ಗ್ರೀನ್‌ಲ್ಯಾಂಡ್‌ಗೆ ಅಮೆರಿಕವೇ ರಕ್ಷೆ: ದಾವೋಸ್ ಸಮ್ಮೇಳನದಲ್ಲಿ ವಿಶ್ವ ನಾಯಕರಿಗೆ ಟ್ರಂಪ್ ಖಡಕ್ ಎಚ್ಚರಿಕೆ | Donald Trump

ಗ್ರೀನ್‌ಲ್ಯಾಂಡ್‌ಗೆ ಅಮೆರಿಕವೇ ರಕ್ಷೆ: ದಾವೋಸ್ ಸಮ್ಮೇಳನದಲ್ಲಿ ವಿಶ್ವ ನಾಯಕರಿಗೆ ಟ್ರಂಪ್ ಖಡಕ್ ಎಚ್ಚರಿಕೆ
ಗ್ರೀನ್‌ಲ್ಯಾಂಡ್‌ಗೆ ಅಮೆರಿಕವೇ ರಕ್ಷೆ: ದಾವೋಸ್ ಸಮ್ಮೇಳನದಲ್ಲಿ ವಿಶ್ವ ನಾಯಕರಿಗೆ ಟ್ರಂಪ್ ಖಡಕ್ ಎಚ್ಚರಿಕೆ
Published on
ದಾವೋಸ್: ಅಮೆರಿಕವನ್ನು ಹೊರತುಪಡಿಸಿ ಬೇರೆ ಯಾವುದೇ ದೇಶ ಗ್ರೀನ್‌ಲ್ಯಾಂಡ್ ಅನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಅವರು ಜಾಗತಿಕ ಸಮುದಾಯದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಸಂಚಲನ ಮೂಡಿಸಿದ್ದಾರೆ. ಅಲ್ಲದೆ, ಗ್ರೀನ್‌ಲ್ಯಾಂಡ್ ದ್ವೀಪವನ್ನು ವಶಪಡಿಸಿಕೊಳ್ಳುವ ತಮ್ಮ ಹಠವನ್ನು ಮುಂದುವರಿಸಿದ್ದಾರೆ.
ಈ ಬಗ್ಗೆ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಭಾಷಣ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಡೆನ್ಮಾರ್ಕ್ ತನ್ನದೇ ಆದ ಗ್ರೀನ್‌ಲ್ಯಾಂಡ್ ದ್ವೀಪವನ್ನು ರಕ್ಷಿಸಲು ಅಸಮರ್ಥವಾಗಿದೆ. ನಾವು ಹಲವು ದಶಕಗಳಿಂದ ಯುರೋಪ್‌ಗೆ ಭದ್ರತೆ ನೀಡುತ್ತಿದ್ದೇವೆ. ಇದಕ್ಕೆ ಪ್ರತಿಯಾಗಿ ನಾವು ಕೇಳುತ್ತಿರುವುದು ಕೇವಲ ಒಂದು ಮಂಜುಗಡ್ಡೆಯ ತುಂಡನ್ನು ಎಂದಿದ್ಧಾರೆ. ಈ ಪ್ರದೇಶವು ಜಾಗತಿಕ ಶಾಂತಿ ಮತ್ತು ರಕ್ಷಣೆಯ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿದೆ ಎಂದು ಹೇಳಿದ್ಧಾರೆ.

ಬಲಪ್ರಯೋಗವಿಲ್ಲ, ಆದರೆ ನೋ' ಅಂದವರನ್ನು ಮರೆಯಲ್ಲ!

ಗ್ರೀನ್‌ಲ್ಯಾಂಡ್ ವಶಕ್ಕೆ ಸೇನೆಯನ್ನು ಬಳಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ನಾನು ಬಲಪ್ರಯೋಗ ಮಾಡಲು ಇಷ್ಟಪಡುವುದಿಲ್ಲ ಮತ್ತು ಅದನ್ನು ಮಾಡುವುದೂ ಇಲ್ಲ. ಆದರೆ, ನಮ್ಮ ಈ ಪ್ರಸ್ತಾಪಕ್ಕೆ ಯಾರು ಹೌದು ಎನ್ನುತ್ತಾರೆ ಮತ್ತು ಯಾರು 'ಇಲ್ಲ' ಎನ್ನುತ್ತಾರೆ ಎಂಬುದನ್ನು ನಾನು ನೆನಪಿನಲ್ಲಿಟ್ಟುಕೊಳ್ಳುತ್ತೇನೆ ಎಂದು ಪರೋಕ್ಷವಾಗಿ ಬೆದರಿಕೆ ಹಾಕಿದ್ಧಾರೆ.
ಅಲ್ಲದೆ, ಈ ಬೇಡಿಕೆಯನ್ನು ತಿರಸ್ಕರಿಸುವ ನ್ಯಾಟೋ (NATO) ಮಿತ್ರರಾಷ್ಟ್ರಗಳ ಮೇಲೆ ಶೇ. 10 ರಿಂದ 25 ರಷ್ಟು ಆಮದು ಸುಂಕ ವಿಧಿಸುವುದಾಗಿಯೂ ಅವರು ಎಚ್ಚರಿಸಿದ್ದಾರೆ.
ಅಮೆರಿಕದ ಆರ್ಥಿಕತೆಯೇ ಜಗತ್ತಿನ ಎಂಜಿನ್
ಅಮೆರಿಕ ಮತ್ತೆ ಗೆಲ್ಲುತ್ತಿದೆ ಮತ್ತು ಅದು ಹಿಂದೆಂದಿಗಿಂತಲೂ ದೊಡ್ಡದಾಗಿ ಗೆಲ್ಲುತ್ತಿದೆ. ನಾವು ತೆರಿಗೆಗಳನ್ನು ಕಡಿತಗೊಳಿಸಿದ್ದೇವೆ, ಉದ್ಯೋಗಗಳನ್ನು ಸೃಷ್ಟಿಸಿದ್ದೇವೆ ಮತ್ತು ಅಮೆರಿಕದ ಆರ್ಥಿಕತೆಯನ್ನು ಜಗತ್ತಿನ ಅಸೂಯೆ ಪಡುವಂತೆ ಮಾಡಿದ್ದೇವೆ. ನಾವು ಈಗ ಜಗತ್ತಿನ ಇಂಧನ ಶಕ್ತಿಯ ಕೇಂದ್ರಬಿಂದುವಾಗಿದ್ದೇವೆ ಎಂದು ಟ್ರಂಪ್​ ಹೇಳಿದ್ದಾರೆ.

ವಿಶ್ವಸಂಸ್ಥೆ ಮತ್ತು ಹೊಸ ಮಂಡಳಿಯ ಸ್ಥಾಪನೆ

ವಿಶ್ವಸಂಸ್ಥೆಯು ಕೇವಲ ಹರಟೆ ಹೊಡೆಯುವ ಕ್ಲಬ್ ಆಗಿ ಉಳಿದಿದೆ. ಅದಕ್ಕಾಗಿಯೇ ನಾನು ಬೋರ್ಡ್ ಆಫ್ ಪೀಸ್ ಪ್ರಸ್ತಾಪಿಸಿದ್ದೇನೆ. ಅದು ಗಾಜಾದಲ್ಲಿ ಶಾಂತಿ ತರುತ್ತದೆ ಮತ್ತು ಜಗತ್ತನ್ನು ಬದಲಾಯಿಸುತ್ತದೆ. ಯಾರು ನಮ್ಮೊಂದಿಗೆ ಸೇರುತ್ತಾರೋ ಅವರು ಗೆಲ್ಲುತ್ತಾರೆ, ಯಾರು ದೂರ ಇರುತ್ತಾರೋ ಅವರು ಇತಿಹಾಸದ ತಪ್ಪು ಭಾಗದಲ್ಲಿ ನಿಲ್ಲುತ್ತಾರೆ ಎಂದು ಜಗತ್ತಿಗೆ ಎಚ್ಚರಿಕೆ ನೀಡಿದ್ದಾರೆ.

ಯುರೋಪ್ ವಿರುದ್ಧ ವಾಗ್ದಾಳಿ

ಯುರೋಪಿಯನ್ ರಾಷ್ಟ್ರಗಳು ಸರಿಯಾದ ಹಾದಿಯಲ್ಲಿ ಸಾಗುತ್ತಿಲ್ಲ ಎಂದು ಟೀಕಿಸಿದ ಟ್ರಂಪ್, ಅಲ್ಲಿನ ಇಂಧನ ಮತ್ತು ವಲಸೆ ನೀತಿಗಳನ್ನು ವಿರುದ್ಧ ಕಿಡಿಕಾರಿದ್ಧಾರೆ. ಅಮೆರಿಕದ ಆರ್ಥಿಕತೆ ಇಂದು ಜಗತ್ತಿನ ಎಂಜಿನ್‌ನಂತೆ ಕೆಲಸ ಮಾಡುತ್ತಿದೆ. ನಾವು ಟ್ಯಾಕ್ಸ್ ಕಡಿಮೆ ಮಾಡುತ್ತಿದ್ದೇವೆ. ಆದರೆ ನಮ್ಮನ್ನು ವಿರೋಧಿಸುವವರ ಮೇಲೆ ಸುಂಕ ಏರಿಸುತ್ತಿದ್ದೇವೆ ಎಂದು ತಮ್ಮ ಅಮೇರಿಕಾ ಫಸ್ಟ್ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net