ವಾಷಿಂಗ್ಟನ್‌ನಲ್ಲಿ ಪ್ರತ್ಯಕ್ಷವಾಯ್ತು ಬೋಯಿಂಗ್ E-4B: ಇದು ಯುದ್ಧದ ಮುನ್ಸೂಚನೆಯೇ? | Boeing E-4B

Boeing E-4B
Boeing E-4B
Published on
ಅಮೆರಿಕದ ಅತ್ಯಂತ ರಹಸ್ಯಮಯ ಮತ್ತು ಶಕ್ತಿಶಾಲಿ ವಿಮಾನಗಳಲ್ಲಿ ಒಂದಾದ ಬೋಯಿಂಗ್ E-4B(Boeing E-4B ) Nightwatch, ಅಥವಾ ಜನಪ್ರಿಯವಾಗಿ 'ಡೂಮ್ಸ್‌ಡೇ ಪ್ಲೇನ್' (Doomsday Plane) ಇತ್ತೀಚೆಗೆ ವಾಷಿಂಗ್ಟನ್ ಡಿಸಿ ಸಮೀಪದ ಜಾಯಿಂಟ್ ಬೇಸ್ ಆಂಡ್ರ್ಯೂಸ್‌ನಲ್ಲಿ ಕಾಣಿಸಿಕೊಂಡಿದ್ದು ಜಾಗತಿಕವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹೌದು, ಸುಮಾರು 51 ವರ್ಷಗಳ ಇತಿಹಾಸವಿರುವ ಈ ವಿಮಾನವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾಷಿಂಗ್ಟನ್ ಹತ್ತಿರಕ್ಕೆ ಸ್ಥಳಾಂತರಿಸಲು ನಿರ್ಧರಿಸಿರುವುದು ಆತಂಕ ಮತ್ತು ಕುತೂಹಲ ಎರಡನ್ನೂ ಮೂಡಿಸಿದೆ.

ಏನಿದು 'ಡೂಮ್ಸ್‌ಡೇ' ವಿಮಾನ?

ಇದನ್ನು "ಹಾರುವ ಪೆಂಟಗನ್" ಎಂದೂ ಕರೆಯಲಾಗುತ್ತದೆ. ಅಣುಯುದ್ಧ ಅಥವಾ ಯಾವುದೇ ದೊಡ್ಡ ಮಟ್ಟದ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನೆಲದ ಮೇಲಿನ ಕಮಾಂಡ್ ಸೆಂಟರ್‌ಗಳು ನಾಶವಾದರೆ, ಅಮೆರಿಕದ ಅಧ್ಯಕ್ಷರು ಮತ್ತು ರಕ್ಷಣಾ ಸಚಿವರು ಈ ವಿಮಾನದ ಮೂಲಕವೇ ಇಡೀ ದೇಶದ ಸೈನ್ಯವನ್ನು ನಿಯಂತ್ರಿಸಬಹುದು. ಇದು ಅಣು ಬಾಂಬ್ ಸ್ಫೋಟದಿಂದ ಉಂಟಾಗುವ ವಿದ್ಯುತ್ಕಾಂತೀಯ ಅಲೆಗಳನ್ನು (EMP) ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

ವಿಮಾನದ ವಿಶೇಷತೆಗಳು

ಈ ವಿಮಾನವು ಸತತವಾಗಿ 35 ಗಂಟೆಗಳ ಕಾಲ ಹಾರಾಟ ನಡೆಸಬಲ್ಲದು ಮತ್ತು ಆಗಸದಲ್ಲೇ ಇಂಧನ ಮರುಪೂರಣ ಮಾಡಿಕೊಂಡರೆ ಸತತ ಒಂದು ವಾರದವರೆಗೆ ಕೆಳಗಿಳಿಯದೆ ಹಾರಾಡಬಲ್ಲದು. ಇದರಲ್ಲಿ 67 ಉಪಗ್ರಹ ಡಿಶ್‌ಗಳು ಮತ್ತು ಆಂಟೆನಾಗಳಿದ್ದು, ಸಮುದ್ರದ ಆಳದಲ್ಲಿರುವ ಜಲಾಂತರ್ಗಾಮಿಗಳ ಜೊತೆಗೂ ಸಂವಹನ ನಡೆಸಬಲ್ಲ ಅತ್ಯಾಧುನಿಕ ತಂತ್ರಜ್ಞಾನವಿದೆ. ವಿಮಾನದ ಒಳಗೆ ಕಾನ್ಫರೆನ್ಸ್ ರೂಮ್‌ಗಳು, ಬ್ರೀಫಿಂಗ್ ಕೊಠಡಿಗಳು ಮತ್ತು 112 ಮಂದಿ ಸಿಬ್ಬಂದಿ ಇರಲು ವ್ಯವಸ್ಥೆಯಿದೆ.

ಟ್ರಂಪ್ ಈ ನಿರ್ಧಾರ ತೆಗೆದುಕೊಂಡಿದ್ದು ಏಕೆ?

ಜಾಗತಿಕ ಉದ್ವಿಗ್ನತೆ: ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಯುದ್ಧದ ಭೀತಿ ಹಾಗೂ ಇರಾನ್‌ನ ಪರಮಾಣು ತಾಣಗಳ ಮೇಲೆ ಅಮೆರಿಕ ದಾಳಿ ಮಾಡಬಹುದು ಎಂಬ ಊಹಾಪೋಹಗಳ ನಡುವೆ ಈ ವಿಮಾನವನ್ನು ಸಜ್ಜುಗೊಳಿಸಲಾಗಿದೆ.
ತುರ್ತು ಸಿದ್ಧತೆ: ವಾಷಿಂಗ್ಟನ್ ಸಮೀಪ ಈ ವಿಮಾನವಿರುವುದು ಅಧ್ಯಕ್ಷರಿಗೆ ಮತ್ತು ಉನ್ನತ ಮಿಲಿಟರಿ ಅಧಿಕಾರಿಗಳಿಗೆ ಯಾವುದೇ ಕ್ಷಣದಲ್ಲಿ ವಿಮಾನವೇರಿ ಕಾರ್ಯಾಚರಣೆ ನಡೆಸಲು ಅನುವು ಮಾಡಿಕೊಡುತ್ತದೆ.
ರಕ್ಷಣಾ ಸಂದೇಶ: ಇದು ಅಮೆರಿಕದ ಶತ್ರು ರಾಷ್ಟ್ರಗಳಿಗೆ 'ನಾವು ಯಾವುದೇ ಪರಿಸ್ಥಿತಿಗೂ ಸಿದ್ಧ' ಎಂಬ ಪ್ರಬಲ ಎಚ್ಚರಿಕೆಯ ಸಂದೇಶವನ್ನೂ ನೀಡುತ್ತದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net