ದೊಡ್ಡಣ್ಣ ಡ್ರ್ಯಾಗನ್​ ದೋಸ್ತಿ! ಜಿನ್​ಪಿಂಗ್​ಗೆ ಟ್ರಂಪ್ ಕೆಂಪುಹಾಸಿನ ಸ್ವಾಗತ ನೀಡಿದ್ದೇಕೆ?

ಅಮೆರಿಕದಲ್ಲಿ ವಿದೇಶಿ ನಾಯಕರು ಅಧ್ಯಕ್ಷರನ್ನು ಭೇಟಿ ಮಾಡಲು ಶ್ವೇತಭವನಕ್ಕೆ ಬರುತ್ತಾರೆಯೇ ಹೊರತು, ಶ್ವೇತಭವನವೇ ಅವರ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ಹೋಗುವುದಿಲ್ಲ ಎಂಬುದು ದಶಕಗಳ ಹಳೆಯ ಸಂಪ್ರದಾಯ. ಟ್ರಂಪ್ ಶಿಷ್ಟಾಚಾರವನ್ನು ಬದಿಗಿಟ್ಟು ನಡೆದುಕೊಂಡಿರುವುದು ಸೌಜನ್ಯಕ್ಕಷ್ಟೇ ಸೀಮಿತವಲ್ಲ, ಬದಲಿಗೆ ಚೀನಾದ ಮಹತ್ವವನ್ನು ಬಿಂಬಿಸುವ ರಾಜತಾಂತ್ರಿಕ ಸಂಕೇತವೆಂದು ಪರಿಗಣಿಸಲಾಗುತ್ತಿದೆ.
Representative image
ಸಾಂದರ್ಭಿಕ ಚಿತ್ರ
Published on: 

ಅಮೆರಿಕದಲ್ಲಿ ವಿದೇಶಿ ನಾಯಕರು ಅಧ್ಯಕ್ಷರನ್ನು ಭೇಟಿ ಮಾಡಲು ಶ್ವೇತಭವನಕ್ಕೆ ಬರುತ್ತಾರೆಯೇ ಹೊರತು, ಶ್ವೇತಭವನವೇ ಅವರ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ಹೋಗುವುದಿಲ್ಲ ಎಂಬುದು ದಶಕಗಳ ಹಳೆಯ ಸಂಪ್ರದಾಯ. ಟ್ರಂಪ್ ಶಿಷ್ಟಾಚಾರವನ್ನು ಬದಿಗಿಟ್ಟು ನಡೆದುಕೊಂಡಿರುವುದು ಸೌಜನ್ಯಕ್ಕಷ್ಟೇ ಸೀಮಿತವಲ್ಲ, ಬದಲಿಗೆ ಚೀನಾದ ಮಹತ್ವವನ್ನು ಬಿಂಬಿಸುವ ರಾಜತಾಂತ್ರಿಕ ಸಂಕೇತವೆಂದು ಪರಿಗಣಿಸಲಾಗುತ್ತಿದೆ. ಅಷ್ಟಕ್ಕೂ ಜಿನ್​ಪಿಂಗ್​ಗೆ ಟ್ರಂಪ್ ಕೆಂಪುಹಾಸಿನ ಸ್ವಾಗತ ನೀಡಿದ್ದೇಕೆ? ಅಮೆರಿಕ ಮತ್ತು ಚೀನಾದ ನಡುವೆ ಬಾಂಧವ್ಯ ಹೆಚ್ಚುತ್ತಿದೆಯೇ? ಈ ಬೆಳವಣಿಗೆ ಕುರಿತಾದ ವಿವರ ಇಲ್ಲಿದೆ.

ಯೂಕ್ರೇನ್ ಅಧ್ಯಕ್ಷ ಝೆಲೆನ್ಸಿ್ಕ ಅವರೊಂದಿಗೆ ತೀವ್ರ ವಾಗ್ವಾದ, ಜಪಾನ್ ಪ್ರಧಾನಿಯನ್ನು ಕೀಳಾಗಿ ಕಾಣುವುದು... ಹೀಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹುತೇಕ ವಿದೇಶಿ ನಾಯಕರೊಂದಿಗೆ ಅವಮಾನಕರ ಹಾಗೂ ವಿಚಿತ್ರ ರೀತಿಯಲ್ಲೇ ವರ್ತಿಸುತ್ತ ಬಂದಿದ್ದಾರೆ. ಆದರೆ ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಅವರಿಗೆ ವಾಷಿಂಗ್ಟನ್​ನಲ್ಲಿ ದೊರೆತ ಅದ್ದೂರಿ ಸ್ವಾಗತ ಹಾಗೂ ಟ್ರಂಪ್ ತೋರಿದ ಆತ್ಮೀಯತೆ ಈಗ ಜಾಗತಿಕ ಚರ್ಚೆಯ ವಿಷಯ. ಡೊನಾಲ್ಡ್ ಟ್ರಂಪ್ ಆಹ್ವಾನದ ಮೇರೆಗೆ ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಸೆಪ್ಟೆಂಬರ್ 23ರಿಂದ 25ರವರೆಗೆ ಮೂರು ದಿನಗಳ ಅಧಿಕೃತ ಭೇಟಿ ನಿಮಿತ್ತ ವಾಷಿಂಗ್ಟನ್​ಗೆ ಆಗಮಿಸಿದ್ದರು. ‘ಅಮೆರಿಕ ಮತ್ತು ಚೀನಾ ನಡುವಿನ ಬಾಂಧವ್ಯ ಹಿಂದೆಂದಿಗಿಂತಲೂ ಈಗ ಅತ್ಯುತ್ತಮವಾಗಿದೆ’ ಎಂದು ಟ್ರಂಪ್ ಬಣ್ಣಿಸಿದ್ದಾರೆ.

ಷಿ ಜಿನ್​ಪಿಂಗ್ ಅವರೊಂದಿಗಿನ ಭೇಟಿಯ ವೇಳೆ ದ್ವಿಪಕ್ಷೀಯ ಸಂಬಂಧಗಳನ್ನು ಪರಾಮಶಿಸಿದ ಅವರು, ಮುಂದಿನ ಪೀಳಿಗೆಯ ಸಮೃದ್ಧಿ ಮತ್ತು ಭದ್ರತೆಗಾಗಿ ಉಭಯ ದೇಶಗಳು ಭವಿಷ್ಯದಲ್ಲಿ ಒಟ್ಟಾಗಿ ಸಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಅಮೆರಿಕ-ಚೀನಾ ಪ್ರತಿಸ್ಪರ್ಧಿಗಳಾಗದೆ ಸಹಯೋಗಿಗಳಾಗಬೇಕು’ ಎಂದು ಜಿನ್​ಪಿಂಗ್ ಹೇಳಿದ್ದಾರೆ. ವಿಶ್ವದ ಎರಡು ಬಲಾಢ್ಯ ಆರ್ಥಿಕ ಶಕ್ತಿಗಳು ಪರಸ್ಪರ ಸಹಕಾರದ ಮಾರ್ಗದಲ್ಲಿ ಸಾಗುತ್ತಿವೆಯೇ ಅಥವಾ ಇದು ಕೂಡ ಟ್ರಂಪ್ ತಂತ್ರಗಾರಿಕೆಯ ಭಾಗವೇ ಎಂಬ ಸಂಗತಿ ಕುತೂಹಲಕ್ಕೆ ಕಾರಣವಾಗಿದೆ.

ಅಮೆರಿಕದ ಥಿಂಕ್​ಟ್ಯಾಂಕ್ ‘ಸೆಂಟರ್ ಫಾರ್ ಸ್ಟ್ರಾಟೆಜಿಕ್ ಆಂಡ್ ಇಂಟರ್ನ್ಯಾಷನಲ್ ಸ್ಟಡೀಸ್’ ವರದಿಯ ಪ್ರಕಾರ, ಸುಂಕಗಳ ಏಕಪಕ್ಷೀಯ ಭಾರೀ ಒತ್ತಡದಿಂದಾಗಿ ಚೀನಾ ಮಣಿಯುತ್ತದೆ ಎಂದು ಟ್ರಂಪ್ ಆಡಳಿತ ನಿರೀಕ್ಷಿಸಿತ್ತು. ಆದರೆ ಹಾಗಾಗಲಿಲ್ಲ. ಈ ವರ್ಷ ಚೀನಾದ ರಫ್ತು ಶೇಕಡ 28ರಷ್ಟು ಹೆಚ್ಚಾಗಿದೆ. ಆದ್ದರಿಂದ ಚೌಕಾಶಿ ವಿಚಾರದಲ್ಲಿ ಜಿನ್​ಪಿಂಗ್ ಸ್ಥಾನವು ಟ್ರಂಪ್​ಗಿಂತ ಬಲವಾಗಿ ಕಾಣುತ್ತಿದೆ.

ವ್ಯಾಪಾರ ಕದನ ವಿರಾಮ

ಟ್ರಂಪ್ ಕಳೆದ ವರ್ಷ ಚೀನಾ, ಭಾರತ ಸೇರಿದಂತೆ 90 ದೇಶಗಳ ಮೇಲೆ ಸುಂಕ ವಿಧಿಸಿದ್ದರು. ಚೀನಾ ಕೂಡ ಅಮೆರಿಕದ ವಿರುದ್ಧ ಪ್ರತೀಕಾರವಾಗಿ ಸುಂಕಗಳನ್ನು ಹೇರಿತು. ಇಬ್ಬರ ನಡುವೆ ‘ಸುಂಕ ಸಮರ’ ಆರಂಭವಾಯಿತು. ಇದರಿಂದ ವ್ಯಾಪಾರದ ಮೇಲೆ ಪರಿಣಾಮ ಬೀರಿದ್ದಷ್ಟೇ ಅಲ್ಲದೆ, ಅಗತ್ಯ ವಸ್ತುಗಳ ಪೂರೈಕೆಯೂ ಸ್ಥಗಿತಗೊಳ್ಳತೊಡಗಿತು. ಆದರೆ, ದಕ್ಷಿಣ ಕೊರಿಯಾದ ಬುಸಾನ್​ನಲ್ಲಿ 2025ರ ಅಕ್ಟೋಬರ್​ನಲ್ಲಿ ನಡೆದ ಟ್ರಂಪ್ ಮತ್ತು ಜಿನ್​ಪಿಂಗ್ ನಡುವಿನ ಸಭೆಯಲ್ಲಿ ‘ವ್ಯಾಪಾರ ಕದನ ವಿರಾಮ’, ಅಂದರೆ ಸುಂಕ ಸಮರವನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಒಪ್ಪಂದವಾಯಿತು. ಕೃಷಿ ಉತ್ಪನ್ನಗಳು, ನಿರ್ಣಾಯಕ ಖನಿಜಗಳು, ತಂತ್ರಜ್ಞಾನ ಮುಂತಾದ ವಿಷಯಗಳ ಮೇಲೆ ತಾತ್ಕಾಲಿಕ ಒಪ್ಪಂದಗಳು ಏರ್ಪಟ್ಟವು.

ಇದರ ಭಾಗವಾಗಿ ಚೀನಾವು ಅಪರೂಪದ ಭೂ ಖನಿಜಗಳ ರಫ್ತು ನಿಯಂತ್ರಣವನ್ನು ಒಂದು ವರ್ಷದವರೆಗೆ ಮುಂದೂಡಿತ್ತು, ಈ ಗಡುವು ನವೆಂಬರ್ 10 ರಂದು ಕೊನೆಗೊಳ್ಳಲಿದೆ. ಅಪರೂಪದ ಭೂ ಖನಿಜಗಳ ಪೂರೈಕೆ ನಿರಂತರವಾಗಿರಬೇಕು ಎಂಬುದು ಟ್ರಂಪ್ ಬಯಕೆಯಾಗಿದೆ. ಅಮೆರಿಕವು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಅಪರೂಪದ ಭೂ ಖನಿಜಗಳಲ್ಲಿ ಶೇಕಡ 70 ರಷ್ಟು ಪಾಲು ಚೀನಾದಿಂದಲೇ ಬರುತ್ತದೆ. ಒಂದು ವೇಳೆ ಚೀನಾ ಈ ಪೂರೈಕೆಯನ್ನು ಸ್ಥಗಿತಗೊಳಿಸಿದರೆ, ಅಮೆರಿಕದ ಕಾರುಗಳು, ಶಸ್ತ್ರಾಸ್ತ್ರಗಳು, ಏರೋಸ್ಪೇಸ್ ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣಗಳ ಉತ್ಪಾದನೆ ತೀವ್ರವಾಗಿ ಕುಂಠಿತಗೊಳ್ಳಲಿದೆ.

ಹೀಗಿತ್ತು ಸ್ವಾಗತ

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಿಷ್ಟಾಚಾರವನ್ನು ಬದಿಗಿರಿಸಿ, ಷಿ ಜಿನ್​ಪಿಂಗ್ ಅವರನ್ನು ಸೆ.23ರಂದು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಮಿಲಿಟರಿ ಬ್ಯಾಂಡ್​ನೊಂದಿಗೆ ಅವರನ್ನು ಬರಮಾಡಿಕೊಳ್ಳಲಾಯಿತು. ವಿದೇಶಿ ನಾಯಕರೊಬ್ಬರನ್ನು ಸ್ವಾಗತಿಸಲು ಅಮೆರಿಕ ಅಧ್ಯಕ್ಷರು ವಿಮಾನ ನಿಲ್ದಾಣಕ್ಕೆ ಹೋಗುವುದು ಅತ್ಯಂತ ಅಪರೂಪದ ಸಂಗತಿಯಾಗಿದೆ. 2025ರ ಆಗಸ್ಟ್​ನಲ್ಲಿ ಟ್ರಂಪ್ ಅವರು ಅಲಾಸ್ಕಾದ ಏರ್​ಫೀಲ್ಡ್​ನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರನ್ನು ಸ್ವಾಗತಿಸಿದ್ದರು. ಆದರೆ ಅದು ತಟಸ್ಥ ಸ್ಥಳದಲ್ಲಿ (ನ್ಯೂಟ್ರಲ್ ವೆನ್ಯೂ) ನಡೆದ ವಿಶೇಷ ಸಭೆಯಾಗಿತ್ತೇ ವಿನಃ ಯಾವುದೇ ಅಧಿಕೃತ ಸರ್ಕಾರಿ ಭೇಟಿ ಆಗಿರಲಿಲ್ಲ.

ದೊಡ್ಡ ಒಪ್ಪಂದ ಘೊಷಣೆ

ಟ್ರಂಪ್ ಅವರ ಬೀಜಿಂಗ್ ಭೇಟಿಯ ನಂತರ (2026ರ ಮೇ) ವೈಟ್​ಹೌಸ್ ನೀಡಿದ ಮಾಹಿತಿಯ ಪ್ರಕಾರ, 200 ಬೋಯಿಂಗ್ ವಿಮಾನಗಳು ಹಾಗೂ ಸೋಯಾಬೀನ್ ಮೇಲಿನ ಒಪ್ಪಂದವಲ್ಲದೆ, 2026-28ರವರೆಗೆ ಚೀನಾ ಪ್ರತಿ ವರ್ಷ ಅಮೆರಿಕದಿಂದ 17 ಶತಕೋಟಿ ಡಾಲರ್ ಮೌಲ್ಯದ ಕೃಷಿ ಉತ್ಪನ್ನಗಳನ್ನು ಖರೀದಿಸಲಿದೆ. ಆ ಸಮಯದಲ್ಲಿ ಚೀನಾದ ವಾಣಿಜ್ಯ ಸಚಿವಾಲಯವು ಮೊತ್ತವನ್ನೂ ದೃಢಪಡಿಸಲಿಲ್ಲ ಮತ್ತು ಸೋಯಾಬೀನ್ ಹೆಸರನ್ನೂ ಪ್ರಸ್ತಾಪಿಸಲಿಲ್ಲ. ಕೃಷಿ ವ್ಯಾಪಾರವನ್ನು ಹೆಚ್ಚಿಸುವುದು ಮತ್ತು ವಿಮಾನ ಒಪ್ಪಂದದ ಬಗ್ಗೆ ಮಾತ್ರ ಮಾತನಾಡಿತು. ಚೀನಾದೊಂದಿಗಿನ ವ್ಯಾಪಾರ ಕೊರತೆ ನೀಗಿಸಲು ಹಾಗೂ ನವೆಂಬರ್​ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಯಲ್ಲಿ ತಮಗೆ ಪೂರಕ ವಾತಾವರಣ ಸೃಷ್ಟಿಯಾಗಲು ಈ ಒಪ್ಪಂದ ನಡೆಯಬೇಕು ಅಥವಾ ಸಕಾರಾತ್ಮಕ ಬೆಳವಣಿಗೆಯಾಗಬೇಕು ಎಂಬುದು ಟ್ರಂಪ್ ಉದ್ದೇಶವಾಗಿದೆ.

ಚೀನಾದೊಂದಿಗೆ ಎಐ ಹಾಟ್​ಲೈನ್

ಅಮೆರಿಕವು ಚೀನಾದೊಂದಿಗೆ ಎಐ ಹಾಟ್​ಲೈನ್ ಸ್ಥಾಪಿಸಲು ಶಿಫಾರಸು ಮಾಡಿದೆ. ಎಐ ಪರೀಕ್ಷೆ ಮತ್ತು ಅಭಿವೃದ್ಧಿಯ ಸಮಯದಲ್ಲಿ ರಾಷ್ಟ್ರೀಯ ಭದ್ರತೆಗೆ ಅಪಾಯ ತಂದೊಡ್ಡುವಂತಹ ಯಾವುದೇ ಘಟನೆ ಸಂಭವಿಸಿದರೆ, ಈ ದೇಶಗಳು ಪರಸ್ಪರ ಸೂಚನೆ ನೀಡಿ ಮಾಹಿತಿ ವಿನಿಮಯ ಮಾಡಿಕೊಳ್ಳಲಿವೆ. ಸೆಪ್ಟೆಂಬರ್ 20ರಂದು ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಮತ್ತು ಚೀನಾದ ಉಪ ಪ್ರಧಾನಿ ಹೀ ಲಿಫೆಂಗ್ ಈ ಕುರಿತು ಚರ್ಚೆ ನಡೆಸಿದ್ದರು. ಆದರೆ, ಚೀನಾ ಇನ್ನೂ ಅಮೆರಿಕದ ಈ ಶಿಫಾರಸನ್ನು ಒಪ್ಪಿಕೊಳ್ಳುವ ಬಗ್ಗೆ ಯಾವುದೇ ದೃಢೀಕರಣವನ್ನು ನೀಡಿಲ್ಲ.

ಇತರ ದೇಶಗಳ ಮೇಲೆ ಏನು ಪರಿಣಾಮ?

ಒಂದು ವೇಳೆ ಅಮೆರಿಕ ಮತ್ತು ಚೀನಾ ಒಂದಾದರೆ, ಅವು ‘ವರ್ಲ್ಡ್ ಆರ್ಡರ್’ ಅಂದರೆ ಜಾಗತಿಕ ನಿಯಮಗಳನ್ನು ತಾವೇ ನಿರ್ಧರಿಸಲು ಪ್ರಾರಂಭಿಸುತ್ತವೆ ಎಂಬ ಆತಂಕ ಏಷ್ಯಾ ಮತ್ತು ಯುರೋಪಿಯನ್ ರಾಷ್ಟ್ರಗಳಲ್ಲಿದೆ. ಎಐ ಕ್ಷೇತ್ರದಲ್ಲಿ ಅಮೆರಿಕ ಮತ್ತು ಚೀನಾ ಅತ್ಯಂತ ವೇಗವಾಗಿ ಮುನ್ನಡೆಯುತ್ತಿವೆ. ಅಲ್ಲದೆ, ಅಮೆರಿಕ-ಚೀನಾ ಒಟ್ಟಾಗಿ ಇಡೀ ಜಗತ್ತಿನಲ್ಲಿ ಎಐ ಅನ್ನು ನಿಯಂತ್ರಿಸುವ ವ್ಯವಸ್ಥೆಯೊಂದು ರೂಪಿಸುವ ಸಾಧ್ಯತೆಯಿದೆ. ಇರಾನ್ ಯುದ್ಧ ಆರಂಭವಾದಾಗಿನಿಂದ ತೈಲ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಚೀನಾದ ಮಧ್ಯಸ್ಥಿಕೆಯಿಂದ ಅಮೆರಿಕವು ಇರಾನ್ ಯುದ್ಧದಿಂದ ಹೊರಬರಲು ಸಾಧ್ಯವಾಗಿ, ಹೊಮುಜ್ ಜಲಸಂಧಿಯ ನಿಯಂತ್ರಣದ ಬಗ್ಗೆ ಒಮ್ಮತ ಮೂಡಿದರೆ, ಜಾಗತಿಕ ತೈಲ ಪೂರೈಕೆ ಮತ್ತೆ ಹಳಿಗೆ ಬರಬಹುದು.

ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಮರದ ಕಾರಣದಿಂದ ವಿದೇಶಿ ಕಂಪನಿಗಳಿಗೆ ಕಾರ್ಖಾನೆಗಳನ್ನು ಸ್ಥಾಪಿಸಲು ಭಾರತವು ಉತ್ತಮ ಪರ್ಯಾಯವಾಗಿ ಹೊರಹೊಮ್ಮಿತ್ತು. ಈಗ ಅಮೆರಿಕ ಮತ್ತು ಚೀನಾ ನಡುವೆ ಬಾಂಧ್ಯವ ಹೆಚ್ಚುತ್ತಿದ್ದು, ಭಾರತದ ಕೈಯಿಂದ ಈ ಅವಕಾಶ ತಪ್ಪಿಹೋಗಬಹುದು. ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಚೀನಾವನ್ನು ನಿಯಂತ್ರಣದಲ್ಲಿಡಲು ಅಮೆರಿಕವು ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಕಾಯ್ದುಕೊಂಡಿತ್ತು. ಒಂದು ವೇಳೆ ಈಗ ಅಮೆರಿಕ-ಚೀನಾ ತಮ್ಮ ನಡುವಿನ ಸಂಬಂಧಗಳನ್ನು ತಾವೇ ನಿಭಾಯಿಸಿಕೊಳ್ಳಲು ಆರಂಭಿಸಿದರೆ, ಅಮೆರಿಕಕ್ಕೆ ಭಾರತದ ಅಗತ್ಯತೆ ಕಡಿಮೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net