ಮಗನ ಆಸೆಯೇ ಅಪ್ಪನಿಗೆ ಆಜ್ಞೆ: 75% ಆಸ್ತಿ ಸಮಾಜಕ್ಕೆ ಅರ್ಪಿಸಿದ ಅನಿಲ್ ಅಗರ್ವಾಲ್!

Anil Agarwal Donated 75% Of His Assets to Society
Anil Agarwal Donated 75% Of His Assets to Society
Published on
ನವದೆಹಲಿ: ಭಾರತದ ಪ್ರಮುಖ ಗಣಿಗಾರಿಕೆ ಮತ್ತು ನೈಸರ್ಗಿಕ ಸಂಪನ್ಮೂಲ ಕಂಪನಿ ವೇದಾಂತ ಗ್ರೂಪ್‌ನ (Vedanta Group) ಅಧ್ಯಕ್ಷ ಅನಿಲ್ ಅಗರ್ವಾಲ್(Anil Agarwal), ತಮ್ಮ ಜೀವನದ ಅತ್ಯಂತ ಕಠಿಣ ಸಮಯದಲ್ಲಿ ಮಹತ್ವದ ಮಾನವೀಯ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ.
ಹೌದು, ಇತ್ತೀಚೆಗೆ ನಿಧನರಾದ ತಮ್ಮ ಪುತ್ರ ಅಗ್ನಿವೇಶ್ ಅಗರ್ವಾಲ್ ಅವರ ಆಸೆಯಂತೆ, ತಮ್ಮ ಗಳಿಕೆಯ ಶೇ. 75ರಷ್ಟು ಸಂಪತ್ತನ್ನು ಸಮಾಜಕ್ಕೆ ಮರಳಿಸುವುದಾಗಿ ಅವರು ಭಾವುಕವಾಗಿ ಘೋಷಿಸಿದ್ದಾರೆ.
ಅನಿಲ್ ಅಗರ್ವಾಲ್ ಅವರ ಏಕೈಕ ಪುತ್ರ ಅಗ್ನಿವೇಶ್ ಅಗರ್ವಾಲ್ (49), ಅಮೆರಿಕದ ನ್ಯೂಯಾರ್ಕ್‌ನಲ್ಲಿ ಜ.7ರಂದು ಹೃದಯಾಘಾತದಿಂದ ನಿಧನರಾದರು. ಸ್ಕೀಯಿಂಗ್ ಅಪಘಾತದಿಂದ ಚೇತರಿಸಿಕೊಳ್ಳುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಮಗನ ಅಗಲಿಕೆಯಿಂದ ತೀವ್ರವಾಗಿ ನೊಂದಿರುವ ಅನಿಲ್ ಅಗರ್ವಾಲ್, "ಒಬ್ಬ ತಂದೆ ಮಗನಿಗೆ ವಿದಾಯ ಹೇಳುವುದು ಅತ್ಯಂತ ನೋವಿನ ಸಂಗತಿ" ಎಂದು ಎಕ್ಸ್ (X) ನಲ್ಲಿ ಬರೆದುಕೊಂಡಿದ್ದಾರೆ.

ಮಗನ ಕನಸು ಮತ್ತು ವಾಗ್ದಾನ

ಅಗ್ನಿವೇಶ್ ಅವರು ಭಾರತದ ಸ್ವಾವಲಂಬನೆ ಮತ್ತು ಬಡತನ ನಿರ್ಮೂಲನೆಯ ಬಗ್ಗೆ ದೊಡ್ಡ ಕನಸುಗಳನ್ನು ಹೊಂದಿದ್ದರು. "ನಮ್ಮ ದೇಶದ ಯಾವುದೇ ಮಗು ಹಸಿವಿನಿಂದ ಮಲಗಬಾರದು ಮತ್ತು ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕು" ಎಂಬುದು ಅವರ ಆಶಯವಾಗಿತ್ತು.
ವಾಗ್ದಾನ: "ನಾನು ಅಗ್ನಿಗೆ (ಅಗ್ನಿವೇಶ್) ನಮ್ಮ ಗಳಿಕೆಯ ಶೇ. 75ಕ್ಕಿಂತ ಹೆಚ್ಚಿನ ಭಾಗವನ್ನು ಸಮಾಜಕ್ಕೆ ನೀಡುತ್ತೇನೆ ಎಂದು ಭರವಸೆ ನೀಡಿದ್ದೆ. ಇಂದು ಆ ವಾಗ್ದಾನವನ್ನು ಮತ್ತೊಮ್ಮೆ ದೃಢಪಡಿಸುತ್ತಿದ್ದೇನೆ" ಎಂದು ಅಗರ್ವಾಲ್ ತಿಳಿಸಿದ್ದಾರೆ.
ಸರಳ ಜೀವನ: ಮಗನ ನೆನಪಿಗಾಗಿ ಇನ್ನು ಮುಂದೆ ಮತ್ತಷ್ಟು ಸರಳ ಜೀವನ ನಡೆಸುವುದಾಗಿ ಅವರು ಶಪಥ ಮಾಡಿದ್ದಾರೆ.

ದಾನದ ಉದ್ದೇಶ

ಈ ಮೊತ್ತವನ್ನು ಅನಿಲ್ ಅಗರ್ವಾಲ್ ಫೌಂಡೇಶನ್ ಮೂಲಕ ಮಕ್ಕಳ ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಹಸಿವು ಮುಕ್ತ ಭಾರತ ನಿರ್ಮಿಸಲು ಬಳಸಲಾಗುವುದು. ಅನಿಲ್ ಅಗರ್ವಾಲ್ ಅವರು ಈ ಹಿಂದೆಯೇ (2014ರಲ್ಲಿ) ಬಿಲ್ ಗೇಟ್ಸ್ ಅವರಿಂದ ಪ್ರೇರಿತರಾಗಿ ತಮ್ಮ ಸಂಪತ್ತನ್ನು ದಾನ ಮಾಡುವುದಾಗಿ ಹೇಳಿದ್ದರು. ಈಗ ಮಗನ ಮರಣವು ಅವರ ಈ ಉದ್ದೇಶಕ್ಕೆ ಮತ್ತಷ್ಟು ಬಲ ನೀಡಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net