ಯೂನಸ್ ಸಾಮ್ರಾಜ್ಯದ ಪತನದ ನಂತರ ಹೊರಬಿತ್ತು ಅಚ್ಚರಿಯ ಸತ್ಯ: ಶಾಕಿಂಗ್ ಹೇಳಿಕೆ ಕೊಟ್ಟ ಶಹಾಬುದ್ದೀನ್..? Mohammed Shahabuddin

ಯೂನಸ್ ಸಾಮ್ರಾಜ್ಯದ ಪತನದ ನಂತರ ಹೊರಬಿತ್ತು ಅಚ್ಚರಿಯ ಸತ್ಯ:  ಶಾಕಿಂಗ್ ಹೇಳಿಕೆ ಕೊಟ್ಟ ಶಹಾಬುದ್ದೀನ್..?
ಯೂನಸ್ ಸಾಮ್ರಾಜ್ಯದ ಪತನದ ನಂತರ ಹೊರಬಿತ್ತು ಅಚ್ಚರಿಯ ಸತ್ಯ: ಶಾಕಿಂಗ್ ಹೇಳಿಕೆ ಕೊಟ್ಟ ಶಹಾಬುದ್ದೀನ್..?
Published on
ಢಾಕಾ: ಬಾಂಗ್ಲಾದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್​ರನ್ನು(Mohammed Shahabuddin) ದೇಶದ ಮಾಜಿ ಹಂಗಾಮಿ ಆಡಳಿತದ ಮುಖ್ಯಸ್ಥ ಮತ್ತು ನೋಬೆಲ್ ಪುರಸ್ಕೃತ ಮೊಹಮ್ಮದ್ ಯೂನಸ್ ವಿರುದ್ಧ ಬಹಿರಂಗವಾಗಿ ಸಮರ ಸಾರಿದ್ದಾರೆ. ಯೂನಸ್ ತಮ್ಮ ಆಡಳಿತಾವಧಿಯಲ್ಲಿ ಅಧ್ಯಕ್ಷೀಯ ಭವನವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದರು. ಅಲ್ಲದೆ, ದೇಶದ ಪ್ರಮುಖ ನಿರ್ಧಾರಗಳ ಬಗ್ಗೆ ತಮಗೆ ಮಾಹಿತಿಯನ್ನೇ ನೀಡುತ್ತಿರಲಿಲ್ಲ ಎಂದು ಶಹಾಬುದ್ದೀನ್ ಗಂಭೀರ ಆರೋಪ ಮಾಡಿದ್ದಾರೆ.

ಸೌಜನ್ಯಕ್ಕೂ ಭೇಟಿಯಾಗಲಿಲ್ಲ

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಧ್ಯಕ್ಷ ಶಹಾಬುದ್ದೀನ್, ಯೂನಸ್ ಅವರ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಒಮ್ಮೆಯೂ ನನ್ನನ್ನು ಭೇಟಿಯಾಗಲು ಬರಲಿಲ್ಲ. ದೇಶದ ಪ್ರಮುಖ ನಿರ್ಧಾರಗಳು, ವಿದೇಶಿ ಪ್ರವಾಸಗಳು ಅಥವಾ ಉನ್ನತ ಮಟ್ಟದ ಚರ್ಚೆಗಳ ಫಲಿತಾಂಶಗಳ ಬಗ್ಗೆ ನನಗೆ ಯಾವುದೇ ಮಾಹಿತಿ ನೀಡದೆ ನನ್ನನ್ನು ಸಂಪೂರ್ಣವಾಗಿ ಕತ್ತಲಲ್ಲಿಡಲು ಪ್ರಯತ್ನಿಸಿದರು ಎಂದು ಶಹಾಬುದ್ದೀನ್ ದೂರಿದ್ದಾರೆ. ಅಧ್ಯಕ್ಷೀಯ ವ್ಯವಸ್ಥೆಯನ್ನು ಸೈಡ್‌ಲೈನ್ ಮಾಡುವ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡಲಾಗಿದೆ ಎಂಬ ಧ್ವನಿ ಈಗ ಕೇಳಿಬರುತ್ತಿದೆ.

ಸಂವಿಧಾನ ಮತ್ತು ಶಿಷ್ಟಾಚಾರದ ಉಲ್ಲಂಘನೆ..?

ಸಾಮಾನ್ಯವಾಗಿ ದೇಶದ ಯಾವುದೇ ಪ್ರಮುಖ ಆಡಳಿತಾತ್ಮಕ ನಿರ್ಧಾರಗಳನ್ನು ಅಧ್ಯಕ್ಷರ ಗಮನಕ್ಕೆ ತರುವುದು ಪ್ರಧಾನಿ ಅಥವಾ ಸರ್ಕಾರದ ಮುಖ್ಯಸ್ಥರ ಕರ್ತವ್ಯವಾಗಿರುತ್ತದೆ. ಆದರೆ, ಯೂನಸ್ ಅವರು ಅಧ್ಯಕ್ಷರೊಂದಿಗೆ ಯಾವುದೇ ಸಮನ್ವಯ ಸಾಧಿಸುತ್ತಿರಲಿಲ್ಲ ಎಂದು ಶಹಾಬುದ್ದೀನ್ ಹೇಳಿದ್ದಾರೆ. ಅವರು ನನ್ನೊಂದಿಗೆ ಯಾವತ್ತೂ ಆಡಳಿತಾತ್ಮಕ ವಿಚಾರಗಳನ್ನು ಹಂಚಿಕೊಳ್ಳಲಿಲ್ಲ. ಸರ್ಕಾರದ ಮುಖ್ಯಸ್ಥರಾಗಿ ಅವರು ಅಧ್ಯಕ್ಷರ ಗೌರವವನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ವಿದೇಶಿ ಪ್ರವಾಸಗಳ ರಹಸ್ಯ

ಯೂನಸ್ ಅವರು ಕೈಗೊಂಡ ವಿದೇಶಿ ಪ್ರವಾಸಗಳು, ಅಲ್ಲಿ ನಡೆದ ಚರ್ಚೆಗಳು ಮತ್ತು ಆ ಪ್ರವಾಸಗಳ ಫಲಿತಾಂಶಗಳ ಬಗ್ಗೆ ಅಧ್ಯಕ್ಷೀಯ ಭವನಕ್ಕೆ ಯಾವುದೇ ಅಧಿಕೃತ ಮಾಹಿತಿ ನೀಡುತ್ತಿರಲಿಲ್ಲ. ವಿದೇಶಾಂಗ ನೀತಿಯಂತಹ ಸೂಕ್ಷ್ಮ ವಿಚಾರಗಳಲ್ಲಿ ಅಧ್ಯಕ್ಷರನ್ನು ಸೈಡ್‌ಲೈನ್ ಮಾಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿ

ಶೇಖ್ ಹಸೀನಾ ನಿರ್ಗಮನದ ನಂತರ ಮೊಹಮ್ಮದ್ ಯೂನಸ್ ನೇತೃತ್ವದಲ್ಲಿ ಹಂಗಾಮಿ ಸರ್ಕಾರ ರಚನೆಯಾದಾಗ ಅಧ್ಯಕ್ಷರು ಅದಕ್ಕೆ ಸಾಕ್ಷಿಯಾಗಿದ್ದರು. ಆದರೆ, ಇದೀಗ ತಾರಿಕ್ ರೆಹಮಾನ್ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಅಧ್ಯಕ್ಷರು ಹಳೆಯ ಸರ್ಕಾರದ ವಿರುದ್ಧ ಸಿಡಿದಿದ್ದೇಳುತ್ತಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇದು ಕೇವಲ ವೈಯಕ್ತಿಕ ಅಸಮಾಧಾನವೋ ಅಥವಾ ರಾಜಕೀಯ ಪುನರ್ರಚನೆಯ ಭಾಗವೋ ಎಂಬ ಚರ್ಚೆ ಶುರುವಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net