ನನ್ನ ಮೇಲೆ ದಾಳಿಯಾದರೆ ಇರಾನ್ ಎಂಬ ದೇಶವೇ ಇರಲ್ಲ : ಡೊನಾಲ್ಡ್ ಟ್ರಂಪ್ ಎಚ್ಚರಿಕೆ! | Donald Trump

Donald Trump
Donald Trump
Published on
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮತ್ತು ಇರಾನ್ ನಡುವಿನ ಶೀತಲ ಸಮರ ಈಗ ಹೊಸ ಸ್ವರೂಪ ಪಡೆದುಕೊಂಡಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಟ್ರಂಪ್, ತಮ್ಮನ್ನು ಹತ್ಯೆ ಮಾಡಲು ಇರಾನ್ ಸಂಚು ರೂಪಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಲ್ಲದೆ, ಒಂದು ವೇಳೆ ಅಂತಹ ಪ್ರಯತ್ನ ನಡೆದರೆ ಇರಾನ್ ದೇಶವನ್ನು ಭೂಪಟದಿಂದಲೇ ಅಳಿಸಿಹಾಕುವುದಾಗಿ ಅತ್ಯಂತ ಮಾರಕ ಬೆದರಿಕೆ ಹಾಕಿದ್ದಾರೆ.
'ನ್ಯೂಸ್ ನೇಷನ್' ವಾಹಿನಿಯ 'ಕೇಟೀ ಪಾವ್ಲಿಚ್ ಟುನೈಟ್ ಶೋ'ಗೆ ನೀಡಿದ ಸಂದರ್ಶನದಲ್ಲಿ ಮಂಗಳವಾರ ಮಾತನಾಡಿದ ಟ್ರಂಪ್, ಇರಾನ್ ಕುರಿತು ಇದುವರೆಗಿನ ಅತ್ಯಂತ ಕಠಿಣ ನಿಲುವನ್ನು ಪ್ರದರ್ಶಿಸಿದರು. "ನನಗೆ ಸ್ಪಷ್ಟ ಸೂಚನೆಗಳಿವೆ. ನನಗೆ ಏನಾದರೂ ಸಂಭವಿಸಿದರೆ, ಅಮೆರಿಕವು ಇರಾನ್ ಅನ್ನು ಭೂಮಿಯ ಮೇಲಿನಿಂದ ಅಳಿಸಿಹಾಕಲಿದೆ. ನನ್ನ ಜೀವಕ್ಕೆ ಸ್ವಲ್ಪವಾದರೂ ಹಾನಿ ಮಾಡಲು ಪ್ರಯತ್ನಿಸಿದರೆ, ಇರಾನ್ ಸಂಪೂರ್ಣ ನಾಶವಾಗಲಿದೆ ಎಂದು ನಾನು ನನ್ನ ಸಲಹೆಗಾರರಿಗೆ ಈಗಾಗಲೇ ಆದೇಶ ನೀಡಿದ್ದೇನೆ" ಎಂದು ಅವರು ಗುಡುಗಿದ್ದಾರೆ.
ಘರ್ಷಣೆಗೆ ಕಾರಣವಾದ ಹೇಳಿಕೆಗಳು
ಈ ವಿವಾದಕ್ಕೆ ಮುಖ್ಯ ಕಾರಣ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಬಗ್ಗೆ ಟ್ರಂಪ್ ನೀಡಿದ ಹೇಳಿಕೆ. ಖಮೇನಿ ಅವರನ್ನು 'ಅನಾರೋಗ್ಯ ಪೀಡಿತ' ಎಂದು ಕರೆದ ಟ್ರಂಪ್, ಅವರು ದೇಶವನ್ನು ಸರಿಯಾಗಿ ನಡೆಸುತ್ತಿಲ್ಲ ಮತ್ತು ಜನರನ್ನು ಕೊಲ್ಲುವುದನ್ನು ನಿಲ್ಲಿಸಬೇಕು ಎಂದು ಟೀಕಿಸಿದ್ದರು. ಇರಾನ್‌ಗೆ ಈಗ ಹೊಸ ನಾಯಕತ್ವದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದರು.

ಇರಾನ್ ತಿರುಗೇಟು

ಟ್ರಂಪ್ ಅವರ ಹೇಳಿಕೆಗೆ ಇರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಇರಾನ್ ಸಶಸ್ತ್ರ ಪಡೆಗಳ ವಕ್ತಾರ ಜನರಲ್ ಅಬೋಲ್‌ಫಜಲ್ ಶೇಕಾರ್ಚಿ ಮಾತನಾಡಿ, "ನಮ್ಮ ನಾಯಕನ ವಿರುದ್ಧ ಆಕ್ರಮಣಕಾರಿ ಕೈ ಎತ್ತಿದರೆ, ನಾವು ಆ ಕೈಯನ್ನು ಕತ್ತರಿಸುವುದಲ್ಲದೆ, ಅವರ ಜಗತ್ತಿಗೇ ಬೆಂಕಿ ಹಾಕುತ್ತೇವೆ" ಎಂದು ಎಚ್ಚರಿಸಿದ್ದಾರೆ. ಟ್ರಂಪ್ ತಮ್ಮ ಮಿತಿಯಲ್ಲಿ ಇರಬೇಕು ಎಂದು ಇರಾನ್ ಎಚ್ಚರಿಸಿದೆ.
ಹೆಚ್ಚಿದ ಆತಂಕ: ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ನಡೆಯುತ್ತಿರುವ ಈ ತೀವ್ರ ಮಾತಿನ ಚಕಮಕಿ ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ. ಇರಾನ್‌ನಲ್ಲಿ ನಡೆಯುತ್ತಿರುವ ಆಂತರಿಕ ಅಶಾಂತಿ ಮತ್ತು ಅಮೆರಿಕದ ವಿಧಿಸಿರುವ ಆರ್ಥಿಕ ನಿರ್ಬಂಧಗಳ ನಡುವೆ ಈ 'ಹತ್ಯೆ ಸಂಚಿನ' ಆರೋಪಗಳು ಉಭಯ ದೇಶಗಳನ್ನು ಯುದ್ಧದ ಅಂಚಿಗೆ ತಂದು ನಿಲ್ಲಿಸಿವೆ,(ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net