ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಅಲಿಸಾ ಹೀಲಿ; ಭಾರತ ವಿರುದ್ಧದ ಸರಣಿಯೇ ಕೊನೆ... Alyssa Healy

Alyssa Healy
Alyssa Healy
Published on
ಆಸ್ಟ್ರೇಲಿಯಾ: ( Alyssa Healy ) ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ದಂತಕಥೆ ಅಲಿಸಾ ಹೀಲಿ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.
ಈ ವರ್ಷ ಮಹಿಳಾ ಟಿ20 ವಿಶ್ವಕಪ್ ನಡೆಯಲಿದ್ದು, ಆ ಮಹತ್ವದ ಪಂದ್ಯಾವಳಿಗೂ ಮುನ್ನ ಹೀಲಿ ನಿವೃತ್ತಿ ಘೋಷಿಸಿರುವುದು ಆಸ್ಟ್ರೇಲಿಯನ್ ಕ್ರಿಕೆಟ್ ಮತ್ತು ಅದರ ಅಭಿಮಾನಿಗಳಿಗೆ ದೊಡ್ಡ ಹೊಡೆತ ನೀಡಿದೆ.
ಮಾರ್ಚ್ 2026 ರ ನಂತರ ನಿವೃತ್ತಿ ಹೊಂದುವುದಾಗಿ ಅವರು ಹೇಳಿದ್ದಾರೆ. 35 ವರ್ಷದ ಅಲಿಸಾ ಭಾರತದ ವಿರುದ್ಧ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ (ಗಾಯದ ಸಮಸ್ಯೆಗಳು) ಬಳಲಿಕೆಯಾಗಿದ್ದೇನೆ. ಆಟದ ಮೇಲಿದ್ದ ಸ್ಪರ್ಧಾತ್ಮಕ ಹಂಬಲ ಸ್ವಲ್ಪ ಕಡಿಮೆಯಾದಂತೆ ಭಾಸವಾಗುತ್ತಿದೆ, ಹಾಗಾಗಿ ನಿವೃತ್ತಿಗೆ ಇದು ಸರಿಯಾದ ಸಮಯ ಎಂದು ಅವರು ತಿಳಿಸಿದ್ದಾರೆ.
ಅಲಿಸಾ ಹೀಲಿ ಅವರು ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅವರ ಪತ್ನಿಯಾಗಿದ್ದಾರೆ. ಅಲಿಸಾ ಹೀಲಿ ಆಸ್ಟ್ರೇಲಿಯಾದ ಎಂಟು ಐಸಿಸಿ (ICC) ವಿಶ್ವಕಪ್ ವಿಜೇತ ತಂಡಗಳ ಭಾಗವಾಗಿದ್ದಾರೆ. ಮಹಿಳಾ ಕ್ರಿಕೆಟ್ ಇತಿಹಾಸದ ಶ್ರೇಷ್ಠ ವಿಕೆಟ್ ಕೀಪರ್-ಬ್ಯಾಟರ್‌ಗಳಲ್ಲಿ ಒಬ್ಬರಾದ ಇವರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 7,000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಮೆಗ್ ಲ್ಯಾನಿಂಗ್ ಅವರ ನಂತರ ತಂಡದ ನಾಯಕತ್ವ ವಹಿಸಿಕೊಂಡು ಆಸ್ಟ್ರೇಲಿಯಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.
ಇತ್ತೀಚೆಗೆ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL 2026) ಹರಾಜಿನಲ್ಲಿ ಹೀಲಿ ಅವರು ಹರಾಜಾಗದೆ ಉಳಿದಿದ್ದು (Unsold) ಕ್ರಿಕೆಟ್ ವಲಯದಲ್ಲಿ ಅಚ್ಚರಿ ಮೂಡಿಸಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಅವರ ಈ ನಿವೃತ್ತಿ ಘೋಷಣೆ ಬಂದಿದೆ. ಮಾರ್ಚ್ 6-9 ರವರೆಗೆ ಪರ್ತ್‌ನಲ್ಲಿ ನಡೆಯುವ ಭಾರತ ವಿರುದ್ಧದ ಟೆಸ್ಟ್ ಪಂದ್ಯವು ಅವರ ವೃತ್ತಿಜೀವನದ ಅಂತಿಮ ಪಂದ್ಯವಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net