ಟ್ರಂಪ್‌ಗೆ ಬಿಗ್ ಶಾಕ್! ಇರಾನ್ ಯುದ್ಧಕ್ಕೆ ಬ್ರೇಕ್? ಅಮೆರಿಕ ಸೆನೆಟ್‌ನಲ್ಲಿ ಮಹತ್ವದ ನಿರ್ಣಯ ಅಂಗೀಕಾರ

Iran War
Iran War
Published on
ವಾಷಿಂಗ್ಟನ್: ಇರಾನ್(Iran War) ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸುತ್ತಿರುವ ಸೇನಾ ಕಾರ್ಯಾಚರಣೆಗೆ ತಾತ್ಕಾಲಿಕ ತಡೆ ನೀಡುವ ಹಾಗೂ ಮುಂದಿನ ಯಾವುದೇ ಸೇನಾ ಕ್ರಮಕ್ಕೆ ಕಾಂಗ್ರೆಸ್ ಅನುಮತಿ ಕಡ್ಡಾಯಗೊಳಿಸುವ ನಿರ್ಣಯವನ್ನು ಅಮೆರಿಕ ಸೆನೆಟ್ ಮಂಗಳವಾರ ಅಂಗೀಕರಿಸಿದೆ. ಸೆನೆಟ್‌ನಲ್ಲಿ 50-48 ಮತಗಳ ಅಂತರದಲ್ಲಿ ನಿರ್ಣಯಕ್ಕೆ ಒಪ್ಪಿಗೆ ದೊರೆತಿದೆ. ಈ ನಿರ್ಣಯವನ್ನು ಈಗಾಗಲೇ ಪ್ರತಿನಿಧಿ ಸಭೆಯೂ ಅನುಮೋದಿಸಿತ್ತು.

ಟ್ರಂಪ್‌ಗೆ ರಾಜಕೀಯ ಹಿನ್ನಡೆ

ರಿಪಬ್ಲಿಕನ್ ಪಕ್ಷಕ್ಕೆ ಸೆನೆಟ್‌ನಲ್ಲಿ ಬಹುಮತ ಇದ್ದರೂ, ನಾಲ್ವರು ರಿಪಬ್ಲಿಕನ್ ಸದಸ್ಯರು ಪಕ್ಷದ ವಿರುದ್ಧ ಮತ ಚಲಾಯಿಸಿ ನಿರ್ಣಯವನ್ನು ಬೆಂಬಲಿಸಿದರು. ಲೂಯಿಸಿಯಾನಾದ ಬಿಲ್ ಕ್ಯಾಸಿಡಿ, ಅಲಾಸ್ಕಾದ ಲಿಸಾ ಮುರ್ಕೋವ್ಸ್ಕಿ, ಮೈನ್‌ನ ಸುಸನ್ ಕಾಲಿನ್ಸ್ ಹಾಗೂ ಕೆಂಟಕಿಯ ರ್ಯಾಂಡ್ ಪಾಲ್ ಬೆಂಬಲ ನೀಡಿದರು. ಇದೇ ವೇಳೆ ಪೆನ್ಸಿಲ್ವೇನಿಯಾದ ಡೆಮಾಕ್ರಾಟ್ ಸದಸ್ಯ ಜಾನ್ ಫೆಟರ್‌ಮನ್ ಮಾತ್ರ ನಿರ್ಣಯದ ವಿರುದ್ಧ ಮತ ಚಲಾಯಿಸಿದರು.

ಕಾಂಗ್ರೆಸ್ ಅನುಮತಿ ಕಡ್ಡಾಯ

ನಿರ್ಣಯದ ಪ್ರಕಾರ, ಕಾಂಗ್ರೆಸ್ ಯುದ್ಧ ಘೋಷಣೆ ಅಥವಾ ವಿಶೇಷ ಅನುಮತಿ ನೀಡದ ಹೊರತು ಟ್ರಂಪ್ ಇರಾನ್ ವಿರುದ್ಧ ಯಾವುದೇ ಹೊಸ ಸೇನಾ ಕ್ರಮ ಕೈಗೊಳ್ಳಬಾರದು. ಆದರೆ ಅಮೆರಿಕ ಅಥವಾ ಅದರ ಮಿತ್ರ ರಾಷ್ಟ್ರಗಳ ಮೇಲೆ ತಕ್ಷಣದ ದಾಳಿ ಸಂಭವಿಸುವ ಅಪಾಯ ಇದ್ದರೆ ಸೀಮಿತ ಸೇನಾ ಕ್ರಮಕ್ಕೆ ಅವಕಾಶ ನೀಡಲಾಗಿದೆ.

ಸ್ವಿಟ್ಜರ್ಲೆಂಡ್ ಮಾತುಕತೆ ಮಧ್ಯೆ ಬೆಳವಣಿಗೆ

ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ವಿರಾಮ ಒಪ್ಪಂದದ ಕುರಿತು ಸ್ವಿಟ್ಜರ್ಲೆಂಡ್‌ನಲ್ಲಿ ಮಾತುಕತೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಈ ನಿರ್ಣಯ ಅಂಗೀಕಾರವಾಗಿದೆ. ಕೆಲವು ರಿಪಬ್ಲಿಕನ್ ಸದಸ್ಯರು ಈ ನಿರ್ಣಯದಿಂದ ಮಾತುಕತೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂದು ವಾದಿಸಿದರು.
ಇರಾನ್ ಈ ನಿರ್ಣಯವನ್ನು ನೋಡಿ ಮಾತುಕತೆಯಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎಂದು ಸೆನೆಟರ್ ಜೇಮ್ಸ್ ರಿಷ್ ಎಚ್ಚರಿಕೆ ನೀಡಿದರು. ಟ್ರಂಪ್ ಈ ನಿರ್ಣಯಕ್ಕೆ ವೀಟೋ ಹಾಕುವ ಸಾಧ್ಯತೆ ಇರುವುದರಿಂದ ಇದರ ಪರಿಣಾಮ ಸೀಮಿತವಾಗಿರಬಹುದು ಎಂದೂ ಅವರು ಹೇಳಿದರು.

ಯುದ್ಧದ ವಿರುದ್ಧ ಹೆಚ್ಚುತ್ತಿರುವ ಒತ್ತಡ

ಇರಾನ್ ವಿರುದ್ಧದ ಯುದ್ಧ ಅಮೆರಿಕದಲ್ಲಿ ಜನಪ್ರಿಯವಾಗಿಲ್ಲ. ರಾಯಿಟರ್ಸ್-ಇಪ್ಸೋಸ್ ಸಮೀಕ್ಷೆಯ ಪ್ರಕಾರ ಕೇವಲ ಶೇ.24 ಅಮೆರಿಕನ್ನರು ಮಾತ್ರ ಈ ಯುದ್ಧದ ವೆಚ್ಚ ಸಮರ್ಥನೀಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಯುದ್ಧದ ಪರಿಣಾಮವಾಗಿ ತೈಲ, ನೈಸರ್ಗಿಕ ಅನಿಲ ಹಾಗೂ ರಸಗೊಬ್ಬರಗಳ ಬೆಲೆ ಏರಿಕೆಯಾಗಿದೆ. ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಯ ಹಿನ್ನೆಲೆಯಲ್ಲಿ ರಿಪಬ್ಲಿಕನ್ ಸದಸ್ಯರ ಮೇಲೂ ಮತದಾರರ ಒತ್ತಡ ಹೆಚ್ಚಾಗಿದೆ.

‘ಯುದ್ಧ ಘೋಷಿಸುವ ಅಧಿಕಾರ ಕಾಂಗ್ರೆಸ್‌ಗೆ’

ಡೆಮಾಕ್ರಾಟ್ ಸೆನೆಟರ್ ಟಿಮ್ ಕೈನ್, ಯುದ್ಧ ಘೋಷಿಸುವ ಅಧಿಕಾರ ಅಧ್ಯಕ್ಷರಿಗೆ ಅಲ್ಲ, ಕಾಂಗ್ರೆಸ್‌ಗೆ ಸೇರಿದ್ದು ಎಂದು ಹೇಳಿದರು. ದೇಶವನ್ನು ಯುದ್ಧಕ್ಕೆ ಕೊಂಡೊಯ್ಯುವ ನಿರ್ಧಾರ ಒಬ್ಬ ವ್ಯಕ್ತಿಯ ಕೈಯಲ್ಲಿ ಇರಬಾರದು ಎಂಬ ಕಾರಣಕ್ಕಾಗಿಯೇ ಅಮೆರಿಕ ಸಂವಿಧಾನದಲ್ಲಿ ಈ ಅಧಿಕಾರವನ್ನು ಕಾಂಗ್ರೆಸ್‌ಗೆ ನೀಡಲಾಗಿದೆ ಎಂದು ಅವರು ಹೇಳಿದರು. ಡೆಮಾಕ್ರಾಟ್ ನಾಯಕ ಚಕ್ ಶೂಮರ್ ಕೂಡ ಟ್ರಂಪ್ ಅವರ ಯುದ್ಧ ನೀತಿಯನ್ನು ಟೀಕಿಸಿ, ಕಾಂಗ್ರೆಸ್ ತನ್ನ ಅಧಿಕಾರವನ್ನು ಮರಳಿ ಪಡೆಯಲು ಹೋರಾಟ ಮುಂದುವರಿಸಲಿದೆ ಎಂದು ಹೇಳಿದರು,(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net