದಷ್ಟು ಬೇಗ ವಾಪಸ್ ಕಳುಹಿಸಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡಿವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net