ಬಾಂಗ್ಲಾದಲ್ಲಿ ನಾಲ್ವರು ಹಿಂದೂಗಳ ಸಾವು ಪ್ರಕರಣ: ಕೊಲೆಗೈದು, ಸ್ನಾನ ಮಾಡಿ, ಆಹಾರ ತಿಂದ ಕಿರಾತಕರು! Hindu Family

ಬಾಂಗ್ಲಾದಲ್ಲಿ ನಾಲ್ವರು ಹಿಂದೂಗಳ ಸಾವು ಪ್ರಕರಣ: ಕೊಲೆಗೈದು, ಸ್ನಾನ ಮಾಡಿ, ಆಹಾರ ತಿಂದ ಕಿರಾತಕರು! Hindu Family
ಬಾಂಗ್ಲಾದಲ್ಲಿ ನಾಲ್ವರು ಹಿಂದೂಗಳ ಸಾವು ಪ್ರಕರಣ: ಕೊಲೆಗೈದು, ಸ್ನಾನ ಮಾಡಿ, ಆಹಾರ ತಿಂದ ಕಿರಾತಕರು! Hindu Family
Published on

ಪ್ರಮುಖ ಮುಖ್ಯಾಂಶಗಳು

  • ಬಾಂಗ್ಲಾದೇಶದ ರಂಗ್‌ಪುರ್‌ನಲ್ಲಿ ಹಿಂದೂ ಕುಟುಂಬದ ನಾಲ್ವರ ಬರ್ಬರ ಹತ್ಯೆ
  • ಮನೆಯ ಮೇಲ್ಛಾವಣಿಯಲ್ಲಿ ಡ್ರಗ್ಸ್ ಸೇವಿಸುವುದನ್ನು ನೋಡಿದ್ದಕ್ಕೆ ಇಡೀ ಕುಟುಂಬದ ಹತ್ಯೆ
  • ಕೊಲೆ ಮಾಡಿದ ಬಳಿಕ 6 ರಿಂದ 7 ಗಂಟೆಗಳ ಕಾಲ ಮನೆಯಲ್ಲೇ ಕುಳಿತು ತಿಂದ ಆರೋಪಿಗಳು
  • ಪ್ರಕರಣದ ತನಿಖೆ ನಡೆಸಿ ಮಗ್ಧೋ ಹಾಗೂ ಸಿದ್ಧಾರ್ಥ್ ಎಂಬ ಇಬ್ಬರು ಶಂಕಿತರ ಬಂಧನ
ಢಾಕಾ: ಬಾಂಗ್ಲಾದೇಶದ ರಂಗ್‌ಪುರ್ ನಗರದಲ್ಲಿ ನಿವೃತ್ತ ಶಾಲಾ ಶಿಕ್ಷಕರೊಬ್ಬರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಹಿಂದೂಗಳು ( Hindu Family ) ತಮ್ಮದೇ ಮನೆಯಲ್ಲಿ ಶವವಾಗಿ ಪತ್ತೆಯಾದ ಪ್ರಕರಣ ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಪೊಲೀಸರು ಅನುಮಾನ ವ್ಯಕ್ತಪಡಿಸಿದಂತೆ ಇದೊಂದು ಭೀಕರ ಹತ್ಯೆ ಎಂಬುದು ಬಯಲಾಗಿದೆ.
ಮನೆಯ ಮೇಲ್ಛಾವಣಿಯಲ್ಲಿ ಇಬ್ಬರು ಯಬಾ ಮೆಥಾಂಫೆಟಾಮೈನ್ ಡ್ರಗ್ ಸೇವಿಸುತ್ತಿದ್ದಾಗ ಕುಟುಂಬದ ಸದಸ್ಯರೊಬ್ಬರು ಇದನ್ನು ನೋಡಿದ್ದಾರೆ. ಈ ರಹಸ್ಯ ಹೊರಬೀಳುತ್ತದೆ ಎಂಬ ಭಯದಿಂದ ಇಡೀ ಕುಟುಂಬವನ್ನೇ ಹತ್ಯೆ ಮಾಡಲಾಗಿದೆ ಎಂದು ಬಾಂಗ್ಲಾದೇಶದ ಮಾಧ್ಯಮ ವರದಿಗಳು ತಿಳಿಸಿವೆ. ಅಲ್ಲದೆ, ನಾಲ್ವರನ್ನು ಕೊಂದ ಬಳಿಕ ಆರೋಪಿಗಳು ತಕ್ಷಣವೇ ಅಲ್ಲಿಂದ ಪರಾರಿಯಾಗಿಲ್ಲ, ಬದಲಿಗೆ ಸುಮಾರು 6 ರಿಂದ 7 ಗಂಟೆಗಳ ಕಾಲ ಅಲ್ಲೇ ಕುಳಿತು ಖರ್ಜೂರ ಮತ್ತು ಸೌತೆಕಾಯಿಯನ್ನು ತಿಂದಿದ್ದಾರೆ. ನಂತರ ಸ್ನಾನ ಮಾಡಿ ಅಲ್ಲಿಂದ ತೆರಳಿದ್ದಾರೆ ಎಂದು ವರದಿಯಾಗಿದೆ. 
ನಿವೃತ್ತ ಶಾಲಾ ಶಿಕ್ಷಕ ಗಣಪತಿ ಚಕ್ರವರ್ತಿ (65), ಅವರ ಪತ್ನಿ ಪ್ರೀತಿಲತಾ ಚಕ್ರವರ್ತಿ (50), ಪುತ್ರಿ ಅಗಮಿ ಚಕ್ರವರ್ತಿ ಪ್ರಾರ್ಥಿ (23) ಮತ್ತು 12 ವರ್ಷದ ಪುತ್ರ ಪ್ರಿಯಮ್ ಚಕ್ರವರ್ತಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗುರುವಾರ ರಾತ್ರಿಯಿಂದಲೇ ಈ ಕುಟುಂಬದ ಎಲ್ಲಾ ಸದಸ್ಯರ ಮೊಬೈಲ್ ಫೋನ್‌ಗಳು ನಿರಂತರವಾಗಿ ಸ್ವಿಚ್‌ಆಫ್ ಆಗಿದ್ದವು. ಇದರಿಂದ ಅನುಮಾನಗೊಂಡ ಸಂಬಂಧಿಕರು ಶನಿವಾರ ರಾತ್ರಿ ಅವರ ಮನೆಗೆ ನೇರವಾಗಿ ಬಂದಿದ್ದಾರೆ. ಆದರೆ, ಮನೆಯ ಮುಖ್ಯ ಬಾಗಿಲಿಗೆ ಹೊರಗಿನಿಂದ ಬೀಗ ಹಾಕಿದ್ದು, ಒಳಗೆ ಲೈಟ್ಸ್​ ಆಫ್​ ಆಗಿತ್ತು. ಕೂಡಲೇ ಸಂಬಂಧಿಕರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. 
ಪೊಲೀಸರು ಸ್ಥಳಕ್ಕೆ ಆಗಮಿಸಿ, ಬೀಗ ಒಡೆದು ಒಳಗೆ ಪ್ರವೇಶಿಸಿದಾಗ ಅಲ್ಲಿ ಕಂಡುಬಂದ ದೃಶ್ಯವು ಭೀಕರವಾಗಿತ್ತು. ತಾಯಿ ಮತ್ತು ಮಗಳ ಮೃತದೇಹಗಳು ಮೆಟ್ಟಿಲುಗಳ ಮೇಲೆ ಬಿದ್ದಿದ್ದರೆ, ಗಣಪತಿ ಚಕ್ರವರ್ತಿ ಅವರ ಶವವು ಕಟ್ಟಡದ ಮಹಡಿಯ ಮೇಲೆಯೂ ಹಾಗೂ 12 ವರ್ಷದ ಬಾಲಕನ ಮೃತದೇಹವು ಕೋಣೆಯೊಂದರ ಹಾಸಿಗೆಯ ಅಡಿಯಲ್ಲಿ ಪತ್ತೆಯಾಯಿತು. 
ಮೃತ ಗಣಪತಿ ಚಕ್ರವರ್ತಿ ಅವರು ಯಾರೊಬ್ಬರ ಜೊತೆಗೂ ಯಾವುದೇ ವೈಷಮ್ಯ ಅಥವಾ ಶತ್ರುತ್ವ ಹೊಂದಿರಲಿಲ್ಲ ಎಂದು ಸಂಬಂಧಿಕರು ಕಣ್ಣೀರಿಡುತ್ತಾ ತಿಳಿಸಿದ್ದಾರೆ. ಕಳೆದ ವರ್ಷವಷ್ಟೇ ಅವರು ಶಾಲಾ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿದ್ದರು. ಬಳಿಕ ತಮ್ಮ ಮನೆಯಲ್ಲೇ ಹೋಮಿಯೋಪತಿ ವೈದ್ಯಕೀಯ ಅಭ್ಯಾಸ ಮಾಡುತ್ತಾ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಇನ್ನು ಅವರ ಪುತ್ರಿ ಈ ವರ್ಷವೇ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರೆ, ಕಿರಿಯ ಮಗ ಐದನೇ ತರಗತಿಯಲ್ಲಿ ಓದುತ್ತಿದ್ದ. 
ಇನ್ನೂ ಈ ಕುಟುಂಬದ ಮೇಲೆ ಯಾರಿಗೂ ಯಾವುದೇ ವೈಷಮ್ಯ ಅಥವಾ ಶತ್ರುತ್ವವಿರಲಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ರಂಗ್‌ಪುರ್ ಮಹಾನಗರ ಪೊಲೀಸ್, ಅಪರಾಧ ತನಿಖಾ ಇಲಾಖೆ (CID) ಮತ್ತು ಪತ್ತೇದಾರಿ ವಿಭಾಗವೂ ಜಂಟಿಯಾಗಿ ತನಿಖೆ ನಡೆಸಿ, ಮಗ್ಧೋ ಮತ್ತು ಸಿದ್ಧಾರ್ಥ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿವೆ.
ರಂಗ್‌ಪುರ್ ಪೊಲೀಸ್ ಆಯುಕ್ತ ಮೊಹಮ್ಮದ್ ಅಬ್ದುಲ್ ಮಬುದ್ ಅವರ ಪ್ರಕಾರ, ಗುರುವಾರ ರಾತ್ರಿ ಇಬ್ಬರು ಶಂಕಿತರು ನೆರೆಯ ಕಟ್ಟಡದ ಮೇಲ್ಛಾವಣಿಯಿಂದ ಗಣಪತಿ ಅವರ ಮನೆಯ ಮೇಲ್ಛಾವಣಿಗೆ ಬಂದಿದ್ದರು. ಸದ್ದು ಕೇಳಿ ಮೇಲಕ್ಕೆ ಹೋದ ಗಣಪತಿ ಅವರು ಇಬ್ಬರು ಶಂಕಿತರನ್ನು ಪ್ರಶ್ನಿಸಿದರು. ತಾವು ಡ್ರಗ್ಸ್ ಸೇವಿಸಿರುವುದನ್ನು ಕಂಡರೆಂಬ ಭಯದಿಂದ ಗಣಪತಿ ಅವರನ್ನು ಅಲ್ಲೇ ಕತ್ತು ಹಿಸುಕಿ ಕೊಲೆ ಮಾಡಿದರು. ಜಗಳದ ಶಬ್ದ ಕೇಳಿ ಬಂದ ಗಣಪತಿ ಅವರ ಪತ್ನಿ ಪ್ರೀತಿಲತಾ ಅವರನ್ನೂ ಅದೇ ರೀತಿಯಲ್ಲಿ ಹತ್ಯೆ ಮಾಡಲಾಯಿತು. ಇದರ ಬೆನ್ನಲ್ಲೇ ಅವರ ಮಗಳು ಅಗಮಿ ಮತ್ತು ಮಗ ಪ್ರಿಯಮ್ ಅವರನ್ನೂ ಕೊಲೆ ಮಾಡಲಾಯಿತು.
ಪ್ರಿಯಮ್ ಅವರು ಶಂಕಿತರಲ್ಲಿ ಒಬ್ಬರ ಪರಿಚಿತರಾಗಿರಬಹುದು ಎಂದು ಶಂಕಿಸಲಾಗಿದೆ. ಪ್ರಿಯಮ್ ಅವರು ಸಿದ್ಧಾರ್ಥನ ಕಿರಿಯ ಸಹೋದರ ಅಪೋರ್ಕು ಅವರ ಆಪ್ತ ಸ್ನೇಹಿತರಾಗಿದ್ದರು ಮತ್ತು ತಮ್ಮ ಗುರುತು ಪತ್ತೆಯಾಗುತ್ತದೆ ಎಂಬ ಭಯದಿಂದ ಅವರನ್ನು ಕೊಲೆ ಮಾಡಿರಬಹುದು ಎಂದು ತನಿಖಾಧಿಕಾರಿಗಳು ನಂಬಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net