ಇರಾನ್​ ಮೇಲೆ ದಾಳಿಗೆ ಅಮೆರಿಕ ತಯಾರಿ: ಇಸ್ರೇಲ್​ ತಲುಪಿದ 6,500 ಟನ್​ ಯುದ್ಧ ಸಾಮಾಗ್ರಿ; ಟ್ರಂಪ್​ ಮುಂದಿನ ನಡೆಯೇನು? Donald Trump

ಇಸ್ರೇಲ್‌ ತಲುಪಿದ 6,500 ಟನ್ ಯುದ್ಧ ಸಾಮಗ್ರಿ
ಇಸ್ರೇಲ್‌ ತಲುಪಿದ 6,500 ಟನ್ ಯುದ್ಧ ಸಾಮಗ್ರಿ
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ!
  • ಅಮೆರಿಕ ಅಧ್ಯಕ್ಷರ ಜೊತೆ CENTCOM ರಹಸ್ಯ ಮೀಟಿಂಗ್​
  • ಇಸ್ರೇಲ್‌ ತಲುಪಿದ 6,500 ಟನ್ ಯುದ್ಧ ಸಾಮಗ್ರಿ
  • ನಮಗೆ ಅಮೆರಿಕದ ಮೇಲೆ ನಂಬಿಕೆಯಿಲ್ಲ: ಇರಾನ್ ಕಿಡಿ
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಈಗ ಮತ್ತೆ ನೆತ್ತರ ನದಿ ಹರಿಯುವ ಮುನ್ಸೂಚನೆ ಸಿಗುತ್ತಿದೆ. ಒಂದು ಕಡೆ ಇಸ್ರೇಲ್‌ಗೆ ಅಮೆರಿಕದಿಂದ ಯುದ್ಧ ಸಾಮಗ್ರಿಗಳ ಮಹಾಪೂರವೇ ಹರಿದು ಬರುತ್ತಿದ್ದರೆ, ಇನ್ನೊಂದೆಡೆ ಇರಾನ್ ವಿರುದ್ಧ ಹದ್ದಿನ ಕಣ್ಣಿಟ್ಟಿರುವ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM), ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಗೆ ಅತ್ಯಂತ ರಹಸ್ಯ ಹಾಗೂ ಆಘಾತಕಾರಿ ಯುದ್ಧ ಯೋಜನೆಯೊಂದನ್ನು ವಿವರಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.

45 ನಿಮಿಷಗಳ ಆ ಸಭೆಯಲ್ಲಿ ನಡೆದಿದ್ದೇನು?

ಮಾಹಿತಿ ಪ್ರಕಾರ, ಇತ್ತೀಚೆಗಷ್ಟೇ CENTCOM ಕಮಾಂಡರ್ ಬ್ರಾಡ್ ಕೂಪರ್ ಮತ್ತು ಅಮೆರಿಕದ ಜಂಟಿ ಮುಖ್ಯಸ್ಥರ ಅಧ್ಯಕ್ಷರು ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿದ್ದರು. ಸುಮಾರು 45 ನಿಮಿಷಗಳ ಕಾಲ ನಡೆದ ಈ ಹೈ-ವೋಲ್ಟೇಜ್ ಬ್ರೀಫಿಂಗ್‌ನಲ್ಲಿ, ಇರಾನ್ ಅನ್ನು ಕಟ್ಟಿಹಾಕಲು ಸಿದ್ಧಪಡಿಸಲಾದ ಹೊಸ ಅಟ್ಯಾಕ್ ಪ್ಲಾನ್ ಬಗ್ಗೆ ಚರ್ಚಿಸಲಾಗಿದೆ.
ಕದನ ವಿರಾಮದ ಮಾತುಕತೆಗಳು ಹಳಿ ತಪ್ಪುತ್ತಿರುವುದರಿಂದ, ಇರಾನ್‌ನ ಪ್ರಮುಖ ಮೂಲಸೌಕರ್ಯಗಳ ಮೇಲೆ ಸಣ್ಣ ಆದರೆ ಅತ್ಯಂತ ಶಕ್ತಿಯುತ ದಾಳಿಗಳನ್ನು ನಡೆಸುವ ಬಗ್ಗೆ ಸೇನಾಧಿಕಾರಿಗಳು ವಿವರಿಸಿದ್ದಾರೆ ಎನ್ನಲಾಗಿದೆ. ಇದು ಕೇವಲ ಬೆದರಿಕೆಯಲ್ಲ, ಬದಲಿಗೆ ಇರಾನ್‌ನ ಸೊಕ್ಕಡಗಿಸಲು ಅಮೆರಿಕ ಸನ್ನದ್ಧವಾಗಿದೆ ಎಂಬ ಸೂಚನೆ ನೀಡುತ್ತಿದೆ.

ಅಮೆರಿಕದ 'ತ್ರಿವಳಿ' ಮಾಸ್ಟರ್ ಪ್ಲಾನ್!

ಸೆಂಟ್‌ಕಾಮ್ ಟ್ರಂಪ್ ಮುಂದಿಟ್ಟಿರುವ ಯೋಜನೆಯಲ್ಲಿ ಮೂರು ಪ್ರಮುಖ ಅಂಶಗಳಿವೆ.

ವಾಯುದಾಳಿ

ಇರಾನ್‌ನ ಆಯಕಟ್ಟಿನ ಜಾಗಗಳ ಮೇಲೆ ನಿಖರವಾದ ವಾಯುದಾಳಿ ನಡೆಸಿ ಅಲ್ಲಿನ ಮೂಲಸೌಕರ್ಯಗಳನ್ನು ಧ್ವಂಸ ಮಾಡುವುದು.

ಹಾರ್ಮುಜ್ ಜಲಸಂಧಿ ವಶ

ಜಗತ್ತಿನ ತೈಲ ವ್ಯಾಪಾರದ ನಾಡಿಮಿಡಿತದಂತಿರುವ ಹಾರ್ಮುಜ್ ಜಲಸಂಧಿಯನ್ನು (Strait of Hormuz) ತನ್ನ ನಿಯಂತ್ರಣಕ್ಕೆ ಪಡೆದು, ವಾಣಿಜ್ಯ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸುವುದು.

ಯುರೇನಿಯಂ ವಶ

ಎಲ್ಲಕ್ಕಿಂತ ಭಯಾನಕ ಎಂದರೆ, ಇರಾನ್ ಸಂಗ್ರಹಿಸಿಟ್ಟಿರುವ ಪುಷ್ಟೀಕರಿಸಿದ ಯುರೇನಿಯಂ ಅನ್ನು ವಶಪಡಿಸಿಕೊಳ್ಳಲು ಅಮೆರಿಕದ ಸ್ಪೆಷಲ್ ಫೋರ್ಸ್ ಕಾರ್ಯಾಚರಣೆ ನಡೆಸುವುದು.
ಇಸ್ರೇಲ್‌ಗೆ ಸೇರಿದ 6,500 ಟನ್ ಯುದ್ಧ ಸಾಮಗ್ರಿ!
ಇತ್ತ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿದ್ದರೆ, ಅತ್ತ ಇಸ್ರೇಲ್‌ನ ಆಶ್ಡೋಡ್ ಮತ್ತು ಹೈಫಾ ಬಂದರುಗಳಲ್ಲಿ ಅಮೆರಿಕದ ಬೃಹತ್ ಹಡಗುಗಳು ಲಂಗರು ಹಾಕಿವೆ. ಕೇವಲ 24 ಗಂಟೆಗಳಲ್ಲಿ 6,500 ಟನ್ ಯುದ್ಧ ಸಾಮಗ್ರಿಗಳನ್ನು ಅಮೆರಿಕ ಇಸ್ರೇಲ್‌ಗೆ ರವಾನಿಸಿದೆ. ಇದರಲ್ಲಿ ಅತ್ಯಾಧುನಿಕ ಕ್ಷಿಪಣಿಗಳು, ಮಿಲಿಟರಿ ಟ್ರಕ್‌ಗಳು ಮತ್ತು ಯುದ್ಧ ವಾಹನಗಳು ಇಸ್ರೇಲ್​ಅನ್ನು ಸೇರಿವೆ.
ಇಸ್ರೇಲ್ ರಕ್ಷಣಾ ಸಚಿವಾಲಯದ ಅಂಕಿಅಂಶದ ಪ್ರಕಾರ, ಆಪರೇಷನ್ ರೋರಿಂಗ್ ಲಯನ್ ಆರಂಭವಾದಾಗಿನಿಂದ ಇಲ್ಲಿಯವರೆಗೆ 1,15,600 ಟನ್‌ಗಳಿಗೂ ಹೆಚ್ಚು ಮಿಲಿಟರಿ ಸಲಕರಣೆಗಳು ಇಸ್ರೇಲ್ ತಲುಪಿವೆ. ನಮ್ಮ ಶತ್ರುಗಳ ವಿರುದ್ಧ ಯಾವುದೇ ಕ್ಷಣದಲ್ಲೂ ದಾಳಿ ನಡೆಸಲು ನಾವು ಸಿದ್ಧ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಗುಡುಗಿದ್ದಾರೆ.

ಟ್ರಂಪ್ ಗೇಮ್ ಪ್ಲಾನ್ ಬೇರೆಯೇ ಇದೆಯೇ?

ಸೇನೆಯು ದಾಳಿಯ ಪ್ಲಾನ್ ಕೊಟ್ಟಿದ್ದರೂ, ಟ್ರಂಪ್ ಮಾತ್ರ ಆರ್ಥಿಕ ದಿಗ್ಬಂಧನದ ಮೇಲೆ ಹೆಚ್ಚು ನಂಬಿಕೆ ಇಟ್ಟಂತೆ ಕಾಣುತ್ತಿದೆ. ಬಾಂಬ್ ದಾಳಿಗಿಂತ ಆರ್ಥಿಕ ದಿಗ್ಬಂಧನ ಹೆಚ್ಚು ಪ್ರಭಾವಶಾಲಿ ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ಇರಾನ್ ತನ್ನ ಪರಮಾಣು ಹಠವನ್ನು ಬಿಡದಿದ್ದರೆ ಅಮೆರಿಕ ಬಲಪ್ರಯೋಗ ಮಾಡುವುದು ಅನಿವಾರ್ಯ ಎಂಬ ಸಂದೇಶವನ್ನೂ ಅವರು ರವಾನಿಸಿದ್ದಾರೆ.

ನಮಗೆ ಅಮೆರಿಕದ ಮೇಲೆ ನಂಬಿಕೆಯಿಲ್ಲ: ಇರಾನ್ ಕಿಡಿ

ಈ ಬೆಳವಣಿಗೆಗಳ ನಡುವೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಆತಂಕ ವ್ಯಕ್ತಪಡಿಸಿದ್ದಾರೆ. ನಾವು ಮಾತುಕತೆಗೆ ಸಿದ್ಧವಿದ್ದಾಗಲೆಲ್ಲಾ ಅಮೆರಿಕ ಮತ್ತು ಇಸ್ರೇಲ್ ನಮ್ಮ ಮೇಲೆ ದಾಳಿ ಮಾಡಿವೆ. ಹೀಗಿರುವಾಗ ನಾವು ವಾಷಿಂಗ್ಟನ್ ಅನ್ನು ಹೇಗೆ ನಂಬುವುದು? ಎಂದು ಪ್ರಶ್ನಿಸಿದ್ದಾರೆ. ಅಮೆರಿಕದ ಮೇಲಿನ ನಂಬಿಕೆ ಸಂಪೂರ್ಣ ನಾಶವಾಗಿದೆ ಎಂದು ಅವರು ಬೆಲರೂಸಿಯನ್ ಅಧ್ಯಕ್ಷರ ಮುಂದೆ ಅಳಲು ತೋಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net