ಅಮೆರಿಕ ನಮಗೆ ಮಿತ್ರನಲ್ಲ, ಟ್ರಂಪ್ ಕೇವಲ ಕ್ಯಾರೆಕ್ಟರ್! ಫ್ರಾನ್ಸ್ ಅಧ್ಯಕ್ಷ ಆಡಿದ ಆ ಒಂದು ಮಾತು ಜಾಗತಿಕ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದ್ದೇಕೆ..? Emmanuel Macron

ಅಮೆರಿಕ ನಮಗೆ ಮಿತ್ರನಲ್ಲ, ಟ್ರಂಪ್ ಕೇವಲ ಕ್ಯಾರೆಕ್ಟರ್! ಫ್ರಾನ್ಸ್ ಅಧ್ಯಕ್ಷ ಆಡಿದ ಆ ಒಂದು ಮಾತು ಜಾಗತಿಕ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದ್ದೇಕೆ..?
ಅಮೆರಿಕ ನಮಗೆ ಮಿತ್ರನಲ್ಲ, ಟ್ರಂಪ್ ಕೇವಲ ಕ್ಯಾರೆಕ್ಟರ್! ಫ್ರಾನ್ಸ್ ಅಧ್ಯಕ್ಷ ಆಡಿದ ಆ ಒಂದು ಮಾತು ಜಾಗತಿಕ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದ್ದೇಕೆ..?
Published on
ಪ್ಯಾರಿಸ್: ವಿಶ್ವದ ದೊಡ್ಡಣ್ಣ ಅಮೆರಿಕ ಮತ್ತು ಯುರೋಪ್ ನಡುವಿನ ದಶಕಗಳ ಕಾಲದ ಆತ್ಮೀಯ ಸಂಬಂಧದಲ್ಲಿ ಈಗ ಬಿರುಕು ಮೂಡಿದೆಯೇ ಎಂಬ ಪ್ರಶ್ನೆಯನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್(Emmanuel Macron) ಆಡಿರುವ ಇತ್ತೀಚಿನ ಮಾತುಗಳನ್ನು ಕೇಳಿದರೆ ಹೌದು ಎನ್ನಲೇಬೇಕು.
ಈ ಬಗ್ಗೆ ಗ್ರೀಸ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೋಟಾಕಿಸ್ ಅವರೊಂದಿಗೆ ಅಥೆನ್ಸ್‌ನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮ್ಯಾಕ್ರನ್, ಅಮೆರಿಕದ ಅಮೆರಿಕಾ ಫಸ್ಟ್ ನೀತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.

ಟ್ರಂಪ್ ಕೇವಲ ಒಂದು ಕ್ಯಾರೆಕ್ಟರ್'

ಡೊನಾಲ್ಡ್ ಟ್ರಂಪ್ ವ್ಯಕ್ತಿತ್ವದ ಬಗ್ಗೆ ನೇರವಾಗಿ ಮಾತನಾಡಿದ ಮ್ಯಾಕ್ರನ್, ನನಗೆ ಟ್ರಂಪ್ ಚೆನ್ನಾಗಿ ಗೊತ್ತು, ಅವರೊಬ್ಬ ವಿಶಿಷ್ಟ ಪಾತ್ರ ಎಂದಿದ್ದಾರೆ. ಜನರು ಯಾರನ್ನು ನಾಯಕರನ್ನಾಗಿ ಆಯ್ಕೆ ಮಾಡುತ್ತಾರೋ ನಾನು ಅವರೊಂದಿಗೆ ಕೆಲಸ ಮಾಡುತ್ತೇನೆ. ಆದರೆ, ಇಲ್ಲಿ ಕೇವಲ ಟ್ರಂಪ್ ಅವರ ವರ್ತನೆ ಮುಖ್ಯವಲ್ಲ, ಬದಲಿಗೆ ಅಮೆರಿಕದ ಬದಲಾಗುತ್ತಿರುವ ವ್ಯೂಹಾತ್ಮಕ ನಡೆಯನ್ನು ನಾವು ಗಮನಿಸಬೇಕು ಎಂದು ಹೇಳಿದ್ದಾರೆ. ಟ್ರಂಪ್ ಮಾತಿನ ಮೂಲಕ ಹೆಚ್ಚು ಆಕ್ರಮಣಕಾರಿಯಾಗಿ ಕಾಣಿಸಬಹುದು, ಆದರೆ ಅಮೆರಿಕವು ಯುರೋಪ್‌ನಿಂದ ದೂರ ಸರಿಯುತ್ತಿರುವ ಪ್ರಕ್ರಿಯೆ ಓಬಾಮಾ ಕಾಲದಲ್ಲೇ ಆರಂಭವಾಗಿತ್ತು ಎಂದು ಮ್ಯಾಕ್ರನ್​ ಅಭಿಪ್ರಾಯಪಟ್ಟಿದ್ದಾರೆ.
ಯುರೋಪ್ ಹಿತಾಸಕ್ತಿಗೆ ಅಮೆರಿಕದ ಬೆನ್ನೇಟು..?
ಕಳೆದ 15 ವರ್ಷಗಳಿಂದ ಅಮೆರಿಕದ ಆದ್ಯತೆಗಳು ಬದಲಾಗಿವೆ ಎಂದು ಮ್ಯಾಕ್ರನ್ ವಾದಿಸಿದ್ದಾರೆ.
ಅಮೆರಿಕಾ ಫಸ್ಟ್: ಅಮೆರಿಕಕ್ಕೆ ತನ್ನ ಸ್ವಂತ ಹಿತಾಸಕ್ತಿಯೇ ಮೊದಲು.
ಚೀನಾ ಮೇಲೆ ಗಮನ: ಒಬಾಮಾ ಕಾಲದಿಂದಲೂ ಅಮೆರಿಕದ ಎರಡನೇ ಆದ್ಯತೆ ಚೀನಾ ಆಗಿದೆ.
ಯುರೋಪ್ ನಿರ್ಲಕ್ಷ್ಯ: ಅಮೆರಿಕದ ಕಾರ್ಯತಂತ್ರದಲ್ಲಿ ಯುರೋಪ್ ಈಗ ಕೇಂದ್ರಬಿಂದುವಾಗಿ ಉಳಿದಿಲ್ಲ. ಇದು ಕಟು ಸತ್ಯವಾಗಿದ್ದು. ಹೀಗಾಗಿ ಯುರೋಪ್ ತನ್ನ ಭದ್ರತೆ ಮತ್ತು ಅಸ್ತಿತ್ವಕ್ಕಾಗಿ ಅಮೆರಿಕದ ಮೇಲೆ ಅವಲಂಬಿತವಾಗುವುದನ್ನು ಬಿಟ್ಟು ಸ್ವಯಂ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಫ್ರಾನ್ಸ್​ ಅಧ್ಯಕ್ಷ ಕರೆ ನೀಡಿದ್ದಾರೆ.

ಇರಾನ್ ವಿಷಯದಲ್ಲಿ ಅಮೆರಿಕಕ್ಕೆ ವಿರೋಧ

ಇರಾನ್ ಮೇಲೆ ಅಮೆರಿಕ ಹೇರುತ್ತಿರುವ ಆರ್ಥಿಕ ದಿಗ್ಬಂಧನ ಮತ್ತು ಸೇನಾ ಒತ್ತಡವನ್ನು ಮ್ಯಾಕ್ರನ್ ಕಠಿಣ ಪದಗಳಲ್ಲಿ ಖಂಡಿಸಿದ್ದಾರೆ. ಇರಾನ್ ಜೊತೆಗಿನ ಮಾತುಕತೆಯು ವ್ಯವಸ್ಥಿತವಾಗಿರಬೇಕು ಮತ್ತು ಅದು ರಾಜತಾಂತ್ರಿಕತೆಯ ಮೇಲೆ ನಿಂತಿರಬೇಕು. ಆರ್ಥಿಕ ಕತ್ತು ಹಿಸುಕುವಿಕೆ ಅಥವಾ ಸೇನಾ ಬೆದರಿಕೆಗಳಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. ಇರಾನ್ ಮತ್ತು ಲೆಬನಾನ್‌ನಲ್ಲಿ ಕದನ ವಿರಾಮವನ್ನು ಕಾಯ್ದುಕೊಳ್ಳುವುದು ಜಾಗತಿಕ ಶಾಂತಿಗೆ ಅತಿ ಮುಖ್ಯ ಎಂದು ಮ್ಯಾಕ್ರನ್​ ಒತ್ತಿ ಹೇಳಿದ್ದಾರೆ.

ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಲು ಸಿದ್ಧತೆ

ಜಾಗತಿಕ ವ್ಯಾಪಾರದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿರುವ 'ಸ್ಟ್ರೈಟ್ ಆಫ್ ಹೊರ್ಮುಜ್ ಅನ್ನು ಪುನಃ ಮುಕ್ತಗೊಳಿಸಲು ಫ್ರಾನ್ಸ್ ಮತ್ತು ಬ್ರಿಟನ್ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ.
ಲಂಡನ್ ಕಾನ್ಫರೆನ್ಸ್: ಏಪ್ರಿಲ್ 22 ರಂದು ಲಂಡನ್‌ನ ನಾರ್ತ್‌ವುಡ್‌ನಲ್ಲಿ ನಡೆದ ಸಮಾವೇಶದಲ್ಲಿ 30 ಕ್ಕೂ ಹೆಚ್ಚು ದೇಶಗಳ ಮಿಲಿಟರಿ ಯೋಜಕರು ಭಾಗವಹಿಸಿದ್ದರು.
ಮಲ್ಟಿನ್ಯಾಷನಲ್ ಫ್ರೇಮ್‌ವರ್ಕ್: ಪ್ರಸ್ತಾವಿತ ಕದನ ವಿರಾಮ ಒಪ್ಪಂದದ ನಂತರ ಹೊರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರವನ್ನು ಸುರಕ್ಷಿತವಾಗಿ ಪುನರಾರಂಭಿಸಲು ಫ್ರಾನ್ಸ್ ಮತ್ತು ಬ್ರಿಟನ್ ನೇತೃತ್ವದಲ್ಲಿ ಬಹುರಾಷ್ಟ್ರೀಯ ಯೋಜನೆಯನ್ನು ರೂಪಿಸಲಾಗುತ್ತಿದೆ.

ಬದಲಾಗುತ್ತಿರುವ ಜಾಗತಿಕ ಕ್ರಮಾಂಕ

ಮ್ಯಾಕ್ರನ್ ಅವರ ಈ ಹೇಳಿಕೆಗಳು ನ್ಯಾಟೋ ಮೈತ್ರಿಕೂಟದ ಭವಿಷ್ಯದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿವೆ. ಅಮೆರಿಕ ಇನ್ನು ಮುಂದೆ ಸಂಪೂರ್ಣ ನಂಬಲರ್ಹ ಮಿತ್ರನಾಗಿ ಉಳಿದಿಲ್ಲ ಎಂಬ ಮಾತು, ಯುರೋಪಿಯನ್ ರಾಷ್ಟ್ರಗಳು ತಮ್ಮದೇ ಆದ ಸ್ವತಂತ್ರ ಸೇನಾ ಬಲ ಮತ್ತು ವಿದೇಶಾಂಗ ನೀತಿಯನ್ನು ರೂಪಿಸಿಕೊಳ್ಳುವ ಅನಿವಾರ್ಯತೆಯನ್ನು ಎತ್ತಿ ತೋರಿಸಿದೆ.
ಜಾಗತಿಕ ಅಸ್ಥಿರತೆಯ ನಡುವೆ ಫ್ರಾನ್ಸ್ ವಹಿಸುತ್ತಿರುವ ಈ ಸಕ್ರಿಯ ಪಾತ್ರವು ಅಮೆರಿಕದ ಏಕಸ್ವಾಮ್ಯಕ್ಕೆ ಸವಾಲೊಡ್ಡುವಂತಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net