ಯುದ್ಧಗ್ನಿಗೆ ಪ್ರತೀಕಾರ ಅಸ್ತ್ರ

ಯುದ್ಧಗ್ನಿಗೆ ಪ್ರತೀಕಾರ ಅಸ್ತ್ರ
ಯುದ್ಧಗ್ನಿಗೆ ಪ್ರತೀಕಾರ ಅಸ್ತ್ರ
Published on
ಇರಾನ್ ವಿರುದ್ಧ ಯುದ್ಧ ಮುಂದುವರಿಸುವಂತೆ ಸೌದಿ ಅರೇಬಿಯಾ ಅಮೆರಿಕದ ಮೇಲೆ ತೀವ್ರ ಒತ್ತಡ ಹೇರುತ್ತಿದೆ. ಈ ಸಂಬಂಧ ಕಳೆದ ಕೆಲವು ವಾರಗಳಲ್ಲಿ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಹಲವು ಬಾರಿ ಚರ್ಚೆ ನಡೆಸಿದ್ದು, ಇರಾನ್ ಆಡಳಿತ ಉರುಳುವವರೆಗೂ ಸಮರ ಮುಂದುವರಿಸಬೇಕು ಎಂದು ಆಗ್ರಹಿಸಿದ್ದಾರೆ. ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಫೆಬ್ರವರಿ 28ರಂದು ಇರಾನ್ ವಿರುದ್ಧ ದಾಳಿ ಆರಂಭಿಸಿವೆ. ದಾಳಿಯ ವೇಳೆ ಇರಾನ್ ಸವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ, ರಕ್ಷಣಾ ಸಚಿವರು ಸೇರಿದಂತೆ ಇರಾನ್​ನ ಹಲವು ಪ್ರಮುಖ ನಾಯಕರು ಹತರಾಗಿದ್ದಾರೆ. ಇದರಿಂದ ಕೆರಳಿರುವ ಇರಾನ್ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಪ್ರತಿದಾಳಿಗಳನ್ನು ತೀವ್ರಗೊಳಿಸಿದೆ. ಕಳೆದ 26 ದಿನಗಳಲ್ಲಿ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 2,600ರ ಗಡಿಯನ್ನು ದಾಟಿದೆ. ಲಕ್ಷಾಂತರ ಜನರ ಆಸ್ತಿಪಾಸ್ತಿ ನಷ್ಟವಾಗಿದೆ. ಈ ನಡುವೆ ಇರಾನ್ ಸೇನಾ ಸಾಮರ್ಥ್ಯ ಕುಗ್ಗಿಸಲು ಸೌದಿ ಅರೇಬಿಯಾ, ಯುಎಇ, ಕುವೈತ್ ಸೇರಿದಂತೆ ಕೊಲ್ಲಿಯ ಹಲವು ರಾಷ್ಟ್ರಗಳು ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧದಲ್ಲಿ ಭಾಗಿಯಾಗಲು ಆಲೋಚಿಸುತ್ತಿವೆ.
ಹೀಗಾದ್ದಲ್ಲಿ, ಯುದ್ಧದ ತೀವ್ರತೆ ಮತ್ತಷ್ಟು ಹೆಚ್ಚುವುದರಲ್ಲಿ ಯಾವುದೇ ಅನು ಮಾನವಿಲ್ಲ. ಅಲ್ಲದೆ, ಕೊಲ್ಲಿಯ ಹಲವು ರಾಷ್ಟ್ರಗಳು ಯುದ್ಧದಲ್ಲಿ ನೇರವಾಗಿ ಭಾಗಿಯಾದರೆ ಅಮೆರಿಕ ಮತ್ತು ಇಸ್ರೇಲ್​ನ ಶಕ್ತಿ ಹೆಚ್ಚಲಿದೆ. ಆಗ, ಇರಾನ್ ಕೂಡ ಯುದ್ಧದಲ್ಲಿ ಪಾಲ್ಗೊಳ್ಳುವಂತೆ ತನ್ನ ಮಿತ್ರರಾಷ್ಟ್ರಗಳನ್ನು ಆಹ್ವಾನಿಸಬಹುದು. ಸೌದಿ ಅರೇಬಿಯಾ ಅಮೆರಿಕದೊಂದಿಗೆ ಸೇರಿ ತನ್ನನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂಬುದು ಇರಾನ್​ನ ಆತಂಕ. ಇರಾನ್ ವಿರುದ್ಧ ನಡೆಯುತ್ತಿರುವ ಸಂಘರ್ಷದಲ್ಲಿ ಸೌದಿ ಅರೇಬಿಯಾ ಅಮೆರಿಕಕ್ಕೆ ತನ್ನ ವಾಯುನೆಲೆಗಳನ್ನು ಬಳಸಲು ಅವಕಾಶ ನೀಡಿದೆ. ಇರಾನ್​ನಿಂದ ತನ್ನ ಮೇಲೆ ನಡೆಯುತ್ತಿರುವ ದಾಳಿಗಳನ್ನು ತಡೆಯಲು ಸೌದಿ ಅರೇಬಿಯಾ ಅಮೆರಿಕದ ಮಿಲಿಟರಿ ಶಕ್ತಿಯನ್ನು ಸಂಪೂರ್ಣವಾಗಿ ಅವಲಂಬಿಸಿದೆ.

ರಾಜಕುಮಾರ ಸಲ್ಮಾನ್ ಹೇಳಿದ್ದೇನು?

ಸೌದಿ ಅರೇಬಿಯಾದ ಪಾಲಿಗೆ ಇರಾನ್ ದೀರ್ಘ ಸಮಯದವರಗೆ ಬೆದರಿಕೆಯಾಗಿಯೇ ಉಳಿಯಲಿದೆ. ಯುದ್ಧ ಮುಕ್ತಾಯವಾದ ಬಳಿಕವೂ, ಸೌದಿ ಅರೇಬಿಯಾವನ್ನು ಗುರಿಯಾಗಿಸಿ ಹಡಗು ಸಾಗಣೆಗೆ ಬೆದರಿಕೆಗಳನ್ನು ಮುಂದುವರಿಸುವ ಸಾಧ್ಯತೆ ಇದೆ. ಇರಾನ್ ಪಡೆಗಳು ಹಲವು ಬಾರಿ ಸೌದಿ ಅರೇಬಿಯಾದ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿದ್ದು, ಇರಾನ್​ನಿಂದ ಈ ದಾಳಿ ಮರುಕಳಿಸುವ ಸಾಧ್ಯತೆ ಇದೆ. ಹಾಗಾಗಿ, ಇರಾನ್ ಬಲ ಕುಗ್ಗಿಸಲು ಅಮೆರಿಕ ಇರಾನ್​ನ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ತೀವ್ರಗೊಳಿಸಬೇಕು.

ಅಮೆರಿಕದ ಮೇಲೆ ಸೌದಿ ಒತ್ತಡ ಹೇರಲು ಕಾರಣಗಳು

ಪ್ರಾದೇಶಿಕ ಭದ್ರತೆಯ ಆತಂಕ: ಇರಾನ್ ತನ್ನ ಕ್ಷಿಪಣಿ ತಂತ್ರಜ್ಞಾನ ಮತ್ತು ಡ್ರೋನ್ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವುದು ಸೌದಿ ಅರೇಬಿಯಾವನ್ನು ಆತಂಕಕ್ಕೀಡುಮಾಡಿದೆ. ಯಮನ್​ನ ಹೌತಿ ಬಂಡುಕೋರರು ಇರಾನ್ ನೀಡಿದ ಡ್ರೋನ್​ಗಳ ಮೂಲಕ ಸೌದಿಯ ತೈಲ ನಿಕ್ಷೇಪಗಳ ಮೇಲೆ ದಾಳಿ ಮಾಡುತ್ತಿರುವುದು ಇದಕ್ಕೆ ನೇರ ಕಾರಣ.
ಅಣ್ವಸ್ತ್ರ ಸ್ಪರ್ಧೆ: ಇರಾನ್ ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಿದರೆ, ಅದು ಮಧ್ಯಪ್ರಾಚ್ಯದಲ್ಲಿ ಇರಾನ್​ನ ಕೈಯನ್ನು ಬಲಪಡಿಸುತ್ತದೆ ಮತ್ತು ಸೌದಿಯ ಅಸ್ತಿತ್ವಕ್ಕೆ ಧಕ್ಕೆ ತರುತ್ತದೆ ಎಂದು ಸೌದಿ ಅರೇಬಿಯಾ ನಂಬಿದೆ. ಅಷ್ಟೇ ಅಲ್ಲ, ಇರಾಕ್, ಸಿರಿಯಾ ಮತ್ತು ಲೆಬನಾನ್ ಮೂಲಕ ಇರಾನ್ ತನ್ನ ಪ್ರಭಾವವನ್ನು ವಿಸ್ತರಿಸುತ್ತ ಸೌದಿ ಅರೇಬಿಯಾವನ್ನು ಸುತ್ತುವರಿಯಲು ಪ್ರಯತ್ನಿಸುತ್ತಿದೆ ಎಂದು ಸೌದಿ ಭಾವಿಸಿದೆ. ಈ ಪ್ರಭಾವವನ್ನು ಮುರಿಯಲು ಅಮೆರಿಕದ ಸೈನಿಕ ಶಕ್ತಿ ಅಗತ್ಯವೆಂದು ಅದು ಪರಿಗಣಿಸಿದೆ.

ಯುದ್ಧದ ಮೇಲೇನು ಪರಿಣಾಮ..?

ಜಾಗತಿಕ ತೈಲ ಬೆಲೆ ಏರಿಕೆ: ಇರಾನ್ ಮತ್ತು ಸೌದಿ ಅರೇಬಿಯಾ ನಡುವೆ ಯುದ್ಧ ಅಥವಾ ಸಂಘರ್ಷ ತೀವ್ರಗೊಂಡರೆ, ಪರ್ಷಿಯನ್ ಕೊಲ್ಲಿಯಿಂದ ಆಗುವ ತೈಲ ಪೂರೈಕೆ ಸ್ಥಗಿತಗೊಳ್ಳಬಹುದು. ಇದು ಭಾರತದಂತಹ ದೇಶಗಳ ಮೇಲೆ ದೊಡ್ಡ ಆರ್ಥಿಕ ಹೊರೆ ಉಂಟುಮಾಡುತ್ತದೆ.
ಶೀತಲ ಸಮರ 2.0: ಮಧ್ಯಪ್ರಾಚ್ಯದಲ್ಲಿ ಅಮೆರಿಕ (ಸೌದಿ ಅರೇಬಿಯಾ ಪರ) ಮತ್ತು ರಷ್ಯಾ-ಚೀನಾ (ಇರಾನ್ ಪರ) ನಡುವಿನ ಪೈಪೋಟಿ ಹೆಚ್ಚಾಗಬಹುದು. ಇದು ಈ ಭಾಗದಲ್ಲಿ ದೀರ್ಘಕಾಲದ ಅಸ್ಥಿರತೆಗೆ ಕಾರಣವಾಗುತ್ತದೆ.
ಶಸ್ತ್ರಾಸ್ತ್ರ ಪೈಪೋಟಿ: ಇರಾನ್ ಮೇಲೆ ಒತ್ತಡ ಹೆಚ್ಚಾದಷ್ಟೂ, ಆ ದೇಶವು ತನ್ನ ರಕ್ಷಣೆಗಾಗಿ ಮತ್ತಷ್ಟು ಶಸ್ತ್ರಾಸ್ತ್ರಗಳನ್ನು ಅಥವಾ ಅಣ್ವಸ್ತ್ರಗಳನ್ನು ರಹಸ್ಯವಾಗಿ ತಯಾರಿಸಲು ಮುಂದಾಗಬಹುದು. ಇದು ಇಡೀ ಪ್ರದೇಶವನ್ನು ಸ್ಪೋಟಕವನ್ನಾಗಿಸುತ್ತದೆ.

ವರ್ಚಸ್ಸಿಗಾಗಿ ಪೈಪೋಟಿ

ಇರಾನ್ ಮತ್ತು ಸೌದಿ ಅರೇಬಿಯಾ ಎರಡೂ ಇಸ್ಲಾಮಿಕ್ ರಾಷ್ಟ್ರಗಳಾಗಿದ್ದರೂ, ದಶಕಗಳಿಂದ ಇವುಗಳ ನಡುವೆ ತೀವ್ರ ಪೈಪೋಟಿ ಮತ್ತು ದ್ವೇಷ ಇರಲು ಕೇವಲ ಧರ್ಮ ಕಾರಣವಲ್ಲ; ಇದರ ಹಿಂದೆ ರಾಜಕೀಯ, ಪ್ರಾದೇಶಿಕ ವರ್ಚಸ್ಸು ಮುಂತಾದ ಕಾರಣಗಳಿವೆ.

ಆಂತರಿಕ ಯುದ್ಧದಲ್ಲಿ ಪಾತ್ರ

ಇರಾನ್ ಮತ್ತು ಸೌದಿ ಅರೇಬಿಯಾ ನೇರವಾಗಿ ಪರಸ್ಪರ ಯುದ್ಧ ಮಾಡದಿದ್ದರೂ, ಇತರ ದೇಶಗಳ ಆಂತರಿಕ ಯುದ್ಧಗಳಲ್ಲಿ ಎದುರಾಳಿ ಗುಂಪುಗಳಿಗೆ ಬೆಂಬಲ ನೀಡುವ ಮೂಲಕ ಹೋರಾಡುತ್ತಿವೆ. ಯಮನ್​ನಲ್ಲಿ ಹೌತಿ ಬಂಡುಕೋರರನ್ನು ಇರಾನ್ ಬೆಂಬಲಿಸಿದರೆ, ಯಮನ್ ಸರ್ಕಾರವನ್ನು ಸೌದಿ ಅರೇಬಿಯಾ ಬೆಂಬಲಿಸಿದೆ. ಸಿರಿಯಾದ ಅಧ್ಯಕ್ಷ ಬಶರ್ ಅಲ್-ಅಸ್ಸಾದ್​ಗೆ ಇರಾನ್ ಬೆಂಬಲ ನೀಡಿದ್ದರೆ, ಬಂಡುಕೋರರಿಗೆ ಸೌದಿ ಅರೇಬಿಯಾ ಬೆಂಬಲ ನೀಡಿದೆ.

ರಾಜಕೀಯ ವ್ಯವಸ್ಥೆಗಳ ವ್ಯತ್ಯಾಸ

ಸೌದಿ ಅರೇಬಿಯಾದಲ್ಲಿ ರಾಜಪ್ರಭುತ್ವ ಇದೆ. ರಾಜಮನೆತನದ ಆಡಳಿತವನ್ನು ಇರಾನ್​ನ ಕ್ರಾಂತಿಕಾರಿ ವಿಚಾರಗಳು ಬೆದರಿಕೆಯಾಗಿ ಕಾಣುತ್ತವೆ. ಇರಾನ್​ನಲ್ಲಿ ಧಾರ್ವಿುಕ ನಾಯಕರ ಮಾರ್ಗದರ್ಶನದಡಿ ನಡೆಯುವ ಗಣರಾಜ್ಯ ವ್ಯವಸ್ಥೆ ಇದೆ. ಅವರು ಅರಬ್ ದೇಶಗಳಲ್ಲಿನ ರಾಜಪ್ರಭುತ್ವಗಳನ್ನು ಅಮೆರಿಕದ ಕೈಗೊಂಬೆಗಳೆಂದು ಟೀಕಿಸುತ್ತಾರೆ.

ಶಿಯಾ- ಸುನ್ನಿ ಭಿನ್ನತೆ

ಇಸ್ಲಾಂ ಧರ್ಮದ ಎರಡು ಪ್ರಮುಖ ಪಂಗಡಗಳ ನಡುವಿನ ಭಿನ್ನತೆಯೂ ಭಿನ್ನಾಭಿಪ್ರಾಯಕ್ಕೆ ಕಾರಣ. ಸೌದಿ ಅರೇಬಿಯಾ ವಿಶ್ವದ ಅತಿದೊಡ್ಡ ಸುನ್ನಿ ಮುಸ್ಲಿಂ ರಾಷ್ಟ್ರವಾಗಿದ್ದು, ಸುನ್ನಿ ಪಂಗಡದ ನಾಯಕತ್ವವನ್ನು ಹೊಂದಿದೆ. ಆದರೆ, ಇರಾನ್ ವಿಶ್ವದ ಅತಿದೊಡ್ಡ ಶಿಯಾ ಮುಸ್ಲಿಂ ರಾಷ್ಟ್ರವಾಗಿದೆ. ಈ ಎರಡು ಪಂಗಡಗಳ ನಡುವಿನ ಐತಿಹಾಸಿಕ ಭಿನ್ನಾಭಿಪ್ರಾಯಗಳು ರಾಜಕೀಯ ಸಂಘರ್ಷಕ್ಕೆ ಕಿಚ್ಚು ಹಚ್ಚುತ್ತವೆ. ಮುಖ್ಯವಾಗಿ, ಮಧ್ಯಪ್ರಾಚ್ಯದಲ್ಲಿ ಅತ್ಯಂತ ಪ್ರಭಾವಶಾಲಿ ರಾಷ್ಟ್ರವಾಗಲು ಈ ಎರಡೂ ರಾಷ್ಟ್ರಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. 1979ರ ಇಸ್ಲಾಮಿಕ್ ಕ್ರಾಂತಿಯ ನಂತರ, ಇರಾನ್ ತನ್ನದೇ ಆದ ಪ್ರಭಾವವನ್ನು ಮಧ್ಯಪ್ರಾಚ್ಯದಲ್ಲಿ ವಿಸ್ತರಿಸಲು ಪ್ರಯತ್ನಿಸುತ್ತಿದೆ.

ಗಾಢಸ್ನೇಹ

ಅಮೆರಿಕ ಮತ್ತು ಸೌದಿ ಅರೇಬಿಯಾ ನಡುವಿನ ಸ್ನೇಹ ಸಂಬಂಧ ಕೇವಲ ರಾಜತಾಂತ್ರಿಕ ಸ್ನೇಹವಲ್ಲ, ಅದು ಕಳೆದ 90 ವರ್ಷಗಳಿಂದಲೂ ಆರ್ಥಿಕ ಮತ್ತು ಭದ್ರತಾ ಹಿತಾಸಕ್ತಿಗಳ ಮೇಲೆ ನಿಂತಿರುವ ಭದ್ರವಾದ ಕಾರ್ಯತಂತ್ರದ ಪಾಲುದಾರಿಕೆಯಾಗಿದೆ. ವಿಶೇಷವಾಗಿ 2025 ಮತ್ತು 2026ರಲ್ಲಿ ಈ ಸಂಬಂಧವು ನಿರ್ಣಾಯಕ ಘಟ್ಟಕ್ಕೆ ತಲುಪಿದೆ. ಅಮೆರಿಕ 2025ರ ಕೊನೆಯಲ್ಲಿ ಸೌದಿ ಅರೇಬಿಯಾವನ್ನು ಅಧಿಕೃತವಾಗಿ ‘ಪ್ರಮುಖ ನ್ಯಾಟೋಯೇತರ ಮಿತ್ರ’ ಎಂದು ಘೊಷಿಸಿದೆ. ಇದು ಅಮೆರಿಕ ತನ್ನ ನಿಕಟ ಮಿತ್ರರಾಷ್ಟ್ರಗಳಿಗೆ ನೀಡುವ ವಿಶೇಷ ಸ್ಥಾನಮಾನವಾಗಿದೆ. ಇದರ ಅಡಿಯಲ್ಲಿ ಸೌದಿಗೆ ಅಮೆರಿಕದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ರಫ್ತಾಗುತ್ತವೆ.
ರಕ್ಷಣಾ ಸಂಶೋಧನೆ ಮತ್ತು ತಂತ್ರಜ್ಞಾನದಲ್ಲಿ ಎರಡೂ ದೇಶಗಳು ಜಂಟಿಯಾಗಿ ಕೆಲಸ ಮಾಡುತ್ತವೆ. 2025ರ ಒಪ್ಪಂದಗಳ ಪ್ರಕಾರ, ಸೌದಿ ಅರೇಬಿಯಾ ಅಮೆರಿಕದಲ್ಲಿ 1 ಟ್ರಿಲಿಯನ್ ಡಾಲರ್ (83 ಲಕ್ಷ ಕೋಟಿ) ಹೂಡಿಕೆ ಮಾಡಲಿದೆ. ಪ್ರತಿಯಾಗಿ, ಅಮೆರಿಕ ಸೌದಿಯ ‘ವಿಷನ್ 2030’ ಯೋಜನೆಗೆ ತಾಂತ್ರಿಕ ನೆರವು, ಕೃತಕ ಬುದ್ಧಿಮತ್ತೆ ಮತ್ತು ನಾಗರಿಕ ಪರಮಾಣು ಶಕ್ತಿ ಕ್ಷೇತ್ರದಲ್ಲಿ ಸಹಕಾರ ನೀಡುತ್ತಿದೆ. ಭದ್ರತೆ ಮತ್ತು ತೈಲದ ಒಪ್ಪಂದ: ಈ ಸ್ನೇಹದ ಮೂಲ ಅಡಿಪಾಯವೇ ರಕ್ಷಣೆಗಾಗಿ ತೈಲ. ಅಮೆರಿಕ ಸೌದಿಯ ತೈಲ ನಿಕ್ಷೇಪಗಳಿಗೆ ಮತ್ತು ರಾಜಮನೆತನಕ್ಕೆ ರಕ್ಷಣೆ ನೀಡಿದರೆ, ಸೌದಿ ಅರೇಬಿಯಾ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡುತ್ತದೆ ಮತ್ತು ತೈಲ ವಹಿವಾಟನ್ನು ಅಮೆರಿಕನ್ ಡಾಲರ್​ನಲ್ಲೇ (ಇದನ್ನು ಪೆಟ್ರೋಡಾಲರ್ ಎನ್ನಲಾಗುತ್ತದೆ) ನಡೆಸುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net