ಮಾರ್-ಎ-ಲಾಗೋ ಮೇಲೆ ಮಸಲತ್ತು, ಶವವಾದ ಯುವಕ! ಟ್ರಂಪ್ ರೆಸಾರ್ಟ್‌ನ ಉತ್ತರ ದ್ವಾರದಲ್ಲಿ ನಡೆದಿದ್ದೇನು..? Mar A Lago

ಮಾರ್-ಎ-ಲಾಗೋ ಮೇಲೆ ಮಸಲತ್ತು, ಶವವಾದ ಯುವಕ! ಟ್ರಂಪ್ ರೆಸಾರ್ಟ್‌ನ ಉತ್ತರ ದ್ವಾರದಲ್ಲಿ ನಡೆದಿದ್ದೇನು..?
ಮಾರ್-ಎ-ಲಾಗೋ ಮೇಲೆ ಮಸಲತ್ತು, ಶವವಾದ ಯುವಕ! ಟ್ರಂಪ್ ರೆಸಾರ್ಟ್‌ನ ಉತ್ತರ ದ್ವಾರದಲ್ಲಿ ನಡೆದಿದ್ದೇನು..?
Published on
ಫ್ಲೋರಿಡಾ: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಐಷಾರಾಮಿ ರೆಸಾರ್ಟ್ ಮಾರ್-ಎ-ಲಾಗೋ(Mar A Lago) ಮೇಲೆ ದಾಳಿ ನಡೆಸಲು ಯತ್ನಿಸಿದ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬನನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿವೆ. ಭಾನುವಾರ ನಡೆದ ಈ ಘಟನೆಯು ಅಮೆರಿಕಾದಲ್ಲಿ ತಲ್ಲಣ ಮೂಡಿಸಿದ್ದು, ಅಧ್ಯಕ್ಷರ ಭದ್ರತೆಯ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆಗಳು ಆರಂಭವಾಗಿವೆ.

ನಡೆದದ್ದೇನು..? ಭೀಕರ ದಾಳಿಯ ಸಂಚು!

ಅಮೆರಿಕದ ಸೀಕ್ರೆಟ್ ಸರ್ವಿಸ್ ನೀಡಿದ ಮಾಹಿತಿಯ ಪ್ರಕಾರ, ಸುಮಾರು 20 ವರ್ಷದ ಯುವಕನೊಬ್ಬ ರೆಸಾರ್ಟ್‌ನ ಉತ್ತರ ದ್ವಾರದ ಬಳಿ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದಾನೆ. ಆತನ ಕೈಯಲ್ಲಿ ಶಾರ್ಟ್‌ಗನ್ ಮತ್ತು ದ್ರವ ತುಂಬಿದ ಇಂಧನ ಕ್ಯಾನ್ ಇರುವುದು ಕಂಡುಬಂದಿದೆ. ರೆಸಾರ್ಟ್‌ನ ಅತ್ಯಂತ ಸುರಕ್ಷಿತ ವಲಯದೊಳಗೆ ನುಗ್ಗಲು ಯತ್ನಿಸಿದಾಗ, ತಕ್ಷಣ ಎಚ್ಚೆತ್ತ ಭದ್ರತಾ ಅಧಿಕಾರಿಗಳು ಆತನನ್ನು ತಡೆಯಲು ಯತ್ನಿಸಿದರು. ಆದರೆ, ಆತ ಶರಣಾಗಲು ನಿರಾಕರಿಸಿದಾಗ ಅಧಿಕಾರಿಗಳು ಗುಂಡು ಹಾರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಟ್ರಂಪ್ ಎಲ್ಲಿದ್ದರು..?

ಘಟನೆ ನಡೆದ ಸಮಯದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೆಸಾರ್ಟ್‌ನಲ್ಲಿ ಇರಲಿಲ್ಲ. ಅವರು ದೇಶದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿದ್ದರು ಎಂದು ಮೂಲಗಳು ಖಚಿತಪಡಿಸಿವೆ. ಸಾಮಾನ್ಯವಾಗಿ ವಾರಾಂತ್ಯದಲ್ಲಿ ಟ್ರಂಪ್ ಮಾರ್-ಎ-ಲಾಗೋಗೆ ಭೇಟಿ ನೀಡುತ್ತಾರೆ. ಆದರೆ ಈ ಬಾರಿ ಅವರು ಅಲ್ಲಿ ಇಲ್ಲದಿದ್ದದ್ದು ದೊಡ್ಡ ಅಪಾಯವನ್ನು ತಪ್ಪಿಸಿದೆ.

ಭದ್ರತಾ ವೈಫಲ್ಯದ ತನಿಖೆ

ಮಾರ್-ಎ-ಲಾಗೋ ರೆಸಾರ್ಟ್ ಅನ್ನು 'ಪ್ರೆಸಿಡೆನ್ಷಿಯಲ್ ಸೈಟ್' ಎಂದು ಗುರುತಿಸಲಾಗಿದ್ದು, ಇಲ್ಲಿ ಬಹುಪದರದ ಭದ್ರತೆ ಇರುತ್ತದೆ. ಇಷ್ಟೊಂದು ಕಟ್ಟುನಿಟ್ಟಿನ ಭದ್ರತೆಯ ನಡುವೆಯೂ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಇಂಧನ ಮತ್ತು ಗನ್ ಹಿಡಿದು ಗೇಟ್ ವರೆಗೆ ಬಂದಿದ್ದು ಹೇಗೆ ಎಂಬುದು ಈಗ ತನಿಖೆಯ ವಿಷಯವಾಗಿದೆ. ಆತನ ಉದ್ದೇಶವೇನಿತ್ತು, ಆತ ಯಾರ ಪರವಾಗಿ ಬಂದಿದ್ದ ಎಂಬ ಬಗ್ಗೆ ಎಫ್‌ಬಿಐ ಮತ್ತು ಸೀಕ್ರೆಟ್ ಸರ್ವಿಸ್ ಜಂಟಿ ತನಿಖೆ ಆರಂಭಿಸಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net