ಅಯತೊಲ್ಲಾ ಖಮೇನಿ ಹತ್ಯೆ: ಇರಾನ್​ನ ಮುಂದಿನ ಸುಪ್ರೀಂ ಲೀಡರ್ ಯಾರು​? ಕೇಳಿಬರುತ್ತಿರುವ ಪ್ರಮುಖ ಹೆಸರುಗಳಿವು...Ayatollah Khamenei

ಅಯತೊಲ್ಲಾ ಖಮೇನಿ ಹತ್ಯೆ! Ayatollah Khamenei
ಅಯತೊಲ್ಲಾ ಖಮೇನಿ ಹತ್ಯೆ! Ayatollah Khamenei
Published on

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆ
  • ಖಮೇನಿ ಹತ್ಯೆ ಬೆನ್ನಲ್ಲೇ ಮೂಡಿದ ಇರಾನ್​ನ ಮುಂದಿನ ಲೀಡರ್​ ಯಾರು ಅನ್ನೋ ಪ್ರಶ್ನೆ
  • ಇರಾನ್‌ನ ಸರ್ವೋಚ್ಚ ನಾಯಕ, ಇಸ್ಲಾಮಿಕ್ ಗಣರಾಜ್ಯದ ಅತ್ಯಂತ ಶಕ್ತಿಶಾಲಿ ವ್ಯಕ್ತಿ
  • ಸಶಸ್ತ್ರ ಪಡೆಗಳು, ಭದ್ರತಾ ಸೇವೆಗಳು ಮತ್ತು ಸರ್ಕಾರದ ಪ್ರಮುಖ ಸಂಸ್ಥೆಗಳನ್ನು ಸುಪ್ರೀಂ ಲೀಡರ್​ ನಿಯಂತ್ರಿಸುತ್ತಾರೆ
Ayatollah Khamenei : ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆಯಾಗಿರುವುದಾಗಿ ಯುಎಸ್​ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಘೋಷಣೆ ಮಾಡಿದ್ದಾರೆ. ಟ್ರಂಪ್​ ಮಾತ್ರವಲ್ಲದೆ, ಇರಾನ್​ ಮಾಧ್ಯಮಗಳು ಕೂಡ ವರದಿ ಮಾಡಿವೆ.
ಅಮೆರಿಕ ಮತ್ತು ಇಸ್ರೇಲ್​ ಅಂದುಕೊಂಡಿದ್ದ ಗುರಿಯನ್ನು ಸಾಧಿಸಿವೆ. ಇನ್ನೊಂದೆಡೆ ಇರಾನ್​ನ ಕೆಲ ಜನರಿಗೂ ಖಮೇನಿ ಸಾವು ಖುಷಿ ತಂದಿದೆ. ಇದೆಲ್ಲದರ ನಡುವೆ ಈಗ ಮೂಡುವ ಪ್ರಶ್ನೆ ಏನೆಂದರೆ, ಇರಾನ್​ನ ಮುಂದಿನ ಲೀಡರ್​ ಯಾರು ಅನ್ನೋದು. ಹಾಗಾದರೆ, ಆ ಸ್ಥಾನವನ್ನು ಯಾರು ತುಂಬುತ್ತಾರೆ? ಇರಾನ್​ನ ಸುಪ್ರೀಂ ಲೀಡರ್​ ರೇಸ್​ನಲ್ಲಿ ಯಾರಿದ್ದಾರೆ ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.
ಇರಾನ್‌ನ ಸರ್ವೋಚ್ಚ ನಾಯಕ, ಇಸ್ಲಾಮಿಕ್ ಗಣರಾಜ್ಯದ ಅತ್ಯಂತ ಶಕ್ತಿಶಾಲಿ ವ್ಯಕ್ತಿ. ಸಶಸ್ತ್ರ ಪಡೆಗಳು, ಭದ್ರತಾ ಸೇವೆಗಳು ಮತ್ತು ಸರ್ಕಾರದ ಪ್ರಮುಖ ಸಂಸ್ಥೆಗಳನ್ನು ಸುಪ್ರೀಂ ಲೀಡರ್​ ನಿಯಂತ್ರಿಸುತ್ತಾರೆ. ಅಲ್ಲದೆ, ದೇಶದ ವಿದೇಶಿ ಮತ್ತು ದೇಶೀಯ ನೀತಿಗಳನ್ನು ರೂಪಿಸುತ್ತಾರೆ.
86 ವರ್ಷ ವಯಸ್ಸಿನ ಖಮೇನಿ 1989 ರಿಂದ ಇರಾನ್‌ನ ಸರ್ವೋಚ್ಚ ನಾಯಕರಾಗಿದ್ದರು. ತಮ್ಮ ದೀರ್ಘ ಅಧಿಕಾರಾವಧಿಯಲ್ಲಿ, ಅನೇಕ ಬಿಕ್ಕಟ್ಟುಗಳು, ಯುದ್ಧಗಳು ಮತ್ತು ರಾಜಕೀಯ ಪ್ರಕ್ಷುಬ್ಧತೆಯನ್ನು ಎದುರಿಸಿದ್ದಾರೆ. ಪ್ರಸ್ತುತ, ಇಸ್ರೇಲ್ ಮತ್ತು ಯುಎಸ್, ಇರಾನ್‌ಗೆ ಪ್ರಮುಖ ಬೆದರಿಕೆ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ, ಖಮೇನಿ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬುದರ ಕುರಿತು ಆಸಕ್ತಿದಾಯಕ ಚರ್ಚೆ ನಡೆಯುತ್ತಿದೆ.

ರೇಸ್​ನಲ್ಲಿರುವ ಹೆಸರುಗಳಿವು...

ಇರಾನಿನ ಸಂವಿಧಾನದ ಪ್ರಕಾರ, 88 ಹಿರಿಯ ಇಸ್ಲಾಮಿಕ್ ವಿದ್ವಾಂಸರನ್ನು ಒಳಗೊಂಡ ಪ್ರಬಲ ಪಾದ್ರಿ ಸಂಸ್ಥೆಯಾದ ತಜ್ಞರ ಸಭೆಯು ಹೊಸ ಇರಾನಿನ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಹೊಂದಿದೆ. ಖಮೇನಿಯ ಸಂಭಾವ್ಯ ಉತ್ತರಾಧಿಕಾರಿಗಳಾಗಿ ಹಲವಾರು ಹೆಸರುಗಳು ಕೇಳಿಬರುತ್ತಿವೆ. ಇವರಲ್ಲಿ ಪ್ರಮುಖರೆಂದರೆ, ಹೊಜತ್-ಉಲ್-ಎಸ್ಲಾಮ್ ಮೊಹ್ಸೆನ್ ಕೋಮಿ, ಅಯತೊಲ್ಲಾ ಅಲಿರೆಜಾ ಅರಾಫಿ ಹಾಗೂ ಅಯತೊಲ್ಲಾ ಮೊಹ್ಸೆನ್ ಅರಾಕಿ.
ಮೊಹ್ಸೆನ್ ಕೋಮಿ ಅವರನ್ನು ಖಮೇನಿಯ ಆಪ್ತ ಸಲಹೆಗಾರ ಎಂದು ಪರಿಗಣಿಸಲಾಗಿದೆ. ಅವರು ಸರ್ವೋಚ್ಚ ನಾಯಕನ ಜಾಲದೊಂದಿಗೆ ಆಳವಾದ ಸಂಪರ್ಕ ಹೊಂದಿರುವ ವಿಶ್ವಾಸಾರ್ಹ ವ್ಯಕ್ತಿ ಎಂದು ತಿಳಿದುಬಂದಿದೆ. ಖಮೇನಿಯ ಪರಂಪರೆಯನ್ನು ಮುಂದುವರಿಸಬಲ್ಲ ನಾಯಕರಾಗಿ ಹೊಜತ್-ಉಲ್-ಎಸ್ಲಾಮ್ ಮೊಹ್ಸೆನ್ ಕೋಮಿ ಅವರನ್ನು ಇರಾನ್​ನಲ್ಲಿ ವ್ಯಾಪಕವಾಗಿ ಬೆಂಬಲಿಸಲಾಗುತ್ತಿದೆ.
ಅಯತೊಲ್ಲಾ ಅಲಿರೆಜಾ ಅರಾಫಿ ಕೂಡ ಓರ್ವ ಪ್ರಮುಖ ವ್ಯಕ್ತಿ. ಅರಾಫಿ ಒಬ್ಬ ಹಿರಿಯ ಧರ್ಮಗುರು. ಅವರು ತಜ್ಞರ ಸಭೆ ಮತ್ತು ಗಾರ್ಡಿಯನ್ ಕೌನ್ಸಿಲ್ ಎರಡರಲ್ಲೂ ನಾಯಕತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರು ಇರಾನ್‌ನ ಸೆಮಿನರಿ ವ್ಯವಸ್ಥೆಯ ಮುಖ್ಯಸ್ಥರೂ ಆಗಿದ್ದಾರೆ.
ಅಲಿರೆಜಾ ಅರಾಫಿ ಮಾತ್ರವಲ್ಲದೆ, ಅಯತೊಲ್ಲಾ ಮೊಹ್ಸೆನ್ ಅರಾಕಿ ಕೂಡ ಪ್ರಮುಖ ವ್ಯಕ್ತಿಯಾಗಿದ್ದಾರೆ. ಮೊಹ್ಸೆನ್ ಅರಾಕಿ ತಜ್ಞರ ಸಭೆಯ ದೀರ್ಘಕಾಲದ ಸದಸ್ಯರಾಗಿದ್ದಾರೆ. ಅವರೊಂದಿಗೆ, ಅಯತೊಲ್ಲಾ ಘೋಲಮ್ ಹೊಸೇನ್ ಮೊಹ್ಸೆನಿ ಎಜಿ ಮತ್ತು ಅಯತೊಲ್ಲಾ ಹಶೆಮ್ ಹೊಸೇನ್ ಬುಶೆಹ್ರಿ ಅವರನ್ನು ಸಹ ಈ ಹುದ್ದೆಗೆ ಪರಿಗಣಿಸಲಾಗುತ್ತಿದೆ. ಆದರೆ, ಸುಪ್ರೀಂ ಲೀಡರ್​ ಯಾರಾಗುತ್ತಾರೆ ಅನ್ನೋದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net