ಸ್ಟಾರ್​​ ಪಟ್ಟ ಬಂದಿದ್ದೇ ತಡ ಡೊನಾಲ್ಡ್​ ಟ್ರಂಪ್​ ಎಮ್ಮೆಗೆ ಎದುರಾಯ್ತು ಸಂಕಷ್ಟ! ಮೂಕ ಜೀವಿಯ ನೋವು ಕೇಳೋರ್‍ಯಾರು? Albino Donald Trump buffalo

ಸ್ಟಾರ್​​ ಪಟ್ಟ ಬಂದಿದ್ದೇ ತಡ ಡೊನಾಲ್ಡ್​ ಟ್ರಂಪ್​ ಎಮ್ಮೆಗೆ ಎದುರಾಯ್ತು ಸಂಕಷ್ಟ! ಮೂಕ ಜೀವಿಯ ನೋವು ಕೇಳೋರ್‍ಯಾರು? Albino Donald Trump buffalo
ಸ್ಟಾರ್​​ ಪಟ್ಟ ಬಂದಿದ್ದೇ ತಡ ಡೊನಾಲ್ಡ್​ ಟ್ರಂಪ್​ ಎಮ್ಮೆಗೆ ಎದುರಾಯ್ತು ಸಂಕಷ್ಟ! ಮೂಕ ಜೀವಿಯ ನೋವು ಕೇಳೋರ್‍ಯಾರು? Albino Donald Trump buffalo
Published on

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಹೋಲುವ ಬಿಳಿ (ಅಲ್ಬಿನೊ) ಎಮ್ಮೆ ಈಗ ಸೋಶಿಯಲ್​ ಮೀಡಿಯಾ ಸ್ಟಾರ್​
  • ಬಾಂಗ್ಲಾದೇಶದ ಫಾರ್ಮ್‌ನಲ್ಲಿರುವ ಈ ವಿಶೇಷ ಪ್ರಾಣಿಯನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದುಬರುತ್ತಿದೆ
  • ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಿಗ್ನೇಚರ್ ಹೇರ್‌ಸ್ಟೈಲ್ ಹೋಲುವ ಕಾರಣಕ್ಕೆ ಟ್ರಂಪ್​ ಹೆಸರಿಡಲಾಗಿದೆ
  • ರಾತ್ರೋರಾತ್ರಿ ಸಿಕ್ಕಿದ ಅದೇ ಸ್ಟಾರ್‌ಡಮ್ ಈಗ ಆ ಮೂಕ ಜೀವಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ
Albino Donald Trump buffalo : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಹೋಲುವ ಬಿಳಿ (ಅಲ್ಬಿನೊ) ಎಮ್ಮೆಯೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಜಾಗತಿಕ ಮಟ್ಟದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಬಾಂಗ್ಲಾದೇಶದ ಫಾರ್ಮ್‌ನಲ್ಲಿರುವ ಈ ವಿಶೇಷ ಪ್ರಾಣಿಯನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದುಬರುತ್ತಿದೆ. ಆದರೆ, ಇದೇ ಸ್ಟಾರ್‌ಡಮ್ ಈಗ ಆ ಮೂಕ ಜೀವಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ! ಅಷ್ಟಕ್ಕೂ ಏನಾಯಿತು ಎಂದು ತಿಳಿಯುವ ಕುತೂಹಲ ನಿಮ್ಮಲ್ಲಿದ್ದರೆ ಮುಂದೆ ಓದಿ.
ಬಾಂಗ್ಲಾದೇಶದ ರಾಜಧಾನಿ ಢಾಕಾದ ಹೊರವಲಯದಲ್ಲಿರುವ ನಾರಾಯಣಗಂಜ್‌ನ ಫಾರ್ಮ್ ಒಂದರಲ್ಲಿರುವ ಅಪರೂಪದ ಬಿಳಿ (ಅಲ್ಬಿನೊ) ಎಮ್ಮೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಿಗ್ನೇಚರ್ ಹೇರ್‌ಸ್ಟೈಲ್ ಅನ್ನು ಹೋಲುವ ಆಕರ್ಷಕ ತಿಳಿ ಹಳದಿ ಮಿಶ್ರಿತ ಬಿಳಿ ಕೂದಲನ್ನು ಹೊಂದಿರುವ ಕಾರಣಕ್ಕೆ, ಈ 700 ಕೆಜಿ ತೂಕದ ಎಮ್ಮೆಗೆ ಪ್ರೀತಿಯಿಂದ "ಡೊನಾಲ್ಡ್ ಟ್ರಂಪ್" ಎಂದೇ ಹೆಸರಿಡಲಾಗಿದೆ. ಈ ವಿಶಿಷ್ಟ ಪ್ರಾಣಿಯೊಂದಿಗೆ ಸೆಲ್ಫಿ ಹಾಗೂ ಫೋಟೋಗಳನ್ನು ತೆಗೆದುಕೊಳ್ಳಲು ಪ್ರತಿದಿನ ನೂರಾರು ಜನ ಮುಗಿಬೀಳುತ್ತಿದ್ದಾರೆ.
ಈ ಬಗ್ಗೆ ಎಮ್ಮೆಯ ಮಾಲೀಕರಾದ 38 ವರ್ಷದ ಜಿಯಾ ಉದ್ದೀನ್ ಮೃಧಾ ಮಾತನಾಡಿ, ಈ ಎಮ್ಮೆಯ ವಿಭಿನ್ನವಾದ ಮತ್ತು ಆಕರ್ಷಕವಾದ ಕೂದಲಿನ ವಿನ್ಯಾಸವನ್ನು ನೋಡಿ ತಮ್ಮ ಕಿರಿಯ ಸಹೋದರ ಈ ಹೆಸರನ್ನು ಇಟ್ಟಿದ್ದಾಗಿ ತಿಳಿಸಿದ್ದಾರೆ. ಸದ್ಯ ಇಂಟರ್ನೆಟ್‌ನಲ್ಲಿ ಸ್ಟಾರ್​ ಪಟ್ಟ ಪಡೆದಿರುವ ಈ ಮೂಕ ಜೀವಿ ಎಲ್ಲರ ಗಮನ ಸೆಳೆಯುತ್ತಿದೆಯಾದರೂ, ಇನ್ನು ಕೆಲವೇ ದಿನಗಳಲ್ಲಿ ಇದನ್ನು ಧಾರ್ಮಿಕ ಆಚರಣೆಯ ಭಾಗವಾಗಿ ಬಲಿ ನೀಡಲು ನಿರ್ಧರಿಸಿರುವುದು ಪ್ರಾಣಿಪ್ರಿಯರಲ್ಲಿ ಹಾಗೂ ನೆಟ್ಟಿಗರಲ್ಲಿ ತೀವ್ರ ಬೇಸರವನ್ನು ಮೂಡಿಸಿದೆ.
ಈ ಇಂಟರ್ನೆಟ್ ಸೆನ್ಸೇಷನ್ ಪ್ರಾಣಿಯನ್ನು ಕಣ್ಣುಂಬಿಕೊಳ್ಳಲು ತಿಂಗಳಿಡೀ ಸೋಶಿಯಲ್ ಮೀಡಿಯಾ ಅಭಿಮಾನಿಗಳು, ಮಕ್ಕಳು ಮತ್ತು ಪ್ರೇಕ್ಷಕರ ದಂಡೇ ನಿರಂತರವಾಗಿ ಫಾರ್ಮ್‌ಗೆ ಹರಿದುಬರುತ್ತಿದೆ ಎಂದು ಮಾಲೀಕ ಮೃಧಾ ತಿಳಿಸಿದ್ದಾರೆ. ದಿನಕ್ಕೆ ನಾಲ್ಕು ಬಾರಿ ಸ್ನಾನ ಮಾಡುವುದೊಂದೇ ಈ ಎಮ್ಮೆ ಅನುಭವಿಸುವ ಏಕೈಕ ಐಷಾರಾಮಿ ಸೌಲಭ್ಯ ಅಂತಾನೂ ಮೃಧಾ ಹೇಳಿದ್ದಾರೆ. ಜೊತೆಗೆ ಈ ಎಮ್ಮೆ ಹಾಗೂ ಅಮೆರಿಕ ಅಧ್ಯಕ್ಷರ ನಡುವಿನ ಹೋಲಿಕೆ ಕೇವಲ ಕೂದಲಿಗೆ ಮಾತ್ರ ಸೀಮಿತವಾಗಿದೆ ಎಂಬುದನ್ನು ಮೃಧಾ ಇದೇ ಸಂದರ್ಭದಲ್ಲCBF ಸ್ಪಷ್ಟಪಡಿಸಿದ್ದಾರೆ.

ಜನರ ಒತ್ತಡದಿಂದಾಗಿ ತೂಕ ಇಳಿಕೆ

ಬಾಂಗ್ಲಾದೇಶದ ಜಾನುವಾರು ಸೇವೆಗಳ ಇಲಾಖೆಯ ಪ್ರಕಾರ, ಮೆಲನಿನ್ ಕೊರತೆಯಿಂದಾಗಿ ಬಿಳಿ ಅಥವಾ ಗುಲಾಬಿ ಬಣ್ಣದಲ್ಲಿ ಕಾಣಿಸುವ ಇಂತಹ ಅಲ್ಬಿನೊ ಎಮ್ಮೆಗಳು ಅತ್ಯಂತ ಅಪರೂಪವಾಗಿವೆ. ಮುಂಬರುವ ಈದ್ ಅಲ್-ಅಧಾ (ಬಕ್ರೀದ್) ಹಬ್ಬಕ್ಕಾಗಿ ಬಾಂಗ್ಲಾದೇಶ ಸಜ್ಜಾಗುತ್ತಿದ್ದು, ಈ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ಮಾಂಸದೂಟದ ಅಪರೂಪದ ಅವಕಾಶ ಸಿಗಲಿದ್ದು, ಸುಮಾರು 12 ಮಿಲಿಯನ್‌ಗೂ ಹೆಚ್ಚು ಜಾನುವಾರುಗಳನ್ನು ಬಲಿ ನೀಡಲಾಗುತ್ತಿದೆ. ಈ ನಡುವೆ, ನಿರಂತರವಾಗಿ ಬರುತ್ತಿರುವ ಜನರ ಒತ್ತಡದಿಂದಾಗಿ 'ಡೊನಾಲ್ಡ್ ಟ್ರಂಪ್' ಎಮ್ಮೆ ತೂಕ ಕಳೆದುಕೊಳ್ಳುತ್ತಿರುವುದರಿಂದ ಸಾರ್ವಜನಿಕ ವೀಕ್ಷಣೆಗೆ ನಿರ್ಬಂಧ ಹೇರಲಾಗಿದ್ದರೂ, ಉದ್ಯಮಿ ಫೈಸಲ್ ಅಹಮದ್ ಸೇರಿದಂತೆ ನೂರಾರು ಜನರು ದೂರದ ದೋಣಿ ಪ್ರಯಾಣ ಬೆಳೆಸಿ ಬಂದು ಇದರ ವಿಶಿಷ್ಟ ರೂಪವನ್ನು ಕಣ್ಣುಂಬಿಕೊಳ್ಳುತ್ತಿದ್ದಾರೆ. ಜನರ ಚೆಲ್ಲಾಟ ಈ ಪ್ರಾಣಿಗೆ ಸಂಕಟವಾಗಿದೆ. ನಿರಂತರ ಒತ್ತಡದಿಂದ ತೂಕವನ್ನು ಕಳೆದುಕೊಳ್ಳುತ್ತಿದೆ.
ಇನ್ನು ಫಾರ್ಮ್‌ನಲ್ಲಿ ಬಿರುಗಾಳಿಯಂತಹ ಸ್ವಭಾವದ 'ತುಫಾನ್', ದಪ್ಪಗಿನ 'ಫ್ಯಾಟ್ ಬಾಯ್', ಶಾಂತ ಸ್ವಭಾವದ 'ಸ್ವೀಟ್ ಬಾಯ್' ಹಾಗೂ ಬ್ರೆಜಿಲ್ ಫುಟ್‌ಬಾಲ್ ತಾರೆ ನೆಯ್ಮಾರ್ ಹೆಸರಿನ ಎಮ್ಮೆಗಳಿದ್ದರೂ, 'ಟ್ರಂಪ್' ಮಾತ್ರ ಇಲ್ಲಿ ನ್ಯಾಷನಲ್ ಸ್ಟಾರ್ ಆಗಿದ್ದಾನೆ. ಕಳೆದ ಒಂದು ವರ್ಷದಿಂದ ಈ 4 ವರ್ಷದ ಎಮ್ಮೆಯನ್ನು ಪ್ರೀತಿಯಿಂದ ಸಾಕಿ ಸಲುಹುತ್ತಿರುವ ಮಾಲೀಕ ಮೃಧಾ, ಇದನ್ನು ಕಳೆದುಕೊಳ್ಳುವ ನೋವಿನಲ್ಲೂ ಹಬ್ಬದ ನಿಜವಾದ ಆಶಯವನ್ನು ನೆನಪಿಸಿಕೊಂಡಿದ್ದಾರೆ.
ನಾನು ಖಂಡಿತವಾಗಿಯೂ ಡೊನಾಲ್ಡ್ ಟ್ರಂಪ್‌ನನ್ನು ಮಿಸ್ ಮಾಡಿಕೊಳ್ಳುತ್ತೇನೆ, ಆದರೆ ತ್ಯಾಗ ಮಾಡುವುದೇ ಈದ್ ಅಲ್-ಅಧಾ ಹಬ್ಬದ ಮೂಲ ಸಂಕೇತವಾಗಿದೆ ಎಂದು ಮೃಧಾ ಅವರು ಭಾವುಕರಾಗಿ ನುಡಿದಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net