'ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್' ಪ್ರಕಟಿಸಿರುವ ಅಧ್ಯಯನದ ಪ್ರಕಾರ, ಅಮೆರಿಕದಲ್ಲಿ 1980 ರಿಂದ 2007 ರವರೆಗೆ ಪ್ರತಿ 1,000 ಮಹಿಳೆಯರಿಗೆ ಜನನ ಪ್ರಮಾಣವು 65 ರಿಂದ 70 ರಷ್ಟರಲ್ಲೇ ಸ್ಥಿರವಾಗಿತ್ತು, ಆದರೆ 2007ರ ನಂತರ ಇದು ತೀವ್ರವಾಗಿ ಕುಸಿಯಲಾರಂಭಿಸಿ, 2024ರ ವೇಳೆಗೆ ಕೇವಲ 54ಕ್ಕೆ ಬಂದು ತಲುಪಿದೆ, ಅಂದರೆ ಕೇವಲ 17 ವರ್ಷಗಳಲ್ಲಿ ಶೇ. 22ರಷ್ಟು ದಾಖಲೆ ಇಳಿಕೆ ಕಂಡಿದೆ. ವಿಶೇಷವೆಂದರೆ, ಜಗತ್ತಿಗೆ 'ಐಫೋನ್' ಪರಿಚಯವಾಗಿದ್ದೂ ಸಹ ಇದೇ 2007ರಲ್ಲಿ. ಹೀಗಾಗಿ, ಜನಸಂಖ್ಯಾ ಕುಸಿತದ ಹಿಂದೆ ಐಫೋನ್‌ನಂತಹ ಸ್ಮಾರ್ಟ್‌ಫೋನ್‌ಗಳ ಪ್ರಭಾವ ಇರಬಹುದು ಎಂದು ಸಂಶೋಧಕರು ಬಲವಾಗಿ ಶಂಕಿಸಿದ್ದಾರೆ. ಆದರೆ ಇದೊಂದೇ ಅಂತಿಮ ಕಾರಣವಲ್ಲ ಎಂದು ಸ್ಪಷ್ಟಪಡಿಸಿರುವ ಸಂಶೋಧರು, 2008ರಲ್ಲಿ ಎದುರಾದ ಜಾಗತಿಕ ಆರ್ಥಿಕ ಹಿಂಜರಿತವೂ ಸಹ ಜನರ ಜೀವನದ ಮೇಲೆ ನೆಗಿಟಿವ್ ಪರಿಣಾಮವನ್ನು ಬೀರಿ ಜನನ ಪ್ರಮಾಣ ಇಳಿಕೆಗೆ ಮತ್ತೊಂದು ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಿಸಿದ್ದಾರೆ.