

ನೇಪಾಳ:
ಮಹಾ ಪ್ರವಾಹವು ನೇಪಾಳದ ಅಭಿವೃದ್ಧಿಯನ್ನು ಹಲವು ವರ್ಷಗಳಷ್ಟು ಹಿಂದಕ್ಕೆ ತಳ್ಳಿದೆ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಈ ದೇಶಕ್ಕೆ ಭಾರಿ ಪ್ರಮಾಣದ ಹಣಕಾಸಿನ ನೆರವು, ಕಾಲಮಿತಿಯ ಪುನರ್ನಿರ್ವಣ ಯೋಜನೆಗಳು ಹಾಗೂ ಅಂತಾರಾಷ್ಟ್ರೀಯ ಸಮುದಾಯದ ಸಹಕಾರ ಅಗತ್ಯವಿದೆ. ನೇಪಾಳ ಸರ್ಕಾರ ಈ ಬಿಕ್ಕಟ್ಟನ್ನು ಸಮರ್ಪಕವಾಗಿ ನಿರ್ವಹಿಸಿ, ಜನರಿಗೆ ನೆರವಿನ ಹಸ್ತ ಚಾಚಬೇಕಿದೆ. ಮುಂದಿನ ದಿನಗಳಲ್ಲಿ ಹವಾಮಾನ ವೈಪರೀತ್ಯ ತಡೆದುಕೊಳ್ಳಬಲ್ಲ ಮೂಲಸೌಕರ್ಯಗಳನ್ನು ನಿರ್ವಿುಸುವುದು ಅತ್ಯಂತ ಅಗತ್ಯವಾಗಿದೆ.
ಮಾಡುವ ಹೂಡಿಕೆಯು ಕಾಲಕ್ರಮೇಣ ಆರ್ಥಿಕ ಪ್ರತಿಫಲಗಳನ್ನು ನೀಡುತ್ತದೆ. ಸೇತುವೆ, ರಸ್ತೆ ಅಥವಾ ವಿದ್ಯುತ್ ಯೋಜನೆಯ ಮೇಲೆ 1 ರೂಪಾಯಿ ವೆಚ್ಚ ಮಾಡಿದರೆ, ವ್ಯಾಪಾರ, ಉದ್ಯೋಗ ಮತ್ತು ಉತ್ಪಾದಕತೆಯ ಮೂಲಕ ಅರ್ಥವ್ಯವಸ್ಥೆಗೆ ಹಲವಾರು ರೂಪಾಯಿಗಳು ಹಿಂತಿರುಗುತ್ತವೆ ಎಂದು ನಿರೀಕ್ಷಿಸಲಾಗುತ್ತದೆ. ಆದರೆ ನೇಪಾಳವು ಒಂದು ನಿರಾಸೆ ಮೂಡಿಸುವ ಸಮಸ್ಯೆಯನ್ನು ಎದುರಿಸುತ್ತಿದೆ. ಅದು ಮೂಲಸೌಕರ್ಯಗಳನ್ನು ನಿರ್ವಿುಸುತ್ತಲೇ ಇರುತ್ತದೆ, ಆದರೆ ಪ್ರಾಕೃತಿಕ ವಿಕೋಪಗಳು ಅವುಗಳನ್ನು ನಾಶಪಡಿಸುತ್ತಲೇ ಇರುತ್ತವೆ. ಈ ಚಕ್ರವು ಹೀಗೆ ಸಾಗುತ್ತಿದೆ. ಯೋಜನೆ ಸಿದ್ಧವಾಗುತ್ತದೆ, ಹಣ ಮಂಜೂರಾಗುತ್ತದೆ, ಸೇತುವೆ ಅಥವಾ ರಸ್ತೆ ನಿರ್ವಣವಾಗುತ್ತದೆ.
ಆದರೆ, ಆ ಹೂಡಿಕೆಯು ತನ್ನ ಸಂಪೂರ್ಣ ಆರ್ಥಿಕ ಮೌಲ್ಯವನ್ನು (ಪ್ರತಿಫಲವನ್ನು) ನೀಡುವ ಮುಂಚೆಯೇ ಪ್ರವಾಹ, ಭೂಕುಸಿತ ಅಥವಾ ಭೂಕಂಪವು ಅದನ್ನು ಹಾನಿಗೊಳಿಸುತ್ತದೆ. ನಂತರ ಮತ್ತೆ ಪುನರ್ನಿರ್ವಣ ಕಾರ್ಯ ಪ್ರಾರಂಭವಾಗುತ್ತದೆ. ಪರಿಣಾಮವಾಗಿ, ನೇಪಾಳವು ತನ್ನ ಹೂಡಿಕೆಯ ಸಂಪೂರ್ಣ ಪ್ರತಿಫಲವನ್ನು ಪಡೆಯಲಾಗದೆ, ಪದೇಪದೆ ಒಂದೇ ಮೂಲಸೌಕರ್ಯದ ಮೇಲೆ ಹಣ ವೆಚ್ಚ ಮಾಡುತ್ತಿದೆ. ಪದೇಪದೆ ಸಂಭವಿಸುವ ತೀವ್ರ ಸ್ವರೂಪದ ನೈಸರ್ಗಿಕ ವಿಕೋಪಗಳು ನೇಪಾಳದ ಆರ್ಥಿಕತೆಗೆ ಪ್ರಮುಖ ಅಪಾಯವೆಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಗುರುತಿಸಿದೆ.
ಐಎಂಎಫ್ನ ‘ಡಿಸಾಸ್ಟರ್ ಸ್ಟ್ರೆಸ್ ಟೆಸ್ಟ್’ ಪ್ರಕಾರ, ಇಂತಹ ಆಘಾತಗಳು ದೇಶದ ಸಾಲದ ಅನುಪಾತಕ್ಕೆ ಜಿಡಿಪಿಯ ಶೇ.10ರಷ್ಟನ್ನು ಸೇರಿಸಬಹುದು, ಹಾಗೆಯೇ ನೈಜ ಜಿಡಿಪಿ ಬೆಳವಣಿಗೆಯನ್ನು ಶೇ.1.5ರಷ್ಟು ಮತ್ತು ರಫ್ತನ್ನು ಶೇ.3.5ರಷ್ಟು ತಗ್ಗಿಸಬಹುದು.
ಹಿಮಾಲಯದ ತಪ್ಪಲಿನಲ್ಲಿ ರುವ ಪುಟ್ಟರಾಷ್ಟ್ರ ನೇಪಾಳದಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತಗಳು ದೇಶದ ಆರ್ಥಿಕ ಬೆನ್ನೆಲುಬನ್ನೇ ಮುರಿದುಹಾಕಿವೆ. ಭೌಗೋಳಿಕ ಸೂಕ್ಷ ಮತ್ತು ಹವಾಮಾನ ವೈಪರೀತ್ಯಗಳಿಂದ ಉಂಟಾಗುವ ಈ ಪ್ರವಾಹಗಳು ನೇಪಾಳದ ಪ್ರಮುಖ ಕ್ಷೇತ್ರಗಳ ಮೇಲೆ ತೀವ್ರವಾದ ಹೊಡೆತ ನೀಡಿವೆ. ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು, ಸಂಪರ್ಕ ಸೇತುವೆಗಳು ಪ್ರವಾಹದ ರಭಸಕ್ಕೆ ಕೊಚ್ಚಿಹೋಗಿವೆ. ಚೀನಾ ಮತ್ತು ಭಾರತದೊಂದಿಗಿನ ಪ್ರಮುಖ ವ್ಯಾಪಾರ ಮಾರ್ಗಗಳು ಕಡಿತಗೊಂಡು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ನದಿ ತೀರದ ಸಾವಿರಾರು ಮನೆಗಳು, ಶಾಲೆಗಳು ಹಾಗೂ ಆಸ್ಪತ್ರೆಗಳು ಮಣ್ಣು ಮತ್ತು ನೀರಿನಲ್ಲಿ ಮುಳುಗಡೆಯಾಗಿವೆ.
ಪ್ರವಾಹದ ನೀರಿನೊಂದಿಗೆ ಬರುವ ಭಾರೀ ಪ್ರಮಾಣದ ಹೂಳು, ಬಂಡೆಗಳು ಮತ್ತು ಮರಗಳು- ಡ್ಯಾಮ್ಳು, ಟರ್ಬೆನ್ಗಳು ಹಾಗೂ ಪವರ್ಹೌಸ್ಗಳನ್ನು ಹಾನಿಗೊಳಿಸಿವೆ. ಅಲ್ಲದೆ, ನೇಪಾಳದ ತೇರಾಯಿ ಬಯಲು ಪ್ರದೇಶ ಹಾಗೂ ನದಿ ಕಣಿವೆಗಳ ಫಲವತ್ತಾದ ಕೃಷಿ ಭೂಮಿ ಮುಳುಗಡೆಯಾಗಿದೆ. ಭತ್ತ, ಮೆಕ್ಕೆಜೋಳ ಮತ್ತು ತರಕಾರಿ ಬೆಳೆಗಳು ಕೊಚ್ಚಿಹೋಗಿ, ಜಮೀನುಗಳಲ್ಲಿ ಮಣ್ಣು ಶೇಖರಣೆಯಾಗಿ ಮುಂದಿನ ಕೃಷಿಗೆ ಯೋಗ್ಯವಲ್ಲದಂತಾಗಿದೆ. ಇದರಿಂದ ರೈತರು ಸಾಲದ ಸುಳಿಗೆ ಸಿಲುಕುವುದರ ಜತೆಗೆ ಆಹಾರ ಧಾನ್ಯಗಳ ಕೊರತೆ ಮತ್ತು ಬೆಲೆ ಏರಿಕೆ ಭೀತಿ ಕಾಡುತ್ತಿದೆ. ನೀರಿನ ಪೈಪ್ಲೈನ್ಗಳು ಹಾಳಾಗಿದ್ದು, ಸಂಪರ್ಕ ಗೋಪುರಗಳು ಬಿದ್ದಿರುವುದರಿಂದ ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳು ಸ್ಥಗಿತಗೊಂಡಿವೆ.
ಮೂಲಸೌಕರ್ಯ: ಹೆದ್ದಾರಿಗಳು, ಪ್ರಮುಖ ರಸ್ತೆಗಳು ಮತ್ತು ನದಿಗಳಿಗೆ ಸಂಪರ್ಕ ಕಲ್ಪಿಸುವ ಹಲವು ಸೇತುವೆಗಳು ಕೊಚ್ಚಿಹೋಗಿವೆ. ಇದರಿಂದಾಗಿ ರಾಜಧಾನಿ ಕಠ್ಮಂಡು ಸೇರಿದಂತೆ ದೇಶದ ಪ್ರಮುಖ ನಗರಗಳ ಸಂಪರ್ಕ ಕಡಿತಗೊಂಡಿದೆ. ರಸ್ತೆ ಸಾರಿಗೆ ಬಂದ್ ಆಗಿರುವುದರಿಂದ ಸರಕು ಸಾಗಣೆ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ಉತ್ಪಾದನೆ ಸ್ಥಗಿತಗೊಂಡು ವ್ಯಾಪಾರಸ್ಥರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ನೇಪಾಳದಲ್ಲಿ ಸಂಭವಿಸಿದ ಮಹಾ ಪ್ರವಾಹ ಮತ್ತು ಭೂಕುಸಿತವು ದೇಶದ ಜಲವಿದ್ಯುತ್ ಕ್ಷೇತ್ರಕ್ಕೆ ತೀವ್ರ ಸ್ವರೂಪದ ಧಕ್ಕೆಯನ್ನುಂಟುಮಾಡಿದೆ. ನೇಪಾಳ ತನ್ನ ಒಟ್ಟು ವಿದ್ಯುತ್ ಉತ್ಪಾದನೆಯ ಶೇ.90ಕ್ಕೂ ಹೆಚ್ಚು ಭಾಗಕ್ಕೆ ನದಿಗಳ ಮೇಲಿನ ಜಲವಿದ್ಯುತ್ ಯೋಜನೆಗಳನ್ನೇ ನೆಚ್ಚಿಕೊಂಡಿರುವುದರಿಂದ, ಈ ವಿಕೋಪವು ಇಡೀ ದೇಶದ ಇಂಧನ ಕ್ಷೇತ್ರವನ್ನು ಕುಸಿದುಬೀಳುವಂತೆ ಮಾಡಿದೆ.
ಭಾರಿ ಮಳೆಯಿಂದಾಗಿ ನದಿಗಳಲ್ಲಿ ನೀರಿನ ಹರಿವು ಅಪಾರವಾಗಿ ಹೆಚ್ಚಿ, ದೊಡ್ಡ ದೊಡ್ಡ ಕಲ್ಲುಗಳು, ಮಣ್ಣು ಮತ್ತು ಮರಗಳು ಕೊಚ್ಚಿಕೊಂಡು ಬಂದಿವೆ. ಇವು ಜಲವಿದ್ಯುತ್ ಸ್ಥಾವರಗಳ ಟರ್ಬೆನ್, ನೀರು ಸಂಗ್ರಹಿಸುವ ಡ್ಯಾಮ್ಳು ಮತ್ತು ಪೆನ್ಸ್ಟಾಕ್ ಪೈಪ್ಗಳಲ್ಲಿ ಸಿಲುಕಿಕೊಂಡು ಯಂತ್ರೋಪಕರಣಗಳನ್ನು ಸಂಪೂರ್ಣವಾಗಿ ಹಾಳುಮಾಡಿವೆ.