ಅಮೆರಿಕದ ಅಂತಿಮ ಎಚ್ಚರಿಕೆ: ಹಾರ್ಮುಜ್ ಜಲಸಂಧಿ ತೆರೆಯಿರಿ ಇಲ್ಲವೇ ಸರ್ವನಾಶಕ್ಕೆ ಸಿದ್ಧರಾಗಿ! ಇರಾನ್​ಗೆ ಧಮ್ಕಿ ಹಾಕಿದ ಟ್ರಂಪ್​ | Trump Warning

ಅಮೆರಿಕದ ಅಂತಿಮ ಎಚ್ಚರಿಕೆ: ಹಾರ್ಮುಜ್ ಜಲಸಂಧಿ ತೆರೆಯಿರಿ ಇಲ್ಲವೇ ಸರ್ವನಾಶಕ್ಕೆ ಸಿದ್ಧರಾಗಿ! ಇರಾನ್​ಗೆ ಧಮ್ಕಿ ಹಾಕಿದ ಟ್ರಂಪ್​ | Trump Warning
ಅಮೆರಿಕದ ಅಂತಿಮ ಎಚ್ಚರಿಕೆ: ಹಾರ್ಮುಜ್ ಜಲಸಂಧಿ ತೆರೆಯಿರಿ ಇಲ್ಲವೇ ಸರ್ವನಾಶಕ್ಕೆ ಸಿದ್ಧರಾಗಿ! ಇರಾನ್​ಗೆ ಧಮ್ಕಿ ಹಾಕಿದ ಟ್ರಂಪ್​ | Trump Warning
Published on
ವಾಷಿಂಗ್ಟನ್: ಮಧ್ಯಪ್ರಾಚ್ಯದ ಯುದ್ಧ ಈಗ ಮಹಾಸ್ಫೋಟದ ಹಂತಕ್ಕೆ ಬಂದು ತಲುಪಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Trump Warning) ಸೋಮವಾರ (ಮಾ.30) ಇರಾನ್‌ಗೆ ಅತ್ಯಂತ ಭಯಾನಕ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ತಕ್ಷಣವೇ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿ ವಿಶ್ವ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು, ಇಲ್ಲದಿದ್ದರೆ ಇರಾನ್‌ನ ಇಡೀ ಮೂಲಸೌಕರ್ಯವನ್ನು ಅಮೆರಿಕದ ಕ್ಷಿಪಣಿಗಳು ಧೂಳಿಪಟ ಮಾಡಲಿವೆ ಎಂದು ಗುಡುಗಿದ್ದಾರೆ.

ಟ್ರೂತ್ ಸೋಶಿಯಲ್‌ನಲ್ಲಿ ಟ್ರಂಪ್ ಆರ್ಭಟ

ಈ ಬಗ್ಗೆ ತಮ್ಮ ಟ್ರೂತ್ ಸೋಶಿಯಲ್​ಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಇರಾನ್‌ನ ಹೊಸ ಮತ್ತು ಸ್ವಲ್ಪ ಮಟ್ಟಿಗೆ ವಿವೇಕಯುತ ಎನಿಸಿರುವ ಆಡಳಿತದೊಂದಿಗೆ ಮಾತುಕತೆ ಪ್ರಗತಿಯಲ್ಲಿದೆ ಎಂದು ಹೇಳುತ್ತಲೇ ಬೆದರಿಕೆ ಹಾಕಿದ್ದಾರೆ. ಸಂಧಾನ ಯಶಸ್ವಿಯಾಗದಿದ್ದರೆ ಮತ್ತು ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ, ನಾವು ಇರಾನ್‌ನ ತೈಲ ಕ್ಷೇತ್ರಗಳು, ವಿದ್ಯುತ್ ಸ್ಥಾವರಗಳು ಮತ್ತು ಇತರ ನಿರ್ಣಾಯಕ ಸೌಲಭ್ಯಗಳನ್ನು ಸ್ಫೋಟಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಕುಡಿಯುವ ನೀರಿಗೂ ಸಂಚಕಾರ..?
ಟ್ರಂಪ್ ಅವರ ಈ ಬಾರಿಯ ಬೆದರಿಕೆ ಕೇವಲ ಸೇನಾ ನೆಲೆಗಳಿಗೆ ಸೀಮಿತವಾಗಿಲ್ಲ. ಇರಾನ್‌ನ ಜನರಿಗೆ ಕುಡಿಯುವ ನೀರು ಪೂರೈಸುವ ಡಿಲಾಲಿನೇಷನ್ ಪ್ಲಾಂಟ್​ಗಳನ್ನು ಕೂಡ ಗುರಿಯಾಗಿಸಿಕೊಳ್ಳಲಾಗಿದೆ. ನಾವು ಈ ಘಟಕಗಳನ್ನು ಈವರೆಗೆ ಮುಟ್ಟಿಲ್ಲ, ಆದರೆ ಅವು ನಮ್ಮ ಟಾರ್ಗೆಟ್ ಲಿಸ್ಟ್‌ನಲ್ಲಿವೆ ಎಂದು ಹೇಳುವ ಮೂಲಕ ಇರಾನ್‌ನಲ್ಲಿ ಜಲಕ್ಷಾಮ ಸೃಷ್ಟಿಸುವ ಮುನ್ಸೂಚನೆ ನೀಡಿದ್ದಾರೆ.

ಏಪ್ರಿಲ್ 6ರವರೆಗೆ 'ಡೆಡ್‌ಲೈನ್'

ಕಳೆದ ವಾರವಷ್ಟೇ ಟ್ರಂಪ್ ಅವರು ಇರಾನ್‌ನ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು 10 ದಿನಗಳ ಕಾಲ ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದರು. ಅಮೆರಿಕದ ಸಮಯದ ಪ್ರಕಾರ ಈ ಗಡುವು ಏಪ್ರಿಲ್ 6 ರಂದು ಮುಕ್ತಾಯಗೊಳ್ಳಲಿದೆ. ಅಲ್ಲಿಯವರೆಗೆ ಸಂಧಾನಕ್ಕೆ ಕಾಲಾವಕಾಶ ನೀಡಲಾಗಿದ್ದು, ನಂತರ ಇರಾನ್ ಮೇಲೆ ಅಮೆರಿಕದ ಭೀಕರ ಪ್ರಹಾರ ಶುರುವಾಗುವ ಸಾಧ್ಯತೆಯಿದೆ.

47 ವರ್ಷಗಳ ಭಯೋತ್ಪಾದನೆಗೆ ಪ್ರತೀಕಾರ

ಈ ದಾಳಿಯನ್ನು ಟ್ರಂಪ್ ಅವರು ಪ್ರತೀಕಾರ ಎಂದು ಕರೆದಿದ್ದಾರೆ. ಕಳೆದ 47 ವರ್ಷಗಳಿಂದ ಇರಾನ್ ಆಡಳಿತವು ನಡೆಸುತ್ತಿರುವ ಭಯೋತ್ಪಾದನೆಯ ಆಡಳಿತ ಮತ್ತು ಅಮೆರಿಕನ್ ಸೈನಿಕರ ಹತ್ಯೆಗೆ ಈ ಮೂಲಕ ಪಾಠ ಕಲಿಸಲಾಗುವುದು ಎಂದು ಪ್ರತಿಪಾದಿಸಿದ್ದಾರೆ. ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ಅಮೆರಿಕವು 50,000ಕ್ಕೂ ಹೆಚ್ಚು ಸೈನಿಕರನ್ನು ಜಮಾಯಿಸಿದ್ದು, ಯಾವುದೇ ಕ್ಷಣದಲ್ಲಿ ಇರಾನ್ ಮೇಲೆ ಭೂಸೇನಾ ದಾಳಿ ಅಥವಾ ವೈಮಾನಿಕ ದಾಳಿ ನಡೆಸಲು ಸರ್ವಸನ್ನದ್ಧವಾಗಿದೆ.

ಇರಾನ್‌ನ ತಿರುಗೇಟು ಮತ್ತು ಸಂಧಾನದ ಗೊಂದಲ

ಅಮೆರಿಕದ ಈ ನಡೆಯನ್ನು ಇರಾನ್ ಸಂಸತ್ತಿನ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಅಮೆರಿಕವು ಒಂದು ಕಡೆ ಮಾತುಕತೆಯ ನಾಟಕವಾಡುತ್ತಾ, ಮತ್ತೊಂದು ಕಡೆ ನಮ್ಮ ನೆಲದ ಮೇಲೆ ಆಕ್ರಮಣ ಮಾಡಲು ಸಿದ್ಧತೆ ನಡೆಸುತ್ತಿದೆ ಎಂದು ಇರಾನ್ ಕಿಡಿಕಾರಿದೆ. ಇದೇ ವೇಳೆ, ಅಮೆರಿಕದೊಂದಿಗೆ ಯಾವುದೇ ನೇರ ಮಾತುಕತೆ ನಡೆಯುತ್ತಿಲ್ಲ ಎಂದು ಇರಾನ್ ನಾಯಕರು ಸ್ಪಷ್ಟಪಡಿಸಿದ್ದಾರೆ, ಇದು ಸಂಧಾನದ ಪ್ರಕ್ರಿಯೆಯ ಬಗ್ಗೆ ಗೊಂದಲ ಸೃಷ್ಟಿಸಿದೆ.

ಜಾಗತಿಕ ತಲ್ಲಣ

ಹಾರ್ಮುಜ್ ಜಲಸಂಧಿಯು ಜಗತ್ತಿನ ತೈಲ ಸಾಗಣೆಯ ಮಹತ್ವದ ದಾರಿಯಾಗಿದೆ. ಇದು ಮುಚ್ಚಲ್ಪಟ್ಟರೆ ಜಾಗತಿಕ ತೈಲ ಬೆಲೆ ಗಗನಕ್ಕೇರಲಿದ್ದು, ವಿಶ್ವ ಆರ್ಥಿಕತೆಯೇ ಕುಸಿಯುವ ಭೀತಿಯಿದೆ. ಟ್ರಂಪ್ ಅವರ ಈ ನೇರ ಎಚ್ಚರಿಕೆ ಇಡೀ ಗಲ್ಫ್ ರಾಷ್ಟ್ರಗಳನ್ನು ಯುದ್ಧದ ಭೀತಿಯಲ್ಲಿ ಇರಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net