ಒಂದು ವರ್ಷ ಕೋಲಾಹಲವೇ ಅಧಿಕ

ಒಂದು ವರ್ಷ ಕೋಲಾಹಲವೇ ಅಧಿಕ
ಒಂದು ವರ್ಷ ಕೋಲಾಹಲವೇ ಅಧಿಕ
Published on
ದುಡ್ಡು, ದುಡ್ಡು, ದುಡ್ಡು! ಈ ದುಡ್ಡಿನ ಅಂದರೆ ಡಾಲರ್​ನ ಬಲದಿಂದಲೇ ಅಮೆರಿಕ ‘ದೊಡ್ಡಣ್ಣ’ ಅಂತ ಕರೆಸಿಕೊಂಡಿರುವುದು. ಆದರೆ, ‘ದೊಡ್ಡಣ್ಣ’ನ ಎದೆಯಲ್ಲಿ ನೂರೆಂಟು ತಳಮಳಗಳಿವೆ, ಸಂಕಷ್ಟಗಳಿವೆ, ಕೆಲವು ಸ್ವಯಂಕೃತ ಅಪರಾಧಗಳೂ ಇವೆ. ಇವೆಲ್ಲ ಸೇರಿ ನೆಮ್ಮದಿ ಕಸಿದುಕೊಂಡಿರುವುದು ಹೌದು. ಅಮೆರಿಕದ ಜಿಡಿಪಿಗಿಂತಲೂ ಸಾಲದ ಪ್ರಮಾಣ ಹೆಚ್ಚಾಗಿದೆ. ಅಭಿವೃದ್ಧಿ ಹೊಂದಿದ ಹಲವು ದೇಶಗಳು ಅಮೆರಿಕಕ್ಕೆ ತೀವ್ರ ಸ್ಪರ್ಧೆಯೊಡ್ಡಿವೆ. ಹಾಗಾಗಿಯೇ, 2017ರಿಂದ 2021ರ ಅವಧಿಯಲ್ಲಿ ಶ್ವೇತಭವನದಲ್ಲಿ ಕಂಡುಬಂದಿದ್ದ ಡೊನಾಲ್ಡ್ ಟ್ರಂಪ್ ಸಂಪೂರ್ಣ ಬದಲಾಗಿದ್ದಾರೆ. 2025ರ ಜನವರಿ 20ರಂದು ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಒಂದಾದ ಬಳಿಕ ಮತ್ತೊಂದು ಆಕ್ರಮಣಕಾರಿ ನೀತಿಗಳನ್ನು ತಳೆಯುತ್ತಲೇ ಇದ್ದಾರೆ.
ಇದೆಲ್ಲವನ್ನು ‘ಅಮೆರಿಕದ ಹಿತ’ಕ್ಕಾಗಿ ಮಾಡುತ್ತಿದ್ದೇನೆ ಎಂದು ಟ್ರಂಪ್ ಪ್ರತಿಪಾದಿಸುತ್ತಿದ್ದರೂ, ಅವಸರದ ನಿರ್ಧಾರಗಳು, ಪ್ರಾಯೋಗಿಕವಲ್ಲದ ಘೋಷಣೆಗಳು, ಪದೇಪದೆ ನಿಲುವು ಬದಲಾಯಿಸುವ ಶೈಲಿ- ಇದೆಲ್ಲದರಿಂದ ಇತರ ರಾಷ್ಟ್ರಗಳಿಗಿಂತ ಹೆಚ್ಚು ವ್ಯತಿರಿಕ್ತ ಪರಿಣಾಮ ಅಮೆರಿಕದ ಮೇಲೇ ಆಗುತ್ತಿದೆ ಎಂಬ ಸರಳ ಸತ್ಯವನ್ನು ಒಪ್ಪಿಕೊಳ್ಳಲು ಟ್ರಂಪ್ ತಯಾರಿಲ್ಲ. ಹಾಗಾಗಿಯೇ, ಟ್ರಂಪ್ ನೀತಿ ಮತ್ತು ನಿರ್ಧಾರಗಳಿಂದ ಅಮೆರಿಕ ನಲುಗುತ್ತಿದೆ. ಬೇರೆ ದೇಶಗಳಲ್ಲೂ ಕೋಲಾಹಲ ಏರ್ಪಟ್ಟಿದೆ. ಟ್ರಂಪ್ ಅಧಿಕಾರಾವಧಿ ಇನ್ನೂ ಮೂರು ವರ್ಷ ಇದ್ದು, ಮುಂದಿನ ದಾರಿಯಲ್ಲಿನ ಪಯಣ ಮತ್ತಷ್ಟು ಕಠಿಣ ಎಂಬುದರಲ್ಲಿ ಅನುಮಾನವೇ ಇಲ್ಲ.

ಏಳು ರಾಷ್ಟ್ರಗಳ ಮೇಲೆ ಸೇನಾ ದಾಳಿ

ಅಧಿಕಾರಕ್ಕೆ ಬಂದಾಗಿನಿಂದಲೂ ಟ್ರಂಪ್ ಯುದ್ಧದ ಮಾನಸಿಕತೆಯಲ್ಲೇ ಇದ್ದಾರೆ. ಜಾಗತಿಕವಾಗಿ 8 ದೇಶಗಳ ನಡುವೆ ಯುದ್ಧ ನಿಲ್ಲಿಸಿದ್ದೇ ತಾನು, ಇದಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿ ಸಿಗಲೇಬೇಕು ಎಂದು ಹಲವು ಬಾರಿ ಹೇಳಿರುವ ಟ್ರಂಪ್, ಕಳೆದೊಂದು ವರ್ಷದಲ್ಲೇ ಏಳು ರಾಷ್ಟ್ರಗಳ ಮೇಲೆ ಸೇನಾ ದಾಳಿ ನಡೆಸಿದ್ದಲ್ಲದೆ. 2026ರ ಆದಿಯಲ್ಲೇ ಮತ್ತೇಳು ರಾಷ್ಟ್ರಗಳ ಮೇಲೆ ಕೆಂಗಣ್ಣು ಬೀರಿದ್ದಾರೆ.
1. ಯಮನ್: ಹೌತಿ ಬಂಡುಕೋರರನ್ನು (ಇರಾನ್ ಬೆಂಬಲಿತ ಗುಂಪು) ಗುರಿಯಾಗಿಸಿ ಅಮೆರಿಕ ಮಿಸೈಲ್ ಮತ್ತು ಡ್ರೋನ್ ದಾಳಿಗಳನ್ನು ನಡೆಸಿತು. ಕೆಂಪು ಸಮುದ್ರ ಮತ್ತು ಅಡೆನ್ ಕೊಲ್ಲಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ಹೌತಿ ಬಂಡುಕೋರರಿಂದ ನಡೆಯುತ್ತಿದ್ದ ದಾಳಿಯನ್ನು ತಪ್ಪಿಸಲು ತಾನು ವಾಯುದಾಳಿ ನಡೆಸಬೇಕಾಯಿತು ಎಂದು ಅಮೆರಿಕ ಹೇಳಿಕೊಂಡಿತು. 2025ರ ಮಾರ್ಚ್​ನಿಂದ ಮೇವರೆಗಿನ ಅವಧಿಯಲ್ಲಿ ಅಮೆರಿಕ ಸಾವಿರಕ್ಕೂ ಅಧಿಕ ಏರ್​ಸ್ಟ್ರೈಕ್​ಗಳನ್ನು ನಡೆಸಿತು. ದಾಳಿಯಲ್ಲಿ ಹೌತಿ ಬಂಡುಕೋರ ಸಂಘಟನೆಯ ಪ್ರಮುಖ ಉಗ್ರರು ಹಾಗೂ ನೂರಾರು ಕಾರ್ಯಕರ್ತರು ಪ್ರಾಣ ಕಳೆದುಕೊಂಡರು. ಒಮಾನ್ ಮಧ್ಯಸ್ಥಿಕೆಯ ಪರಿಣಾಮ ಮೇನಲ್ಲಿ ದಾಳಿ ನಿಂತಿತು.
2. ಇರಾಕ್: ಇರಾಕ್​ನ ಅನ್-ಅಲಬರ್ ಪ್ರಾಂತ್ಯದ ಮೇಲೆ ಅಮೆರಿಕ ಮಾರ್ಚ್ 13ರಂದು ವಾಯುದಾಳಿ ನಡೆಸಿತು. ಈ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್​ನ ಮುಖಂಡ ಅಬ್ದುಲ್ಲಾ ಅಬೂ ಖದೀಜಾ ಹತನಾದ.
3. ಇರಾನ್: ಟ್ರಂಪ್ ನೀಡಿದ ಹಲವು ಎಚ್ಚರಿಕೆಗಳ ಬಳಿಕವೂ ಇರಾನ್ ತಲೆಕೆಡಿಸಿಕೊಳ್ಳದೆ ಪರಮಾಣು ಕಾರ್ಯಕ್ರಮವನ್ನು ರೂಪಿಸುತ್ತಿತ್ತು. ಇದಕ್ಕಾಗಿ ಯೂರೇನಿಯಂ ಸಂಗ್ರಹವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿತು. ಇರಾನ್ ಅಣ್ವಸ್ತ್ರ ಗಳಿಸುವುದನ್ನು ಶತಾಯಗತಾಯ ತಪ್ಪಿಸಲೇಬೇಕು ಎಂದು ನಿರ್ಧರಿಸಿದ ಟ್ರಂಪ್ ಆಡಳಿತ ಇಸ್ರೇಲ್ ಜತೆಗೂಡಿ ಇರಾನ್ ಮೇಲೆ ದಾಳಿ ನಡೆಸುವಂತೆ ಸೇನೆಗೆ ಸೂಚಿಸಿತು. ಜೂನ್ 21ರಂದು ಪ್ರಬಲವಾದ ದಾಳಿ ನಡೆಸಿತು. ಬಿ-2 ಬಾಂಬರ್ ಮೂಲಕ ಇರಾನಿನ ಮೂರು ಪರಮಾಣು ಕಾರ್ಯಕ್ರಮ ಸ್ಥಳಗಳನ್ನು ಉಧ್ವಸ್ತಗೊಳಿಸಲಾಯಿತು.
4. ಸೋಮಾಲಿಯಾ: ಒಂದೇ ವರ್ಷದಲ್ಲಿ ಅಮೆರಿಕ ಸೋಮಾಲಿಯಾ ಮೇಲೆ ದಾಖಲೆಯ 111 ದಾಳಿಗಳನ್ನು ನಡೆಸಿದೆ. ಅಲ್-ಶಬಾಬ್ (ಅಲ್-ಕೈದಾ ಸಹಸಂಘಟನೆ) ಮತ್ತು ಐಎಸ್​ಐಎಸ್-ಸೋಮಾಲಿಯಾ (ಇಸ್ಲಾಮಿಕ್ ಸ್ಟೇಟ್​ನ ಸ್ಥಳೀಯ ಶಾಖೆ) ಸಂಘಟನೆಯ ತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದ್ದು, ಇದು 2026ರಲ್ಲೂ ಮುಂದುವರಿದಿದೆ. ಅಲ್-ಶಬಾಬ್ ಉಗ್ರ ಸಂಘಟನೆ ಅಮೆರಿಕಕ್ಕೆ ದೊಡ್ಡ ಬೆದರಿಕೆಯಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
5. ಸಿರಿಯಾ: ಸಿರಿಯಾದ ಐಎಸ್​ಐಎಸ್ ಸಂಘಟನೆಯ 100ಕ್ಕೂ ಅಧಿಕ ತಾಣಗಳ ಮೇಲೆ ಅಮೆರಿಕ ಸರಣಿ ವಾಯುದಾಳಿ ನಡೆಸಿದ್ದು, ಈ ದಾಳಿಯಲ್ಲಿ ಐಎಸ್​ಐಎಸ್-ಸಿರಿಯಾ ಸಂಘಟನೆಯ 20ಕ್ಕೂ ಅಧಿಕ ಉಗ್ರರು ಹತರಾಗಿದ್ದಾರೆ. ಐಎಸ್​ಐಎಸ್​ನ 300ಕ್ಕೂ ಅಧಿಕ ಸದಸ್ಯರನ್ನು ಬಂಧಿಸಲಾಗಿದೆ. ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಹಾವಳಿಯನ್ನು ಕೊನೆಗಾಣಿಸಲು 2010ರಿಂದ ಅಮೆರಿಕ ಸೇನೆಯನ್ನು ನಿಯೋಜಿಸಲಾಗಿದ್ದು, ಪ್ರಸ್ತುತ ಒಂದು ಸಾವಿರಕ್ಕೂ ಅಧಿಕ ಸೈನಿಕರಿದ್ದಾರೆ.
6. ನೈಜೀರಿಯಾ: ಕ್ರಿಸ್​ವುಸ್ ಹಬ್ಬದ ದಿನವೇ (ಡಿಸೆಂಬರ್ 25) ಅಮೆರಿಕ ನೈಜೀರಿಯಾದ ಮೇಲೆ ಭೀಕರ ದಾಳಿಯನ್ನು ನಡೆಸಿತು. ಇಸ್ಲಾಮಿಕ್ ಸ್ಟೇಟ್ ಸಂಬಂಧಿತ ಭಯೋತ್ಪಾದಕ ಗುಂಪುಗಳ ಮೇಲೆ ಟೊಮಹಾಕ್ ಕ್ರೂಸ್ ಮಿಸೈಲ್​ಗಳ ಮೂಲಕ ದಾಳಿ ನಡೆಸಿತು. ಐಎಸ್​ಐಎಸ್ ಸಂಘಟನೆ ಅಮಾಯಕ ಕ್ರಿಶ್ಚಿಯನ್​ರನ್ನು ಗುರಿಯಾಗಿಸಿ, ಕೊಲ್ಲುತ್ತಿದೆ ಎಂದು ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದರು.
7. ವೆನೆಜುವೆಲಾ: ಮಾದಕವಸ್ತು ಕಳ್ಳಸಾಗಾಣಿಕೆಯ ಆರೋಪ ಹೊರಿಸಿ ಅಮೆರಿಕ ವೆನೆಜುವೆಲಾ ಮೇಲೆ ದಾಳಿ ನಡೆಸಿತು. ಮಾತ್ರವಲ್ಲ, ನೇರ ಮಿಲಿಟರಿ ಕಾರ್ಯಾಚರಣೆಯಲ್ಲಿ ಅಧ್ಯಕ್ಷ ನಿಕೋಲಸ್ ಮಡುರೋ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಿ, ಅಮೆರಿಕಕ್ಕೆ ಕರೆತರಲಾಯಿತು. ಈ ಬೆಳವಣಿಗೆಯ ಬೆನ್ನಲ್ಲೇ, ‘ನಾನೇ ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಟ್ರಂಪ್ ಘೋಷಿಸಿಕೊಂಡರು. ವೆನೆಜುವೆಲಾವು ವಿಶ್ವದ ಅತಿ ದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿದ್ದು, ಇದರ ಮೇಲೆ ಹಕ್ಕು ಸಾಧಿಸುವುದು ಟ್ರಂಪ್ ಉದ್ದೇಶವಾಗಿದೆ.

ವಾಣಿಜ್ಯ ಸಮರ

ಟ್ರಂಪ್ 2025ರ ಆರಂಭದಲ್ಲೇ ಸಾರಿದ ವಾಣಿಜ್ಯ ಸಮರ ಜಾಗತಿಕವಾಗಿ ಷೇರುಪೇಟೆ ಗಳನ್ನು ಅಲ್ಲಾಡಿಸಿತು. ವಾಣಿಜ್ಯ ವಹಿವಾಟುಗಳಿಗೆ ಪೆಟ್ಟು ನೀಡಿತು. ಏಪ್ರಿಲ್ 2ರಂದು ಹಲವು ರಾಷ್ಟ್ರಗಳ ವಿರುದ್ಧ ಪರಸ್ಪರ ತೆರಿಗೆ ಘೋಷಿಸಿದ ಟ್ರಂಪ್, ಅದನ್ನು ಹೆಚ್ಚಿಸುತ್ತಲೇ ಬಂದಿದ್ದಾರೆ. ಭಾರತದ ಮೇಲೆ ಶೇಕಡ 25ರಷ್ಟು ಸುಂಕ ವಿಧಿಸಿದ ಟ್ರಂಪ್, ರಷ್ಯಾದಿಂದ ಭಾರತ ಕಚ್ಚಾತೈಲ ಖರೀದಿಸುತ್ತಿರುವುದಕ್ಕಾಗಿ ಜುಲೈನಲ್ಲಿ ಶೇ.25ರಷ್ಟು ಹೆಚ್ಚುವರಿ ಸುಂಕ ಹೇರಿದರು. ಇರಾನ್​ನೊಂದಿಗೆ ವಾಣಿಜ್ಯ ಸಂಬಂಧ ಕಡಿತಗೊಳಿಸದಿದ್ದರೆ ಮತ್ತೆ ಶೇ.25ರಷ್ಟು ಹೆಚ್ಚುವರಿ ಸುಂಕ ವಿಧಿಸಲಾಗುವುದು ಎಂದು ಭಾರತ, ಚೀನಾ, ಬ್ರೆಜಿಲ್​ಗೆ ಬೆದರಿಕೆ ಒಡ್ಡಿದ್ದಾರೆ. ಮಾತ್ರವಲ್ಲ, ರಷ್ಯಾದೊಂದಿಗೆ ವಾಣಿಜ್ಯ ವಹಿವಾಟು ನಡೆಸುವ ದೇಶಗಳ ಮೇಲೆ ಶೇಕಡ 500ರಷ್ಟು ಸುಂಕ ಹೇರಲು ಸಿದ್ಧತೆ ನಡೆಸಿದ್ದು, ಈ ಸಂಬಂಧದ ಮಸೂದೆ ಅಮೆರಿಕ ಸಂಸತ್ತಿನಲ್ಲಿ ಶೀಘ್ರದಲ್ಲೇ ಮಂಡನೆಯಾಗಲಿದೆ.

ಹೆಚ್ಚಿದ ಸಾಲ

- ಅಮೆರಿಕದ ಜಿಡಿಪಿ-30.6 ಟ್ರಿಲಿಯನ್ ಡಾಲರ್
- ಅಮೆರಿಕದ ಒಟ್ಟು ಸಾಲ-38.5 ಟ್ರಿಲಿಯನ್ ಡಾಲರ್
- ಪ್ರತಿವರ್ಷ ಸಾಲಕ್ಕೆ ಪಾವತಿಸುವ ಬಡಿ-1 ಟ್ರಿಲಿಯನ್ ಡಾಲರ್ - - ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಅಮೆರಿಕನ್ನರು ಕ್ರೆಡಿಟ್ ಕಾರ್ಡ್ ಮೂಲಕ ಪಡೆದಿರುವ ಸಾಲದ ಮೊತ್ತ-1.23 ಟ್ರಿಲಿಯನ್ ಡಾಲರ್

ವಿವಾದಾತ್ಮಕ ನಿರ್ಧಾರಗಳು

- ಅಮೆರಿಕದಲ್ಲಿ ನೆಲೆಸಿದ್ದ ಲಕ್ಷಾಂತರ ಅಕ್ರಮ ವಲಸಿಗರನ್ನು 2025ರ ಜನವರಿ-ಫೆಬ್ರವರಿ ತಿಂಗಳಲ್ಲಿ ಅಮಾನವೀಯ ರೀತಿಯಲ್ಲಿ ಬಂಧಿಸಿ, ಅವರ ದೇಶಗಳಿಗೆ ಕಳುಹಿಸಲಾಯಿತು.
- ಸುಂಕ ನೀತಿಯನ್ನು ಮತ್ತೆ ಮತ್ತೆ ಬದಲಿಸಿದ್ದು, ಅಮೆರಿಕದ ಒತ್ತಡಕ್ಕೆ ಮಣಿದಿಲ್ಲ ಎಂಬ ಕಾರಣಕ್ಕೆ ಸೇಡಿನ ಕ್ರಮವಾಗಿ ಸುಂಕವನ್ನು ಮನಸೋ ಇಚ್ಛೆ ಏರಿಸಿದ್ದು ವ್ಯಾಪಾರ ವಹಿವಾಟುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು.
- ಉತ್ತರದಾಯಿತ್ವ ಹಾಗೂ ಹೊಣೆಗಾರಿಕೆಯನ್ನೇ ಮರೆತ ಅಮೆರಿಕ 66 ಅಂತಾರಾಷ್ಟ್ರೀಯ ಸಂಘಟನೆಗಳಿಂದ ಹೊರ ಬೀಳುವ ಘೋಷಣೆ ಇದೇ ಜನವರಿ 7ರಂದು ಮಾಡಿತು.
- ಕುಸಿಯುತ್ತಿರುವ ಆರ್ಥಿಕತೆ ನಿಭಾಯಿಸಲು ವಿಫಲವಾಗಿರುವ ಟ್ರಂಪ್ ಅವಧಿಯಲ್ಲಿ ಡಾಲರ್ ಕೂಡ ದುರ್ಬಲಗೊಳ್ಳುತ್ತಿದೆ.
- ಗಂಭೀರ ವಿದೇಶಾಂಗ ನೀತಿಯನ್ನೇ ಮೂಲೆಗುಂಪು ಮಾಡಿರುವ ಟ್ರಂಪ್ ಮನಸೋ ಇಚ್ಛೆ ನಿರ್ಧಾರಗಳನ್ನು ತಳೆಯುತ್ತಿದ್ದಾರೆ. ಮೊದಲ ಬಾರಿ ಅಧ್ಯಕ್ಷರಾಗಿದ್ದಾಗ ಪಾಕಿಸ್ತಾನಕ್ಕೆ ಭಾರಿ ಪ್ರಮಾಣದ ಅನುದಾನವನ್ನು ಸ್ಥಗಿತಗೊಳಿಸಿದ್ದ ಟ್ರಂಪ್ ಈ ಅವಧಿಯಲ್ಲಿ ಇದೇ ಪಾಕಿಸ್ತಾನಕ್ಕೆ ಪದೇಪದೆ ಹಣಕಾಸಿನ ನೆರವು ನೀಡುತ್ತಿದ್ದಾರೆ.

ಈ ವರ್ಷವೂ ಯುದ್ಧದ ಕಾಮೋಡ

2026ರ ಆರಂಭದಲ್ಲೇ ಏಳು ರಾಷ್ಟ್ರಗಳ ಮೇಲೆ ಟ್ರಂಪ್ ಕೆಂಗಣ್ಣು ಬಿದ್ದಿರುವುದರಿಂದ ಈ ವರ್ಷವೂ ಯುದ್ಧ, ಅಸ್ಥಿರತೆ, ಆತಂಕದ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.
ಗ್ರೀನ್​ಲ್ಯಾಂಡ್: ‘ಗ್ರೀನ್​ಲ್ಯಾಂಡನ್ನು ಚೀನಾ ಮತ್ತು ರಷ್ಯಾ ಯಾವುದೇ ಸಂದರ್ಭದಲ್ಲಿ ತಮ್ಮ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ಇದು ಅಮೆರಿಕಕ್ಕೆ ದೊಡ್ಡ ಬೆದರಿಕೆ. ಹಾಗಾಗಿ ಗ್ರೀನ್​ಲ್ಯಾಂಡನ್ನು ಪಡೆಯದೇ ಇರುವುದಿಲ್ಲ’ ಎಂದು ಟ್ರಂಪ್ ಘೋಷಿಸಿದ್ದಾರೆ.
ಇರಾನ್: ಖಮೇನಿ ಆಡಳಿತದ ವಿರುದ್ಧ ಸಿಡಿದೆದ್ದಿರುವ ಪ್ರತಿಭಟನಾಕಾರರಿಗೆ ಟ್ರಂಪ್ ಬೆಂಬಲ ಸೂಚಿಸಿದ್ದಾರೆ. ಇರಾನ್ ವಿರುದ್ಧ ಕಾರ್ಯಾಚರಣೆಗಾಗಿ ಸೇನೆಯನ್ನು ಸಿದ್ಧವಾಗಿ ಇರಿಸಿದ್ದಾರೆ.
ಕ್ಯೂಬಾ: ಪತನದ ಅಂಚಿಗೆ ಕ್ಯೂಬಾ ತಲುಪಿದ್ದು, ಅಮೆರಿಕಕ್ಕೆ ಅಪಾಯ ಒಡ್ಡಿರುವ ಅದನ್ನು ಕೊನೆ ಗೊಳಿಸದೆ ಇರುವುದಿಲ್ಲ ಎಂಬುದು ಟ್ರಂಪ್ ಶಪಥ.
ಮೇಕ್ಸಿಕೋ: ಮಾದಕದ್ರವ್ಯಗಳು ಕಳ್ಳಸಾಗಾಣಿಕೆ ಮೂಲಕ ಮೆಕ್ಸಿಕೋ ಮಾರ್ಗದಿಂದಲೇ ಅಮೆರಿಕಕ್ಕೆ ತಲುಪುತ್ತಿದ್ದು. ಮೆಕ್ಸಿಕೋಗೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಟ್ರಂಪ್ ಗುಡುಗಿದ್ದಾರೆ.
ಕೊಲಂಬಿಯಾ: ಕೊಕೇನ್ ತಯಾರಿಸಿ, ಅದನ್ನು ಅಮೆರಿಕಕ್ಕೆ ಮಾರಾಟ ಮಾಡುತ್ತಿರುವ ಕೊಲಂಬಿಯಾ, ಇನ್ನು ಹೆಚ್ಚು ದಿನ ಈ ಕೆಲಸ ಮಾಡಲಾಗದು ಎನ್ನುವ ಮೂಲಕ ಕೊಲಂಬಿಯಾ ವಿರುದ್ಧ ದಾಳಿಯ ಮುನ್ಸೂಚನೆ ನೀಡಿದ್ದಾರೆ ಟ್ರಂಪ್.
ಕೆನಡಾ: ‘ಅಮೆರಿಕದ 51ನೇ ರಾಜ್ಯವಾಗಿ ಕೆನಡಾ ತಲೆಎತ್ತಲಿದೆ’ ಎಂದು ಟ್ರಂಪ್ ಹಲವು ಸಂದರ್ಭದಲ್ಲಿ ಹೇಳಿದ್ದು, ಉಭಯ ರಾಷ್ಟ್ರಗಳ ಸಂಘರ್ಷ ಈ ವರ್ಷ ತಾರಕಕ್ಕೆ ಏರುವ ಸಾಧ್ಯತೆ ಇದೆ.
ಪನಾಮಾ: ಅಮೆರಿಕದಿಂದ ಪನಾಮಾ ಹೆಚ್ಚು ತೆರಿಗೆ ಸಂಗ್ರಹಿಸುತ್ತಿದೆ ಎಂದು ಕಿಡಿಕಾರಿರುವ ಟ್ರಂಪ್, ಇಲ್ಲೂ ಸಂಘರ್ಷದ ಸೂಚನೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net