ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಇರಾನ್ನ ಅತ್ಯಂತ ಸೂಕ್ಷ್ಮ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದೊಡ್ಡ ಮಟ್ಟದ ದಾಳಿಗೆ ಸಿದ್ಧತೆ ನಡೆಸಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ನೆತನ್ಯಾಹು ಅವರಿಗೆ ಕರೆ ಮಾಡಿದ ಟ್ರಂಪ್, ಬೀಬಿ (ನೆತನ್ಯಾಹು), ನೀವು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಇಲ್ಲದಿದ್ದರೆ ಶೀಘ್ರದಲ್ಲೇ ನೀವು ಒಂಟಿಯಾಗಬೇಕಾಗುತ್ತದೆ (ನಿಮ್ಮ ರಕ್ಷಣೆಗೆ ಅಮೆರಿಕ ಬರುವುದಿಲ್ಲ) ಎಂದು ನೇರವಾಗಿ ಹೇಳಿದ್ದಾರೆ. ಆರಂಭದಲ್ಲಿ ಇಬ್ಬರು ನಾಯಕರ ನಡುವೆ ಭಿನ್ನಾಭಿಪ್ರಾಯ ಮೂಡಿದರೂ, ಅಂತಿಮವಾಗಿ ಇರಾನ್ ಕಡೆಯಿಂದ ದಾಳಿ ನಡೆಯದಿದ್ದರೆ ತಾವೂ ದಾಳಿ ಮಾಡುವುದಿಲ್ಲ ಎಂದು ನೆತನ್ಯಾಹು ಒಪ್ಪಿಕೊಂಡಿದ್ದಾರೆ. ತಕ್ಷಣವೇ ತಮ್ಮ ಸೇನಾ ಕಮಾಂಡರ್ಗಳಿಗೆ ಕರೆ ಮಾಡಿದ ನೆತನ್ಯಾಹು ದಾಳಿಯನ್ನು ರದ್ದುಗೊಳಿಸಲು ಆದೇಶಿಸಿದ್ದಾರೆ.