ಸತ್ತ ಮೇಲೆ ಬಯಲಾಯ್ತು ಅಲಿ ಖಮೇನಿ ಸೀಕ್ರೆಟ್ ವಿಲ್: ಮಗನ ಬಗ್ಗೆ ಅಪ್ಪನಿಗಿದ್ದ ಆ ಆತಂಕ ಈಗ ನಿಜವಾಯಿತೇ? | Ali Khamenei

Ali Khamenei
Ali Khamenei
Published on
ವಾಷಿಂಗ್ಟನ್ : ಫೆಬ್ರವರಿ 28 ರಂದು ನಡೆದ ವೈಮಾನಿಕ ದಾಳಿಯಲ್ಲಿ ಹತರಾದ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ(Ali Khamenei) ಅವರ ಉತ್ತರಾಧಿಕಾರಿಯ ಆಯ್ಕೆ ಈಗ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಅಲಿ ಖಮೇನಿ ಅವರ ಎರಡನೇ ಮಗ ಮೊಜ್ತಬಾ ಖಮೇನಿ (Mojtaba Khamenei) ಅವರನ್ನು ಇರಾನ್‌ನ ನೂತನ ಸರ್ವೋಚ್ಚ ನಾಯಕನನ್ನಾಗಿ ಘೋಷಿಸಲಾಗಿದೆ. ಆದರೆ, ಈ ನೇಮಕಾತಿಯ ಹಿಂದೆ ಅಲಿ ಖಮೇನಿ ಅವರ ಮರಣಶಾಸನದ(ವಿಲ್​) ಉಲ್ಲಂಘನೆ ಮತ್ತು ಸೇನೆಯ ಒತ್ತಡವಿದೆ ಎಂಬ ಮಾಹಿತಿ ಹೊರಬಂದಿದೆ.
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ದಿವಂಗತ ಅಲಿ ಖಮೇನಿ ಅವರು ಬರೆದಿದ್ದ ವಿಲ್ಲಿನಲ್ಲಿ (Will), "ನನ್ನ ಮಗ ಮೊಜ್ತಬಾ ನನ್ನ ಉತ್ತರಾಧಿಕಾರಿಯಾಗುವುದು ನನಗೆ ಇಷ್ಟವಿಲ್ಲ" ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರು. ಮೊಜ್ತಬಾ ಅವರಿಗೆ ದೇಶವನ್ನು ಮುನ್ನಡೆಸಲು ಬೇಕಾದ ರಾಜಕೀಯ ಅನುಭವ ಮತ್ತು ಪ್ರೌಢಿಮೆ ಇಲ್ಲ ಎಂಬುದು ಸ್ವತಃ ತಂದೆಯ ಅಭಿಪ್ರಾಯವಾಗಿತ್ತು.
"ಮೊಜ್ತಬಾ ಒಬ್ಬ ರಾಜಕೀಯ ಶೂನ್ಯ ವ್ಯಕ್ತಿ. ತಂದೆಯ ಹೆಸರಿಲ್ಲದೆ ಆತನಿಗೆ ಯಾವುದೇ ಅಸ್ತಿತ್ವವಿಲ್ಲ" ಎಂದು ಪ್ರತಿಪಕ್ಷಗಳ ಗುಂಪುಗಳ ಸಂಶೋಧನಾ ನಿರ್ದೇಶಕ ಖೋಸ್ರೋ ಇಸ್ಫಹಾನಿ ತಿಳಿಸಿದ್ದಾರೆ. ಇರಾನ್‌ನ ಸಂಪ್ರದಾಯದಂತೆ 'ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್' ಈ ಆಯ್ಕೆಯನ್ನು ಮಾಡಬೇಕಿತ್ತು. ಆದರೆ, ಈ ಬಾರಿ ಈ ಪ್ರಕ್ರಿಯೆಯು ಪ್ರಜಾಸತ್ತಾತ್ಮಕವಾಗಿ ನಡೆದಿಲ್ಲ ಎಂಬ ಆರೋಪ ಕೇಳಿಬಂದಿದೆ.

ಸೇನೆಯ ಕೈಗೊಂಬೆಯಾದರೇ ಮೊಜ್ತಬಾ?

ವರದಿಗಳ ಪ್ರಕಾರ, ಇರಾನ್‌ನ ಪ್ರಭಾವಿ ಸೇನಾಪಡೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಅಸೆಂಬ್ಲಿ ಮೇಲೆ ಒತ್ತಡ ಹೇರಿ ಮೊಜ್ತಬಾ ಅವರನ್ನು ಸರ್ವೋಚ್ಚ ನಾಯಕನನ್ನಾಗಿ ಮಾಡಿದೆ. ಜ್ತಬಾ ಅವರಿಗೆ ಅಸೆಂಬ್ಲಿಯಲ್ಲಿ ಬಹುಮತ ಸಿಕ್ಕಿರಲಿಲ್ಲ. ನೆಯು ಮೊಜ್ತಬಾ ಅವರನ್ನು ಸುಲಭವಾಗಿ ನಿಯಂತ್ರಿಸಬಹುದಾದ 'ಕೈಗೊಂಬೆ' (Puppet) ಎಂದು ಭಾವಿಸಿದೆ. ತಮಗೆ ಬೇಕಾದಂತೆ ದೇಶವನ್ನು ಆಳಲು ಈ ಯುವ ನಾಯಕನನ್ನು ಬಳಸಿಕೊಳ್ಳುವುದು ಸೇನೆಯ ಉದ್ದೇಶವಾಗಿದೆ.

ಡೊನಾಲ್ಡ್ ಟ್ರಂಪ್ ನೇರ ಎಚ್ಚರಿಕೆ

ಇರಾನ್‌ನ ಈ ನೇಮಕಾತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರವಾಗಿ ಖಂಡಿಸಿದ್ದಾರೆ. "ಮೊಜ್ತಬಾ ಖಮೇನಿ ಶಾಂತಿಯಿಂದ ಬದುಕಲು ಸಾಧ್ಯವಿಲ್ಲ" ಎಂದು ಅವರು ಗುಡುಗಿದ್ದಾರೆ. ಇರಾನ್‌ನ ನೂತನ ನಾಯಕನ ಆಯ್ಕೆಯಲ್ಲಿ ಅಮೆರಿಕದ ಒಪ್ಪಿಗೆ ಬೇಕು. ನಮ್ಮ ಅನುಮತಿ ಇಲ್ಲದೆ ಮೊಜ್ತಬಾ ಹೆಚ್ಚು ದಿನ ಅಧಿಕಾರದಲ್ಲಿ ಉಳಿಯಲು ಸಾಧ್ಯವಿಲ್ಲ. ಖಮೇನಿ ಅವರ ಹಳೆಯ ನೀತಿಗಳನ್ನೇ ಮುಂದುವರಿಸುವ ನಾಯಕ ನಮಗೆ ಬೇಕಾಗಿಲ್ಲ. ನಮಗೆ ಇರಾನ್‌ನಲ್ಲಿ ಶಾಂತಿ ಸ್ಥಾಪಿಸುವ ವ್ಯಕ್ತಿ ಬೇಕು," ಎಂದು ಟ್ರಂಪ್ ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇಸ್ರೇಲ್ ಎಚ್ಚರಿಕೆ: ಮೊಜ್ತಬಾ ಕೂಡ ಟಾರ್ಗೆಟ್!

ಇಸ್ರೇಲ್ ಮಿಲಿಟರಿ ಈಗಾಗಲೇ ಒಂದು ಕಠಿಣ ಸಂದೇಶವನ್ನು ರವಾನಿಸಿದೆ. "ಟೆಹ್ರಾನ್‌ನ ಭಯೋತ್ಪಾದನಾ ಅಭಿಯಾನವನ್ನು ಮುಂದುವರಿಸುವ ಯಾವುದೇ ಇರಾನ್ ನಾಯಕನನ್ನಾದರೂ ನಾವು 'ನಿರ್ಮೂಲನೆಗೆ ಅರ್ಹವಾದ ಗುರಿ' (Unequivocal Target for Elimination) ಎಂದು ಪರಿಗಣಿಸುತ್ತೇವೆ" ಎಂದು ಎಚ್ಚರಿಸಿದೆ. ಬೆಳವಣಿಗೆಯು ಪಶ್ಚಿಮ ಏಷ್ಯಾದಲ್ಲಿ ಹೊಸ ಯುದ್ಧಕ್ಕೆ ನಾಂದಿ ಹಾಡಲಿದೆಯೇ? ಅಮೆರಿಕ ಮತ್ತು ಇಸ್ರೇಲ್‌ನ ಈ ಎಚ್ಚರಿಕೆಗಳಿಗೆ ಇರಾನ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಇಡೀ ಜಗತ್ತಿನ ಕುತೂಹಲಕ್ಕೆ ಕಾರಣವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net