

ಸುಂಕ ಸಮರದ ಮೂಲಕ ಜಾಗತಿಕವಾಗಿ ತಲ್ಲಣ ಮೂಡಿಸಿರುವ ಅಮೆರಿಕ ಅತಿರೇಕದ ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ. ರಷ್ಯಾದ ವ್ಯಾಪಾರವನ್ನು ನಿರ್ಬಂಧಿಸಲು ಸಂಸತ್ತಿನಲ್ಲಿ ಮಸೂದೆ ಮಂಡನೆಗೆ ಮುಂದಾಗಿದ್ದು, ಇದು ಅಂಗೀಕಾರಗೊಂಡರೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವ ಭಾರತ, ಚೀನಾ, ಬ್ರೆಜಿಲ್ ಮೇಲೆ ಶೇಕಡ 500ರಷ್ಟು ಸುಂಕ ಹೇರುವ ಸಾಧ್ಯತೆ ಇದೆ. ಇತ್ತೀಚೆಗೆ, ಭಾರತ ಮತ್ತು ರಷ್ಯಾ ನಡುವಿನ ಮೈತ್ರಿ ಮತ್ತಷ್ಟು ಗಟ್ಟಿಗೊಂಡಿರುವುದು ಟ್ರಂಪ್ ಕೆಂಗಣ್ಣಿಗೆ ಗುರಿಯಾಗಿದೆ.
ಸುಂಕ ಸಮರ ಮಾತ್ರವಲ್ಲದೆ ರಾಜತಾಂತ್ರಿಕವಾಗಿಯೂ ಹಿಂದಡಿ ಇಡುವ ಮೂಲಕ ಅಮೆರಿಕ ಏನನ್ನು ಸಾಧಿಸಲು ಹೊರಟಿದೆ ಎಂಬುದು ಅರ್ಥವಾಗುತ್ತಿಲ್ಲ. ಭಾರತದೊಂದಿಗಿನ ವ್ಯಾಪಾರ ಒಪ್ಪಂದದ ಬಗ್ಗೆ ಸುಳ್ಳು ಮತ್ತು ಗೊಂದಲದ ಹೇಳಿಕೆಗಳನ್ನು ಪದೇಪದೆ ನೀಡುತ್ತಿರುವ ಅಮೆರಿಕ ಆಡಳಿತ ಈ ಮೂಲಕ ದ್ವಿಪಕ್ಷೀಯ ಸಂಬಂಧಗಳ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತಿರುವುದು ದುರದೃಷ್ಟಕರ. ಮತ್ತೊಂದೆಡೆ, ಅಮೆರಿಕ ತಾನು ನಡೆದಿದ್ದೇ ದಾರಿ ಎಂಬಂತೆ ಸಾಗುತ್ತಿದ್ದು, ಈ ಪಯಣದಲ್ಲಿ ಬದ್ಧತೆ, ಉತ್ತರದಾಯಿತ್ವ ಹಾಗೂ ಸಾಮೂಹಿಕ ಜವಾಬ್ದಾರಿಯನ್ನು ಮರೆಯುತ್ತಿದೆ. ಭಾರತ-ಫ್ರಾನ್ಸ್ ನೇತೃತ್ವದಲ್ಲಿರುವ ಅಂತಾರಾಷ್ಟ್ರೀಯ ಸೌರ ಒಕ್ಕೂಟ ಸೇರಿದಂತೆ ವಿಶ್ವಸಂಸ್ಥೆಯ 60ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಅಮೆರಿಕ ಜನವರಿ 8ರಂದು ಹೊರಗೆ ಬರಲು ನಿರ್ಧರಿಸಿದ್ದು, ಇದು ಸೂಕ್ತ ನಡೆಯಲ್ಲ.
ಅಂತಾರಾಷ್ಟ್ರೀಯ ಸೌರ ಒಕ್ಕೂಟದಲ್ಲಿ 100 ರಾಷ್ಟ್ರಗಳು ಸದಸ್ಯತ್ವ ಹೊಂದಿದ್ದು, 90 ದೇಶಗಳು ಪೂರ್ಣ ಪ್ರಮಾಣದ ಸದಸ್ಯತ್ವ ಹೊಂದಲು ಆಸಕ್ತಿ ವ್ಯಕ್ತಪಡಿಸಿವೆ. ಸ್ವಾರ್ಥವೇ ಪ್ರಧಾನವಾಗಿರುವ ಅಮೆರಿಕ ನೀತಿಯಲ್ಲಿ ಜಗತ್ತಿನ ಎಲ್ಲ ರಾಷ್ಟ್ರಗಳು ತನ್ನ ತಾಳಕ್ಕೆ ತಕ್ಕಂತೆ ನಡೆಯಬೇಕು, ತನ್ನ ಹಿತಾಸಕ್ತಿಗಳನ್ನು ಮಾತ್ರ ಪೂರೈಸಬೇಕು ಎಂದು ಡೊನಾಲ್ಡ್ ಟ್ರಂಪ್ ಸರ್ಕಾರ ಬಯಸುತ್ತಿರುವುದು ವಿಚಿತ್ರ ನಡೆಯೇ ಹೌದು. ಯೂಕ್ರೇನ್ನಲ್ಲಿರುವ ವಿಜ್ಞಾನ ತಂತ್ರಜ್ಞಾನ ಕೇಂದ್ರ, ಜಾಗತಿಕ ತಾಪಮಾನ ಬದಲಾವಣೆಯ ಅಂತಾರಾಷ್ಟ್ರೀಯ ಸಮಿತಿ, ವಿಶ್ವಸಂಸ್ಥೆಯ ಆರ್ಥಿಕ-ಸಾಮಾಜಿಕ ವ್ಯವಹಾರಗಳ ಸಮಿತಿ, ಆಫ್ರಿಕಾದ ಆರ್ಥಿಕ ಆಯೋಗ, ಶಾಂತಿ ನಿರ್ಮಾಣ ಆಯೋಗ, ಶಾಂತಿ ಸ್ಥಾಪನೆ ನಿಧಿ, ವಿಶ್ವಸಂಸ್ಥೆ ವ್ಯವಹಾರ ಹಾಗೂ ಅಭಿವೃದ್ಧಿ, ವಿಶ್ವಸಂಸ್ಥೆಯ ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣ ಸಮಿತಿ ಸೇರಿದಂತೆ ವಿಶ್ವಸಂಸ್ಥೆಯ ಇತರ ಅಂಗಸಂಸ್ಥೆಗಳಿಂದ ಹಿಂದೆ ಸರಿಯಲು ನಿರ್ಧರಿಸಲಾಗಿದೆ.
‘ದೇಶದ ಹಿತಾಸಕ್ತಿಗೆ ವಿರುದ್ಧವಾದ ಅಂತಾರಾಷ್ಟ್ರೀಯ ಸಂಸ್ಥೆಗಳು, ಒಡಂಬಡಿಕೆಗಳು ಹಾಗೂ ಒಪ್ಪಂದಗಳಿಂದ ಅಮೆರಿಕವು ಹಿಂದೆ ಸರಿದಿದೆ’ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಎಲ್ಲ ಅಂಗಸಂಸ್ಥೆಗಳಿಂದ ಹಿಂದೆ ಸರಿಯುವುದೆಂದರೆ, ಅನುದಾನ ಸ್ಥಗಿತ ಹಾಗೂ ಭಾಗವಹಿಸುವುದನ್ನು ನಿಲ್ಲಿಸಲಾಗುತ್ತದೆ ಎಂದೂ ಅರ್ಥ ಎಂದು ಟ್ರಂಪ್ ತಿಳಿಸಿದ್ದಾರೆ. ಜಾಗತಿಕ ಸಂಸ್ಥೆಗಳು ಸಮಾನ ಕಾರ್ಯಸೂಚಿಗಳನ್ನು ಇರಿಸಿಕೊಂಡು ಹಲವು ಕ್ಷೇತ್ರದ ಸುಧಾರಣೆಗಾಗಿ ಕೆಲಸ ಮಾಡುತ್ತಿವೆ. ಇವುಗಳ ಕಾರ್ಯಸಾಧನೆಯನ್ನು ಅವಲೋಕಿಸಿದಾಗ ಆಯಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಸಾಧಾರಣ. ಆದರೆ, ಆ ಸಂಸ್ಥೆಗಳು ತಾನು ಹೇಳಿದಂತೆಯೇ ಕೇಳಬೇಕು ಎಂಬ ಅಮೆರಿಕದ ಹಠಮಾರಿ ಧೋರಣೆ ಖಂಡನೀಯ.