ಹೊಳಪು ಕಳೆದುಕೊಳ್ಳುತ್ತಿರುವ ಎಐ!..ಕಂಪನಿಗಳ ಮೇಲೆ ತೀವ್ರ ಗಳಿಕೆಯ ಒತ್ತಡ

ಹೊಳಪು ಕಳೆದುಕೊಳ್ಳುತ್ತಿರುವ ಎಐ!..ಕಂಪನಿಗಳ ಮೇಲೆ ತೀವ್ರ ಗಳಿಕೆಯ ಒತ್ತಡ
Published on: 

ಕಳೆದ ಕೆಲವು ವರ್ಷಗಳಿಂದ ಜಾಗತಿಕ ತಂತ್ರಜ್ಞಾನ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಕರ್ಷಕ ವಿಷಯವಾಗಿತ್ತು. ಆದರೆ ಪ್ರಸ್ತುತ ಈ ಚಿತ್ರಣದಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ. ಎಐ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಬೇಕಾಗುವ ಬೃಹತ್​ ಡೇಟಾ ಸೆಂಟರ್​ಗಳ ನಿರ್ಮಾಣಕ್ಕಾಗಿ ಟೆಕ್​ ಕಂಪನಿಗಳು ಮಾಡುತ್ತಿರುವ ಅತಿಯಾದ ವೆಚ್ಚ ಮತ್ತು ಅದಕ್ಕಾಗಿ ಪಡೆಯುತ್ತಿರುವ ಸಾಲದ ಪ್ರಮಾಣವು ಈಗ ಜಾಗತಿಕ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.

ಅಮೆರಿಕದ ಷೇರು ಮಾರುಕಟ್ಟೆ ವಾಲ್​ ಸ್ಟ್ರೀಟ್​ನಲ್ಲಿ ಎಐ ಕುರಿತಾಗಿದ್ದ ಉತ್ಸಾಹ ಈಗ ಕಡಿಮೆಯಾಗಿದೆ. ಹೂಡಿಕೆದಾರರಿಗೆ ಈಗ ಎಐ ಕಂಪನಿಗಳ ಭವಿಷ್ಯದ ಸಾಧ್ಯತೆಗಳ ಬದಲಾಗಿ ಹೂಡಿಕೆಗೆ ತಕ್ಕಂತೆ ಗಳಿಕೆಯನ್ನು ಹೆಚ್ಚಿಸುವುದು ಅತಿದೊಡ್ಡ ಸವಾಲಾಗಿದೆ. ಡೇಟಾ ಸೆಂಟರ್​ಗಳ ಮೇಲೆ ಮಾಡಲಾಗುತ್ತಿರುವ ಹೂಡಿಕೆಯಿಂದ ಸಾಮಾನ್ಯ ಆದಾಯ ಪಡೆಯಲು 2030ರ ವೇಳೆಗೆ ಉದ್ಯಮವು 282 ಲಕ್ಷ ಕೋಟಿ ರೂಪಾಯಿಗಳ ವಾರ್ಷಿಕ ಆದಾಯವನ್ನು ಗಳಿಸಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ಪ್ರಮುಖ ಎಐ ಮಾಡೆಲ್​ಗಳನ್ನು ತಯಾರಿಸುವ ಕಂಪನಿಗಳ ಪ್ರಸ್ತುತ ಒಟ್ಟು ವಾರ್ಷಿಕ ಗಳಿಕೆ 18.84 ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ಇದರಲ್ಲಿ ಆಂಥ್ರೊಪಿಕ್​ನ 7.63 ಲಕ್ಷ ಕೋಟಿ ಮತ್ತು ಓಪನ್​ಎಐನ 4.7 ಲಕ್ಷ ಕೋಟಿ ರೂಪಾಯಿಗಳ ಆದಾಯ ಸೇರಿದೆ. ಆತಂಕದ ವಿಷಯವೆಂದರೆ ಈ ಕಂಪನಿಗಳ ಆದಾಯದ ಬೆಳವಣಿಗೆಯೂ ನಿಧಾನವಾಗುತ್ತಿದೆ. ಮೂರು ತಿಂಗಳ ಬೆಳವಣಿಗೆ ದರವು 80-90%ರಿಂದ ಕುಸಿದು ಅಕ್ಟೋಬರ್​ನಲ್ಲಿ 12%ಕ್ಕೆ ಇಳಿದಿದೆ.

ಸಾಲದ ಸುಳಿಯಲ್ಲಿ ಎಐ ಮೂಲಸೌಕರ್ಯ

ಮೊದಲು ಮೈಕ್ರೋಸಾಫ್ಟ್​, ಗೂಗಲ್​ (ಆಲ್ಫಾಬೆಟ್​), ಅಮೆಜಾನ್​ ಮತ್ತು ಮೆಟಾದಂತಹ ದೈತ್ಯ ಕಂಪನಿಗಳು ತಮ್ಮಲ್ಲಿರುವ ಅಪಾರ ನಗದು ಮೀಸಲಿನಿಂದಲೇ ಬಂಡವಾಳ ಹೂಡಿಕೆ ಮಾಡುತ್ತಿದ್ದವು. ಆದರೆ ಎಐ ಮಾದರಿಗಳಿಗೆ ಬೇಕಾಗುವ ಕಂಪ್ಯೂಟಿಂಗ್​ ಸಾಮರ್ಥ್ಯ, ಜಿಪಿಯು ಚಿಪ್​ಗಳು ಮತ್ತು ವಿದ್ಯುತ್​ ಮೂಲಸೌಕರ್ಯಗಳ ವೆಚ್ಚ ಊಹೆಗೂ ಮೀರಿ ಬೆಳೆದಿದೆ.

ಗೋಲ್ಡ್​ಮನ್​ ಸ್ಯಾಕ್ಸ್​ ವರದಿಯ ಪ್ರಕಾರ, 2026ರ ನವೆಂಬರ್​ ವೇಳೆಗೆ ಜಾಗತಿಕ ಸಾಲ ಮಾರುಕಟ್ಟೆಯಲ್ಲಿ ಎಐ ಸಂಬಂಧಿತ ಸಾಲದ ಪ್ರಮಾಣ ಬರೋಬ್ಬರಿ 687 ಬಿಲಿಯನ್​ ಡಾಲರ್​ ತಲುಪಿದೆ. 2024ರಲ್ಲಿ ಇದು ಕೇವಲ 10 ಬಿಲಿಯನ್​ ಡಾಲರ್​ನಷ್ಟಿತ್ತು ಎಂಬುದು ಈ ಬೆಳವಣಿಗೆಯ ತೀವ್ರತೆಯನ್ನು ತೋರಿಸುತ್ತದೆ. ನೇರ ಸಾಲದ ಜೊತೆಗೆ, ಪ್ರಮುಖ ಐದು ಟೆಕ್​ ಕಂಪನಿಗಳು ಡೇಟಾ ಸೆಂಟರ್​ಗಳ ಲೀಸ್​ ಒಪ್ಪಂದಗಳಿಗಾಗಿ 1.7 ಟ್ರಿಲಿಯನ್​ ಡಾಲರ್​ ಮತ್ತು ಇತರ ಖರೀದಿ ಒಪ್ಪಂದಗಳಿಗಾಗಿ 1.9 ಟ್ರಿಲಿಯನ್​ ಡಾಲರ್​ಗಳಷ್ಟು ದೀರ್ಘಕಾಲೀನ ಆರ್ಥಿಕ ಬದ್ಧತೆಯನ್ನು ಹೊಂದಿವೆ.

ದೈತ್ಯ ಕಂಪನಿಗಳಿಗೆ ಡೇಟಾ ಸೆಂಟರ್​ ಬಾಡಿಗೆಗೆ ನೀಡುವ ಸಣ್ಣ ಮತ್ತು ಮಧ್ಯಮ ಕಂಪನಿಗಳು (ಉದಾಹರಣೆಗೆ ಕೋರ್​ವೀವ್​) ಅತಿ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದಿವೆ. 2026ರಲ್ಲಿ ಬಿಡುಗಡೆಯಾದ ಅಮೆರಿಕದ ಡೇಟಾ ಸೆಂಟರ್​ ಬಾಂಡ್​ಗಳಲ್ಲಿ ಅರ್ಧದಷ್ಟು "ಜಂಕ್​' (ಅತಿ ಹೆಚ್ಚು ಅಪಾಯಕಾರಿ) ಶ್ರೇಣಿಗೆ ಸೇರಿವೆ. ಎಐ ಕಂಪನಿಗಳ ಬಿಜಿನೆಸ್​ ಮಾಡೆಲ್​ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಸಾಂಪ್ರದಾಯಿಕ ಸಾಫ್ಟ್​ವೇರ್​ಗೆ ಹೋಲಿಸಿದರೆ ಗ್ರಾಹಕರು ಸುಲಭವಾಗಿ ಒಂದು ಎಐ ಸೇವೆಯನ್ನು ಬಿಟ್ಟು ಇನ್ನೊಂದನ್ನು ಅಳವಡಿಸಿಕೊಳ್ಳಬಹುದು. ಅಂದರೆ ಕಂಪನಿಗಳಿಗೆ ಗ್ರಾಹಕರನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. ಚೀನಾದ ಎಐ ಮಾಡೆಲ್​ಗಳು ಕೂಡ ಕಡಿಮೆ ವೆಚ್ಚದಲ್ಲಿ ಅಮೆರಿಕನ್​ ಕಂಪನಿಗಳಿಗೆ ಸವಾಲು ಹಾಕಿವೆ. ಈ ಒತ್ತಡವನ್ನು ನಿಭಾಯಿಸಲು ಓಪನ್​ಎಐ ಮತ್ತು ಆಂಥ್ರೊಪಿಕ್​ ಈಗ ಕಾನೂನು, ವೈಜ್ಞಾನಿಕ ಮತ್ತು ಹಣಕಾಸು ಕ್ಷೇತ್ರಗಳಿಗಾಗಿ ವಿಶೇಷ ಎಐ ಟೂಲ್​ಗಳನ್ನು ತಯಾರಿಸುತ್ತಿವೆ. ಅವು ಬ್ಲ್ಯಾಕ್‌ಸ್ಟೋನ್​ ಮತ್ತು ಗೋಲ್ಡ್​ಮನ್​ ಸ್ಯಾಕ್ಸ್​ನಂತಹ ಸಂಸ್ಥೆಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿವೆ. ರೊಬೊಟಿಕ್ಸ್​ ಮತ್ತು ಔಷಧ ತಯಾರಿಕೆಯಂತಹ ಕ್ಷೇತ್ರಗಳಲ್ಲಿ ಎಐ ಬಳಸುವ ಮೂಲಕ ಗಳಿಕೆಯ ಹೊಸ ದಾರಿಗಳನ್ನೂ ಹುಡುಕಲಾಗುತ್ತಿದೆ. ಉದ್ಯಮದ ಮುಂದೆ ರಾಜಕೀಯ ಮತ್ತು ನಿಯಂತ್ರಕ ಸವಾಲುಗಳೂ ಇವೆ. ಇನ್ನು ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೇಟಾ ಸೆಂಟರ್​ಗಳನ್ನು ವಿರೋಧಿಸುವ ಡೆಮಾಕ್ರಟಿಕ್​ ಅಭ್ಯರ್ಥಿಗಳ ಗೆಲುವು ಕಂಪನಿಗಳ ಚಿಂತೆಯನ್ನು ಹೆಚ್ಚಿಸಿದೆ. ಕಾಂಗ್ರೆಸ್​ನಲ್ಲಿ (ಸಂಸತ್ತು) ಡೆಮಾಕ್ರಟಿಕ್​ ಬಹುಮತ ಬಂದರೆ ಎಐ ಸುರಕ್ಷತೆ ಮತ್ತು ಸೈಬರ್​ ಅಪಾಯಗಳ ಕುರಿತು ಕಠಿಣ ನಿಯಮಗಳು ಜಾರಿಯಾಗಬಹುದು.

ಆರ್ಥಿಕತೆಯ ಸ್ಥಿರತೆಗೆ ಸವಾಲು ಈ ಆರ್ಥಿಕ ಒತ್ತಡವು ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ತೀವ್ರ ಏರಿಳಿತಗಳಿಗೆ ಕಾರಣವಾಗಿದೆ. 2026ರ ನವೆಂಬರ್​ ಆರಂಭದಲ್ಲಿ ಡೇಟಾ ಸೆಂಟರ್​ ನಿಯಂತ್ರಣ ಮತ್ತು ಸಾಲದ ಆತಂಕದಿಂದಾಗಿ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಒಂದೇ ದಿನ 3 ಟ್ರಿಲಿಯನ್​ ಡಾಲರ್​ ಸಂಪತ್ತು ಕರಗಿಹೋಯಿತು; ಸೆಮಿಕಂಡಕ್ಟರ್​ ಮತ್ತು ಎಐ ಮೂಲಸೌಕರ್ಯ ಕಂಪನಿಗಳ ಷೇರುಗಳು ಶೇಕಡ 12ರಿಂದ 14ರಷ್ಟು ಕುಸಿತ ಕಂಡವು. ಅಲ್ಲದೆ, ಸ್ಪೆಷಲ್​ ಪರ್ಪಸ್​ ವೆಹಿಕಲ್​ (ಎಸ್​ಪಿವಿ) ಮತ್ತು ಜಂಟಿ ಉದ್ಯಮಗಳ ಮೂಲಕ ಬ್ಯಾಲೆನ್ಸ್​ ಶೀಟ್​ನಲ್ಲಿ ಕಾಣಿಸದ "ಗುಪ್ತ ಸಾಲ' ಹೆಚ್ಚಾಗುತ್ತಿರುವುದು ಆರ್ಥಿಕ ಸ್ಥಿರತೆಗೆ ಸವಾಲಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಎಚ್ಚರಿಸಿದ್ದಾರೆ.

ಹೂಡಿಕೆದಾರರ ಆತಂಕಕ್ಕೆ ಕಾರಣ

  1. ಆದಾಯ ಮತ್ತು ವೆಚ್ಚದ ಅಂತರ: ನೂರಾರು ಬಿಲಿಯನ್​ ಡಾಲರ್​ ಹೂಡಿಕೆ ಮಾಡುತ್ತಿದ್ದರೂ, ಅದಕ್ಕೆ ತಕ್ಕಂತೆ ಎಐ ಸೇವೆಗಳಿಂದ ತಕ್ಕ ಲಾಭ ಬರುತ್ತಿಲ್ಲ, ಮುಂಬರುವ ದಿನಗಳಲ್ಲೂ ಆದಾಯದ ಹೊಸ ಮೂಲಗಳು ಕಂಡುಬರುತ್ತಿಲ್ಲ.

  2. ಹಾರ್ಡ್​ವೇರ್​ ಸವಕಳಿ: ಡೇಟಾ ಸೆಂಟರ್​ಗಳಲ್ಲಿ ಬಳಸುವ ದುಬಾರಿ ಜಿಪಿಯು ಚಿಪ್​ಗಳು ತಂತ್ರಜ್ಞಾನ ಬದಲಾದಂತೆ ಕೆಲವೇ ವರ್ಷಗಳಲ್ಲಿ ಹಳೆಯದಾಗುತ್ತವೆ. ಸಾಲಕ್ಕೆ ಅಡಮಾನವಾಗಿರುವ ಈ ಉಪಕರಣಗಳ ಮೌಲ್ಯ ವೇಗವಾಗಿ ಕುಸಿಯುವ ಭಯ ಸಾಲದಾತರಿಗಿದೆ.

  3. ಮುಕ್ತ ನಗದು ಹರಿವಿನ ಇಳಿಕೆ: ಅತಿಯಾದ ಬಂಡವಾಳ ವೆಚ್ಚದಿಂದಾಗಿ ಟೆಕ್​ ಕಂಪನಿಗಳ "ಫ್ರೀ ಕ್ಯಾಶ್ ಫ್ಲೋ' ಕಡಿಮೆಯಾಗುತ್ತಿದ್ದು, ಇದು ಷೇರುದಾರರ ಲಾಭಾಂಶದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿಯೇ, ಷೇರುಪೇಟೆಗಳಲ್ಲಿ ಎಐ ಷೇರುಗಳ ಮೌಲ್ಯ ಏರಿಳಿತವಾಗುತ್ತಿದೆ.

  4. ನಿಯಂತ್ರಣ ಮತ್ತು ವಿದ್ಯುತ್​ ಕೊರತೆ: ಡೇಟಾ ಸೆಂಟರ್​ಗಳಿಗೆ ಬೇಕಾಗುವ ಅಪಾರ ವಿದ್ಯುತ್​ ಪೂರೈಕೆಯ ಕೊರತೆ ಮತ್ತು ಸರ್ಕಾರಗಳ ಕಠಿಣ ನಿಯಮಾವಳಿಗಳು ಯೋಜನೆಗಳನ್ನು ವಿಳಂಬಗೊಳಿಸುತ್ತಿವೆ.

ಮುಂದಿನ ಹಾದಿ ಎಐ ವಲಯದಲ್ಲಿ ಹೂಡಿಕೆದಾರರ ಉತ್ಸಾಹ ಕಡಿಮೆಯಾಗಿರುವುದು ನಿಜವಾದರೂ, ಇದನ್ನು ಎಐ ಉದ್ಯಮದ "ಪರಿಪಕ್ವತೆಯ ಹಂತ' ಎಂದು ವಿಶ್ಲೇಷಿಸಲಾಗುತ್ತಿದೆ. ಹೆಚ್ಚು ಸಾಲ ಮಾಡಿದ ಸಣ್ಣ ಡೇಟಾ ಸೆಂಟರ್​ ಕಂಪನಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ, ಅಪಾರ ನಗದು ಮೀಸಲು ಹೊಂದಿರುವ ಗೂಗಲ್​, ಮೈಕ್ರೋಸಾಫ್ಟ್​ ಮತ್ತು ಅಮೆಜಾನ್​ನಂತಹ ದೈತ್ಯ ಕಂಪನಿಗಳು ಅವುಗಳನ್ನು ಅಗ್ಗದ ಬೆಲೆಗೆ ಖರೀದಿಸುವ ಅವಕಾಶ ಪಡೆಯುತ್ತವೆ. ಒಟ್ಟಾರೆಯಾಗಿ, ಇನ್ನು ಮುಂದೆ ಕೇವಲ "ಎಐ' ಎಂಬ ಹೆಸರಿನಲ್ಲಿ ಹೂಡಿಕೆ ಆಕರ್ಷಿಸುವುದು ಕಷ್ಟವಾಗಲಿದ್ದು, ವಾಸ್ತವಿಕ ಆದಾಯ, ಲಾಭದಾಯಕತೆ ಮತ್ತು ಸಾಲ ನಿರ್ವಹಣಾ ಸಾಮರ್ಥ್ಯ ಹೊಂದಿರುವ ಕಂಪನಿಗಳು ಮಾತ್ರ ಮಾರುಕಟ್ಟೆಯಲ್ಲಿ ಉಳಿಯಲಿವೆ.

ಅಮೆರಿಕದ ಹೂಡಿಕೆ

ಒಂದು ಮುನ್ಸೂಚನೆಯ ಪ್ರಕಾರ 2025 ಮತ್ತು 2032ರ ನಡುವೆ ಅಮೆರಿಕದ ಜಿಡಿಪಿಯ ಸರಾಸರಿ 3.6%ಕ್ಕೆ ಸಮಾನವಾದ ಭಾರಿ ಹೂಡಿಕೆಯನ್ನು ಪ್ರತಿ ವರ್ಷ ಎಐನಲ್ಲಿ ನಿರೀಕ್ಷಿಸಲಾಗಿದೆ. ಎಐಗೆ ಸಂಬಂಧಿಸಿದ ಷೇರುಗಳಲ್ಲಿ ಭರ್ಜರಿ ಏರಿಕೆ ಕಂಡುಬಂದಿದೆ. ಎಐಗೆ ಸಂಬಂಧಿಸಿದ ಹತ್ತು ದೊಡ್ಡ ಕಂಪನಿಗಳ ಷೇರುಗಳು ಈಗ ಅಮೆರಿಕದ ಷೇರು ಸೂಚ್ಯಂಕ ಎಸ್​ಆ್ಯಂಡ್​ಪಿ-500ನ ಸುಮಾರು 40% ಭಾಗವಾಗಿವೆ. ಎಐ ಮೇಲಿನ ಅಮೆರಿಕದ ಹೆಚ್ಚಿನ ಬಂಡವಾಳ ವೆಚ್ಚವು ಆಮದು ಮಾಡಿಕೊಂಡ ಉಪಕರಣಗಳಾದ ಚಿಪ್​ಗಳ ಮೇಲೆ ಹೋಗುತ್ತದೆ. ಆದ್ದರಿಂದ ಈ ಏರಿಕೆಯಿಂದ ಅಪಾಯ ಬಹಳ ಕಡಿಮೆ- ಬಹುಶಃ ಜಿಡಿಪಿಯ 0.3%. ಆದಾಗ್ಯೂ, ಎರಡು ಅಥವಾ ಮೂರು ವರ್ಷಗಳ ಹಿಂದಿನದಕ್ಕೆ ಹೋಲಿಸಿದರೆ ಎಐ ಉದ್ಯಮವು ಹೂಡಿಕೆಗಾಗಿ ಹೆಚ್ಚಿನ ಸಾಲವನ್ನು ಪಡೆಯುತ್ತಿದೆ ಎಂಬುದು ನಿಜ.

ಭಾರತದ ಮೇಲೇನು ಪರಿಣಾಮ?

ಜಾಗತಿಕ ಮಟ್ಟದಲ್ಲಿ ಎಐ ಮೂಲಸೌಕರ್ಯದ ವೆಚ್ಚ ಮತ್ತು ಸಾಲದ ಪ್ರಮಾಣ ಹೆಚ್ಚುತ್ತಿರುವುದು ಭಾರತದ ಐಟಿ ಸೇವಾ ಕಂಪನಿಗಳು ಮತ್ತು ಡೇಟಾ ಸೆಂಟರ್​ ಉದ್ಯಮದ ಮೇಲೆ ಸವಾಲು ಮತ್ತು ಅವಕಾಶ ಎರಡನ್ನೂ ಒಳಗೊಂಡ ಮಿಶ್ರ ಪರಿಣಾಮ ಬೀರುತ್ತಿದೆ. ಪಾಶ್ಚಿಮಾತ್ಯ ಮಾರುಕಟ್ಟೆಗಳಲ್ಲಿ ಸಾಲದ ಒತ್ತಡ ಕಾಣಿಸಿಕೊಳ್ಳುತ್ತಿದ್ದರೆ, ಭಾರತದಲ್ಲಿ ಇದು ವಿಭಿನ್ನ ರೀತಿಯ ಆರ್ಥಿಕ ಮತ್ತು ವ್ಯಾವಹಾರಿಕ ಬದಲಾವಣೆಗಳಿಗೆ ಕಾರಣವಾಗಿದೆ. ಅಮೆರಿಕ ಮತ್ತು ಯುರೋಪ್​ನ ಗ್ರಾಹಕ ಕಂಪನಿಗಳು ತಮ್ಮ ತಂತ್ರಜ್ಞಾನ ಬಜೆಟ್​ನ ದೊಡ್ಡ ಭಾಗವನ್ನು ಎಐ ಹಾರ್ಡ್​ವೇರ್​ ಮತ್ತು ಕ್ಲೌಡ್​ ಮೂಲಸೌಕರ್ಯಕ್ಕೆ ಮೀಸಲಿಡುತ್ತಿವೆ. ಇದರಿಂದಾಗಿ ಸಾಂಪ್ರದಾಯಿಕ ಸಾಫ್ಟ್​ವೇರ್​ ನಿರ್ವಹಣೆ ಯೋಜನೆಗಳಿಗೆ ನೀಡುವ ವೆಚ್ಚವನ್ನು ಕಡಿತಗೊಳಿಸಿವೆ. ಜಾಗತಿಕ ಹೈಪರ್​ಸ್ಕೇಲರ್​ಗಳಂತೆ ಭಾರತದ ಐಟಿ ಕಂಪನಿಗಳು ಡೇಟಾ ಸೆಂಟರ್​ ನಿರ್ಮಾಣಕ್ಕಾಗಿ ನೂರಾರು ಬಿಲಿಯನ್​ ಡಾಲರ್​ ಸಾಲ ಮಾಡಿಲ್ಲ. ಬದಲಾಗಿ ಇವು "ಎಐ ಸೇವೆಗಳು ಮತ್ತು ಅಳವಡಿಕೆ' ಮೇಲೆ ಗಮನಹರಿಸಿವೆ. ಹೀಗಾಗಿ ಜಾಗತಿಕ ಎಐ ಸಾಲದ ಬಿಕ್ಕಟ್ಟಿನ ನೇರ ಆರ್ಥಿಕ ಹೊಡೆತದಿಂದ ಭಾರತೀಯ ಐಟಿ ಕಂಪನಿಗಳು ಸುರಕ್ಷಿತವಾಗಿವೆ.

ಅಲ್ಲದೆ, ಕ್ಲೆಂಟ್​ಗಳ ಡೇಟಾವನ್ನು ಎಐಗೆ ಸಿದ್ಧಪಡಿಸುವ ಮತ್ತು ಸಣ್ಣ ಗಾತ್ರದ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸುವ ಕೆಲಸಗಳಿಂದ ಮಧ್ಯಮ ಗಾತ್ರದ ಐಟಿ ಕಂಪನಿಗಳು ಶೇ.15ಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಬೆಳವಣಿಗೆ ಕಾಣುತ್ತಿವೆ.