ಬೈರನ್ ನಂಬಿಕೆ ದ್ರೋಹಿ: ಆಸ್ಟ್ರೋನೊಮರ್ ಮಾಜಿ ಸಿಇಒ ಕರಾಳ ಮುಖ ಬಯಲು ಮಾಡಿದ ಕ್ರಿಸ್ಟಿನ್ ಕ್ಯಾಬಟ್! Andy Byrne

(ಚಿತ್ರ X)
(ಚಿತ್ರ X)
Published on
Andy Byrne: ಆಸ್ಟ್ರೋನೊಮರ್‌ ಕಂಪನಿಯ ಮಾಜಿ ಮಾನವ ಸಂಪನ್ಮೂಲ ಕಾರ್ಯನಿರ್ವಾಹಕ ಕ್ರಿಸ್ಟಿನ್ ಕ್ಯಾಬಟ್ ಮತ್ತು ಸಿಇಒ ಆಂಡಿ ಬೈರನ್ ಜುಲೈ 2025 ರಲ್ಲಿ ಕೋಲ್ಡ್​ಪ್ಲೇ ಸಂಗೀತ ಕಚೇರಿಯಲ್ಲಿ ಭಾಗಿಯಾದ ನಂತರ ಅವರಿಬ್ಬರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. 
ಈ ಘಟನೆ ಕುರಿತು ಸಾರ್ವಜನಿಕವಾಗಿ ಮಾತನಾಡಿದ ಕ್ಯಾಬಟ್, ಆ ಸಮಯದಲ್ಲಿ ಬೈರನ್ ತಮ್ಮ ಸಂಗಾತಿಯಿಂದ ಬೇರ್ಪಡುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ನಂಬಿಸಿದ್ದರು. ಒಬ್ಬ ವ್ಯಕ್ತಿಯು ತನ್ನ ವೈಯಕ್ತಿಕ ಜೀವನದ ಕಠಿಣ ಹಂತದಲ್ಲಿದ್ದಾನೆ ಮತ್ತು ಕಾನೂನಾತ್ಮಕವಾಗಿ ವಿಚ್ಛೇದನದ ಹಾದಿಯಲ್ಲಿದ್ದಾನೆ ಎಂದು ತಿಳಿದಾಗ, ಸಹಜವಾಗಿಯೇ ಅವರ ನಡುವೆ ಸಂಬಂಧ ಬೆಳೆಯಲು ಸಾಧ್ಯವಾಯಿತು ಎಂದು ಹೇಳಿದರು. 
ಕ್ರಮೇಣ ಬೈರನ್​ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳಿರುವ ಮಾತುಗಳು ಸತ್ಯವಲ್ಲ ಎಂಬುದನ್ನು ಅರಿತುಕೊಂಡೆ. ಅವರಿಂದ ನಾನು ದಾರಿ ತಪ್ಪುತ್ತಿದ್ದೇನೆ ಎಂದು ತಿಳಿದ ಮೇಲೆ  ಅವರೊಂದಿಗೆ ಎಲ್ಲಾ ಸಂಪರ್ಕವನ್ನು ನಿಲ್ಲಿಸಲು ನಿರ್ಧರಿಸಿದೆ ಎಂದರು. 
ಆದಾಗ್ಯೂ, ಕಂಪನಿಯ ಉನ್ನತ ಸ್ಥಾನದಲ್ಲಿದ್ದ ಬೈರನ್, ನಿಯಮಗಳ ಪ್ರಕಾರ ಅಂತಹ ಸಂಬಂಧದ ಬಗ್ಗೆ ಮುಕ್ತವಾಗಿ ಬಹಿರಂಗಪಡಿಸಬೇಕಿತ್ತು. ಆದರೆ ಅವರು ಮಂಡಳಿಗೆ ತಪ್ಪು ಮಾಹಿತಿ ನೀಡುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಿದರು ಎಂದು ಕ್ಯಾಬಟ್​ ಆರೋಪಿಸಿದರು. 
ಓಪ್ರಾ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕ್ಯಾಬಟ್​, ವಾಸ್ತವವಾಗಿ ಬೈರನ್ ತಮ್ಮ ಪತ್ನಿಯಿಂದ ಅಧಿಕೃತವಾಗಿ ಬೇರ್ಪಟ್ಟಿರಲಿಲ್ಲ. ಆದರೆ, ನಾನು ವಿಚ್ಛೇದನ ಪಡೆಯುತ್ತಿದ್ದೇನೆ ಎಂದು ಹೇಳಿ ನಂಬಿಸಿದ್ದರು. ಇದರಿಂದ  ನಾನು ಮೋಸ ಹೋದೆ ಎಂದು ತಿಳಿಸಿದರು.

ಹಿನ್ನಲೆ ಘಟನೆ ಏನು?

ಜುಲೈ 2025 ರಲ್ಲಿ ನಡೆದ ಕೋಲ್ಡ್‌ಪ್ಲೇ ಸಂಗೀತ ಕಚೇರಿಯ ಸಂದರ್ಭದಲ್ಲಿ, ಕ್ರೀಡಾಂಗಣದ ದೊಡ್ಡ ಪರದೆಯ ಮೇಲೆ "ಕಿಸ್-ಕ್ಯಾಮ್" ವಿಭಾಗದಲ್ಲಿ ಕ್ರಿಸ್ಟಿನ್ ಕ್ಯಾಬಟ್ ಮತ್ತು ಆಂಡಿ ಬೈರನ್ ಕಾಣಿಸಿಕೊಂಡಿದ್ದರು. ಆ ಸಮಯದಲ್ಲಿ ಅವರಿಬ್ಬರು ಆತ್ಮೀಯವಾಗಿ ಸಮಯ ಕಳೆಯುತ್ತಿರುವ ವಿಡಿಯೋವೊಂದು ಕ್ಷಣಾರ್ಧದಲ್ಲಿ ವೈರಲ್​ ಆಗಿತ್ತು.
ಆ ವೇಳೆ ಕೋಲ್ಡ್‌ಪ್ಲೇನ ಪ್ರಮುಖ ಗಾಯಕ ಕ್ರಿಸ್ ಮಾರ್ಟಿನ್, ಅವರಿಬ್ಬರು ಸಂಬಂಧ ಹೊಂದಿದ್ದಾರೆ ಎಂಬ ಕಾಮೆಂಟ್​ ಮಾಡಿದ್ದರು. ಇದು ಅವರಿಬ್ಬರ ಸಂಬಂಧದ ಬಗ್ಗೆ ಚರ್ಚೆಗೆ ನಾಂದಿ ಹಾಡಿತು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net