_1785522699155.webp?w=480&auto=format%2Ccompress&fit=max)
_1785522699155.webp?w=480&auto=format%2Ccompress&fit=max)
ತೀವ್ರ ಬಡತನ, ಕೆಲಸ ಗಿಟ್ಟಿಸಿಕೊಳ್ಳುವ ಅನಿವಾರ್ಯತೆ, ಕುಟುಂಬವನ್ನು ಸಲಹುವ ಜವಾಬ್ದಾರಿ ಈ ಎಲ್ಲ ಒತ್ತಡಗಳು ಭಯಾನಕ ವಲಸೆಗೆ ಕಾರಣವಾಗಿವೆ. ಇದು ಅಂತಿಂಥ ವಲಸೆಯಲ್ಲ, ಸಮುದ್ರದ ದೈತ್ಯ ಅಲೆಗಳೊಂದಿಗೆ ಹೋರಾಡುತ್ತ ಇವರು ಸ್ಪೇನ್ನ ಸ್ಯೂಟಾ ತಲುಪಲು ಯತ್ನಿಸುತ್ತಾರೆ. ನೀರಿನ ಸೆಳೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡವರ ಸಂಖ್ಯೆಗೆ ಲೆಕ್ಕವೇ ಇಲ್ಲ. ಗುರುವಾರ ನಡೆದ ಇಂಥದ್ದೇ ದುರಂತದಲ್ಲಿ 34 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ, ಮತ್ತೆ ಆಫ್ರಿಕನ್ ವಲಸಿಗರು ಇದೇ ದಾರಿಯಲ್ಲಿ ಸಾಗುತ್ತಾರೆ. ಕೆಲವರು ಬೆಟ್ಟ-ಗುಡ್ಡಗಳನ್ನು ಕ್ರಮಿಸಿ ಕಾಲ್ನಡಿಗೆಯಲ್ಲೇ ಸ್ಯೂಟಾ ತಲುಪುತ್ತಾರೆ. ಆಫ್ರಿಕನ್ ವಲಸಿಗರ ಈ ದಾರುಣ ವ್ಯಥೆಗೆ ಏನು ಕಾರಣ? ಸ್ಪೇನ್ ಬಗ್ಗೆ ಏಕೆ ಅಂಥ ಸೆಳೆತ? ಈ ಕುರಿತಾದ ವಿವರ ಇಲ್ಲಿದೆ.
ಉಪ-ಸಹಾರನ್ ಆಫ್ರಿಕಾ ಭಾಗಗಳಲ್ಲಿ ಉದ್ಯೋಗಾವಕಾಶಗಳ ಕೊರತೆ, ತೀವ್ರ ಬಡತನ ತಾಂಡವವಾಡುತ್ತಿದ್ದು, ಉತ್ತಮ ಭವಿಷ್ಯ ಮತ್ತು ಆದಾಯದ ಹುಡುಕಾಟಕ್ಕಾಗಿ ವಲಸೆ ಹೋಗುವ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅಲ್ಲದೆ, ಗಿನಿ, ಮಾಲಿ, ಸುಡಾನ್ ಮುಂತಾದ ದೇಶಗಳಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷಗಳು, ಹಿಂಸಾಚಾರ ಮತ್ತು ರಾಜಕೀಯ ಕಿರುಕುಳದಿಂದಾಗಿ ಜನರು ಸ್ಯೂಟಾ ನಗರಕ್ಕೆ ಆಶ್ರಯ ಅರಸಿ ಬರುತ್ತಿದ್ದಾರೆ.
ಸ್ಯೂಟಾ ಭೌಗೋಳಿಕವಾಗಿ ಆಫ್ರಿಕಾ ಖಂಡದಲ್ಲಿದ್ದರೂ, ಆಡಳಿತಾತ್ಮಕವಾಗಿ ಸ್ಪೇನ್ ಹಾಗೂ ಯುರೋಪಿಯನ್ ಯೂನಿಯನ್ನ ಭಾಗವಾಗಿದೆ. ಅಂದರೆ, ಯಾವುದೇ ವಲಸಿಗ ಸ್ಯೂಟಾ ನಗರವನ್ನು ತಲುಪಿದರೆ, ಆತ ಯುರೋಪ್ನ ಗಡಿಯನ್ನು ತಲುಪಿದಂತೆಯೇ ಸರಿ. ಇದೇ ಕಾರಣಕ್ಕೆ ಪ್ರತಿ ವರ್ಷ ಸಾವಿರಾರು ಜನರು ಈ ಮಾರ್ಗದ ಮೂಲಕ ಯುರೋಪ್ ಪ್ರವೇಶಿಸಲು ಯತ್ನಿಸುತ್ತಾರೆ.ಸ್ಯೂಟಾ ಮತ್ತು ಇದರ ಸಮೀಪವಿರುವ ಮೆಲಿಲ್ಲಾ ಎಂಬ ಎರಡು ನಗರಗಳು ಆಫ್ರಿಕಾ ಹಾಗೂ ಯುರೋಪ್ ಅನ್ನು ನೇರವಾಗಿ ಸಂರ್ಪಸುವ ಏಕೈಕ ಭೂಗಡಿಗಳಾಗಿವೆ. ಹೀಗಾಗಿ, ಉತ್ತಮ ಕೆಲಸ ಮತ್ತು ಉತ್ತಮ ಜೀವನದ ನಿರೀಕ್ಷೆಯಲ್ಲಿರುವ ಮೊರಾಕ್ಕೊ ಸೇರಿದಂತೆ ಹಲವು ಆಫ್ರಿಕನ್ ದೇಶಗಳ ಜನರು ಹೆಚ್ಚಾಗಿ ಈ ಮಾರ್ಗವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
ಮೊರಾಕ್ಕೊ 1956ರಲ್ಲಿ ಸ್ಪೇನ್ನಿಂದ ಸ್ವಾತಂತ್ರ್ಯ ಪಡೆಯಿತು. ಆದರೆ, ಸ್ಪೇನ್ ಸ್ಯೂಟಾ ಮತ್ತು ಮೆಲಿಲ್ಲಾ ನಗರಗಳನ್ನು ಸ್ವತಂತ್ರಗೊಳಿಸಲಿಲ್ಲ. ಈ ಎರಡೂ ನಗರಗಳು ಆಫ್ರಿಕಾ ಖಂಡದಲ್ಲಿದ್ದು, ಮೊರಾಕ್ಕೊದ ಭಾಗವಾಗಿರುವುದರಿಂದ ಇವುಗಳನ್ನು ತನಗೆ ಹಸ್ತಾಂತರಿಸಬೇಕು ಎಂಬುದು ಮೊರಾಕ್ಕೊದ ವಾದ. ಆದರೆ ಸ್ಪೇನ್, ಸ್ಯೂಟಾ ನಗರವು ಕಳೆದ 350 ವರ್ಷಗಳಿಂದ ತನ್ನ ವಶದಲ್ಲಿದೆ ಮತ್ತು ಆಗ ಮೊರಾಕ್ಕೊ ದೇಶವೇ ಅಸ್ತಿತ್ವದಲ್ಲಿರಲಿಲ್ಲ ಎಂದು ಹೇಳುತ್ತದೆ.
ಆಲ್ಜೀರಿಯಾದ ವಲಸಿಗನೊಬ್ಬ 2024ರ ನವೆಂಬರ್ನಲ್ಲಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಮೊರಾಕ್ಕೊದಿಂದ ಈಜಿಕೊಂಡು ಸ್ಯೂಟಾ ತಲುಪಲು ಯತ್ನಿಸುತ್ತಿದ್ದ. ಸ್ಪೇನ್ ಭದ್ರತಾ ಪಡೆಗಳು ಅವನನ್ನು ಸಮುದ್ರದಲ್ಲೇ ವಶಕ್ಕೆ ಪಡೆದು, ಯಾವುದೇ ಕಾನೂನು ಪ್ರಕ್ರಿಯೆಯನ್ನು ಅನುಸರಿಸದೆ ನೇರವಾಗಿ ಮೊರಾಕ್ಕೊ ಅಧಿಕಾರಿಗಳಿಗೆ ಒಪ್ಪಿಸಿದವು. ಇದನ್ನು ಪ್ರಶ್ನಿಸಿ ಆ ವಲಸಿಗ ತನ್ನ ವಕೀಲರ ಮೂಲಕ ಸ್ಪೇನ್ ನ್ಯಾಯಾಲಯದ ಮೆಟ್ಟಿಲೇರಿದ. ತನ್ನ ಗುರುತಿನ ಚೀಟಿ ಮತ್ತು ಪ್ರಕರಣದ ಕಾನೂನು ತನಿಖೆ ನಡೆದಿಲ್ಲ, ಆಶ್ರಯ ಕೋರಲು ತನಗೆ ಅವಕಾಶ ನೀಡಲಾಗಿಲ್ಲ ಹಾಗೂ ಯಾವುದೇ ವಿಚಾರಣೆ ಇಲ್ಲದೆ ವಾಪಸ್ ಕಳುಹಿಸಲಾಗಿದೆ ಎಂದು ಆತ ವಾದಿಸಿದ. ವಿಚಾರಣೆಯ ನಂತರ, ಸ್ಪೇನ್ ಸುಪ್ರೀಂ ಕೋರ್ಟ್ 2026ರ ಜೂನ್ 29ರಂದು ತನ್ನ ತೀರ್ಪನ್ನು ನೀಡಿ, ‘ಗಡಿ ಬೇಲಿ ಜಿಗಿದು ಅಕ್ರಮವಾಗಿ ಪ್ರವೇಶಿಸಲು ಯತ್ನಿಸುವವರನ್ನು ಮಾತ್ರ ಯಾವುದೇ ಕಾನೂನು ಪ್ರಕ್ರಿಯೆಯಿಲ್ಲದೆ ವಾಪಸ್ ಕಳುಹಿಸಬಹುದು. ಸಮುದ್ರ ಮಾರ್ಗದ ಮೂಲಕ ಸ್ಪೇನ್ ಗಡಿ ಪ್ರವೇಶಿಸುವವರನ್ನು ವಿಚಾರಣೆ ನಡೆಸದೆ ತಕ್ಷಣ ವಾಪಸ್ ಕಳುಹಿಸುವಂತಿಲ್ಲ. ಅವರಿಗೆ ಕಾನೂನು ಪ್ರಕ್ರಿಯೆಯ ಹಕ್ಕಿರುತ್ತದೆ’ ಎಂದಿತು. ವಾಸ್ತವವಾಗಿ, ಸ್ಪೇನ್ನ ವಲಸೆ ಕಾಯ್ದೆಯ ಪ್ರಕಾರ, ಗಡಿ ತಡೆಗೋಡೆಗಳನ್ನು ದಾಟಲು ಯತ್ನಿಸುವವರನ್ನು ಮಾತ್ರ ತಕ್ಷಣ ವಾಪಸ್ ಕಳುಹಿಸಲು ಅವಕಾಶವಿದೆ. ಸಮುದ್ರ ಮಾರ್ಗವಾಗಿ ಬರುವ ವಲಸಿಗರು ಈ ವ್ಯಾಪ್ತಿಗೆ ಬರುವುದಿಲ್ಲ. ಈ ತೀರ್ಪಿನ ನಂತರ, ಸಮುದ್ರ ಮಾರ್ಗದ ಮೂಲಕ ಸ್ಯೂಟಾ ತಲುಪುವ ವಲಸಿಗರ ಸಂಖ್ಯೆ ದಿಢೀರ್ ಹೆಚ್ಚಾಯಿತು. ವರದಿಗಳ ಪ್ರಕಾರ, ಮಾನವ ಕಳ್ಳಸಾಗಣೆ ಜಾಲಗಳು ಈ ಕಾನೂನು ಬದಲಾವಣೆಯ ಲಾಭವನ್ನು ಪಡೆದುಕೊಂಡವು.
ಯಾವೆಲ್ಲ ದೇಶಗಳಿಂದ ವಲಸೆ?: ಸ್ಯೂಟಾಗೆ ಬರುವ ವಲಸಿಗರಲ್ಲಿ ಪ್ರಮುಖವಾಗಿ ಎರಡು ವರ್ಗದ ಜನರಿದ್ದಾರೆ.
ನೆರೆಹೊರೆಯ ದೇಶ: ಮೊರಾಕ್ಕೊ (ಸ್ಥಳೀಯವಾಗಿ ಗಡಿ ದಾಟುವವರು ಮತ್ತು ಯುವಕರು).
ಪಶ್ಚಿಮ ಆಫ್ರಿಕಾದ ದೇಶಗಳು: ಮಾಲಿ, ಗಿನಿ, ಸೆನೆಗಲ್, ಐವರಿ ಕೋಸ್ಟ್, ಕ್ಯಾಮರೂನ್, ನೈಜೀರಿಯಾ, ಸುಡಾನ್ ಮತ್ತು ಎರಿಟ್ರಿಯಾ.
ಮೊರಾಕ್ಕೊದ ಹಲವು ನಗರಗಳಿಂದ ಜನರು ಸುದೀರ್ಘ ಪ್ರಯಾಣ ಬೆಳೆಸಿ ಗಡಿಗೆ ತಲುಪಿದರು. ಅನೇಕರು ಸಮುದ್ರ ಮಾರ್ಗವಾಗಿ ಗಡಿ ದಾಟಲು ಯತ್ನಿಸಿದರು. ಅಬ್ದುಲ್ ಹಕೀಮ್ ಎಂಬ ವ್ಯಕ್ತಿ ತಾನು 14 ಕಿಲೋಮೀಟರ್ ಬೆಟ್ಟಗುಡ್ಡಗಳಲ್ಲಿ ನಡೆದು ಗಡಿ ತಲುಪಿದ್ದಾಗಿ ಹೇಳಿದ್ದಾನೆ. ಅಲ್ಲಿ ತನಗೆ ಸಮುದ್ರ ಮಾರ್ಗವಾಗಿ ಹೋಗಬೇಕೆಂದು ತಿಳಿಸಲಾಯಿತು. ‘ನಾನು ಪೂರ್ತಿಯಾಗಿ ನೀರಿನಲ್ಲಿ ಮುಳುಗಿಹೋಗಿದ್ದೆ. ನನ್ನ ಕಣ್ಣೆದುರೇ ಇಬ್ಬರು ಸಾಯುವುದನ್ನು ನೋಡಿದೆ. ತಕ್ಷಣವೇ ನನಗೆ ನನ್ನ ಇಬ್ಬರು ಮಕ್ಕಳ ನೆನಪಾಯಿತು ಮತ್ತು ನಾನು ವಾಪಸ್ ಬರಲು ನಿರ್ಧರಿಸಿದೆ’ ಎಂದು ಅಬ್ದುಲ್ ಹಕೀಮ್ ಆ ಆತಂಕದ ಕ್ಷಣಗಳನ್ನು ಹಂಚಿಕೊಂಡಿದ್ದಾನೆ. ಕೆಲವು ಜನರು ಸ್ಯೂಟಾ ತಲುಪಿದ್ದಾರೆ ಎಂದು ಸುದ್ದಿ ಕೇಳಿದ ತಕ್ಷಣ, ಸಾವಿರಾರು ಜನರು ಅಲ್ಲಿಗೆ ಹೊರಟರು ಎಂದು ಕರೀಮ್ ಎಂಬ ಮತ್ತೊಬ್ಬ ಯುವಕ ತಿಳಿಸಿದ್ದಾನೆ.
ಆರಂಭಿಕ ಅಂದಾಜಿನ ಪ್ರಕಾರ 60 ಸಾವಿರ ಜನರು ಸ್ಯೂಟಾ ನಗರಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಸ್ಪೇನ್ ಸರ್ಕಾರದ ಅಧಿಕಾರಿ ಫರ್ನಾಂಡೋ ರೊಡ್ರಿಗಸ್ ಕಾಂಟ್ರೆರಾಸ್ ತಿಳಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ, ಸ್ಪೇನ್ ಸರ್ಕಾರವು ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಿದೆ. ಹೆಚ್ಚುವರಿ ಮಿಲಿಟರಿ ತುಕಡಿಗಳನ್ನು ನಿಯೋಜಿಸಲಾಗಿದ್ದು, ವಾಯು ಮತ್ತು ನೌಕಾಪಡೆಯ ಕಾವಲನ್ನು ಸಹ ಬಿಗಿಗೊಳಿಸಲಾಗಿದೆ. ಸಮುದ್ರ ಮಾರ್ಗವಾಗಿ ಬರುವ ವಲಸಿಗರ ಮೇಲೆ ನಿಗಾ ಇಡಲು ಧುಮುಕುಜಿಗಿತಗಾರರ (ಈಜಿಡಛ್ಟಿ) ತಂಡಗಳನ್ನು ನಿಯೋಜಿಸಲಾಗಿದೆ. ಇನ್ನೊಂದೆಡೆ, ಯುರೋಪಿಯನ್ ಯೂನಿಯನ್ ಕೂಡ ಸ್ಪೇನ್ಗೆ ಸಹಾಯ ಮಾಡಲು ಮುಂದೆ ಬಂದಿದೆ.
ಮೊರಾಕ್ಕೊ: ಸ್ಪೇನ್ಗೆ ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ ವೇಳೆ ಸಂಭವಿಸಿದ ಭೀಕರ ದುರಂತದಲ್ಲಿ ಕನಿಷ್ಠ 34 ಆಫ್ರಿಕನ್ ವಲಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಗುರುವಾರ ಮುಂಜಾನೆ 3 ಸಾವಿರ ವಲಸಿಗರು ಒಟ್ಟಿಗೆ ಸ್ಪೇನ್ ಗಡಿಯನ್ನು ದಾಟಲು ಯತ್ನಿಸಿದಾಗ ಈ ಘಟನೆ ಸಂಭವಿಸಿದೆ. ಗಡಿಯಲ್ಲಿ ಪೊಲೀಸರು ಹಾಕಿದ್ದ ಭದ್ರತಾ ಬೇಲಿ ಹಾಗೂ ಕಿರಿದಾದ ದಾರಿಗಳ ಕಾರಣದಿಂದಾಗಿ ವಲಸಿಗರು ನಿಯಂತ್ರಣ ಸಿಗದೆ ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ. ತುಳಿತಕ್ಕೊಳಗಾಗಿ, ಉಸಿರುಗಟ್ಟಿ ಹಾಗೂ ಸಮುದ್ರದಲ್ಲಿ ಮುಳುಗಿ ಈ ದುರಂತ ಸಂಭವಿಸಿದೆ. ಈ ಘರ್ಷಣೆ ಮತ್ತು ಕಾಲ್ತುಳಿತದ ವೇಳೆ ಸ್ಪೇನ್ ಹಾಗೂ ಮೊರಾಕ್ಕೊದ 100ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಸ್ಪೇನ್ ಸರ್ಕಾರದ ಮಾಹಿತಿಯ ಪ್ರಕಾರ, ಮೊರಾಕ್ಕೊ ಕಡೆಯಿಂದ 60 ಸಾವಿರ ಜನರು ಈಜುವ ಮೂಲಕ ಅಥವಾ ಕಾಲ್ನಡಿಗೆಯಲ್ಲಿ ಸ್ಪೇನ್ನ ಭೂಭಾಗವಾದ ಸ್ಯೂಟಾ ನಗರವನ್ನು ಪ್ರವೇಶಿಸಿದ್ದಾರೆ. ಈ ಸಂಖ್ಯೆ ನಗರದ ಜನಸಂಖ್ಯೆಯ ಶೇಕಡ 70ರಷ್ಟಿದೆ. ಉತ್ತಮ ಜೀವನೋಪಾಯ ಹಾಗೂ ಭವಿಷ್ಯದ ಹುಡುಕಾಟದಲ್ಲಿರುವ ಆಫ್ರಿಕಾ ಮತ್ತು ಏಷ್ಯಾ ದೇಶಗಳ ವಲಸಿಗರು ಯುರೋಪ್ ತಲುಪಲು ಈ ಹಾದಿಯನ್ನು ಬಳಸುತ್ತಿದ್ದಾರೆ. ಸ್ಯೂಟಾ ನಗರವು ಮೊರಾಕ್ಕೊದ ಉತ್ತರ ಕರಾವಳಿಯಲ್ಲಿದ್ದು, ಸ್ಪೇನ್ಗೆ ಸೇರಿದ ಪ್ರದೇಶವಾಗಿದೆ. ಒಮ್ಮೆ ಇಲ್ಲಿಗೆ ಪ್ರವೇಶ ಗಿಟ್ಟಿಸಿಕೊಂಡರೆ, ಯುರೋಪಿಯನ್ ಯೂನಿಯನ್ (ಇಯು) ವ್ಯಾಪ್ತಿಗೆ ತಲುಪಿದಂತಾಗುತ್ತದೆ. ಇದೇ ಕಾರಣಕ್ಕೆ ಪ್ರತಿವರ್ಷ ಸಾವಿರಾರು ಜನರು ಈ ಮಾರ್ಗದ ಮೂಲಕ ಯುರೋಪ್ ಪ್ರವೇಶಿಸಲು ಯತ್ನಿಸುತ್ತಾರೆ.
ಸ್ಯೂಟಾದ ಇತಿಹಾಸದಲ್ಲಿ ಇದು ಅತ್ಯಂತ ಕಷ್ಟಕರವಾದ ಸಮಯಗಳಲ್ಲಿ ಒಂದಾಗಿದೆ. ಹಠಾತ್ತನೆ ಸಾವಿರಾರು ಜನರ ಅನಿಯಂತ್ರಿತ ಗುಂಪು ರಸ್ತೆಗಿಳಿದಿರುವುದರಿಂದ ಸ್ಥಳೀಯ ಜನರಲ್ಲಿ ಭಯ ಮತ್ತು ಅಭದ್ರತೆಯ ವಾತಾವರಣ ನಿರ್ವಣವಾಗಿದೆ. ಶಾಲೆಗಳು, ಅಂಗಡಿಗಳು ಮತ್ತು ಮಾರುಕಟ್ಟೆಗಳು ಬಂದ್ ಆಗಿವೆ. ನಗರದಲ್ಲಿ ತುರ್ತು ಪರಿಸ್ಥಿತಿಯಂತಹ ವಾತಾವರಣವಿದೆ.
-ಜುವಾನ್ ಜೀಸಸ್ ವಿವಾಸ್, ಸ್ಯೂಟಾ ಪ್ರಾದೇಶಿಕ ಸರ್ಕಾರದ ಮುಖ್ಯಸ್ಥ