ಅರುಣಾಚಲ ಪ್ರದೇಶ ನಮ್ಮದು... ಚೀನಾದ ಶಾಂಘೈ ಏರ್​ಪೋರ್ಟ್​ನಲ್ಲಿ ಭಾರತೀಯ ಮಹಿಳೆಗೆ ಕಿರುಕುಳ! Indian woman

ಭಾರತ ಮೂಲದ ಮಹಿಳೆಗೆ ಚೀನಾದಲ್ಲಿ ಕಿರುಕುಳ
ಭಾರತ ಮೂಲದ ಮಹಿಳೆಗೆ ಚೀನಾದಲ್ಲಿ ಕಿರುಕುಳ
Published on

ಪ್ರಮುಖ ಮುಖ್ಯಾಂಶಗಳು

  • ಶಾಂಘೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತದ ಮಹಿಳೆಗೆ ಕಿರುಕುಳ
  • ಪಾಸ್​ ಪೋರ್ಟ್​ ತೋರಿಸಿದರು ಅದನ್ನು ಸರಿಯಾಗಿ ಪರಿಶೀಲಿಸದ ಆರೋಪ
  • ಚೀನಾದ ವಲಸೆ ಅಧಿಕಾರಿಗಳು ಅಮಾನವೀಯವಾಗಿ ವರ್ತಿಸಿದರು ಎಂದ ಪೆಮಾ
ನವದೆಹಲಿ: ಶಾಂಘೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೀನಾದ ವಲಸೆ ಅಧಿಕಾರಿಗಳು ನನ್ನನ್ನು ಕೆಲ ಕಾಲ ಬಂಧನದಲ್ಲಿಟ್ಟು, ಕಿರುಕುಳ ನೀಡಿದರು ಎಂದು ಭಾರತದ ಅರುಣಾಚಲ ಪ್ರದೇಶ ಮೂಲದ ಯುಕೆ ನಿವಾಸಿಯೊಬ್ಬರು ( Indian woman ) ಗಂಭೀರ ಆರೋಪ ಮಾಡಿದ್ದಾರೆ. ಪಾಸ್​ ಪೋರ್ಟ್​ ತೋರಿಸಿದರು ಕೂಡ ಅದನ್ನು ಪರಿಶೀಲಿಸುವ ಕನಿಷ್ಠ ಸಾವಧಾನವನ್ನು ತೋರದೆ ಅಮಾನವೀಯವಾಗಿ ವರ್ತಿಸಿದರು ಎಂದು ಸಂತ್ರಸ್ತ ಮಹಿಳೆ ದೂರಿದ್ದಾರೆ.
ಅಂದಹಾಗೆ ಕಿರುಕುಳದ ಆರೋಪ ಮಾಡಿರುವ ಮಹಿಳೆಯನ್ನು ಪೆಮಾ ವಾಂಗ್‌ಜೋಮ್ ಥೋಂಗ್‌ಡಾಕ್ ಎಂದು ಗುರುತಿಸಲಾಗಿದೆ. ಈಕೆ ನವೆಂಬರ್ 21 ರಂದು ಲಂಡನ್‌ನಿಂದ ಜಪಾನ್‌ಗೆ ಪ್ರಯಾಣಿಸುತ್ತಿದ್ದರು. ಮಾರ್ಗ ಮಧ್ಯೆ ಶಾಂಘೈನ ಪುಡಾಂಗ್ ವಿಮಾನ ನಿಲ್ದಾಣದಲ್ಲಿ ಅವರಿದ್ದ ವಿಮಾನ ಇಳಿಯಿತು. ಬಳಿಕ ಮೂರು ಗಂಟೆಗಳ ಕಾಲ ಆ ನಿಲ್ದಾಣದಲ್ಲಿ ವಿಶ್ರಾಂತಿ ಪಡೆದರು.
ಈ ವೇಳೆ ವಲಸೆ ಕೌಂಟರ್‌ನಲ್ಲಿದ್ದ ಅಧಿಕಾರಿಗಳು ಪೆಮಾ ಅವರ ಪಾಸ್‌ಪೋರ್ಟ್ ಪರಿಶೀಲಿಸಲು ಮುಂದಾದರು. ಪಾಸ್​ಪೋರ್ಟ್​ನಲ್ಲಿ ಅರುಣಾಚಲ ಪ್ರದೇಶವನ್ನು ಪೆಮಾ ಅವರ ಜನ್ಮಸ್ಥಳ ಎಂದು ಉಲ್ಲೇಖಿಸಲಾದೆ. ಆದ್ದರಿಂದ ಅದನ್ನು 'ಅಮಾನ್ಯ' ಎಂದು ಘೋಷಿಸಿದ ಚೀನಾದ ವಲಸೆ ಅಧಿಕಾರಿಗಳು, ಕೆಲ ಕಾಲ ಪೆಮಾರನ್ನು ಬಂಧನದಲ್ಲಿಟ್ಟು ಕಿರುಕುಳ ನೀಡಿದ್ದಾರೆ. ಅಲ್ಲದೆ. ಅರುಣಾಚಲ ಪ್ರದೇಶ, ಚೀನಾದ ಭಾಗ ಎಂದು ಉದ್ಧಟತನದ ಹೇಳಿಕೆ ನೀಡಿದರು ಎಂದು ಪೆಮಾ ಅವರು ಗಂಭೀರ ಆರೋಪ ಮಾಡಿದ್ದಾರೆ.
ವಿಮಾನ ನಿಲುಗಡೆ ಬಳಿಕ ನಾನು ನನ್ನ ಪಾಸ್‌ಪೋರ್ಟ್ ಸಲ್ಲಿಸಿ ಭದ್ರತಾ ಸಿಬ್ಬಂದಿಗಾಗಿ ಕಾಯುತ್ತಿದ್ದೆ. ಅಷ್ಟರಲ್ಲಿ, ಒಬ್ಬ ಅಧಿಕಾರಿ ಬಂದು 'ಭಾರತ, ಭಾರತ' ಎಂದು ನನ್ನ ಹೆಸರಿನೊಂದಿಗೆ ಕಿರುಚಲು ಪ್ರಾರಂಭಿಸಿದರು ಮತ್ತು ನನ್ನನ್ನು ಪ್ರತ್ಯೇಕವಾಗಿ ಕರೆದೊಯ್ದರು. ನಾನು ಪ್ರಶ್ನೆ ಮಾಡಿದಾಗ ಅವರು ನನ್ನನ್ನು ವಲಸೆ ಟೇಬಲ್​ ಬಳಿಗೆ ಕರೆದೊಯ್ದು, 'ಅರುಣಾಚಲ, ಮಾನ್ಯವಲ್ಲದ ಪಾಸ್‌ಪೋರ್ಟ್' ಎಂದು ಹೇಳಿದರು ಅಂತ ಪೆಮಾ ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಭಾರತೀಯ ಪಾಸ್‌ಪೋರ್ಟ್ ಏಕೆ ಮಾನ್ಯವಾಗಿಲ್ಲ ಎಂದು ಪೆಮಾ ಪ್ರಶ್ನೆ ಮಾಡಿದಾಗ, "ಅರುಣಾಚಲ ಚೀನಾದ ಭಾಗ. ನಿಮ್ಮ ಪಾಸ್‌ಪೋರ್ಟ್ ಅಮಾನ್ಯವಾಗಿದೆ" ಎಂದು ಅಧಿಕಾರಿ ಉತ್ತರಿಸಿದರು. ಈ ಹೇಳಿಕೆಯು ನನ್ನನ್ನು ಗೊಂದಲಕ್ಕೀಡುಮಾಡಿತು. ಕಳೆದ ವರ್ಷ ಯಾವುದೇ ಸಮಸ್ಯೆಗಳಿಲ್ಲದೆ ಶಾಂಘೈ ಮೂಲಕವೇ ನಾನು ಪ್ರಯಾಣಿಸಿದ್ದೆ. ಲಂಡನ್‌ನಲ್ಲಿರುವ ಚೀನೀ ರಾಯಭಾರ ಕಚೇರಿ ಚೀನಾ ಮೂಲಕ ಹಾದುಹೋಗುವ ಭಾರತೀಯರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ದೃಢಪಡಿಸಿತ್ತು ಎಂಬುದನ್ನು ಇದೇ ವೇಳೆ ಪೆಮಾ ಮೆಲಕು ಹಾಕಿದರು.
ಚೀನಾ ಅಧಿಕಾರಿಗಳು ಉಪಟಳ ಅಷ್ಟಕ್ಕೆ ನಿಲ್ಲಲಿಲ್ಲ, ಹಲವಾರು ವಲಸೆ ಸಿಬ್ಬಂದಿ ಮತ್ತು ಚೀನಾ ಈಸ್ಟರ್ನ್ ಏರ್ಲೈನ್ಸ್ ಸಿಬ್ಬಂದಿ ನನ್ನನ್ನು ನೋಡಿ ಅಪಹಾಸ್ಯ ಮಾಡಿ, ನಕ್ಕರು ಮತ್ತು "ಚೀನೀ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು" ಸೂಚಿಸಿದರು ಎಂದು ಪೆಮಾ ಆರೋಪಿಸಿದರು. ವಿಮಾನ ನಿಲ್ದಾಣದ ಒಳಗೆ 18 ಗಂಟೆಗಳ ಅಗ್ನಿಪರೀಕ್ಷೆ ಎದುರಿಸಿದೆ. ಆ ಸಮಯದಲ್ಲಿ ನನಗೆ ಸ್ಪಷ್ಟ ಮಾಹಿತಿ, ಸರಿಯಾದ ಆಹಾರ ಅಥವಾ ವಿಮಾನ ನಿಲ್ದಾಣದ ಯಾವುದೇ ಸೌಲಭ್ಯಗಳನ್ನು ಬಳಸಲು ಬಿಡಲಿಲ್ಲ. ಇದಲ್ಲದೆ, ನನ್ನ ಪಾಸ್‌ಪೋರ್ಟ್ ಅನ್ನು ಕೂಡ ತಡೆಹಿಡಿಯಲಾಯಿತು ಮತ್ತು ಮಾನ್ಯ ವೀಸಾ ಹೊಂದಿದ್ದರೂ ಜಪಾನ್‌ಗೆ ಹೋಗುವ ನನ್ನ ಮುಂದಿನ ವಿಮಾನವನ್ನು ಹತ್ತದಂತೆಯೂ ನನ್ನನ್ನು ನಿರ್ಬಂಧಿಸಿದರು ಎಂದು ಪೆಮಾ ಆರೋಪಿಸಿದ್ದಾರೆ.
ಇನ್ನು ಚೀನಾ ಈಸ್ಟರ್ನ್‌ನಲ್ಲಿ ಪ್ರತ್ಯೇಕವಾಗಿ ಹೊಸ ಟಿಕೆಟ್ ಖರೀದಿಸಲು ಅಧಿಕಾರಿಗಳು ನನ್ನ ಮೇಲೆ ಒತ್ತಡ ಹೇರಿದರು ಮತ್ತು ಹಾಗೆ ಮಾಡಿದ ನಂತರವೇ ನನ್ನ ಪಾಸ್‌ಪೋರ್ಟ್ ಅನ್ನು ಹಿಂತಿರುಗಿಸುವುದಾಗಿ ಹೇಳಿದರು. ಇದರಿಂದ ಸಾಕಷ್ಟು ವಿಮಾನಗಳು ತಪ್ಪಿದವು. ಅಲ್ಲದೆ, ಹೋಟೆಲ್ ಬುಕಿಂಗ್‌ಗಳಿಂದ ಆರ್ಥಿಕ ನಷ್ಟ ಉಂಟಾಯಿತು ಎಂದು ಪೆಮಾ ಹೇಳಿದ್ದಾರೆ.
ಕೊನೆಗೆ ಪೆಮಾ ಅವರು ಯುಕೆಯಲ್ಲಿರುವ ತಮ್ಮ ಸ್ನೇಹಿತರೊಬ್ಬರ ಮೂಲಕ ಶಾಂಘೈನಲ್ಲಿರುವ ಭಾರತೀಯ ದೂತಾವಾಸ ಕಚೇರಿಯನ್ನು ತಲುಪುವಲ್ಲಿ ಯಶಸ್ವಿಯಾದರು. ನಂತರ ಭಾರತೀಯ ಅಧಿಕಾರಿಗಳು ಮಧ್ಯಪ್ರವೇಶಿಸಿ, ಪೆಮಾ ಅವರಿಗೆ ಜಪಾನ್​ಗೆ ಹೋಗಲು ಅನುವು ಮಾಡಿದರು. ತಮ್ಮ ಕಹಿ ಅನುಭವದ ಕುರಿತು ಪೆಮಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ನನ್ನನ್ನು ಚೀನಿ ಅಧಿಕಾರಿಗಳು ನಡೆಸಿಕೊಂಡ ರೀತಿ ಭಾರತದ ಸಾರ್ವಭೌಮತ್ವ ಮತ್ತು ಅರುಣಾಚಲ ಪ್ರದೇಶದ ನಾಗರಿಕರಿಗೆ ಮಾಡಿದ ನೇರ ಅವಮಾನ ಎಂದಿದ್ದಾರೆ. ಅಲ್ಲದೆ, ಈ ವಿಷಯವನ್ನು ಚೀನಾದ ಮುಂದೆ ಪ್ರಸ್ತಾಪಿಸಿ, ತನ್ನನ್ನು ಕೆಟ್ಟದಾಗಿ ನಡೆಸಿಕೊಂಡ ವಲಸೆ ಮತ್ತು ವಿಮಾನಯಾನ ಸಿಬ್ಬಂದಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮತ್ತು ಪರಿಹಾರಕ್ಕಾಗಿ ಒತ್ತಾಯಿಸುವಂತೆ ಭಾರತ ಸರ್ಕಾರವನ್ನು ಪೆಮಾ ಅವರು ಕೇಳಿಕೊಂಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net