ಕ್ಷಿಪಣಿ ಸಾಫ್ಟ್‌ವೇರ್‌ಗೂ ಎಐ ಮೊರೆ: ಕ್ಲಾಡ್​ ಬಳಸಿ ಶಸ್ತ್ರಾಸ್ತ್ರ ತಯಾರಿಸಿದವರ ಅಸಲಿ ರಹಸ್ಯ ಬಯಲು! AI Misuse Alert

ಕ್ಷಿಪಣಿ ಸಾಫ್ಟ್‌ವೇರ್‌ಗೂ ಎಐ ಮೊರೆ: ಕ್ಲಾಡ್​ ಬಳಸಿ ಶಸ್ತ್ರಾಸ್ತ್ರ ತಯಾರಿಸಿದವರ ಅಸಲಿ ರಹಸ್ಯ ಬಯಲು! AI Misuse Alert
ಕ್ಷಿಪಣಿ ಸಾಫ್ಟ್‌ವೇರ್‌ಗೂ ಎಐ ಮೊರೆ: ಕ್ಲಾಡ್​ ಬಳಸಿ ಶಸ್ತ್ರಾಸ್ತ್ರ ತಯಾರಿಸಿದವರ ಅಸಲಿ ರಹಸ್ಯ ಬಯಲು! AI Misuse Alert
Published on: 

ಪ್ರಮುಖ ಮುಖ್ಯಾಂಶಗಳು

  • ಕೃತಕ ಬುದ್ಧಿಮತ್ತೆ ಬಳಸಿ ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸುತ್ತಿರುವ ಆತಂಕಕಾರಿ ಸಂಗತಿ ಬಹಿರಂಗ
  • ಕ್ಲಾಡ್ ಎಐ ಬಳಸಿ ಕ್ಷಿಪಣಿ ಹಾಗೂ ಮಿಲಿಟರಿ ಡ್ರೋನ್ ಸಾಫ್ಟ್​ವೇರ್ ಅಭಿವೃದ್ಧಿಗೆ ಯತ್ನ
  • ಯೆಮೆನ್ ರಷ್ಯಾ ಹಾಗೂ ಚೀನಾದಲ್ಲಿ ನಡೆದ ಆರು ದುರುಪಯೋಗ ಕಾರ್ಯಾಚರಣೆ ಪತ್ತೆ
  • ಶಸ್ತ್ರಾಸ್ತ್ರ ಅಭಿವೃದ್ಧಿ ಪ್ರಯತ್ನ ಪತ್ತೆಯಾದ ಬೆನ್ನಲ್ಲೇ ಸಂಬಂಧಿತ ಖಾತೆಗಳನ್ನು ನಿಷೇಧಿಸಿದ ಆಂಥ್ರೊಪಿಕ್
AI Misuse Alert : ಕೃತಕ ಬುದ್ದಿಮತ್ತೆ ಈಗ ಕೇವಲ ಬರವಣಿಗೆ, ಸಂಶೋಧನೆ, ತಾಂತ್ರಿಕ ಕೆಲಸಗಳಿಗೆ ಮಾತ್ರ ಸೀಮಿತವಾಗಿಲ್ಲ, ಶಸ್ತಾಸ್ತ್ರ ಅಭಿವೃದ್ದಿಗೂ ಎಐ ಬಳಕೆಯಾಗುತ್ತಿರುವ ಆತಂಕಕಾರಿ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಆಂಥ್ರೊಪಿಕ್ (Anthropic) ಸಂಸ್ಥೆಯ ಪ್ರಕಾರ, ಕ್ಲಾಡ್​ ಎಐ ಜನರೇಷನ್​ ಬಳಸಿಕೊಂಡು ಕ್ಷಿಪಣಿ ಮಾರ್ಗದರ್ಶಿತ ರಾಕೆಟ್​ ಹಾಗೂ ಮಿಲಿಟರಿ ಡ್ರೋನ್​ಗಳಿಗೆ ಸಂಬಂಧಿಸಿದ ಸಾಫ್ಟ್​ವೇರ್​ ಅಭಿವೃದ್ಧಿಪಡಿಸಲು ಹಲವು ಪ್ರಯತ್ನಗಳು ನಡೆದಿವೆ.
ಸ್ಯಾನ್​ ಫ್ರಾನ್ಸಿಸ್ಕೋ ಮೂಲದ ಎಐ ಸಂಸ್ಥೆ ಆಂಥ್ರೊಪಿಕ್​ ಬಿಡುಗಡೆ ಮಾಡಿರುವ ವರದಿ ಪ್ರಕಾರ, 2025ರ ಡಿಸೆಂಬರ್​ನಿಂದ 2026ರ ಆಗಸ್ಟ್​ವರೆಗೆ ಯೆಮೆನ್​, ರಷ್ಯಾ ಹಾಗೂ ಚೀನಾದಲ್ಲಿ ಸಾಂಪ್ರದಾಯಿಕ ಶಸ್ತಾಸ್ತ್ರಗಳ ಅಭಿವೃದ್ದಿ ಹಾಗೂ ಗುಪ್ತಚರ ಸಂಗ್ರಹಣೆಗೆ ಕ್ಲಾಡ್​ ಬಳಸಿದ ಆರು ಕಾರ್ಯಾಚರಣೆಯನ್ನು ಪತ್ತೆ ಹಚ್ಚಿ ತಡೆಗಟ್ಟಲಾಗಿದೆ.
ಯಮೆನ್​ ಮೂಲದ ಶಸ್ತಾಸ್ತ್ರ ಇಂಜಿನಿಯರಿಂಗ್​ ಗುಂಪೊಂದು ಹಾರುವ ವಾಹನವನ್ನು ನಿಯಂತ್ರಿಸಲು, ಮಾರ್ಗದರ್ಶನ ಮಾಡಲು ಹಾಗೂ ಸ್ಥಿರಗೊಳಿಸಲು ಅಗತ್ಯವಿರುವ ಸಾಫ್ಟ್​ವೇರ್​ ಅಭಿವೃದ್ಧಿಪಡಿಸಲು ಕ್ಲಾಡ್​ ಬಳಸಿದೆ ಎಂದು ಆಂಥ್ರೊಪಿಕ್​ ತಿಳಿಸಿದೆ. ಈ ಗುಂಪು 2000 ಕಿ.ಮೀ ಹೆಚ್ಚಿನ ವ್ಯಾಪ್ತಿಯ ಬಹುಹಂತದ ಬ್ಯಾಲಿಸ್ಟಿಕ್​ ಕ್ಷಿಪಣಿ ಸೇರಿದಂತೆ ಮೂರು ಶಸ್ತ್ರಾಸ್ತ್ರ ಅಭಿವೃದ್ದಿ ಯೋಜನೆಯಲ್ಲಿ ತೊಡಗಿತ್ತು ಎಂದು ತಿಳಿಸಿದೆ.
ಇದಕ್ಕಿಂತ ಆತಂಕಕಾರಿ ಸಂಗತಿಯೆಂದರೆ ಈ ಗುಂಪು ಅಭಿವೃದ್ದಿಪಡಿಸಿದ ಮಾರ್ಗದರ್ಶಿತ ರಾಕೆಟ್​ ಒಂದನ್ನು ಪರೀಕ್ಷಾರ್ಥವಾಗಿ ಉಡಾಯಿಸಿತ್ತು, ಆದರೆ ಪರೀಕ್ಷೆ ವಿಫಲವಾದಂತೆ ಕಂಡು ಬಂದಿದೆ. ವೈಫಲ್ಯಕ್ಕೆ ಕಾರಣವನೆಂದು ತಿಳಿದುಕೊಳ್ಳಲು ಮತ್ತೆ ಕ್ಲಾಡ್ ಮೋರೆ ಹೋದರು ಎಂದು ಆಂಥ್ರೊಪಿಕ್​ ಹೇಳಿದೆ. ಈ ಪ್ರಯತ್ನದಿಂದ ಕಾರ್ಯನಿರ್ವಹಿಸುವ ಶಸ್ತಾಸ್ತ್ರವನ್ನು ಯಶಸ್ವಿಯಾಗಿ ನಿಯೋಜಿಸಲಾಗಿದೆ ಎಂದು ಹೇಳಲು ಯಾವುದೇ ಪುರಾವೆಗಳು ದೊರೆತಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಚೀನಾದಲ್ಲಿಯೂ ಕ್ಲಾಡ್​ ಬಳಸಿ ನೀರೊಳಗಿನ ಯುದ್ಧಕ್ಕೆ ಸಂಬಂಧಿಸಿದ ಶಸ್ತ್ರಾಸ್ತ್ರ ವ್ಯವಸ್ಥೆಯ ತಾಂತ್ರಿಕ ದಾಖಲೆಗಳು, ಪ್ರಸ್ತಾವನೆಗಳು ಹಾಗೂ ಅಮೆರಿಕದ ನಿರ್ದಿಷ್ಟ ಟಾರ್ಪಿಡೊ ವಿರೋಧಿ ಮತ್ತು ಜಲಾಂತರ್ಗಾಮಿ ವಿರೋಧಿ ಕಾರ್ಯಕ್ರಮಗಳೊಂದಿಗೆ ವ್ಯವಸ್ಥೆಯನ್ನು ಹೋಲಿಸುವ ಕೆಲಸಗಳನ್ನು ನಡೆಸಲಾಗಿದೆ ಎಂದು ವರದಿ ತಿಳಿಸಿದೆ.
ಇದೇ ವೇಳೆ, ಚೀನಾದ ಮತ್ತೆರಡು ಕಾರ್ಯಾಚರಣೆಗಳಲ್ಲಿ ಎಲೆಕ್ಟ್ರಾನಿಕ್ ಯುದ್ಧಕ್ಕಾಗಿ ಗುರಿ ಗುರುತಿಸುವ ಸಾಫ್ಟ್‌ವೇರ್ ಅಭಿವೃದ್ಧಿ ಹಾಗೂ ನಿರ್ದೇಶಿತ-ಶಕ್ತಿ ಶಸ್ತ್ರಾಸ್ತ್ರಗಳ ಕುರಿತು ಗುಪ್ತಚರ ಸಂಗ್ರಹಣೆಗೆ ಕ್ಲಾಡ್​ ಬಳಸಲಾಗಿದೆ ಎಂದು ಆಂಥ್ರೊಪಿಕ್​ ಆರೋಪಿಸಿದೆ. ರಷ್ಯಾದ ಮತ್ತೊಂದು ಕಾರ್ಯಾಚರಣೆಯಲ್ಲಿ ಸ್ವಯಂಚಾಲಿತ ಮಿಲಿಟರಿ ಡ್ರೋನ್‌ಗಳ ಗುಂಪನ್ನು ನಿಯಂತ್ರಿಸುವ ಸಾಫ್ಟ್‌ವೇರ್‌ ಬರೆಯಲು ಮತ್ತು ಪರೀಕ್ಷಿಸಲು ಕ್ಲಾಡ್​ ಕೋಡ್​ ಬಳಸಲಾಗಿತ್ತು ಎನ್ನಲಾಗಿದೆ.
ಈ ರೀತಿಯ ದುರುಪಯೋಗವನ್ನು ಪತ್ತೆಹಚ್ಚಿದ ಬಳಿಕ ಸಂಬಂಧಿತ ಖಾತೆಗಳನ್ನು ನಿಷೇಧಿಸಿರುವ ಆಂಥ್ರೊಪಿಕ್​ ಸಂಭವನೀಯ ಅಪಾಯಗಳನ್ನು ತಗ್ಗಿಸಲು ಈ ಕುರಿತು ಮಾಹಿತಿಯನ್ನು ತನ್ನ ಪಾಲುದಾರ ಸಂಸ್ಥೆಗಳೊಂದಿಗೆ ಹಂಚಿಕೊಂಡಿದೆ, ( ಏಜೇನ್ಸಿಸ್).