

ಜಗತ್ತಿನ ಹಲವು ರಾಷ್ಟ್ರಗಳಲ್ಲಿ ದುರಾಡಳಿತದ ವಿರುದ್ಧ ಜೆನ್ ಝಿ ನಡೆಸುತ್ತಿರುವ ಹೋರಾಟ ಸಂಚಲನ ಮೂಡಿಸಿದ್ದು, ಪರಿವರ್ತನೆಯ ಲಕ್ಷಣಗಳು ಗೋಚರಿಸುತ್ತಿವೆ. ಹಲವು ದೇಶಗಳಲ್ಲಿ ಹೋರಾಟವನ್ನು ಯುವಪೀಳಿಗೆ ಮುನ್ನಡೆಸುತ್ತಿದ್ದರೆ ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ವಿರುದ್ಧ ಈಗ ಮಧ್ಯಮವರ್ಗದ ಮಹಿಳೆಯರೇ ರಣಕಹಳೆ ಮೊಳಗಿಸಿರುವುದು ವಿಶೇಷ. ಇಸ್ಲಾಂ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳನ್ನು ಸತತವಾಗಿ ದಮನಿಸಿಕೊಂಡೇ ಬರಲಾಗಿದೆ. ಅದರಲ್ಲೂ, ಬಲೂಚಿಸ್ತಾನವನ್ನು ಪಾಕ್ ಸರ್ಕಾರ ನಿರ್ಲಕ್ಷಿಸಿಕೊಂಡೇ ಬಂದಿದ್ದು, ಜನರಲ್ಲಿ ಭಾರಿ ಆಕ್ರೋಶ ಹುಟ್ಟುಹಾಕಿದೆ.
ಈ ಹಿಂದೆಯೂ ಹಲವು ಹೋರಾಟಗಳು ನಡೆದಿವೆ. ಆದರೆ, ಈ ಬಾರಿ ಮಹಿಳೆಯರೇ ರಸ್ತೆಗೆ ಇಳಿದು ಬಲೂಚಿಸ್ತಾನ ಪ್ರಾಂತ್ಯದ ಹಲವೆಡೆ ಬಹಿರಂಗ ರ್ಯಾಲಿಗಳನ್ನು ನಡೆಸುತ್ತಿದ್ದು, ಸರ್ಕಾರ ತೀವ್ರ ಇರಿಸುಮುರಿಸು ಅನುಭವಿಸಿದೆ. ಮಾತ್ರವಲ್ಲ, ಈ ಬಾರಿಯದ್ದು ‘ಮಾಡು ಅಥವಾ ಮಡಿ’ ಎಂಬಂತೆ ಬೃಹತ್ ಆಂದೋಲನ ನಡೆಸುತ್ತಿದ್ದು, ಬಲೂಚಿ ಸಂಘರ್ಷ ನಿರ್ಣಾಯಕ ಹಂತಕ್ಕೆ ತಲುಪಿದೆ ಎಂದು ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಬಲೂಚಿ ಹೋರಾಟ ಕಾಲಕಾಲಕ್ಕೆ ಬದಲಾಗುತ್ತ ಬಂದಿದ್ದು, ಈ ಬಾರಿ ಸ್ತ್ರೀಶಕ್ತಿಯ ನೇತೃತ್ವ ಆಂದೋಲನದ ದಿಕ್ಕನ್ನೇ ಬದಲಿಸಿದ್ದು, ಹೋರಾಟಗಾರರ ಮತ್ತು ಜನಸಾಮಾನ್ಯರ ವಿಶ್ವಾಸ ಹೆಚ್ಚಿಸಿದೆ.
ಸಶಸ್ತ್ರ ಸಂಘರ್ಷದಲ್ಲೂ ಯುವತಿಯರು ಭಾಗಿಯಾಗಿದ್ದು, ಪಾಕ್ ಸೇನೆ ವಿರುದ್ಧದ ದಾಳಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬಲೂಚಿಸ್ತಾನದ ಮೇಲೆ ಪಾಕಿಸ್ತಾನ ಸರ್ಕಾರ ಭಾಗಶಃ ನಿಯಂತ್ರಣ ಕಳೆದುಕೊಂಡಿದೆ. ಪಾಕ್ ಸೇನಾ ಪಡೆಗಳ ಮೇಲೆ ಕೂಡ ಬಿಎಲ್ಎ ಬಂಡುಕೋರರು ಸರಣಿ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ, ಈ ಪ್ರದೇಶದಲ್ಲಿ ಸೇನೆ ನಿಯೋಜನೆ ಕೂಡ ಕಷ್ಟಕರವಾಗಿ ಪರಿಣಮಿಸಿದೆ. ಬಲೂಚಿಸ್ತಾನದ ನಿವಾಸಿಗಳು ಪಾಕ್ನಿಂದ ಮಾನಸಿಕವಾಗಿಯೂ ದೂರವಾಗುತ್ತಿದ್ದು, ಪಾಕಿಸ್ತಾನವನ್ನು ಅವರು ‘ಪಂಜಾಬಿಸ್ತಾನ’ ಎಂದು ಕರೆಯುತ್ತಿದ್ದಾರೆ. ಏಕೆಂದರೆ, ಪಂಜಾಬಿಗಳು ತಮ್ಮ ಹಕ್ಕನ್ನು ಕಸಿದುಕೊಂಡಿದ್ದು, ಬದುಕನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂಬುದು ಬಲೂಚಿಗಳ ಆರೋಪ.
ಬಲೂಚಿಸ್ತಾನ ಲಿಬರೇಷನ್ ಆರ್ವಿುಯ ಸೈನಿಕರು ಹಲವು ನಗರಗಳಲ್ಲಿ ಪಾಕಿಸ್ತಾನದ ಧ್ವಜವನ್ನು ಇಳಿಸಿ ಬಲೂಚ್ ಧ್ವಜವನ್ನು ಹಾರಾಡಿಸಿದ್ದಾರೆ. ‘ಸರ್ಕಾರ ಮತ್ತು ಸೇನೆ ಬಲೂಚ್ ಮೇಲಿನ ನಿಯಂತ್ರಣ ಕಳೆದುಕೊಳ್ಳುತ್ತಿರುವುದು ಹೌದು’ ಎಂದು ಪಾಕ್ ಮಾಜಿ ಪ್ರಧಾನಿ ಶಹೀದ್ ಖಾಕನ್ ಅಬ್ಬಾಸಿ ಪ್ರತಿಕ್ರಿಯಿಸಿದ್ದಾರೆ. ವಿಶ್ವಸಂಸ್ಥೆಯು ಬಲೂಚಿಸ್ತಾನಕ್ಕೆ ಪ್ರಜಾತಾಂತ್ರಿಕ ಗಣರಾಜ್ಯ ದೇಶ ಎಂಬ ಮಾನ್ಯತೆ ನೀಡಬೇಕು ಮತ್ತು ಕರೆನ್ಸಿ, ಪಾಸ್ಪೋರ್ಟ್ ಮುದ್ರಣಕ್ಕಾಗಿ ಸೂಕ್ತ ಹಣಕಾಸಿನ ನೆರವು ನೀಡಬೇಕು ಎಂದು ಬಿಎಲ್ಎ ನಾಯಕರು ಆಗ್ರಹಿಸಿದ್ದಾರೆ.
ಬಲೂಚ್ ಪ್ರಾಂತ್ಯ ಪ್ರತ್ಯೇಕ ರಾಷ್ಟ್ರವಾಗಬೇಕು ಎಂದು ಬಲೂಚಿಸ್ತಾನ ಲಿಬರೇಷನ್ ಆರ್ವಿು (ಬಿಎಲ್ಎ) ಹೋರಾಟ ನಡೆಸಿಕೊಂಡು ಬಂದಿದ್ದು, ಪಾಕ್ ಸೈನಿಕರನ್ನು ಗುರಿಯಾಗಿಸಿ ಸರಣಿ ದಾಳಿಗಳನ್ನು ನಡೆಸಿದೆ. ಬಿಎಲ್ಎ 2025ರ ಜನವರಿ 4ರಂದು ನಡೆಸಿದ ದಾಳಿಯಲ್ಲಿ 43 ಪಾಕ್ ಸೈನಿಕರು ಮೃತಪಟ್ಟರು. ಫೆಬ್ರವರಿ 1ರಂದು ನಡೆದ ದಾಳಿಯಲ್ಲಿ ಅರೆಸೈನಿಕ ಪಡೆಯ 18 ಸಿಬ್ಬಂದಿ, ಮಾರ್ಚ್ 12ರಂದು ನಡೆಸಿದ ರೈಲು ಅಪಹರಣದಲ್ಲಿ 200 ಸೈನಿಕರು ಹತರಾದರು. ಮಾರ್ಚ್ 16ರಂದು ಸೇನಾ ಬಸ್ ಮೇಲೆ ನಡೆದ ದಾಳಿಯಲ್ಲಿ 90 ಸೈನಿಕರು, ಮೇ 6ರ ದಾಳಿಯಲ್ಲಿ 6 ಸೈನಿಕರು, ಮೇ 7ರಂದು ಬಲೂಚಿಸ್ತಾನದ ಬೋಲನ್ ಜಿಲ್ಲೆಯಲ್ಲಿ ನಡೆದ ಐಇಡಿ ಸ್ಪೋಟದಲ್ಲಿ 12 ಸೈನಿಕರು ಪ್ರಾಣ ಕಳೆದುಕೊಂಡರು.
2026ರ ಆರಂಭದಲ್ಲೇ ಬಿಎಲ್ಎ ದಾಳಿಗಳನ್ನು ತೀವ್ರಗೊಳಿಸಿದೆ. ಪೊಲೀಸ್ ಠಾಣೆ, ಜೈಲು, ಭದ್ರತಾ ಸಂಸ್ಥೆಗಳು ಗುರಿಯಾಗಿಸಿ ಜನವರಿ 31ರಂದು ಸರಣಿ ಆತ್ಮಾಹುತಿ ದಾಳಿ ನಡೆದಿವೆ. ಹೀಗಾಗಿ, ಇದು ಬರೀ ಆಂದೋಲನವಾಗಿ ಉಳಿಯದೆ ಬಂಡಾಯವಾಗಿ ಮಾರ್ಪಟ್ಟಿರುವುದು ಸ್ಪಷ್ಟ. ಸರ್ಕಾರ ಮತ್ತು ಸೇನೆ ವಿರುದ್ಧದ ಪ್ರತಿಭಟನಾ ಮೆರವಣಿಗೆಗಳಲ್ಲಿ ಯುವಕರು ಮತ್ತು ಮಧ್ಯಮವರ್ಗದವರು ಇತ್ತೀಚಿನ ದಿನಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಆಂದೋಲನದ ಶಕ್ತಿಯನ್ನು ಹೆಚ್ಚಿಸಿದೆ.
ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ವಿರುದ್ಧದ ಹೋರಾಟ ಇಂದು-ನಿನ್ನೆಯದಲ್ಲ. ಬಲೂಚ್ ಪ್ರಾಂತ್ಯವನ್ನು ನಿರ್ಲಕ್ಷಿಸಲಾಗಿದೆ, ಯಾವುದೇ ಸೌಲಭ್ಯಗಳನ್ನು ನೀಡಲಾಗಿಲ್ಲ ಎಂದು ಆರೋಪಿಸಿ ಬಲೂಚಿಸ್ತಾನ ಲಿಬರೇಷನ್ ಆರ್ವಿು ಕೆಲ ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಅದು ಇತ್ತೀಚಿನ ಕೆಲ ತಿಂಗಳುಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪಾಕ್ ಸೇನೆಯನ್ನು ಗುರಿಯಾಗಿಸಿ ಬಲೂಚಿಗರು ಸರಣಿ ದಾಳಿ ನಡೆಸಿದ್ದಾರೆ. ಹೀಗಾಗಿ, ಪಾಕಿಸ್ತಾನ ಮತ್ತೊಂದು ವಿಭಜನೆಯ ಆತಂಕ ಅನುಭವಿಸುತ್ತಿದೆ.
ಪೂರ್ವ ಪಾಕಿಸ್ತಾನದಲ್ಲಿ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ಭುಗಿಲೆದ್ದಾಗ ಆಗಿನ ಪ್ರಧಾನಿ ಇಂದಿರಾ ಗಾಂಧಿ ಬೆಂಬಲ ನೀಡಿದ್ದರು. ಪರಿಣಾಮ, ಬಾಂಗ್ಲಾದೇಶದ ಉದಯವಾಯಿತು. ಈಗ ಅದೇ ಬಾಂಗ್ಲಾದೇಶ ಭಾರತವಿರೋಧಿ ಮನಸ್ಥಿತಿಯನ್ನು ಬೆಳೆಸಿಕೊಂಡಿದ್ದು, ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿದೆ. ಆದರೆ, ಬಲೂಚಿಸ್ತಾನದ ಸನ್ನಿವೇಶವೇ ಬೇರೆ. ಭಾರತ ಬಲೂಚಿಸ್ತಾನದೊಂದಿಗೆ ಯಾವುದೇ ಗಡಿ ಹಂಚಿಕೊಂಡಿಲ್ಲ. ಹಾಗಾಗಿ, ಬಲೂಚಿಗಳ ಪರವಾಗಿ ಯುದ್ಧ ನಡೆಸುವ ಯಾವುದೇ ಸಾಧ್ಯತೆಯಿಲ್ಲ.
ಬಲೂಚಿಸ್ತಾನ ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವಾಗಿದ್ದು, ದೇಶದ ಭೌಗೋಳಿಕ ವಿಸ್ತೀರ್ಣದಲ್ಲಿ ಶೇಕಡ 46ರಷ್ಟು ಪಾಲು ಹೊಂದಿದೆ. ಆದರೆ, ಜನಸಂಖ್ಯೆಯಲ್ಲಿ (ಜನಸಂಖ್ಯೆ 1.47 ಕೋಟಿ) ಪಾಲು ಶೇಕಡ 6ರಷ್ಟು ಮಾತ್ರ. ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಮೊದಲಿನಿಂದಲೂ ನಿರ್ಲಕ್ಷಿತವಾಗಿರುವುದೇ ಇಲ್ಲಿನ ಜನರ ಆಕ್ರೋಶಕ್ಕೆ ಕಾರಣ. ಚೀನಾದ ಜತೆ ಸೇರಿ ಪಾಕ್ ನಿರ್ವಿುಸುತ್ತಿರುವ ‘ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್’ಗೂ ಇಲ್ಲಿನ ಜನ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಲೂಚ್ ಜನಸಂಖ್ಯೆಯ ಶೇಕಡ 70ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ ಮತ್ತು ಇಲ್ಲಿನ ಜನರಿಗೆ ಪಾಕ್ ಸೇನೆಯಲ್ಲಿ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ. ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲೂ ಕಡೆಗಣಿಸಲಾಗಿದೆ.
ತಾಲಿಬಾನ್ ವಿರೋಧವನ್ನು ಎದುರಿಸುತ್ತಿರುವ ಪಾಕಿಸ್ತಾನ ಸರ್ಕಾರ ಆಂತರಿಕವಾಗಿ ತಲ್ಲಣಿಸಿ ಹೋಗಿದೆ. ಬಲೂಚಿಸ್ತಾನದಲ್ಲಿ ಹೋರಾಟ ತೀವ್ರಗೊಳ್ಳುತ್ತಲೇ ಸಾಗಿದ್ದು, ಸೇನಾ ಪ್ರತಿರೋಧವನ್ನು ಬಿಎಲ್ಎ ಲೆಕ್ಕಿಸುತ್ತಿಲ್ಲ. ಮತ್ತೊಂದೆಡೆ, ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನವು ಬಲೂಚಿಸ್ತಾನ ವಿಷಯದಲ್ಲಿ ಯಾವುದೇ ದೃಢ ನಿರ್ಧಾರ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ಬಿಎಲ್ಎ ಪೂರ್ಣ ಪ್ರಮಾಣದ ಸಮರವನ್ನು ಸಾರಿದರೆ, ಅದನ್ನು ನಿಭಾಯಿಸುವುದು ಕಷ್ಟ. ಹಾಗಾಗಿ, ಬಂಡಾಯವನ್ನು ಎದುರಿಸಲಾಗದೆ, ನಿಯಂತ್ರಿಸಲಾಗದೆ ಅತಂತ್ರ ಸ್ಥಿತಿಗೆ ಸಿಲುಕಿದೆ. ಹೀಗಾಗಿ, ಪಾಕ್ ಪ್ರತಿಪಕ್ಷಗಳು ಮತ್ತು ಜನಸಾಮಾನ್ಯರು ಪ್ರಧಾನಿ ಶಹಬಾಜ್ ಷರೀಫ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಲೂಚಿಸ್ತಾನದ ಬೆಳವಣಿಗೆಗಳ ಬಗ್ಗೆ ಭಾರತ ಸರ್ಕಾರದ ಧೋರಣೆ ಯಾವಾಗಲೂ ಸಂಯಮದಿಂದ ಕೂಡಿದೆ. ಇತರ ದೇಶಗಳ ಆಂತರಿಕ ವಿಷಯದಲ್ಲಿ ಭಾರತ ಹಸ್ತಕ್ಷೇಪ ಮಾಡುವುದಿಲ್ಲ. ಆದರೂ, ಪಾಕಿಸ್ತಾನ ಮಾತ್ರ ಭಾರತದ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸುವುದನ್ನು ನಿಲ್ಲಿಸಿಲ್ಲ. ಬಲೂಚಿಗಳ ಹೋರಾಟಕ್ಕೆ ಭಾರತ ಸಹಾಯ ಮಾಡದಿದ್ದರೂ, ಬಲೂಚಿಗಳಿಗೆ ಆಗುತ್ತಿರುವ ಅನ್ಯಾಯ, ಶೋಷಣೆ ಬಗ್ಗೆ ಭಾರತ ಸರ್ಕಾರ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ದನಿ ಎತ್ತಬೇಕು ಎಂದು ಹೇಳುವ ಕ್ಷೇತ್ರತಜ್ಞರು, ಹೀಗೆ ಮಾಡಿದ್ದಲ್ಲಿ ಬಲೂಚಿಸ್ತಾನದ ಸಮಸ್ಯೆ ಮತ್ತು ಸಂಕಟವನ್ನು ಜಗತ್ತಿನ ಮುಂದೆ ಅನಾವರಣಗೊಳಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ. ಬಲೂಚಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ 2016ರಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಅಲ್ಲದೆ, ಹಲವು ಸಂದರ್ಭಗಳಲ್ಲಿ ಬಲೂಚಿ ನಾಗರಿಕರು ಭಾರತಕ್ಕೆ ಬೆಂಬಲ ನೀಡಿದ್ದಾರೆ.
ಬಲೂಚಿಸ್ತಾನವನ್ನು ಪ್ರತ್ಯೇಕ ರಾಷ್ಟ್ರವಾಗಿ ಘೋಷಿಸಬೇಕು ಎಂಬ ಹೋರಾಟ ಭುಗಿಲೆದ್ದಿರುವುದು ಇದೇ ಮೊದಲೇನಲ್ಲ. ಮೊಹಮದ್ ಅಲಿ ಜಿನ್ನಾ ಒತ್ತಡ ಹೇರಿ, ಬಲೂಚಿಸ್ತಾನವನ್ನು ಪಾಕಿಸ್ತಾನದಲ್ಲಿ ವಿಲೀನಗೊಳಿಸಿದನ್ನು ವಿರೋಧಿಸಿ 1948ರಲ್ಲಿಯೇ ಮೊದಲ ಆಂದೋಲನ ಅಬ್ದುಲ್ ಕರಿಂ ಖಾನ್ ನೇತೃತ್ವದಲ್ಲಿ ನಡೆಯಿತು. ಆದರೆ, ಕರಿಂ ಖಾನ್ ಬಂಧನದೊಂದಿಗೆ ಹೋರಾಟ ವಿಫಲಗೊಂಡಿತು. 1958-59ರಲ್ಲಿ ಎರಡನೇ ಆಂದೋಲನದ ಮುಂದಾಳತ್ವ ವಹಿಸಿದ್ದು ನೌರೊಜ್ ಖಾನ್. ನೌರೊಜ್ ಖಾನ್ ಪುತ್ರರು ಹಾಗೂ ಕೆಲ ಸೋದರ ಸಂಬಂಧಿಗಳನ್ನು ಸೆರೆಹಿಡಿದು, ಗಲ್ಲುಶಿಕ್ಷೆ ವಿಧಿಸಿದ್ದರಿಂದ, ಈ ಆಂದೋಲನ ಭಯದ ಕಾರಣದಿಂದ ಶಾಂತವಾಯಿತು.
ಎಂ ಮೊಹಮ್ಮದ್ ನೇತೃತ್ವದಲ್ಲಿ ಬಲೂಚಿಸ್ತಾನ ಸ್ಥಳೀಯ ಸಂಪನ್ಮೂಲಗಳ ರಕ್ಷಣೆಗೆ 1963ರಿಂದ 69ರವರೆಗೆ ಹೋರಾಟ ನಡೆಯಿತು. ಆಗಿನ ಪ್ರಧಾನಿ ಜುಲ್ಪಿಕರ್ ಅಲಿ ಭುಟ್ಟೋ ಬಲೂಚಿಸ್ತಾನದ ಪ್ರಾಂತೀಯ ಸರ್ಕಾರವನ್ನು ವಜಾಗೊಳಿಸಿದ್ದರಿಂದ ಆಕ್ರೋಶಗೊಂಡ ಜನರು 1973-77ರವರೆಗೆ ಸಂಘರ್ಷ ನಡೆಸಿದರು. 1977ರಲ್ಲಿ ಭುಟ್ಟೋ ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ಹೋರಾಟ ಸ್ಥಗಿತಗೊಂಡಿತು. ಬಲೂಚಿಸ್ತಾನ ಲಿಬರೇಶನ್ ಆರ್ವಿು 2000ನೇ ಇಸ್ವಿಯಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಆಗಿನಿಂದ ಹೋರಾಟ ನಡೆಯುತ್ತಿದ್ದರೂ, ತೀವ್ರ ಸ್ವರೂಪ ಪಡೆದುಕೊಂಡಿರುವುದು 2025ರಲ್ಲಿ.