ಬಿರುಗಾಳಿ ಏಳುವ ಮುನ್ನ.. ಇಡೀ ಜಗತ್ತಿಗೆ ಎಚ್ಚರಿಕೆ ನೀಡಿದ ಟ್ರಂಪ್! ಇರಾನ್ ಅಣುಶಕ್ತಿ ಕೇಂದ್ರಗಳನ್ನು ಧ್ವಂಸ ಮಾಡಲು ಸಜ್ಜಾಯ್ತಾ ಅಮೆರಿಕದ ಸ್ಪೆಷಲ್ ಫೋರ್ಸ್? Donald Trump Post

ಬಿರುಗಾಳಿ ಏಳುವ ಮುನ್ನ.. ಇಡೀ ಜಗತ್ತಿಗೆ ಎಚ್ಚರಿಕೆ ನೀಡಿದ ಟ್ರಂಪ್! ಇರಾನ್ ಅಣುಶಕ್ತಿ ಕೇಂದ್ರಗಳನ್ನು ಧ್ವಂಸ ಮಾಡಲು ಸಜ್ಜಾಯ್ತಾ ಅಮೆರಿಕದ ಸ್ಪೆಷಲ್ ಫೋರ್ಸ್?
ಬಿರುಗಾಳಿ ಏಳುವ ಮುನ್ನ.. ಇಡೀ ಜಗತ್ತಿಗೆ ಎಚ್ಚರಿಕೆ ನೀಡಿದ ಟ್ರಂಪ್! ಇರಾನ್ ಅಣುಶಕ್ತಿ ಕೇಂದ್ರಗಳನ್ನು ಧ್ವಂಸ ಮಾಡಲು ಸಜ್ಜಾಯ್ತಾ ಅಮೆರಿಕದ ಸ್ಪೆಷಲ್ ಫೋರ್ಸ್?
Published on
ವಾಷಿಂಗ್ಟನ್: ಪಶ್ಚಿಮ ಏಷ್ಯಾ ಹಾಗೂ ಗಲ್ಫ್ ಪ್ರಾಂತ್ಯದಲ್ಲಿ ಕಳೆದ ಫೆಬ್ರವರಿ 28 ರಿಂದ ನಿರಂತರವಾಗಿ ನಡೆಯುತ್ತಿರುವ ಸಂಘರ್ಷವು ಈಗ ಅಂತಿಮ ಮತ್ತು ಅತ್ಯಂತ ವಿನಾಶಕಾರಿ ಘಟ್ಟಕ್ಕೆ ಬಂದು ತಲುಪಿದೆ. ಇರಾನ್ ದೇಶದ ಮೇಲೆ ಮತ್ತೊಮ್ಮೆ ಭೀಕರ ಮಿಲಿಟರಿ ದಾಳಿ ನಡೆಸಲು ಅಮೆರಿಕ ಸೈನ್ಯ ಸನ್ನದ್ಧವಾಗುತ್ತಿದೆ ಎಂಬ ಜಾಗತಿಕ ವರದಿಗಳ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump Post) ತಮ್ಮದೇ ಒಡೆತನದ ಟ್ರೂತ್ ಸೋಶಿಯಲ್ ವೇದಿಕೆಯಲ್ಲಿ ಹಂಚಿಕೊಂಡಿರುವ ಚಿತ್ರವೊಂದು ಜಾಗತಿಕ ರಾಜಕಾರಣದಲ್ಲಿ ನಡುಕ ಹುಟ್ಟಿಸಿದೆ.
ಟ್ರಂಪ್ ಹಂಚಿಕೊಂಡಿರುವ ಕೃತಕ ಬುದ್ಧಿಮತ್ತೆ ಆಧಾರಿತ ಚಿತ್ರದಲ್ಲಿ, ಭೀಕರವಾಗಿ ಅಸ್ಫೋಟಗೊಳ್ಳುತ್ತಿರುವ ಸಮುದ್ರದ ಅಲೆಗಳ ನಡುವೆ ಅಮೆರಿಕದ ಯುದ್ಧ ನೌಕೆಗಳು ಸಾಗುತ್ತಿದ್ದು, ಅದರ ಮುಂದೆ ಟ್ರಂಪ್ ಕ್ಯಾಮೆರಾದ ಕಡೆಗೆ ಕೈ ತೋರಿಸಿ ನಿಂತಿದ್ದಾರೆ. ಅತ್ಯಂತ ಆಘಾತಕಾರಿ ವಿಷಯವೆಂದರೆ, ಆ ಚಿತ್ರದಲ್ಲಿರುವ ಕೆಲವು ಯುದ್ಧ ನೌಕೆಗಳ ಮೇಲೆ ಇರಾನ್ ದೇಶದ ಧ್ವಜಗಳಿವೆ. ಅದರ ಜೊತೆಗೆ ಟ್ರಂಪ್, ಇದು ಬಿರುಗಾಳಿ ಏಳುವ ಮುನ್ನ ಇರುವ ಪ್ರಶಾಂತತೆ ಅಷ್ಟೇ ಎಂದು ಬರೆದುಕೊಂಡಿದ್ದಾರೆ. ಈ ನಿಗೂಢ ಸಂದೇಶವು ಇರಾನ್ ದೇಶವನ್ನು ಸಂಪೂರ್ಣವಾಗಿ ಧ್ವಂಸ ಮಾಡಲು ಅಮೆರಿಕ ಸನ್ನದ್ಧವಾಗಿದೆ ಎಂಬುದರ ಪರೋಕ್ಷ ಮುನ್ಸೂಚನೆಯಾಗಿದೆ.

ಬಹಿರಂಗವಾಯ್ತು ಅಮೆರಿಕದ ಮಹಾ ರಣತಂತ್ರ 'ಆಪರೇಷನ್ ಸ್ಲೆಡ್ಜ್ ಹ್ಯಾಮರ್'!

ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆ ಎನ್‌ಬಿಸಿ ನ್ಯೂಸ್ ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದೆ. ಇರಾನ್ ಮೇಲಿನ ಈ ಹೊಸ ಭೀಕರ ದಾಳಿಗೆ ಅಮೆರಿಕದ ಮಿಲಿಟರಿ ಅಧಿಕಾರಿಗಳು ಆಪರೇಷನ್ ಸ್ಲೆಡ್ಜ್ ಹ್ಯಾಮರ್ ಎಂದು ಹೆಸರಿಟ್ಟಿದ್ದಾರೆ. ಈ ಹಿಂದೆ ನಡೆಸಲಾಗಿದ್ದ ಆಪರೇಷನ್ ಎಪಿಕ್ ಫ್ಯೂರಿಗಿಂತ ಇದನ್ನು ಪ್ರತ್ಯೇಕವಾಗಿ ಬಿಂಬಿಸಲು ಮತ್ತು ಅತ್ಯಂತ ಮುಖ್ಯವಾಗಿ ಅಮೆರಿಕದ 1973 ರ ವಾರ್ ಪವರ್ಸ್ ರೆಸಲ್ಯೂಶನ್ ಅಡಿಯಲ್ಲಿ ಬೇಕಾಗುವ 60 ದಿನಗಳ ಸಂಸತ್ತಿನ ಕಡ್ಡಾಯ ಅನುಮೋದನೆಯ ನಿಯಮದಿಂದ ತಪ್ಪಿಸಿಕೊಳ್ಳಲು ಈ ಹೊಸ ಹೆಸರನ್ನು ಇಡಲಾಗಿದೆ. ಇದರರ್ಥ, ಟ್ರಂಪ್ ಸಹಿ ಹಾಕಿದ ತಕ್ಷಣವೇ ಸಂಸತ್ತಿಗೆ ತಿಳಿಸದೆಯೂ ಇರಾನ್ ಮೇಲೆ ಬಾಂಬ್‌ಗಳ ಮಳೆ ಸುರಿಸಬಹುದು.
'ದಿ ನ್ಯೂಯಾರ್ಕ್ ಟೈಮ್ಸ್' ವರದಿಯ ಪ್ರಕಾರ, ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ನಡೆಸುತ್ತಿರುವ ಈ ಸೇನಾ ಸಿದ್ಧತೆಯು ಫೆಬ್ರವರಿ 28 ರಂದು ಯುದ್ಧ ಆರಂಭವಾದ ದಿನದಿಂದಲೂ ನಡೆದ ಅತ್ಯಂತ ಬೃಹತ್ ಮತ್ತು ಭೀಕರ ಸಿದ್ಧತೆಯಾಗಿದೆ. ಟ್ರಂಪ್ ಅವರ ಅಂತಿಮ ಆದೇಶಕ್ಕಾಗಿ ಸೈನ್ಯ ಕಾಯುತ್ತಿದೆ.

ಇರಾನ್ ಅಣುಶಕ್ತಿ ಕೇಂದ್ರಗಳೇ ಟಾರ್ಗೆಟ್: ಕಣಕ್ಕಿಳಿಯಲಿದೆ ಅಮೆರಿಕ ಸ್ಪೆಷಲ್ ಫೋರ್ಸ್!

ಈ ದಾಳಿಗೆ ಟ್ರಂಪ್ ಹಸಿರು ನಿಶಾನೆ ನೀಡಿದರೆ, ಅಮೆರಿಕದ ವಾಯುಪಡೆ ಮತ್ತು ನೌಕಾಪಡೆಗಳು ಇರಾನ್‌ನ ಪ್ರಮುಖ ಮಿಲಿಟರಿ ನೆಲೆಗಳು ಹಾಗೂ ಆರ್ಥಿಕ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಲಿವೆ. ಎಲ್ಲಕ್ಕಿಂತ ಹೆಚ್ಚಾಗಿ ಇರಾನ್‌ನ ಇಡೀ ಪರಮಾಣು ಶಕ್ತಿ ಕೇಂದ್ರಗಳನ್ನು ಮಣ್ಣುಪಾಲು ಮಾಡುವುದು ಈ ಆಪರೇಷನ್‌ನ ಮುಖ್ಯ ಉದ್ದೇಶವಾಗಿದೆ. ಕೇವಲ ಆಕಾಶಮಾರ್ಗದ ದಾಳಿಯಷ್ಟೇ ಅಲ್ಲದೆ, ಅಮೆರಿಕದ ಅತ್ಯಂತ ಅಪಾಯಕಾರಿ ಭೂಸೇನೆಯ 'ವಿಶೇಷ ಕಾರ್ಯಾಚರಣೆ ಪಡೆಗಳನ್ನು ನೇರವಾಗಿ ಇರಾನ್ ನೆಲದೊಳಗೆ ಇಳಿಸಲು ತಂತ್ರ ರೂಪಿಸಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಅಮೆರಿಕದ ಈ ಭೀಕರ ಆಕ್ರೋಶಕ್ಕೆ ಮುಖ್ಯ ಕಾರಣ 'ಹೊರ್ಮುಜ್ ಜಲಸಂಧಿಯಾಗಿದೆ. ಜಗತ್ತಿನ ಒಟ್ಟು ಕಚ್ಚಾ ತೈಲ ಸಾಗಣೆಯ ಶೇ.20 ರಿಂದ 25 ರಷ್ಟು ಭಾಗ ಕೇವಲ ಈ ಒಂದು ಜಲಸಂಧಿಯ ಮೂಲಕವೇ ಹಾದುಹೋಗುತ್ತದೆ. ಈ ಜಲಮಾರ್ಗವನ್ನು ಮುಕ್ತವಾಗಿಡಬೇಕು ಎಂಬುದು ಟ್ರಂಪ್ ಪಟ್ಟು, ಆದರೆ ಇದರ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವುದು ತನ್ನ ಹಕ್ಕು ಎಂದು ಇರಾನ್ ವಾದಿಸುತ್ತಿದೆ.

"ಅವರನ್ನು ಆಶ್ಚರ್ಯಚಕಿತಗೊಳಿಸುತ್ತೇವೆ" - ಇರಾನ್ ಖಡಕ್ ತಿರುಗೇಟು!

ಅಮೆರಿಕದ ಈ ಸಾರ್ವಕಾಲಿಕ ದೊಡ್ಡ ಬೆದರಿಕೆಗೆ ಇರಾನ್ ದೇಶದ ಸಂಸತ್ತಿನ ಸ್ಪೀಕರ್ ಹಾಗೂ ಅಮೆರಿಕದೊಂದಿಗಿನ ಮಾತುಕತೆಯ ಮುಖ್ಯ ಸಂಧಾನಕಾರರಾಗಿರುವ ಮೊಹಮ್ಮದ್ ಬಾಘೆರ್ ಘಾಲಿಬಾಫ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಯಾವುದೇ ರೀತಿಯ ವಿದೇಶಿ ಆಕ್ರಮಣ ಅಥವಾ ದಾಳಿಗೆ ತಕ್ಕ ಪಾಠ ಕಲಿಸಲು ಮತ್ತು ತಕ್ಕ ಪ್ರತ್ಯುತ್ತರ ನೀಡಲು ಇರಾನ್ ಮಿಲಿಟರಿ ಸಂಪೂರ್ಣವಾಗಿ ಸಜ್ಜಾಗಿದೆ ಎಂದು ಸಾಮಾಜಿಕ ಜಾಲತಾಣ Xನಲ್ಲಿ ಬರೆದುಕೊಂಡಿದ್ದಾರೆ.
ತಪ್ಪು ರಣತಂತ್ರಗಳು ಮತ್ತು ತಪ್ಪು ನಿರ್ಧಾರಗಳು ಯಾವಾಗಲೂ ತಪ್ಪು ಫಲಿತಾಂಶಗಳನ್ನೇ ನೀಡುತ್ತವೆ ಎಂಬುದನ್ನು ಇಡೀ ಜಗತ್ತು ಈಗಾಗಲೇ ಅರ್ಥಮಾಡಿಕೊಂಡಿದೆ. ನಾವು ಎಲ್ಲಾ ರೀತಿಯ ಸವಾಲು ಹಾಗೂ ಆಪ್ಷನ್‌ಗಳಿಗೆ ಸಿದ್ಧವಾಗಿದ್ದೇವೆ. ಅವರು ದಾಳಿ ನಡೆಸಿದರೆ, ನಮ್ಮ ಮುಂದಿನ ನಡೆಯಿಂದ ಇಡೀ ಅಮೆರಿಕವೇ ಆಶ್ಚರ್ಯಚಕಿತಗೊಳ್ಳಲಿದೆ ಎಂದು ಘಾಲಿಬಾಫ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೇರ ಸವಾಲು ಹಾಕಿದ್ದಾರೆ. ಈ ಇಬ್ಬರು ಜಾಗತಿಕ ನಾಯಕರ ಆರ್ಭಟದಿಂದಾಗಿ ಗಲ್ಫ್ ಪ್ರಾಂತ್ಯದಲ್ಲಿ ಯಾವುದೇ ಕ್ಷಣದಲ್ಲೂ ಮಹಾ ಸ್ಫೋಟ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net