

ಯುಎಸ್ಎಸ್ ಅಬ್ರಹಾಂ ಲಿಂಕನ್ ನೌಕೆಯಲ್ಲಿ ನಿಯೋಜಿತರಾಗಿರುವ 5 ಸಾವಿರಕ್ಕೂ ಹೆಚ್ಚು ನಾವಿಕರು ಮತ್ತು ಮೆರೀನ್ ಯೋಧರು ಕಳೆದ 9 ತಿಂಗಳುಗಳಿಂದ ಭೂಮಿಯನ್ನೇ ನೋಡಿಲ್ಲ. ಇತ್ತೀಚೆಗೆ ಈ ಯುದ್ಧನೌಕೆಯಲ್ಲಿದ್ದ ನಾವಿಕರು ತೀವ್ರ ಮಾನಸಿಕ ಒತ್ತಡದಿಂದ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿರುವ ಆತಂಕಕಾರಿ ವರದಿಗಳು ಹೊರಬಿದ್ದಿವೆ. ನೌಕೆಯಲ್ಲಿರುವ ಹೆಚ್ಚಿನ ಯೋಧರು ತೀವ್ರ ಆಯಾಸಗೊಂಡಿದ್ದು, ಅವರ ನೈತಿಕ ಸ್ಥೈರ್ಯ ಕುಸಿದಿದೆ, ಆತ್ಮಹತ್ಯೆಯ ಆಲೋಚನೆಗಳು ಅವರನ್ನು ಕಾಡುತ್ತಿವೆ ಎಂದು ಕುಟುಂಬಸ್ಥರು ಹೇಳಿದ್ದು, ಈ ಬೆಳವಣಿಗೆ ಕುರಿತಾದ ವಿವರ ಇಲ್ಲಿದೆ.
ಅಮೆರಿಕ ನೌಕಾಪಡೆಯ ಬೃಹತ್ ಏರ್ಕ್ರಾಫ್ಟ್ ಕ್ಯಾರಿಯರ್ ಯುಎಸ್ಎಸ್ ಜಾರ್ಜ್ ವಾಷಿಂಗ್ಟನ್ ಮಧ್ಯಪ್ರಾಚ್ಯದತ್ತ ಧಾವಿಸುತ್ತಿದೆ. ಇದು ಯುಎಸ್ಎಸ್ ಅಬ್ರಹಾಂ ಲಿಂಕನ್ ಯುದ್ಧನೌಕೆಯ ಸ್ಥಾನವನ್ನು ತುಂಬಲಿದೆ. 2025ರ ನ. 21ರಂದು ಯುಎಸ್ಎಸ್ ಅಬ್ರಹಾಂ ಲಿಂಕನ್ ಯುದ್ಧನೌಕೆ 5,000ಕ್ಕೂ ಹೆಚ್ಚು ಸಿಬ್ಬಂದಿಯೊಂದಿಗೆ ಸ್ಯಾನ್ ಡಿಯಾಗೋದಿಂದ ಪೆಸಿಫಿಕ್ ಮಹಾಸಾಗರದ ಕಡೆಗೆ ಹೊರಟಿತು. ಡಿ.11ರಂದು ಗುವಾಮ್ ದ್ವೀಪ ತಲುಪಿದ ಬಳಿಕ, ಇದನ್ನು ಪಶ್ಚಿಮ ಏಷ್ಯಾದ ಇರಾನ್ ಸಮೀಪದ ಅರಬ್ಬೀ ಸಮುದ್ರಕ್ಕೆ ನಿಯೋಜಿಸಲಾಯಿತು. ಇರಾನ್ ವಿರುದ್ಧದ ಕಾರ್ಯಾಚರಣೆಗಳಲ್ಲಿ ಈ ಯುದ್ಧನೌಕೆಯು ಪ್ರಮುಖ ಪಾತ್ರ ವಹಿಸಿದ್ದು, ಇದರ ಮೇಲಿನ ಯುದ್ಧವಿಮಾನಗಳು 10 ಸಾವಿರಕ್ಕೂ ಹೆಚ್ಚು ಹಾರಾಟಗಳನ್ನು ನಡೆಸಿವೆ.
2026ರ ಮೇ ತಿಂಗಳಲ್ಲಿ ಇದು ಮರಳಬೇಕಿತ್ತು, ಆದರೆ ಯಾವುದೇ ಮುನ್ಸೂಚನೆಯಿಲ್ಲದೆ ನಿಯೋಜನೆಯನ್ನು ವಿಸ್ತರಿಸಲಾಯಿತು. ದೀರ್ಘ ಕಾರ್ಯಾಚರಣೆಯಿಂದಾಗಿ ನೌಕೆಯ ಉಪಕರಣಗಳು ಸವೆದಿವೆ. ಶೌಚಗೃಹಗಳಲ್ಲಿ ನೀರಿನ ಕೊರತೆಯುಂಟಾಗಿದ್ದು, ಸ್ನಾನಗೃಹಗಳಲ್ಲಿ ಪಾಚಿ ಮತ್ತು ಶಿಲೀಂಧ್ರ ಬೆಳೆದಿದೆ. ಸೀವೇಜ್ ನೀರು ಉಕ್ಕಿ ಹರಿಯುತ್ತಿರುವ ದೃಶ್ಯಗಳನ್ನು ಸೈನಿಕರ ಕುಟುಂಬಸ್ಥರು ಬಹಿರಂಗಪಡಿಸಿದ್ದಾರೆ. ಸ್ನಾನಕ್ಕೆ ಬಿಸಿನೀರಿನ ಪೂರೈಕೆಯೂ ಇಲ್ಲದಂತಾಗಿದೆ.
ಅಮೆರಿಕದ ಸೇನಾ ಸುದ್ದಿ ಸಂಸ್ಥೆ ‘ನೇವಿ ಟೈಮ್ಸ್’ ವರದಿಯ ಪ್ರಕಾರ, ಅನ್ನಾಬೆಲ್ಲಾ ಲೋಮಾ ಎಂಬ ಮಹಿಳೆ ತಮ್ಮ ನಾವಿಕ ಪತಿ ಯುಎಸ್ಎಸ್ ಅಬ್ರಹಾಂ ಲಿಂಕನ್ನಿಂದ ಸಮುದ್ರಕ್ಕೆ ಹಾರಲು ಯತ್ನಿಸಿದ್ದಾಗಿ ತಿಳಿಸಿದ್ದಾರೆ. ಅವರನ್ನು ಸಕಾಲದಲ್ಲಿ ರಕ್ಷಿಸಿ ವೈದ್ಯಕೀಯ ರಜೆಯಲ್ಲಿ ಇರಿಸಲಾಗಿದ್ದು, ಪ್ರಸ್ತುತ ಸಂಪರ್ಕ ಕಷ್ಟಸಾಧ್ಯವಾಗಿದೆ. ‘ನನ್ನ ಪತಿ ತೀವ್ರ ಭಯದಲ್ಲಿದ್ದಾರೆ. ಕೆಲಸದ ಅತಿಯಾದ ಹೊರೆಯಿಂದಾಗಿ ಅವರು ಸಂಪೂರ್ಣ ದಣಿದಿದ್ದಾರೆ. ದಣಿವು ಮತ್ತು ಮಾನಸಿಕ ಒತ್ತಡದ ಕಾರಣಕ್ಕೆ ನೌಕಾಪಡೆಯಿಂದ ತಮ್ಮನ್ನು ಅಪಮಾನಿಸಿ ವಜಾಗೊಳಿಸಬಹುದು ಹಾಗೂ ತಮ್ಮ 13 ವರ್ಷಗಳ ಸುದೀರ್ಘ ಸೇನಾ ಜೀವನ ವ್ಯರ್ಥವಾಗಬಹುದು ಎಂಬ ಆತಂಕ ಅವರನ್ನು ಕಾಡುತ್ತಿದೆ’ ಎಂದು ಅನ್ನಾಬೆಲ್ಲಾ ಹೇಳಿದ್ದಾರೆ.
ಇನ್ನೊಬ್ಬ ನಾವಿಕನ ಪತ್ನಿ ಮಾರಿಯಾ ರಾಡ್ರಿಗಸ್ ಮಾತನಾಡಿ, ‘ಯುಎಸ್ಎಸ್ ಲಿಂಕನ್ನಲ್ಲಿ ನಿಯೋಜಿತರಾಗಿರುವ ನನ್ನ ಪತಿ, ಸಮುದ್ರಕ್ಕೆ ಹಾರಲು ಸಿದ್ಧವಾಗುತ್ತಿದ್ದ ಸಹೋದ್ಯೋಗಿಯೊಬ್ಬರಿಗೆ ಕೂಗಿ ಎಚ್ಚರಿಸಿ, ಕೈ ಹಿಡಿದು ಡೆಕ್ಗೆ ವಾಪಸ್ ಎಳೆದುಕೊಂಡಿದ್ದಾರೆ’ ಎಂದು ಹೇಳಿದ್ದಾರೆ. ಯುದ್ಧನೌಕೆಯಲ್ಲಿರುವ ಸೈನಿಕರ ಕುಟುಂಬಸ್ಥರು ಆಗಸ್ಟ್ 6ರಂದು ಅಮೆರಿಕ ನೌಕಾಪಡೆಯ ಕಾರ್ಯಕಾರಿ ಕಾರ್ಯದರ್ಶಿ ಹಂಗ್ ಕಾವೊ ಮತ್ತು ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಕಳವಳ ವ್ಯಕ್ತಪಡಿಸಿದ್ದರು. ಸ್ಟಾರ್ಸ್ ಆಂಡ್ ಸ್ಟ್ರೈಪ್ಸ್ ವರದಿಯು ಯೋಧರ ಸ್ಥಿತಿಯನ್ನು ವಿವರಿಸಿದೆ. ಯೋಧನೊಬ್ಬನ ತಂದೆ, ‘ನನ್ನ ಮಗ ಹೇಳುವ ಪ್ರಕಾರ ಆತನ ಸಹೋದ್ಯೋಗಿಗಳು ಸದಾ ಹಡಗಿನಿಂದ ಸಮುದ್ರಕ್ಕೆ ಹಾರುವ ಯೋಚನೆಯಲ್ಲೇ ಇರುತ್ತಾರೆ. ನಾವು ಮನೆಯಲ್ಲಿ ನೆಮ್ಮದಿಯಿಂದ ಮಲಗಿದ್ದೇವೆ, ಆದರೆ ಅವರು ಯಾರನ್ನು ರಕ್ಷಿಸಲು ಅಲ್ಲಿ ಕಷ್ಟಪಡುತ್ತಿದ್ದಾರೆ?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುದ್ಧನೌಕೆಯಲ್ಲಿರುವ ಯೋಧರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಂಪೂರ್ಣ ಕುಗ್ಗಿಹೋಗಿದ್ದು, ಅವರ ನೈತಿಕ ಸ್ಥೈರ್ಯ ಕೂಡ ಕಡಿಮೆಯಾಗಿದೆ.
ಯುಎಸ್ಎಸ್ ಲಿಂಕನ್ ನೌಕೆಯನ್ನು ಜುಲೈ ತಿಂಗಳ ಆರಂಭದಲ್ಲಿ ಒಮಾನ್ ಬಂದರಿನಲ್ಲಿ ಅಲ್ಪಾವಧಿಗೆ ನಿಲ್ಲಿಸಿದ್ದಾಗ ತಾಜಾ ಹಣ್ಣು-ತರಕಾರಿಗಳನ್ನು ಪೂರೈಸಲಾಗಿತ್ತು. ಆದರೆ, ಸೈನಿಕರನ್ನು ಬಂದರಿನ ಒಳಗಿನ ಭದ್ರತಾ ವಲಯದಲ್ಲಿ ಮಾತ್ರ ಇರಿಸಲಾಗಿತ್ತು. ಪ್ರಸ್ತುತ ಇರಾನ್ನ ಬಂದರುಗಳ ದಿಗ್ಬಂಧನದಲ್ಲಿ ತೊಡಗಿರುವ ಕಾರಣ ಯುದ್ಧನೌಕೆಗೆ ಮಿತ್ರರಾಷ್ಟ್ರಗಳ ಬಂದರುಗಳಲ್ಲೂ ನಿಲ್ಲಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಯುದ್ಧನೌಕೆಯಲ್ಲಿ ಹಲವು ಸಮಸ್ಯೆಗಳು ಉದ್ಭವಿಸಿವೆ. ನಿರಂತರ ಕಾರ್ಯಾಚರಣೆಯಿಂದಾಗಿ ವಿಮಾನಗಳನ್ನು ತಡೆಯುವ ಅರೆಸ್ಟಿಂಗ್ ಕೇಬಲ್ಗಳು ಸವೆದುಹೋಗಿವೆ, ಉಪ್ಪುನೀರು ಒಳನುಗ್ಗುತ್ತಿದೆ. ಶೌಚಗೃಹಗಳಲ್ಲಿ ನೀರಿನ ಕೊರತೆಯಿದ್ದು, ಸಿವರೇಜ್ ನೀರು ಉಕ್ಕಿ ಹರಿಯುತ್ತಿದೆ. ಶವರ್ಗಳಲ್ಲಿ ಬೂಷ್ಟು ಬೆಳೆದಿದ್ದು, ಬಿಸಿನೀರಿನ ಸೌಲಭ್ಯವೂ ಇಲ್ಲದಂತಾಗಿದೆ. ಅಮೆರಿಕದ ಡೆಮಾಕ್ರಟಿಕ್ ಸಂಸದ ಮೈಕ್ ಲೆವಿನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಂತೆ- ಯುಎಸ್ಎಸ್ ಲಿಂಕನ್ ಯುದ್ಧನೌಕೆಯಲ್ಲಿ ವಾರಗಳಿಂದ ಬಟ್ಟೆ ತೊಳೆಯುವ ವ್ಯವಸ್ಥೆ ಸ್ಥಗಿತಗೊಂಡಿದೆ. ಹೊಟ್ಟೆ ತುಂಬ ಊಟ ಕೂಡ ಸಿಗುತ್ತಿಲ್ಲ. ಸೋಪು, ಡಿಯೋಡರೆಂಟ್ ಮತ್ತು ಟೂತ್ಪೇಸ್ಟ್ಗಳೂ ಲಭ್ಯವಿಲ್ಲ. ಹಡಗಿನ ಸ್ಟೋರ್ಗಳಲ್ಲಿ ವೈಯಕ್ತಿಕ ಸ್ವಚ್ಛತಾ ಸಾಮಗ್ರಿಗಳ ಖರೀದಿಗೆ ಕಠಿಣ ಮಿತಿ ಹೇರಲಾಗಿದೆ.
ಯುಎಸ್ಎಸ್ ಅಬ್ರಹಾಂ ಲಿಂಕನ್ನಂತಹ ಪರಮಾಣು ಶಕ್ತಿ ಚಾಲಿತ ಕ್ಯಾರಿಯರ್ಗಳಿಗೆ ಇಂಧನ ತುಂಬಲು ಆಗಾಗ್ಗೆ ಬಂದರಿಗೆ ಬರುವ ಅಗತ್ಯವಿರುವುದಿಲ್ಲ. ಆಹಾರ ಸಾಮಗ್ರಿಗಳನ್ನು ‘ಅಂಡರ್ವೇ ರಿಪ್ಲೆನಿಶ್ವೆುಂಟ್’ ಮೂಲಕ ಹೆಲಿಕಾಪ್ಟರ್ ಅಥವಾ ಇತರ ಹಡಗುಗಳ ಮೂಲಕ ಸಮುದ್ರದಲ್ಲೇ ಸರಬರಾಜು ಮಾಡಲಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಇವು ತಿಂಗಳಿಗೊಮ್ಮೆಯಾದರೂ ಬಂದರುಗಳಲ್ಲಿ ಲಂಗರು ಹಾಕುತ್ತವೆ. 2023ರ ಅಕ್ಟೋಬರ್ನಲ್ಲಿ ಹಮಾಸ್-ಇಸ್ರೇಲ್ ಸಂಘರ್ಷ ಆರಂಭವಾದ ನಂತರ, ಅಮೆರಿಕದ 11 ಏರ್ಕ್ರಾಫ್ಟ್ ಕ್ಯಾರಿಯರ್ಗಳ ಪೈಕಿ ಹಲವು ನೌಕೆಗಳ ನಿಯೋಜನಾ ಅವಧಿಯನ್ನು ಅನಿವಾರ್ಯವಾಗಿ ವಿಸ್ತರಿಸಲಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ತನ್ನ ಏರ್ಕ್ರಾಫ್ಟ್ ಕ್ಯಾರಿಯರ್ಗಳು ಮತ್ತು ನೌಕಾಪಡೆಯನ್ನು ಬೃಹತ್ ಪ್ರಮಾಣದಲ್ಲಿ ನಿಯೋಜಿಸಿರುವುದು ಪ್ರಾದೇಶಿಕ ಸೇನಾ ಸಮತೋಲನವನ್ನಷ್ಟೇ ಅಲ್ಲದೆ, ಜಾಗತಿಕ ರಾಜತಾಂತ್ರಿಕತೆ ಮತ್ತು ಆರ್ಥಿಕತೆಯ ಮೇಲೂ ನೇರ ಪರಿಣಾಮ ಬೀರುತ್ತಿದೆ. ಅಮೆರಿಕ ತನ್ನ ಯುದ್ಧನೌಕೆಗಳನ್ನು ಪೆಸಿಫಿಕ್ನಿಂದ ಪಶ್ಚಿಮ ಏಷ್ಯಾಕ್ಕೆ ವರ್ಗಾಯಿಸುತ್ತಿರುವುದರಿಂದ ತೈವಾನ್ ಜಲಸಂಧಿ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕದ ಉಪಸ್ಥಿತಿ ತಾತ್ಕಾಲಿಕವಾಗಿ ಕ್ಷೀಣಿಸಿದೆ. ಇದು ಚೀನಾಕ್ಕೆ ಆ ಪ್ರದೇಶದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಅವಕಾಶ ನೀಡುತ್ತದೆ. ಅಮೆರಿಕದ ಮಿಲಿಟರಿ ಒತ್ತಡ ಹೆಚ್ಚಾದಂತೆ ಇರಾನ್ ರಾಜತಾಂತ್ರಿಕ ಹಾಗೂ ಸೇನಾ ನೆರವಿಗಾಗಿ ರಷ್ಯಾ ಮತ್ತು ಚೀನಾದತ್ತ ಇನ್ನಷ್ಟು ವಾಲುತ್ತಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಣ ರಾಜಕೀಯವನ್ನು ತೀವ್ರಗೊಳಿಸುತ್ತದೆ.
ಆರಂಭದಲ್ಲಿ ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಯುಎಸ್ಎಸ್ ಅಬ್ರಾಹಂ ಲಿಂಕನ್ನ ದುಸ್ಥಿತಿಯ ವರದಿಗಳನ್ನು ತಳ್ಳಿಹಾಕಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಆಗಸ್ಟ್ 14ರಂದು ನಾವಿಕರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂಬ ವಾದವನ್ನು ನಿರಾಕರಿಸಿದ್ದರು. ಆದಾಗ್ಯೂ, ನೌಕಾಪಡೆಯ ಕಾರ್ಯಕಾರಿ ಕಾರ್ಯದರ್ಶಿ ಹಂಗ್ ಕಾವೊ ಅವರು, ಲಿಂಕನ್ 200ಕ್ಕೂ ಹೆಚ್ಚು ದಿನಗಳನ್ನು ಯುದ್ಧ ವಲಯದಲ್ಲಿ ಕಳೆದಿದೆ ಮತ್ತು 266 ದಿನಗಳ ಕಠಿಣ ನಿಯೋಜನೆಯನ್ನು ಎದುರಿಸಿದೆ ಎಂದು ಒಪ್ಪಿಕೊಂಡಿದ್ದಾರೆ. ಕೆಲವು ಸೈನಿಕರಿಗೆ ಮಾನಸಿಕ ಆರೋಗ್ಯ ಕುರಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಯುಎಸ್ಎಸ್ ಅಬ್ರಾಹಂ ಲಿಂಕನ್ ಅಮೆರಿಕಕ್ಕೆ ಮರಳುತ್ತಿದ್ದು, ಜಪಾನ್ನ ಯೊಕೊಸುಕಾ ನೌಕಾನೆಲೆಯಿಂದ ಹೊರಟಿರುವ ಯುಎಸ್ಎಸ್ ಜಾರ್ಜ್ ವಾಷಿಂಗ್ಟನ್ ಇದರ ಸ್ಥಾನವನ್ನು ತುಂಬಲಿದೆ. ಈ ಬದಲಾವಣೆಯೊಂದಿಗೆ ಪಶ್ಚಿಮ ಏಷ್ಯಾದಲ್ಲಿ ಮೂರು ಅಮೆರಿಕನ್ ಏರ್ಕ್ರಾಫ್ಟ್ ಕ್ಯಾರಿಯರ್ಗಳು ನಿಯೋಜನೆ ಯಾಗಲಿದ್ದು, ಪೆಸಿಫಿಕ್ ಮಹಾಸಾಗರ ಭಾಗದಲ್ಲಿ ಸದ್ಯಕ್ಕೆ ಯಾವುದೇ ಅಮೆರಿಕನ್ ಕ್ಯಾರಿಯರ್ ಇರುವುದಿಲ್ಲ.