ಕ್ರೀಡೆಯಲ್ಲಿ ರಾಜಕೀಯ ಬೇಡ.. ಐಪಿಎಲ್ ಪ್ರಸಾರದ ಮೇಲಿದ್ದ ನಿಷೇಧ ಹಿಂಪಡೆದ ಬಾಂಗ್ಲಾದೇಶ ಸರ್ಕಾರ! | IPL Broadcast

IPL Broadcast
IPL Broadcast
Published on
IPL Broadcast: ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಕ್ರಿಕೆಟ್ ಸಂಬಂಧಗಳಲ್ಲಿ ಉಂಟಾಗಿದ್ದ ಬಿಕ್ಕಟ್ಟು ಶಮನವಾಗುವ ಮುನ್ಸೂಚನೆ ಸಿಕ್ಕಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಸಾರದ ಮೇಲಿದ್ದ ನಿಷೇಧವನ್ನು ಹಿಂಪಡೆಯಲು ಬಾಂಗ್ಲಾದೇಶ ನಿರ್ಧರಿಸಿದೆ.
ಇಂದು (ಮಾರ್ಚ್ 28 ರ ಶನಿವಾರ) ನಡೆದ ಮಾಧ್ಯಮಗೋಷ್ಠಿಯಲ್ಲಿ ಬಾಂಗ್ಲಾದೇಶದ ಮಾಹಿತಿ ಮತ್ತು ಪ್ರಸಾರ ಸಚಿವ ಜಹೀರ್ ಉದ್ದೀನ್ ಸ್ವಪನ್ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು. ಕ್ರೀಡೆಯನ್ನು ರಾಜಕೀಯದೊಂದಿಗೆ ಬೆರೆಸಲು ಸರ್ಕಾರ ಇಚ್ಛಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ಸಂದರ್ಭದಲ್ಲಿ ರವಾನಿಸಿದ್ದಾರೆ.
ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್​ರ ಐಪಿಎಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಮುಸ್ತಾಫಿಜುರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದೊಂದಿಗೆ ಮಾಡಿಕೊಂಡಿದ್ದ ಒಪ್ಪಂದವು ಬಿಸಿಸಿಐ ನಿರ್ದೇಶನಗಳ ಕಾರಣದಿಂದ ರದ್ದಾದ ಬಳಿಕ ಉಭಯ ದೇಶಗಳ ನಡುವಿನ ಕ್ರೀಡಾ ಸಂಬಂಧ ಹದಗೆಟ್ಟಿತ್ತು. ಇದರ ನೇರ ಪರಿಣಾಮವಾಗಿ ಬಾಂಗ್ಲಾದೇಶವು ತನ್ನ ದೇಶದಲ್ಲಿ ಐಪಿಎಲ್ ಪ್ರಸಾರವನ್ನು ಸ್ಥಗಿತಗೊಳಿಸಿತ್ತು. ಅಷ್ಟೇ ಅಲ್ಲದೆ, ಈ ಉದ್ವಿಗ್ನತೆಯು ತಾರಕಕ್ಕೇರಿ ಬಾಂಗ್ಲಾದೇಶ ತಂಡವು 2026ರ ಟಿ20 ವಿಶ್ವಕಪ್‌ನಿಂದಲೂ ಹಿಂದೆ ಸರಿಯುವಂತಹ ಕಠಿಣ ನಿರ್ಧಾರ ಕೈಗೊಳ್ಳುವಂತೆ ಮಾಡಿತ್ತು.
ಬಾಂಗ್ಲಾದೇಶದಲ್ಲಿ ಸರ್ಕಾರ ಬದಲಾವಣೆಯಾದ ಬಳಿಕ ಪರಿಸ್ಥಿತಿ ಸುಧಾರಿಸಿದ್ದು, ಎರಡೂ ರಾಷ್ಟ್ರಗಳ ಉನ್ನತ ಅಧಿಕಾರಿಗಳ ನಡುವಿನ ನಿರಂತರ ಸಂವಹನ ಮತ್ತು ರಾಜತಾಂತ್ರಿಕ ವಿನಿಮಯಗಳು ಈ ಕಹಿ ಘಟನೆಗಳನ್ನು ಮರೆತು ಹೊಸ ಆರಂಭಕ್ಕೆ ನಾಂದಿ ಹಾಡಿವೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜಹೀರ್, ಐಪಿಎಲ್ ಪ್ರಸಾರಕ್ಕೆ ಸಂಬಂಧಿಸಿದಂತೆ ಯಾವುದೇ ವಾಹಿನಿಗಳು ಅರ್ಜಿ ಸಲ್ಲಿಸಿದರೆ ಅದನ್ನು ವಾಣಿಜ್ಯ ದೃಷ್ಟಿಕೋನದಿಂದ ಸಕಾರಾತ್ಮಕವಾಗಿ ಪರಿಗಣಿಸಲಾಗುವುದು ಎಂದಿದ್ದಾರೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಸಹ ಅಂತರರಾಷ್ಟ್ರೀಯ ಪಂದ್ಯಾವಳಿಗಳಿಂದ ಹಿಂದೆ ಸರಿದಿದ್ದರಿಂದ ಉಂಟಾದ ನಷ್ಟ ಮತ್ತು ಪರಿಣಾಮಗಳನ್ನು ಒಪ್ಪಿಕೊಂಡಿದ್ದು, ಬಿಸಿಸಿಐ ಮತ್ತು ಐಸಿಸಿ ಜೊತೆಗಿನ ಸಂಬಂಧವನ್ನು ಸರಿಪಡಿಸಿಕೊಳ್ಳಲು ಉತ್ಸುಕವಾಗಿದೆ. ಈ ಪ್ರಸಾರ ನಿರ್ಧಾರವು ಉಭಯ ದೇಶಗಳ ಕ್ರಿಕೆಟ್ ಸಂಬಂಧವನ್ನು ಮತ್ತೆ ಹಳಿಗೆ ತರಲಿದ್ದು, ಮುಂದಿನ ವರ್ಷದ ಐಪಿಎಲ್‌ನಲ್ಲಿ ಬಾಂಗ್ಲಾದೇಶದ ಆಟಗಾರರು ಮತ್ತೆ ಕಣಕ್ಕಿಳಿಯುವ ಬಗ್ಗೆ ಕಾದು ನೋಡಬೇಕಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net