Airstrike: ಶಾಂತಿ ಮಾತುಕತೆಯ ನಡುವೆಯೇ ಇರಾನ್ ಕ್ಷಿಪಣಿ ನೆಲೆಗಳ ಮೇಲೆ ಅಮೆರಿಕ ವೈಮಾನಿಕ ದಾಳಿ!

Airstrike
Airstrike
Published on
ದೋಹಾ/ಟೆಹ್ರಾನ್: ಮೂರು ತಿಂಗಳಿನಿಂದ ನಡೆಯುತ್ತಿರುವ ಭೀಕರ ಯುದ್ಧಕ್ಕೆ ಪೂರ್ಣವಿರಾಮ ಇಡಲು ಒಂದೆಡೆ ಶಾಂತಿ ಮಾತುಕತೆಗಳು ಪ್ರಗತಿಯಲ್ಲಿರುವಾಗಲೇ, ಅಮೆರಿಕ ಸೇನೆ ಇರಾನ್‌ನ ದಕ್ಷಿಣ ಭಾಗದ ಕ್ಷಿಪಣಿ ಉಡಾವಣಾ ನೆಲೆಗಳು ಹಾಗೂ ಮೈನ್‌ಗಳನ್ನು (ಸಮುದ್ರ ಸುರಂಗಗಳು) ಅಳವಡಿಸುತ್ತಿದ್ದ ದೋಣಿಗಳ ಮೇಲೆ ಭೀಕರ ವೈಮಾನಿಕ(Airstrike) ದಾಳಿ ನಡೆಸಿದೆ. ಈ ಹಠಾತ್ ದಾಳಿಯು ಜಾಗತಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದ್ದು, ಉಭಯ ದೇಶಗಳ ನಡುವಿನ ಶಾಂತಿ ಒಪ್ಪಂದದ ಭವಿಷ್ಯ ಈಗ ತೂಗುಯ್ಯಾಲೆಯಲ್ಲಿದೆ.
ಇರಾನ್‌ನ ಉನ್ನತ ಮಟ್ಟದ ರಾಜತಾಂತ್ರಿಕರು ಕತಾರ್ ಪ್ರಧಾನಿ ಜೊತೆ ದೋಹಾದಲ್ಲಿ ಶಾಂತಿ ಮಾತುಕತೆ ನಡೆಸುತ್ತಿದ್ದ ಬೆನ್ನಲ್ಲೇ ಈ ದಾಳಿ ನಡೆದಿದೆ. ಇರಾನ್ ಮತ್ತು ಇಸ್ರೇಲ್ ವಿರುದ್ಧದ ಯುದ್ಧವನ್ನು ಕೊನೆಗಾಣಿಸಲು ಈ ಮಾತುಕತೆ ಆಯೋಜಿಸಲಾಗಿತ್ತು. ಏಪ್ರಿಲ್ 8 ರಂದು ಜಾರಿಗೆ ಬಂದಿದ್ದ ತಾತ್ಕಾಲಿಕ ಕದನ ವಿರಾಮದ ಒಪ್ಪಂದವು ಈ ದಾಳಿಯಿಂದಾಗಿ ಸಂಪೂರ್ಣವಾಗಿ ಹಳಿ ತಪ್ಪುವ ಭೀತಿ ಎದುರಾಗಿದೆ.

ಅಮೆರಿಕ ಸಮರ್ಥನೆ

ದಾಳಿಯ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM), "ನಮ್ಮ ಸೈನಿಕರ ರಕ್ಷಣೆಗಾಗಿ ಈ ಕ್ರಮ ಅನಿವಾರ್ಯವಾಗಿತ್ತು. ಇರಾನ್ ಪಡೆಗಳಿಂದ ಎದುರಾಗಬಹುದಾದ ದಾಳಿಯನ್ನು ತಡೆಯಲು ಸ್ವಯಂ ರಕ್ಷಣೆಗಾಗಿ ನಾವು ಇರಾನ್‌ನ ಕ್ಷಿಪಣಿ ನೆಲೆಗಳನ್ನು ಮತ್ತು ಪರ್ಷಿಯನ್ ಕೊಲ್ಲಿಯಲ್ಲಿ ಮೈನ್‌ಗಳನ್ನು ಇಡುತ್ತಿದ್ದ ಬೋಟ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದೇವೆ" ಎಂದು ಸ್ಪಷ್ಟಪಡಿಸಿದೆ. ಆಯಕಟ್ಟಿನ ಪ್ರದೇಶವಾದ 'ಸ್ಟ್ರೇಟ್ ಆಫ್ ಹಾರ್ಮುಜ್' ಬಳಿಯ ಬಂದರ್ ಅಬ್ಬಾಸ್ ನೌಕಾನೆಲೆಯನ್ನು ಗುರಿಯಾಗಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಪ್ರತ್ಯುತ್ತರ ನೀಡಿದ ಇರಾನ್ ವಾಯುಪಡೆ

ಅಮೆರಿಕದ ದಾಳಿಯ ಬೆನ್ನಲ್ಲೇ ಬಂದರ್ ಅಬ್ಬಾಸ್ ವಿಮಾನ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಸ್ಫೋಟದ ಸೌಂಡ್ ಕೇಳಿಬಂದಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ತಿಳಿಸಿದೆ. ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಯು ತಕ್ಷಣವೇ ಸಕ್ರಿಯಗೊಂಡಿದ್ದು, ಶತ್ರುಗಳ ದಾಳಿಯನ್ನು ಯಶಸ್ವಿಯಾಗಿ ಎದುರಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕದ ಡ್ರೋನ್ ಒಂದನ್ನು ಹೊಡೆದು ಉರುಳಿಸಿರುವುದಾಗಿ ಇರಾನ್ ಸೈನ್ಯ ಹೇಳಿಕೊಂಡ ಬೆನ್ನಲ್ಲೇ ಈ ದಾಳಿ ನಡೆದಿರುವುದು ಗಮನಾರ್ಹ.

ಯುರೇನಿಯಂ ಹಸ್ತಾಂತರಕ್ಕೆ ಟ್ರಂಪ್ ಖಡಕ್ ಎಚ್ಚರಿಕೆ!

ಈ ದಾಳಿಯ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. "ಇರಾನ್ ತನ್ನ ಬಳಿ ಇರುವ ಸಮೃದ್ಧ ಯುರೇನಿಯಂ (ಪರಮಾಣು ಧೂಳು) ಅನ್ನು ತಕ್ಷಣವೇ ಅಮೆರಿಕಕ್ಕೆ ಹಸ್ತಾಂತರಿಸಬೇಕು ಅಥವಾ ಅಂತರರಾಷ್ಟ್ರೀಯ ಪರಮಾಣು ಸಂಸ್ಥೆಯ ಸಮ್ಮುಖದಲ್ಲಿ ಇರಾನ್‌ನಲ್ಲೇ ಅದನ್ನು ನಾಶಪಡಿಸಬೇಕು" ಎಂದು ಟ್ರಂಪ್ ಗುಡುಗಿದ್ದಾರೆ. ಅಲ್ಲದೆ ಸೌದಿ ಅರೇಬಿಯಾ, ಯುಎಇ, ಕತಾರ್, ಪಾಕಿಸ್ತಾನ ಮತ್ತು ಈಜಿಪ್ಟ್ ಸೇರಿದಂತೆ ಪ್ರಮುಖ ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ಜೊತೆಗಿನ 'ಅಬ್ರಹಾಂ ಒಪ್ಪಂದ'ಕ್ಕೆ ಕಡ್ಡಾಯವಾಗಿ ಸಹಿ ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net